ADVERTISEMENT

ಪ್ರವಾಸ: ಚಾಕೊಲೇಟ್‌ ಮ್ಯೂಸಿಯಂನ ಚಾರಿತ್ರಿಕ ನಗರ

ಜಿ.ನಾಗೇಂದ್ರ
Published 7 ಆಗಸ್ಟ್ 2021, 19:30 IST
Last Updated 7 ಆಗಸ್ಟ್ 2021, 19:30 IST
   

ಯುರೋಪಿನ ಅತ್ಯುತ್ತಮ ಸಂರಕ್ಷಿತ ಮಧ್ಯಕಾಲೀನ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬ್ರೂಗ್ಸ್‌, ‘ವೆಸ್ಟ್ ಪ್ಲಾಂಡರ್ಸ್ ಪ್ರಾವಿನ್ಸ್’ನ ರಾಜಧಾನಿ. ಮೊದಲನೆಯ ಹಾಗೂ ಎರಡನೆಯ ಜಾಗತಿಕ ಮಹಾಯುದ್ಧಗಳ ಸಮಯದಲ್ಲಿ ಇತರೆ ಯುರೋಪಿಯನ್ ರಾಷ್ಟ್ರಗಳು ಬಾಂಬ್ ದಾಳಿಯಿಂದ ನಾಶವಾದರೂ ಬ್ರೂಗ್ಸ್ ನಗರ ಕಿಂಚಿತ್ತೂ ಊನವಾಗದೆ ಉಳಿದಿದೆ. ಸಂಪೂರ್ಣವಾಗಿ ಸಂರಕ್ಷಿಸಲ್ಪಟ್ಟ ಮಧ್ಯಕಾಲೀನ ಕಟ್ಟಡಗಳು, ಪಾರಂಪರಿಕ ತಾಣಗಳು, ವಿಲಕ್ಷಣವಾದ ಕಾಬಲ್‍ಸ್ಟೋನ್ ರಸ್ತೆಗಳು, ಕಟ್ಟಡಗಳ ವಾಸ್ತುಶಿಲ್ಪ ಹೀಗೆ ಹಲವು ವಿಶೇಷಗಳನ್ನು ತನ್ನ ಮಡಿಲಲ್ಲಿ ತುಂಬಿಸಿಕೊಂಡಿರುವ ಬ್ರೂಗ್ಸ್‌ ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳಲ್ಲಿ ಒಂದಾಗಿದೆ.

‘ಬ್ರೂಗ್ಸ್’ ಎಂಬ ಡಚ್ ಪದವನ್ನು ಇಂಗ್ಲಿಷ್‌ನಲ್ಲಿ ‘ಬ್ರಿಡ್ಜ್’ ಎಂದು ಅರ್ಥೈಸಲಾಗುತ್ತದೆ. ವಸ್ತು ಸಂಗ್ರಹಾಲಯಗಳು ಮತ್ತು ಧಾರ್ಮಿಕೇತರ ಐತಿಹಾಸಿಕ ತಾಣಗಳ ನೆಲೆಯಾಗಿರುವ ‘ಬ್ರೂಗ್ಸ್’ ನಗರದಲ್ಲಿರುವ ಹಲವು ಮ್ಯೂಸಿಯಂಗಳು ಮಧ್ಯಕಾಲೀನ ಮತ್ತು ಆರಂಭಿಕ ಆಧುನಿಕ ಕಾಲದ ಕಲೆಗೆ ಸಂಬಂಧಿಸಿದ ಬೃಹತ್ ಸಂಗ್ರಹವನ್ನು ಹೊಂದಿವೆ. ಇವುಗಳಲ್ಲಿ ಪ್ರಾಚೀನ ಫ್ಲೆಮಿಶ್‌ನ ಗಮನಾರ್ಹ ಸಂಗ್ರಹವಿದೆ. ಪ್ರಸಿದ್ಧ ವರ್ಣಚಿತ್ರಕಾರರಾದ ಹ್ಯಾನ್ಸ್ ಮೆಮ್ ಲಿಂಗ್ ಹಾಗೂ ಜಾನ್ ವ್ಯಾನ್ ಐಕ್ ಅವರು ಬ್ರೂಗ್ಸ್‌ನಲ್ಲಿಯೇ ವಾಸಿಸುತ್ತಿದ್ದರು.

ಚಾಕೊಲೇಟ್ ಮ್ಯೂಸಿಯಂ, ಲ್ಯಾಂಪ್ ಮ್ಯೂಸಿಯಂ, ಲೇಸ್ ಮ್ಯೂಸಿಯಂ, ಬೆಲ್ಜಿಯನ್ ಫ್ರೈಸ್ ಮ್ಯೂಸಿಯಂ, ಡೈಮಂಡ್ ಮ್ಯೂಸಿಯಂ ಹೀಗೆ ವಿಭಿನ್ನವಾದ ಇಲ್ಲಿನ ಮ್ಯೂಸಿಯಂಗಳು ಪ್ರವಾಸಿಗರನ್ನು ತಮ್ಮತ್ತ ಸೆಳೆಯುತ್ತವೆ.

ADVERTISEMENT
ಬೆಲ್ಜಿಯಂ ವೇಫಲ್ಸ್‌

ಗ್ರೋಟ್ ಮಾರುಕಟ್ಟೆಯಲ್ಲಿ ಸಕಲವೂ ಲಭ್ಯ
ಯುರೋಪಿನ ಎಲ್ಲಾ ನಗರಗಳಲ್ಲಿರುವಂತೆ ಬ್ರೂಗ್ಸ್ ನಗರದ ಮಧ್ಯಭಾಗದಲ್ಲಿ ವಿಶಾಲವಾದ ಮಾರುಕಟ್ಟೆ (ಗ್ರೋಟ್ ಮಾರ್ಕೆಟ್) ಚೌಕವಿದೆ. ನಗರದ ಹಲವು ಕಾರ್ಯಕ್ರಮಗಳ ಕೇಂದ್ರಬಿಂದು. ಇಲ್ಲಿ ನಡೆಯುವ ಮಧ್ಯಕಾಲೀನ ಉತ್ಸವಗಳು, ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಸುತ್ತಲೂ ಇರುವ ಅಂಗಡಿ, ಕೆಫೆಗಳು, ವಿಶ್ವವಿಖ್ಯಾತ ಬೆಲ್ಜಿಯಂ ಚಾಕೊಲೇಟ್ ಮಾರಾಟ ಮಳಿಗೆಗಳು, ಹೂಗುಚ್ಛ ಮಾರಾಟ ಮಳಿಗೆಗಳು, ‘ಟಿನ್ ಟಿನ್’ ಕಾಮಿಕ್ ಪುಸ್ತಕ ಮಳಿಗೆಗಳು ಹಾಗೂ ಅಸಂಖ್ಯಾತ ಉಡುಗೊರೆ ಮಳಿಗೆಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಪುರಾತನ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸವುಳ್ಳ ಪ್ರವಾಸಿಗರಿಗೆ ‘ಆ್ಯಂಟಿಕ್‌ ಮಾರ್ಕೆಟ್’ ಸೂಕ್ತ ತಾಣ. ಇಲ್ಲಿ ಮಾರಾಟ ಮಾಡುವ ದೇಶ ವಿದೇಶಗಳ ಪುರಾತನ ವಸ್ತುಗಳು, ಸಂಗ್ರಹಕಾರರನ್ನು ಆಕರ್ಷಿಸುತ್ತವೆ.

ನಗರದಲ್ಲಿರುವ ‘ಐತಿಹಾಸಿಕ ಕೇಂದ್ರ’, ‘ಬೆಲ್‌ಫ್ರೈ’ (ಬೆಲ್ ಟವರ್) ಮೊದಲಾದ ಸ್ಮಾರಕಗಳನ್ನು ವಿಶ್ವ ಪರಂಪರೆಯ ತಾಣಗಳೆಂದು ಗುರುತಿಸಲಾಗಿದೆ.

13ನೇ ಶತಮಾನದಲ್ಲಿ ನಿರ್ಮಿಸಲಾದ ‘ಬ್ರೂಗ್ಸ್’ ನಗರದ ಹೆಗ್ಗುರುತಾದ ‘ಬೆಲ್‍ಫ್ರೈ ಆಫ್ ಬ್ರೂಗ್ಸ್’ ಸ್ಮಾರಕವನ್ನು ನ್ಯೂ ಗೋಥಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ. 83 ಮೀಟರ್ ಎತ್ತರವಿದ್ದು, 350 ಮೆಟ್ಟಿಲುಗಳ ಮೂಲಕ ಗೋಪುರವನ್ನು ಏರಿ ನಗರದ ವಿಹಂಗಮ ನೋಟವನ್ನು ಆನಂದಿಸಬಹುದು. ಗೋಪುರದ ಮೇಲಂತಸ್ತಿನಲ್ಲಿ ಸುಸ್ಥಿತಿಯಲ್ಲಿರುವ 47 ಗಂಟೆಗಳ ಸಾಲುಗಳಿದ್ದು, ಗಂಟೆಗಳನ್ನು ಇಂದಿಗೂ ಬಾರಿಸಲಾಗುತ್ತಿದೆ.

ಕಾಲುವೆಗಳಲ್ಲಿ ಸಾಗುವ ದೋಣಿಯಲ್ಲಿ ಕುಳಿತು ಬ್ರೂಗ್ಸ್ ನಗರದ ಸೌಂದರ್ಯ ಸವಿಯುವುದೇ ಅದ್ಭುತ

ದೂರದಿಂದಲೇ ಪ್ರವಾಸಿಗರ ಗಮನಸೆಳೆಯುವ ಮತ್ತೊಂದು ಸ್ಮಾರಕ ‘ಚರ್ಚ್ ಆಫ್ ಅವರ್ ಲೇಡಿ’. ಈ ಮಧ್ಯಕಾಲೀನ ಕಟ್ಟಡವನ್ನು ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ. 115.6 ಮೀಟರ್ ಎತ್ತರವುಳ್ಳ ಚರ್ಚ್‌ ಗೋಪುರವು ಇಟ್ಟಿಗೆಗಳಿಂದ ನಿರ್ಮಿಸಲಾದ ವಿಶ್ವದ ಎರಡನೇ ಅತಿ ಎತ್ತರದ ಗೋಪುರವೆಂಬ ಖ್ಯಾತಿ ಪಡೆದಿದೆ. ಇಟಲಿಯ ಶಿಲ್ಪಿ, ಚಿತ್ರಕಾರ ಹಾಗೂ ವಾಸ್ತುಶಿಲ್ಪಿ ಮೈಕಲ್ಯಾಂಜೆಲೋ ಅವರ ಅಪ್ರತಿಮ ಕಲಾಕೃತಿಗಳಲ್ಲಿ ಒಂದಾದ ‘ಮಡೋನ ಮತ್ತು ಮಗು’ ಶಿಲ್ಪವನ್ನೂ ಇಲ್ಲಿ ನೋಡಬಹುದು. ಮಾರ್ಬಲ್ ಕಲ್ಲಿನಲ್ಲಿ ಕೆತ್ತಲಾಗಿರುವ, ಆರೂವರೆ ಅಡಿ ಎತ್ತರದ ಏಕಶಿಲಾ ವಿಗ್ರಹವು ಚರ್ಚಿನ ಕೇಂದ್ರಬಿಂದುವಾಗಿದೆ.

ಏಸು ಕ್ರಿಸ್ತನ ರಕ್ತದ ಅವಶೇಷವನ್ನು ಇಲ್ಲಿ ನೋಡಬಹುದು!
ಧಾರ್ಮಿಕ ಹೆಗ್ಗುರುತುಗಳಲ್ಲಿ ಒಂದಾದ ‘ಬೆಸಿಲಿಕಾ ಆಫ್ ದಿ ಹೋಲಿ ಬ್ಲಡ್’ನಲ್ಲಿ ಏಸುಕ್ರಿಸ್ತನ ರಕ್ತದ ಅವಶೇಷವನ್ನು ಒಂದು ಶೀಷೆಯಲ್ಲಿ ಇಡಲಾಗಿದ್ದು, ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿದೆ. ಇದನ್ನು ಎರಡನೇ ಕ್ರುಸೇಡ್ ನಂತರ ಬೆಸಿಲಿಕಾಗೆ ತರಲಾಯಿತಂತೆ. ಪ್ರತೀವರ್ಷ ಪವಿತ್ರ ರಕ್ತದ ಶೀಷೆಯನ್ನು ನಗರದ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾರೆ. ಬ್ರೂಗ್ಸ್‌ನ ಪ್ರಮುಖ ಧಾರ್ಮಿಕ ವಿಧಿಗಳಲ್ಲಿ ಒಂದಾಗಿರುವ ಈ ಮೆರವಣಿಗೆಯಲ್ಲಿ ಹಲವರು ಮಧ್ಯಕಾಲೀನ ‘ನೈಟ್ಸ್’ ಅಥವಾ ‘ಕ್ರುಸೇಡರ್’ಗಳ ಪೋಷಾಕುಗಳನ್ನು ಧರಿಸಿ ಸಾಗುವುದು ಅಂದಿನ ದಿನಗಳನ್ನು ನೆನಪಿಸುತ್ತದೆ. ಇನ್ನೂ ಹಲವು ಚರ್ಚ್‌ಗಳು ಮತ್ತು ಅವುಗಳ ಸಂಗ್ರಹಾಲಯಗಳಿಗೆ ಪ್ರವಾಸಿಗರು ಭೇಟಿ ನೀಡಬಹುದು.

ಕಾಲುವೆಗಳಿಂದ ಸುತ್ತುವರಿದಿರುವ ಈ ನಗರ ‘ವೆನಿಸ್ ಆಫ್ ನಾರ್ಥ್’ ಎಂದೇ ಪ್ರಸಿದ್ಧ

ಬಿಯರ್ ಪ್ರಿಯರಿಗಾಗಿ…
ಲೇಸ್ ಹಾಗೂ ಜವಳಿ ಉದ್ಯಮಕ್ಕೆ ಹೆಸರುವಾಸಿಯಾಗಿರುವ ‘ಬ್ರೂಗ್ಸ್’, ಬಿಯರ್ ತಯಾರಿಕೆಯಲ್ಲೂ ಹೆಸರು ಮಾಡಿದೆ. ‘ಡಿ ಹಾಲ್ವೇ ಮಾನ್’ ಬ್ರೂವರಿಯಲ್ಲಿ ‘ಬ್ರೂಗ್ಸ್’ ಹೆಸರಿನೊಂದಿಗೆ ಪ್ರಾರಂಭವಾಗುವ ಹಲವು ಬಗೆಯ ಬಿಯರ್‌ಗಳು ತಯಾರಾಗುತ್ತವೆ. ಬಿಯರ್ ಪ್ರಿಯರು ತಮಗಿಷ್ಟವಾದ ಬಿಯರ್ ಸೇವಿಸಿ ಆನಂದಿಸಬಹುದು.

ಡಚ್ ಸಂಸ್ಕೃತಿಯ ಪ್ರತೀಕಗಳಾದ ‘ವಿಂಡ್ ಮಿಲ್‌’ಗಳನ್ನು ಬ್ರೂಗ್ಸ್‌ನಲ್ಲೂ ವೀಕ್ಷಿಸಬಹುದು. ನಗರದ ಹೊರವಲಯದಲ್ಲಿರುವ 17ನೇ ಶತಮಾನದ, ಇಂದಿಗೂ ಕಾರ್ಯನಿರ್ವಹಿಸುತ್ತಿರುವ ಆಕರ್ಷಕ ‘ವಿಂಡ್ ಮಿಲ್’ಗಳ ಚಟುವಟಿಕೆಗಳಿಗೆ ಪ್ರವಾಸಿಗರು ಸಾಕ್ಷಿಯಾಗಬಹುದು.

ಚಾಕೊಲೇಟ್‌ಗಳನ್ನು ನಾವೇ ತಯಾರಿಸಬಹುದು
ಬೆಲ್ಜಿಯಂ ಚಾಕೊಲೇಟ್‌ಗಳು ಚಾಕೊಲೇಟ್‌ ಪ್ರಿಯರ ಬಾಯಲ್ಲಿ ನೀರೂರಿಸುತ್ತವೆ. ಚಾಕೊಲೇಟ್‌ ತಯಾರಿಕೆಯಲ್ಲಿ ಆಸಕ್ತಿಯುಳ್ಳವರು ಚಾಕೊ ಸ್ಟೋರಿ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದಲ್ಲಿ, ಚಾಕೊಲೇಟ್‌ನ ಮೂಲ, ಉಪಯೋಗಿಸುವ ವಸ್ತುಗಳು ಹಾಗೂ ಬಗೆ ಬಗೆಯ ಚಾಕೊಲೇಟ್‌ಗಳನ್ನು ತಯಾರಿಸುವ ವಿಧಾನಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಚಾಕೊಲೇಟ್‌ ತಯಾರಿಕಾ ಕಾರ್ಯಾಗಾರದಲ್ಲಿ ನಾವೇ ಚಾಕೊಲೇಟ್‌ ತಯಾರಿಸಬಹುದು ಹಾಗೂ ಉಚಿತವಾಗಿ ಚಾಕೊಲೇಟ್‌ಗಳನ್ನು ತಿಂದು ಖುಷಿಪಡಬಹುದು.

ಬೆಸಿಲಿಕಾ ಆಫ್ ದಿ ಹೋಲಿ ಬ್ಲಡ್

‘ಬ್ರೂಗ್ಸ್’ ನಗರವನ್ನು ವೀಕ್ಷಿಸಿ ದಣಿದ ಪ್ರವಾಸಿಗರು ಇಲ್ಲಿ ವಿಶೇಷವಾಗಿ ತಯಾರಿಸಲಾಗುವ ‘ವೇಫಲ್’ ಹಾಗೂ ಬೆಲ್ಜಿಯಂ ಚಾಕೊಲೇಟ್‌ಗಳನ್ನು ಸವಿದು ದಣಿವಾರಿಸಿಕೊಳ್ಳಬಹುದು.

1.2 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಬ್ರೂಗ್ಸ್ ನಗರದ ‘ಕಾಬಲ್‌ಸ್ಟೋನ್’ ರಸ್ತೆಗಳಲ್ಲಿ ಕಾಲ್ನಡಿಗೆಯ ಮೂಲಕ ವೀಕ್ಷಿಸುವಾಗ ಸಿಗುವ ಆನಂದವನ್ನು ವರ್ಣಿಸಲಾಗುವುದಿಲ್ಲ. ಕಾಲ್ನಡಿಗೆಯಲ್ಲೇ ಇಡೀ ನಗರವನ್ನು ಸುತ್ತಾಡುತ್ತಾ ಸೌಂದರ್ಯವನ್ನು ಆಸ್ವಾದಿಸುತ್ತಾ ಇತಿಹಾಸವನ್ನು ತಿಳಿದುಕೊಳ್ಳಬಹುದು. ಯುವತಿಯರು ನಡೆಸುವ ಕುದುರೆ ಗಾಡಿಗಳಲ್ಲಿ ಕುಳಿತು ಸಂಪೂರ್ಣವಾಗಿ ನಗರವನ್ನು ವೀಕ್ಷಿಸುವಾಗ ವಿಶಿಷ್ಟ ಅನುಭೂತಿ ಉಂಟಾಗುತ್ತದೆ.

ಮುದ ನೀಡುವ ಬೋಟ್ ರೈಡ್
ನಗರದಲ್ಲಿರುವ ಹಲವಾರು ಕಾಲುವೆಗಳಿಂದಾಗಿ ಬ್ರೂಗ್ಸ್ ನಗರವನ್ನು ‘ವೆನಿಸ್ ಆಫ್ ನಾರ್ಥ್’ ಎಂದೂ ಕರೆಯುತ್ತಾರೆ. ಕಾಲುವೆಗಳ ಅಂದವನ್ನು ‘ಕೆನಾಲ್ ಬೋಟ್ ರೈಡ್’ ಮೂಲಕ ಕಣ್ತುಂಬಿಕೊಳ್ಳಬಹುದು. ಮಾರ್ಚ್- ನವೆಂಬರ್ ತಿಂಗಳುಗಳ ನಡುವೆ ಮಾತ್ರ ಈ ಸೇವೆ ಲಭ್ಯವಿದ್ದು, 30 ನಿಮಿಷಗಳ ದೋಣಿ ಪ್ರಯಾಣದಲ್ಲಿ ನಗರದ ಕಾಲುವೆಗಳಲ್ಲಿ ಸಾಗುವಾಗ ದಡದಲ್ಲಿರುವ ಮನೆಗಳ ಮುಂದಿರುವ ಬಣ್ಣ ಬಣ್ಣದ ಹೂಗಳಿಂದ ಕಂಗೊಳಿಸುವ ಆಲಂಕಾರಿಕ ಹೂವಿನ ಕುಂಡಗಳು ಮನಸ್ಸಿಗೆ ಮುದ ನೀಡುತ್ತವೆ. ಕಾಲುವೆಗಳ ಇಕ್ಕೆಲಗಳಲ್ಲಿರುವ ಐತಿಹಾಸಿಕ, ಪಾರಂಪರಿಕ ಶೈಲಿಯ ಕಟ್ಟಡಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ನಗರದ ಐದು ಕಡೆಗಳಿಂದ ಪ್ರಾರಂಭವಾಗುವ ‘ಕೆನಾಲ್ ಬೋಟ್ ರೈಡ್’ ಕೇಂದ್ರಗಳನ್ನು ಪ್ರವಾಸಿಗರು ತಮ್ಮ ಅನುಕೂಲಕ್ಕೆ ತಕ್ಕಂತೆ ಆಯ್ದುಕೊಳ್ಳಬಹುದು.

ಮಳಿಗೆಯಲ್ಲಿ ಬಗೆಬಗೆಯ ಬೆಲ್ಜಿಯಂ ಚಾಕೊಲೇಟ್ಸ್‌

ಬ್ರೂಗ್ಸ್ ಸಾರಿಗೆ ವ್ಯವಸ್ಥೆಯೂ ಪ್ರವಾಸಿಗರಿಗೆ ಅನುಕೂಲಕರವಾಗಿದೆ. ರೈಲ್ವೆ ನಿಲ್ದಾಣದಿಂದ ಹಲವು ನಗರಗಳಿಗೆ ರೈಲು ಸಂಪರ್ಕವಿದೆ. ನಗರದ ಕೇಂದ್ರ ಪ್ರದೇಶದಿಂದ ಕೇವಲ 10 ನಿಮಿಷಗಳಲ್ಲಿ ಕಾಲ್ನಡಿಗೆಯ ಮೂಲಕ ರೈಲು ನಿಲ್ದಾಣವನ್ನು ತಲುಪಬಹುದು. 25 ಕಿ.ಮೀ ದೂರದಲ್ಲಿರುವ ವಿಮಾನ ನಿಲ್ದಾಣವನ್ನು ಬಸ್ ಸಾರಿಗೆ ಅಥವಾ ಟ್ಯಾಕ್ಸಿಗಳ ಮೂಲಕ ತಲುಪಬಹುದು.

ಒಂದೆರಡು ದಿನಗಳಲ್ಲಿ ವೀಕ್ಷಿಸಿದ ಬ್ರೂಗ್ಸ್ ನಗರದ ಸ್ಮಾರಕಗಳು, ಅನಿರ್ವಚನೀಯ ಆನಂದವನ್ನು ನೀಡಿದ ಕೆನಾಲ್ ಬೋಟ್ ರೈಡ್, ಚಾಕೊಲೇಟ್‌, ವೇಫಲ್ಸ್, ಫ್ರೆಂಚ್ ಫ್ರೈಸ್‌ಗಳ ರುಚಿ ಸದಾಕಾಲ ಪ್ರವಾಸಿಗರ ಮನಸ್ಸಿನಲ್ಲಿ ಉಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.