ADVERTISEMENT

ನಾರ್ವೆಯ ಭೂರಮೆಯ ಬೆಡಗು

ನಾರ್ವೆಯ ಫ್ಲಾಮ್ ತೆರೆದಿಡುವ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 19:30 IST
Last Updated 14 ಆಗಸ್ಟ್ 2019, 19:30 IST
Flam
Flam   

ಸ್ಕಾಂಡಿನೇವಿಯಾ ದೇಶಗಳಲ್ಲೊಂದಾದ ನಾರ್ವೆಯ ಪ್ರಕೃತಿ ಸೌಂದರ್ಯದಲ್ಲಿ ಅವರ್ಣನೀಯವಾದ ರಮ್ಯತೆ ಇದೆ. ಸಮುದ್ರ ತೀರ, ಫ್ಯೋಡ್ರ್ಸ್ ಎಂಬ ಸಮುದ್ರದ ಒಳಚಾಚುಗಳು, ನದಿಗಳ ಹರಿವು, ಪರ್ವತಗಳ ಸಾಲು, ಕಡಿದಾದ ಕಣಿವೆಗಳು, ಸ್ಪ್ರೂಸ್ ಬರ್ಚ್, ಫೈನ್‌, ಓಕ್‍ನಂತಹ ಸೂಚೀಪರ್ಣ ಮರಗಳ ಅರಣ್ಯ ಸಂಪತ್ತು, ವನ್ಯ ಜೀವಿಗಳು ಎಲ್ಲೆಲ್ಲೂ ಅನುಪಮ ಚೆಲುವಿನ ಕಣ್ಮನ ಸೆಳೆವ ನೋಟ.

ಇಲ್ಲಿನ ಉತ್ತರ ಸಮುದ್ರದ ಆಳ, ಉದ್ದವಾದ ಆದರೆ ಇಕ್ಕಟ್ಟಾದ ಹಲವಾರು ಫ್ಯೋಡರ್ಸ್‌ಗಳಿವೆ (ಎರಡು ಕಣಿವೆಗಳ ನಡುವೆ ಸಮುದ್ರ ನೀರು ಭೂಮಿಯನ್ನು ಕೊರೆದುಕೊಂಡು ಹೋಗಿರುವುದು). ಇವುಗಳ ಇಕ್ಕೆಲಗಳಲ್ಲೂ ನೀರಿನಿಂದಲೇ ಮೇಲೆದ್ದಿರುವಂತೆ ಕಾಣುವ ಪರ್ವತ ಸಾಲುಗಳು. ಬೆಟ್ಟಗಳ ತುದಿಯಲ್ಲಿ ಹಿಮದ ಪದರ. ಇಂಥ ಅಪರೂಪದ ಪರಿಸರವನ್ನು ಕೇಂದ್ರೀಕರಿಸಿಕೊಂಡಿರುವ ಸ್ಥಳವೇ ಫ್ಲಾಮ್‌. ಇದು ಪಶ್ಚಿಮ ನಾರ್ವೆಯ ಅರ್ಲ್ಯಾಂಡ್ ಮುನಿಸಿಪಾಲಿಟಿಗೆ ಸೇರಿದ ಹಳ್ಳಿ. ನಾರ್ವೆಜಿಯನ್ ಭಾಷೆಯಲ್ಲಿ ‘ಫ್ಲಾಮ್’ ಎಂದರೆ ಕಡಿದಾದ ಪರ್ವತಗಳ ನಡುವಿರುವ ಮೈದಾನ ಎಂದರ್ಥ.

ನಾರ್ವೆಯ ಫ್ಯೋಡರ್ಸ್‌ಗಳಲ್ಲೆಲ್ಲಾ ಅತಿ ಹೆಚ್ಚು ಉದ್ದದ (205 ಕಿ.ಮೀ ಉದ್ದ) ‘ಕಿಂಗ್ ಆಫ್ ಫ್ಯೋಡರ್ಸ್‌’ ಎಂದರೆ ಅದು ಸೊನ್ಯೇಫ್ಯೋರ್ಡ್. ಇದರ ಒಂದು ಕವಲೇ ಅರ್ಲ್ಯಾಂಡ್‌ಫ್ಯೋರ್ಡ್. ಇದರ ತುದಿಯಲ್ಲಿರುವುದೇ ಫ್ಲಾಮ್ ಹಳ್ಳಿ. ರಾಜಧಾನಿ ಓಸ್ಲೊದಿಂದ 313 ಕಿ.ಮೀ. ದೂರದಲ್ಲಿದೆ.

ADVERTISEMENT

ಫ್ಲಾಮ್ ಮೂಲಕ ಯೂರೋಪಿಯನ್ ಹೆದ್ದಾರಿ ಹಾದು ಹೋಗುತ್ತದೆ. ಇಲ್ಲಿನ ಸಮುದ್ರ ಒಳಚಾಚುಗಳಲ್ಲಿ ಸಾಗುತ್ತಾ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಎರಡು ಸಾರಿಗೆ ವ್ಯವಸ್ಥೆಗಳಿವೆ. ಒಂದು ಇಲ್ಲಿನ ಫ್ಲಾಂಬಾನಾ ರೈಲಿನಲ್ಲಿ ಕುಳಿತು ಮಿರ್ಡಾಲ್‍ ಸ್ಟೇಷನ್‌ವರೆಗೆ ಪ್ರಯಾಣಿಸುವುದು. ಎರಡನೆಯದು ಇಲ್ಲಿಂದ ಫ್ಯೋರ್ಡ್‌ ಕ್ರೂಸ್ (ಪ್ರಯಾಣಿಕರ ಹಡಗು) ಮೂಲಕ ಜಲಯಾನ ಕೈಗೊಳ್ಳುವುದು. ಒಂದೇ ದಿನದಲ್ಲಿ ಈ ಎರಡರಲ್ಲೂ ಪ್ರಯಾಣಿಸಿ, ಪ್ರಕೃತಿ ಸೌಂದರ್ಯ ಸವಿಯಬಹುದು.

ಫ್ಲಾಂಬಾನಾ ರೈಲ್ವೆ ಯಾನ

ಫ್ಲಾಂಬಾನಾ ರೈಲು, ಅಚ್ಚುಕಟ್ಟಾದ ಸುಖಾಸೀನಗಳನ್ನೊಳಗೊಂಡ ಸಾರಿಗೆ ವ್ಯವಸ್ಥೆ. ಈ ರೈಲ್ವೆ ಬೋಗಿಯ ಎರಡು ಬದಿಗೂ ದೊಡ್ಡ ಗಾಜಿನ ಕಿಟಕಿಗಳಿವೆ. . ಹೀಗಾಗಿ ಬೋಗಿಯೊಳಗೆ ಎಲ್ಲಿ ಕುಳಿತರೂ ತೆರೆದ ಕಿಟಕಿ ಪಕ್ಕ ಕುಳಿತಂತೆಯೇ ಭಾಸವಾಗುತ್ತದೆ. ಎದುರಿನ ಟಿ.ವಿ ಪರದೆಯ ಮೇಲೆ ಸ್ಥಳೀಯ ದೃಶ್ಯಗಳನ್ನು ನಾರ್ವೆಜಿಯನ್ ಮತ್ತು ಇಂಗ್ಲಿಷಿನ ವಿವರಗಳೊಂದಿಗೆ ಬಿತ್ತರವಾಗುತ್ತಿರುತ್ತದೆ.

ಫ್ಲಾಮ್‌ ಹಳ್ಳಿಯಿಂದ ಹೊರಟರೆ, 20 ಕಿ.ಮೀ ನಂತರ ಸಮದ್ರಮಟ್ಟದಿಂದ 2840 ಅಡಿ ಎತ್ತರದಲ್ಲಿರುವ ಮಿರ್ಡಾಲ್‌ ಎಂಬ ನಿಲ್ದಾಣ ತಲುಪುತ್ತೇವೆ. ಇಷ್ಟು ದೂರ ಕ್ರಮಿಸಲು ಒಂದು ಗಂಟೆ ಅವಧಿ ತೆಗೆದುಕೊಳ್ಳುತ್ತದೆ. ಆ ನಿಲ್ದಾಣ ಒಂದು ಗಮ್ಯ ಅಷ್ಟೇ. ಅದನ್ನು ತಲುಪುವವರೆಗಿನ ರೈಲು ಪ್ರಯಾಣ ಪ್ರಕೃತಿಯ ಸಿರಿಯ ವೈಭವದ ವಿಲಾಸವನ್ನು ಅನಾವರಣಗೊಳಿಸುತ್ತದೆ. ಬೆಟ್ಟಗಳ ನಡುವಿನ ಈ ಯಾನದಲ್ಲಿ ರೈಲು, ಇಪ್ಪತ್ತು ಸುರಂಗಗಳು, ಒಂದು ಸೇತುವೆಯನ್ನು ಹಾದು ಹೋಗುತ್ತದೆ. ಇಂಥ ಸುಂದರ ಪಯಣದ ಅನುಭವ ನೀಡುವ ಈ ಪ್ರಯಾಣವನ್ನು ಜಗತ್ತಿನ ಅತಿ ಸುಂದರ ರೈಲ್ವೆ ಪ್ರಯಾಣಗಳಲ್ಲೊಂದು ಎಂದು ಪರಿಗಣಿಸಲಾಗಿದೆ.

ಈ ರೈಲ್ವೆ ಹಳಿಯ ಬಲಭಾಗದಲ್ಲಿ ಸ್ವಲ್ಪ ತಗ್ಗಿನಲ್ಲಿ ಬೆಟ್ಟ–ಕಾಡು–ಕಣಿವೆಗಳ ನಡುವೆ ಹಾದು ಹೋಗುವ ‘ರಾಲರ್‍ವೆಗೆನ್’ ಎಂಬ ರಸ್ತೆ ಇದೆ. ಇದು 1924ರಲ್ಲಿ ರೈಲ್ವೆ ಹಳಿ ಹಾಕುವ ವೇಳೆಯಲ್ಲೇ ನಿರ್ಮಾಣವಾಗಿದೆ.

1940ರಲ್ಲಿ ರೈಲು ಸಂಚಾರ ಆರಂಭವಾದಾಗಿನಿಂದಲೂ, ಈ ರಸ್ತೆಯಲ್ಲಿ ಚಾರಣಿಗರು, ಬೈಕ್ ಸವಾರರು ಹಾಗೂ ನಾರ್ವೆಜಿಯನ್ನರು ಸಂಚರಿಸುತ್ತಾರೆ. ರಸ್ತೆಯ ಬದಿಯಲ್ಲಿ ಬೆಳ್ಳಿ ನೊರೆಯಂತೆ ಜುಳುಜುಳನೆ ಹರಿಯುವ ನೀರನ್ನು ನೋಡುತ್ತಾ, ಜೂನ್ ತಿಂಗಳ ಬೇಸಿಗೆಯಲ್ಲೂ ಹಿಮದ ಟೊಪ್ಪಿಗೆಗಳನ್ನು ಹಾಕಿಕೊಂಡ ಬೆಟ್ಟಗಳನ್ನು ಕಣ್ತುಂಬಿಕೊಳ್ಳುತ್ತಾ ಸಾಗುವುದೇ ಆ ಸವಾರರಿಗೆ ಒಂದು ಚಂದನೆಯ ಅನುಭವ. ಇದರ ಜತೆಗೆ ಬೆಟ್ಟಗಳ ಮಡಿಲಲ್ಲಿ ಪರದೆಯಂತೆ ಹರಡಿರುವ ಹಿಮಪದರ, ಅಲ್ಲಲ್ಲಿ ಧುಮ್ಮಿಕ್ಕುವ ಜಲಪಾತಗಳು ಒಂದೊಂದ ರದು ಒಂದೊಂದು ರೀತಿಯ ಸೊಬಗು.

ಶೋಸ್‍ಫಾಸೆನ್ ಜಲಪಾತ

ಬೆಟ್ಟಗಳ ನಡುವೆ ಸಾಗುವ ಫ್ಲಾಂಬಾನಾ ರೈಲು ಮಧ್ಯದಲ್ಲಿ ಐದು ನಿಮಿಷಗಳ ಕಾಲ ನಿಲ್ಲುತ್ತದೆ. ಪ್ರಯಾಣಿಕರೆಲ್ಲ ಕೆಳಗಿಳಿದು ಆ ಅಲ್ಪ ಸಮಯದಲ್ಲೇ ಸುಂದರ ಜಲಪಾತವನ್ನು ಕಣ್ತುಂಬಿಕೊಳ್ಳುತ್ತಾರೆ. ಅದೇ ಶೋಸ್‌ಫಾಸೆನ್‌ ಜಲಪಾತ. ಬೆಳ್ನೊರೆಯನ್ನು ತುಂಬಿಕೊಂಡು ಹೊಳೆಯಾಗಿ ಹರಿಯುವಂತೆ ಕಾಣುವ ಈ ಜಲಪಾತದ ಸೊಬಗು ವರ್ಣಿಸಲಸದಳ. ಎರಡು ಕಣಿವೆಗಳ ನಡುವೆ ಭೋರಿಡುತ್ತಾ ಸುಮಾರು 90 ಮೀಟರ್ ಎತ್ತರದಿಂದ ಧುಮ್ಮಿಕ್ಕುವ ಸೊಬಗು ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ.

ಈ ಜಲಪಾತದ ಕುರಿತು ಒಂದು ಜನಪ್ರಿಯ ದಂತಕತೆಯಿದೆ. ಇಲ್ಲಿ ಮೋಹಿನಿಯರು ದಾರಿ ಹೋಕರನ್ನು ಹಾಡುಗಳೊಂದಿಗೆ ಆಕರ್ಷಿಸಿ, ಕಾಡಿನ ಒಳಗೆ ಕರೆದೊಯ್ಯುತ್ತಿದ್ದವಂತೆ. ಈ ಕಥೆ ಯನ್ನು ಪ್ರಚಲಿತದಲ್ಲಿರಿಸುವ ಪ್ರಯತ್ನವೋ ಏನೋ, ನಾವು ಹೋದಾಗಲೂ ಅಲ್ಲಿ ಧ್ವನಿಮುದ್ರಿತ ವಾದ್ಯಗಳ ಸಂಗೀತ ಮೊಳಗು ತ್ತಿತ್ತು. ಎತ್ತರದ ಬಂಡೆಗಳ ಮೇಲೆ ಬಿರಿಹೊಯ್ದ ಬಿಳಿಕೂದಲ ನಿಲುವಂಗಿ ತೊಟ್ಟ ಇಬ್ಬರು ನರ್ತಿಸುತ್ತಿದ್ದರು. ಇವನ್ನೆಲ್ಲ ನೋಡಿಕೊಂಡು ಮಿರ್ಡಾಲ್‌ ಸ್ಟೇಷನ್‌ ತಲುಪಿದೆವು. ಅಲ್ಲಿಂದ ಫ್ಲಾಮ್‌ಗೆ ಹಿಂದಿರುಗುವಾಗ ಮತ್ತೊಮ್ಮೆ ಈ ಜಲಪಾತವನ್ನು ಕಣ್ತುಂಬಿಕೊಂಡೆವು. ಫ್ಲಾಂಬಾನಾ ತಲುಪಿದ ಮೇಲೆ, ಅಲ್ಲೇ ರೈಲು ನಿಲ್ದಾಣದ ಬಳಿ ಒಂದು ಮ್ಯೂಸಿಯಂಗೆ ಭೇಟಿ ನೀಡಿದೆವು.

ಜಲಯಾನದ ಬೆರಗು

ನಾರ್ವೆಯ ಪಶ್ಚಿಮ ಭಾಗದಲ್ಲಿ ಸ್ಕಾಂಡಿನೇವಿಯಾ ಪರ್ವತ ಶ್ರೇಣಿಗಳಿವೆ. ಇಲ್ಲಿ ಹಲವು ದ್ವೀಪಗಳೂ ಇವೆ. ಕಣಿವೆಗಳ ನಡುವೆ ಸಮುದ್ರದ ಒಳಚಾಚುಗಳಿವೆ. ಸೋನ್ಯೆಫ್ಯೋರ್ಡ್‌ನ ಒಂದು ಕವಲು ನಾರ್ವೈಫ್ಯೋರ್ಡ್, ಇನ್ನೊಂದು ಕವಲು ಅರ್ಲ್ಯಾಂಡ್‍ಫ್ಯೋರ್ಡ್. ಈ ಎರಡೂ ಮಾರ್ಗಗಳಲ್ಲಿರುವ ನಿಸರ್ಗ ಶ್ರೀಮಂತಿಕೆಗಾಗಿ ಇವುಗಳು ಯುನೆಸ್ಕೊ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿವೆ.

ಮಿರ್ಡಾಲ್‍ನಿಂದ ಹಿಂದಿರುಗಿದ ನಾವು ಫ್ಲಾಮ್ ರೈಲ್ವೆ ನಿಲ್ದಾಣದಿಂದ ಫ್ಲಾಮ್ ಬಂದರಿಗೆ ಬಂದೆವು. ಇಲ್ಲಿ ಸುಮಾರು ಅರ್ಧ ಕಿ.ಮೀ ನಡೆದು, ನಮಗೆ ನಿಗದಿಗೊಳಿಸಿದ್ದ ಕ್ರೂಸ್‌ (ಪ್ರಯಾಣಿಕರ ಹಡಗು) ಹತ್ತಿದೆವು. ನಮ್ಮ ಫ್ಯೋರ್ಡ್‌ ಕ್ರೂಸ್‌ನ ಜಲಯಾನ ಅರ್ಲ್ಯಾಂಡ್‌ ಫ್ಯೋರ್ಡ್‌ನಿಂದ ಆರಂಭವಾಯಿತು. ಮುಂದೆ ನಾರ್ವೈಫ್ಯೋರ್ಡ್ ಮೂಲಕ, ಅದರ ತುದಿಯಲ್ಲಿರುವ ಗುಡ್ವೆಂಜನ್ ಹಳ್ಳಿಗೆ ತಲುಪಿತು. 48 ಕಿ.ಮೀಟರ್‌ಗಳ ಈ ಜಲಯಾನ ಎರಡು ಗಂಟೆಗೂ ಅಧಿಕ ಸಮಯ ತೆಗೆದುಕೊಂಡಿತು.

ದಾರಿಯುದ್ದಕ್ಕೂ ಬಿಳಿ–ಕಂದು ಮೈಬಣ್ಣದ ಸೀಗುಲ್ ಹಕ್ಕಿಗಳು ಗಾ..ಗಾ...ಗಾ ಎಂದು ಕೂಗೆಬ್ಬಿಸುತ್ತಾ ಕ್ರೂಸ್‍ನ ಅಂಚುಗಳ ಮೇಲೆ ಕುಳಿತು, ಪ್ರವಾಸಿಗರನ್ನೇ ಮಿಕಿಮಿಕಿ ನೋಡುತ್ತಿದ್ದವು. ತಿಂಡಿಗಳನ್ನು ಕೈಯಲ್ಲಿ ಹಿಡಿದು ಮುಂದೆ ಮಾಡಿದರೆ ಅವನ್ನು ಕೊಕ್ಕಿನಿಂದ ಸೆಳೆದು ಗುಳುಂ ಮಾಡಿ, ಮತ್ತೆ ಮೂತಿ ಮುಂದೆ ಚಾಚುತ್ತಿದ್ದವು.

ಕ್ರೂಸ್ ಸಾಗುತ್ತಿರುವಾಗ ಅಕ್ಕಪಕ್ಕದಲ್ಲಿ ಹಸಿರು ಹೊದ್ದ ಬೆಟ್ಟಗಳು, ಆಳವಾದ ನೀರಿನಲ್ಲಿ ಪ್ರತಿಫಲಿಸುತ್ತಿದ್ದವು. ಮರಗಳ ನೆರಳು, ಅಕ್ಕಪಕ್ಕದ ಬೆಟ್ಟಗಳ ತುದಿಗಳು, ಅದೇ ತುದಿಯಿಂದ ಧುಮ್ಮಿಕ್ಕುವ ಜಲಪಾತಗಳು, ಫ್ಯೋರ್ಡ್‌ನ ಆಚೆಯಿರುವ ಬೆಟ್ಟದ ತಪ್ಪಲಲ್ಲಿರುವ ಪುಟ್ಟ ಹಳ್ಳಿಗಳು.. ಹೀಗೆ ಗಿರಿ–ಝರಿ–ತೊರೆ– ಜಲಪಾತಗಳ ಒಡನಾಟದಲ್ಲಿರುವ ಹಳ್ಳಿಗಳ ಮನೆಗಳು ಕ್ಯಾನ್‌ವಾಸ್‌ ಮೇಲೆ ಬರೆದ ವರ್ಣಚಿತ್ರಗಳಂತೆ ಕಾಣುತ್ತಿದ್ದವು. ನಿಶ್ಚಲವಾಗಿ ನಿಂತಿದ್ದ ನೀರಲ್ಲಿ ಕಾಣುತ್ತಿದ್ದ ದಡದಲ್ಲಿರುವ ಹಳ್ಳಿಯ ಮನೆಗಳ, ಜಲಪಾತಗಳ ಪ್ರತಿಬಿಂಬವನ್ನು ತೇಲುವ ಕ್ರೂಸ್ ಆಗಾಗ್ಗೆ ಅಲೆ ಎಬ್ಬಿಸಿ ಕದಡುತ್ತಿತ್ತು.

ನಾರ್ವೆಯ ಈ ರೈಲು ಮತ್ತು ಜಲಯಾನದಲ್ಲಿ ಪ್ರಕೃತಿಯ ಅನನ್ಯ ಸೊಬಗಿನ ಭವ್ಯತೆ, ದಿವ್ಯತೆಯ ದರ್ಶನವಾಗುತ್ತದೆ. ಅದು ಮನದ ಭಾವಕೋಶದಲ್ಲಿ ಅಚ್ಚೊತ್ತಿ ನಿಲ್ಲುತ್ತದೆ.

ಚಿತ್ರಗಳು: ಕೆ.ಎನ್.ಉರಾಳ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.