ADVERTISEMENT

ಬಾ ಬಾರೋ ಈ ಊರಿಗೆ ಮಳೆಯು ಎಳೆಯುವ ತೇರಿಗೆ

ಮುಂಗಾರು ಮಳೆಯ ಗೆಜ್ಜೆ ನಾದಕೆ ಜೊತೆಯಾಗಿ ಹಿತವಾಗಿ ಕುಣಿಯಲು ಸಿದ್ಧರಾದವರಿಗೆ ಇಲ್ಲುಂಟು ಹಲವು ಹಾದಿಗಳು

ಪ್ರಸಾದ್ ಶೆಣೈ ಆರ್ ಕೆ
Published 10 ಜುಲೈ 2021, 19:30 IST
Last Updated 10 ಜುಲೈ 2021, 19:30 IST
ಲೊನಾವಲಾ ಬೆಟ್ಟದ ಮೇಲಿನ ಕೋಟೆಯ ಮೇಲೆ ಸಾಗುತ್ತಾ... ಹಸಿರು–ಶ್ವೇತವರ್ಣದ ಆಟದ ಸೊಬಗನ್ನು ಸವಿಯುತ್ತಾ...
ಲೊನಾವಲಾ ಬೆಟ್ಟದ ಮೇಲಿನ ಕೋಟೆಯ ಮೇಲೆ ಸಾಗುತ್ತಾ... ಹಸಿರು–ಶ್ವೇತವರ್ಣದ ಆಟದ ಸೊಬಗನ್ನು ಸವಿಯುತ್ತಾ...   

ಮಲೆನಾಡ ಹಳ್ಳ ಕೊಳ್ಳದ ಮೇಲೆ ಮಳೆ ಬೀಳುವುದನ್ನು ಕಣ್ತುಂಬಿಕೊಳ್ಳಬೇಕು. ಜಿಟಿ ಜಿಟಿ ಮಳೆಗೆ ಒದ್ದೆ ಮುದ್ದೆಯಾಗಿ ಮಲೆನಾಡ ಮಳೆಕಾಡ ಹಸಿರು ಹಬ್ಬದಲ್ಲಿ ಕಳೆದೇ ಹೋಗಿಬಿಡಬೇಕು. ಮತ್ತೆ ಮತ್ತೆ ಕಾಡುವ ಮಲೆನಾಡಿನ ಚುಂಬಕ ದಾರಿಯಲ್ಲಿ ಒಂದು ರೌಂಡು ಹೊಡೆದು ಬಂದರೂ ಸಾಕು, ಅದೇನೋ ಸಮಾಧಾನ ಎಂದೆಲ್ಲಾ ಕಣ್ಣರಳಿಸುವವರು ಲಾಕ್‌ಡೌನ್ ಕಳೆದದ್ದೇ ಮತ್ತೆ ಹೊಳಪೇರಿಸಿಕೊಂಡಿದ್ದಾರೆ.

ಮಳೆಗಾಲದ ಕಡಲ ಮೊರೆತ, ನದಿ ತೀರದ ಬೀಸುಗಾಳಿ, ಕೆನೆಮೊಸರಿನಂತೆ ಆ ದೊಡ್ಡ ಬೆಟ್ಟದ ಸುತ್ತ ಚೆಲ್ಲಿಕೊಂಡ ಮಂಜು, ಜಿಟಿ ಜಿಟಿ ಎಂದು ಮಳೆಯ ಜೊತೆಗೆ ಜೋಗುಳ ಹಾಡುತ್ತ ಎಷ್ಟೋ ದೂರ ಕರೆದೊಯ್ಯುವ ಹಸಿರು ಮೆತ್ತಿಕೊಂಡ ದಾರಿ, ಹಸಿರು ಸುರಂಗದೊಳಗೆ ಘೀಳಿಡುತ್ತಾ ಸಾಗಿಬಿಡುವ ರೈಲು, ಇವೆಲ್ಲ ಕೊಡುವ ಪುಳಕವನ್ನು ಅನುಭವಿಸಲು ಬಹಳಷ್ಟು ಮಂದಿ ಹಾತೊರೆಯುವ ಸಮಯವಿದು. ಗುಟುಕೇರಿಸಲು ಬಿಸಿಬಿಸಿ ಮಲ್ನಾಡ್ ಕಷಾಯ, ಒಂದು ಪ್ಲೇಟ್ ಮೆಣಸಿನ ಭಜ್ಜಿ –ಇಷ್ಟಿದ್ದರೆ ಆಹಾ ಬೇರೇನೂ ಬೇಕಾಗಿಲ್ಲ ಎಂದು ಬಾಯಿ ಚಪ್ಪರಿಸುವ ಕ್ಷಣವೂ ಹೌದು.

ಇಷ್ಟುದಿನ ಲಾಕ್‌ಡೌನ್ ಅನ್ನೋ ಗೂಡಿನಲ್ಲಿ ಕೂತು ನೂರಾರು ಆಸೆಯ ರೆಕ್ಕೆಗಳು ಮೂಡಿದ್ದರೂ ಹಾಯಾಗಿ ಹಾರಲಾಗದೇ ಚಡಚಡಿಸುತ್ತಿದ್ದವರ ಉಮೇದು ಈಗ ಮತ್ತೆ ಪುಟಿದೆದ್ದಿದೆ. ಮುಂಗಾರು ಮಳೆಯ ಗೆಜ್ಜೆ ನಾದಕೆ ಜೊತೆಯಾಗಿ ಹಿತವಾಗಿ ಕುಣಿಯಲು ಸಿದ್ಧರಾದವರಿಗೆ ಇಲ್ಲಿ ನೂರು ನೋಟಗಳಿವೆ, ಪರಿಸರ ಕಲಿಸುವ ಪಾಠಗಳಿವೆ. ಕನಸಿನಂತಹ ದಾರಿಗಳಿವೆ, ಹಾಲಿನಂತಹ ಧಾರೆಗಳಿವೆ. ಬಾಯಿಗೆ ಎಂದೂ ಮರೆಯದ ಸ್ವಾದವೂ ಇದೆ.

ADVERTISEMENT

ಚುಂಬಕ ದಾರಿಯ ಸೆರಗ ಹಿಡಿದು

ಮಲೆನಾಡು, ಕರಾವಳಿಯ ಚುಂಬಕ ದಾರಿಗಳು ಮಳೆಗಾಲದಲ್ಲಿ ನಿಮ್ಮೊಳಗೆ ಏರಿಸುವ ನಶೆಯೇ ಬೇರೆ. ಹಸಿರು ಮುಕ್ಕಳಿಸುವ ದಾರಿಗಳು, ಆ ದಾರಿಯಲ್ಲಿ ಸಿಗುವ ಬೆಟ್ಟ, ಕಾಡು, ನದಿ ಸೆರಗುಗಳು, ಅಲ್ಲಿ ಬೀಳುವ ಮಾಯದಂತಹ ಮಳೆ, ತಿರುವು ಮುರುವು ರಸ್ತೆಗಳ ಮಾದಕ ಭಂಗಿ, ಇವೆಲ್ಲಾ ಕೊಡುವ ಅದಮ್ಯ ಸುಖವನ್ನು ಅನುಭವಿಸಿಯೇ ನೋಡಬೇಕು.

ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ದಾರಿಯಾಗಿ ಸಾಗಿದರೆ ಜಿಟಿ ಜಿಟಿ ಮಳೆಗೆ ನೆನೆಯುವ ಪಶ್ಚಿಮಘಟ್ಟದ ಶೋಲಾ ಅರಣ್ಯಗಳನ್ನು ನೋಡುವ ಪುಳಕವೇ ಅನುಪಮ.

ಕುದುರೆಮುಖದಲ್ಲಿ ಹೆಜ್ಜೆ ಹೆಜ್ಜೆಗೂ ಕಾಡು, ಶಿಖರ ಚೆಲುವೆಲ್ಲಾ ನಂದೆಂದು ಮಳೆಗೆ ರಗ್ಗು ಹೊದ್ದು ತಣ್ಣಗೆ ಮಲಗುವುದನ್ನು ನೋಡಿದರೆ ಆಹಾ ಎನ್ನುತ್ತೀರಿ. ದಾರಿಯಲ್ಲಿ ಕೆಲವು ಅನಾಮಧೇಯ ನೀರ ಧಾರೆಗಳೂ ಸಿಗುತ್ತವೆ. ಅವುಗಳನ್ನು ನೋಡುತ್ತಾ ನಮ್ಮ ಮೈಮನದಲ್ಲೂ ಹರುಷ ಧಾರೆಯಾಗುತ್ತದೆ. ಆದರೆ, ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಅಲ್ಲಲ್ಲಿ ದಾರಿಮಧ್ಯೆ ನಿಲ್ಲಲು ಅರಣ್ಯ ಇಲಾಖೆ ಅನುಮತಿ ನೀಡುವುದಿಲ್ಲ. ಹಾಗಾಗಿ ಈ ಚಂದದ ದಾರಿಯನ್ನು ಕಣ್ಣಲ್ಲೇ ಸಾಧ್ಯವಾದಷ್ಟು ಸೆರೆ ಹಿಡಿಯುತ್ತ, ಆಸ್ವಾದಿಸುತ್ತ ಸಾಗಿದರೆ ಬದುಕಿಗೆ ನವಚೇತನವೇ ಸಿಕ್ಕಂತಾಗುತ್ತದೆ. ಯಾಕೆಂದರೆ ಈ ದಾರಿಯೇ ಮಾಯಕದ ನಾಕ.

ಮಳೆಗಾಲದ ಬಿರುಸು ಕಳೆದಮೇಲೆ ಅರಣ್ಯ ಇಲಾಖೆ ಕುದುರೆಮುಖ ಪರ್ವತ ತಾಣ ಸೇರಿದಂತೆ ವಿವಿಧ ಚಾರಣ ತಾಣಗಳಿಗೆ ಪ್ರವೇಶ ನೀಡುತ್ತದೆ. ಆವಾಗ ಬೇಕಿದ್ದರೆ ನಿಜಕ್ಕೂ ಪರಿಸರವನ್ನು ಗಾಢವಾಗಿ ಪ್ರೇಮಿಸುವವರು, ಸ್ವರ್ಗದಂತಿರುವ ತಾಣಗಳಿಗೆ ಚಾರಣ ಕೈಗೊಳ್ಳಬಹುದು. ಅದಕ್ಕೂ ಮೊದಲು ಮಳೆಯಲ್ಲಿ ನೆನೆದ ಇಲ್ಲಿನ ದಾರಿಯನ್ನೊಮ್ಮೆ ನೋಡಿಬಂದರೆ ಮಳೆಯ ಮರ್ಮರ ನಾದ, ತಂಪು ಎಂದೆಂದಿಗೂ ನಿಮ್ಮನ್ನು ಆವರಿಸುತ್ತವೆ. ಕುದುರೆಮುಖದ ಮಳೆಗಾಲದಲ್ಲಿ ಅಪರೂಪದ ಮಲಬಾರ್ ಟ್ರೋಗನ್ ಹಕ್ಕಿಗಳು, ಪಶ್ಚಿಮಘಟ್ಟದ ಕಾಟಿ (ಕಾಡುಕೋಣ), ಕಡವೆ ನೋಡಲು ಸಿಕ್ಕಿದರೂ ಸಿಕ್ಕಾವು, ಮಳೆಗಾಲದಲ್ಲಿ ಸಂತಾನೋತ್ಪತ್ತಿಗೆ ಅಣಿಯಾಗುವ ಅಪರೂಪದ ಬಣ್ಣ ಬಣ್ಣದ ಕಪ್ಪೆಗಳು, ಲಕ್ಷಾಂತರ ಹುಳುಹುಪ್ಪಟೆಗಳು ನಿಮ್ಮನ್ನು ಸೆಳೆಯುತ್ತವೆ. ಕಪ್ಪೆ, ಕೀಟ, ಹಕ್ಕಿಗಳ ಕುರಿತು ಅಧ್ಯಯನ ಮಾಡುವವರಿಗೂ ಕುದುರೆಮುಖ ಕೌತುಕದ ದಾರಿ.

ನಾಲಗೆ ತಣಿಸುವ ಬಿಸಿ ಬಿಸಿ ತಿಂಡಿ ಅಡ್ಡಾ

ಗುಳ್ಳದ ಪೋಡಿ (ಬಜ್ಜಿ), ಕ್ಯಾಬೆಜ್ ಆಂಬೊಡೆ (ಬೋಂಡ), ಬಿಸಿ ಬಿಸಿ ಇಡ್ಲಿ ಸಾಂಬಾರ್, ಅನ್ನ, ತಿಳಿ ಸಾರು, ದಾಳಿತೊವ್ವೆ, ರುಚಿ ರುಚಿ ಉಪ್ಪಿನಕಾಯಿ, ಅಲಸಂಡೆ ಉಪ್ಕರಿ, ಬೀಟ್ರೂಟ್ ಪಲ್ಯ, ರಸಂ, ಹಪ್ಪಳ, ಸಂಜೆಗೆ ಬಿಸಿಬಿಸಿ ಮಲೆನಾಡು ಕಷಾಯ, ಬಿಸಿ ಬಿಸಿ ಮಂಗಳೂರು ಬನ್ಸ್, ಗೋಳಿಬಜೆ, ಮಂಡಕ್ಕಿ ಚುರುಮುರಿ ಮಳೆಗಾಲವನ್ನು ಮತ್ತೇರಿಸಲು ಇವಿಷ್ಟು ಖಾದ್ಯಗಳು ಸಾಕಲ್ಲವೇ?

ನೀವು ಮಲೆನಾಡಿನ ಆಗುಂಬೆಯ ಮಳೆಯಲ್ಲಿ ನೆನೆಯಲು ಆಸೆಪಡುತ್ತಿದ್ದರೆ, ಮಳೆಯಲ್ಲಿ ಬೇಕಾದಷ್ಟು ನೆನೆದು ಆಗುಂಬೆ-ಕೊಪ್ಪ ದಾರಿಯಲ್ಲಿರುವ ಅಪ್ಪಟ ಮನೆ ಸೊಗಡಿನ ಗುರುಪ್ರಸಾದ್ ಹೋಟೆಲ್‌ಗೆ ಲಗ್ಗೆ ಇಟ್ಟು ಇವನ್ನೆಲ್ಲಾ ಚಪ್ಪರಿಸಲೇಬೇಕು. ಮಳೆಗಾಲದ ನಿಜವಾದ ಅನುಭೂತಿ ಇನ್ನಷ್ಟು ಸಿದ್ಧಿಸುವುದೇ ಇಂತಹ ಬಿಸಿ ಬಿಸಿ ರುಚಿಕರ ತಿಂಡಿಗಳಿಂದ. ಏನಿಲ್ಲವೆಂದರೂ ಮಳೆಯಲ್ಲಿ ನೆನೆದು ಬಂದಾಗ ಹೊಟ್ಟೆಗೆ ಮಲೆನಾಡಿನ ಬಿಸಿಬಿಸಿ ಖಡಕ್ ಕಷಾಯವನ್ನೋ ಚಹಾವನ್ನೋ ಬಾಯಿಗಿಟ್ಟು ಹಾಯಾಗಿ ಹೀರುತ್ತಾ ಆಗುಂಬೆಯ ಮಳೆಯನ್ನು ನೋಡುತ್ತಾ ನಿಂತುಬಿಡಿ, ಅದರ ಜೊತೆಗೆ ಮೆಲ್ಲಲು ಮೆಣಸಿನಕಾಯಿ ಬಜ್ಜಿ ಇದ್ದರಂತೂ ಸ್ವರ್ಗವೇ ಬಾಯಿಗೆ ಬಂದಂತೆ, ಈ ಹೊಟೇಲಿನ ದಾಳಿತೋವೆ ಜೊತೆ ಇಡ್ಲಿ ಅಂಬೊಡೆ ಮುಳುಗಿಸಿ ತಿಂದರಂತೂ ಆ ರುಚಿಯನ್ನು ಎಂದೆಂದಿಗೂ ಮರೆಯಲಾರಿರಿ.

ಶೃಂಗೇರಿ ಭಟ್ರ ಮೆಸ್: ಮಲೆನಾಡಿನ ಶೃಂಗೇರಿಯ ಶಾರದಾಂಬೆ ದೇವಳದ ಬಳಿ ಇಂಥದ್ದೇ ಒಂದು ರುಚಿಕರ ತಿಂಡಿ ತಾಣವೊಂದಿದೆ. ಅದರ ಹೆಸರು ಭಟ್ರ ಮೆಸ್.ಇಲ್ಲಿನ ಅಕ್ಕಿರೊಟ್ಟಿ, ಶ್ಯಾವಿಗೆ ಉಪ್ಪಿಟ್ಟು, ಮಸಾಲದೋಸೆ, ಸಜ್ಜಿಗೆ ಅವಲಕ್ಕಿ ಮಲೆನಾಡಿನ ಸೊಗಡನ್ನು ನಿಮಗೆ ಹತ್ತಿಸಿಬಿಡುತ್ತವೆ. ಪಕ್ಕಾ ಸಾಂಪ್ರದಾಯಿಕ ಶೈಲಿಯಿಂದ ತಯಾರಿಸುವ ಇಲ್ಲಿನ ತಿಂಡಿಯ ರುಚಿ ನಾಲಗೆಯಲ್ಲಿ ಬಹುಹೊತ್ತು ಉಳಿಯುತ್ತದೆ.

ಉಡುಪಿ ಜಿಲ್ಲೆಯನ್ನು ಬಳಸಿ ಕಳಸ-ಹೊರನಾಡು-ಶೃಂಗೇರಿ-ಕುದುರೆಮುಖ ಮೊದಲಾದ ಸ್ಥಳಗಳಿಗೆ ಹೋಗುವ ಮೊದಲು ಕಾರ್ಕಳ ತಾಲ್ಲೂಕಿನ ಕಡಾರಿ ಎನ್ನುವ ಊರಿನಲ್ಲಿ ರೇಣುಕಾ ಹೋಟೆಲ್‌ ಅನ್ನುವ ತಿಂಡಿ ಅಡ್ಡಾ ಸಿಗುತ್ತದೆ. ಇಲ್ಲಿ ಕೊಂಕಣಿ ಶೈಲಿಯ ಸಾಂಪ್ರದಾಯಿಕ ತಿಂಡಿ ಭಾರೀ ಫೇಮಸ್. ಕೊಟ್ಟೆ ಕಡುಬು, ಕರಾವಳಿಯ ಸ್ಪೆಷಲ್ ಪತ್ರೊಡೆ ಮೊದಲಾದ ಬಿಸಿ ಬಿಸಿ ಖಾದ್ಯಗಳನ್ನು ಇಲ್ಲಿ ತಿನ್ನುವ ಸುಖವೇ ಬೇರೆ. ಕಳಸ ತಾಲ್ಲೂಕಿನಲ್ಲಿ ಗರಂ ಮಲೆನಾಡ ಕಾಫಿ, ಟೀ ಬೋಂಡ ಸವಿಯಲು ಮರೆಯಲೇಬೇಡಿ.

ರೈಲುಗಾಡಿಯ ಬೆನ್ನೇರಿ

ಸುತ್ತಲಿರುವ ಕಾಡುಗಳನ್ನು ಇನ್ನೇನು ತಬ್ಬಿಯೇ ಬಿಟ್ಟಿತು ಎನ್ನುವ ಹಾಗೆ ರೈಲು ಗಾಡಿ ಚುಕು ಚುಕು ಎಂದು ಮಳೆಗೆ ಚಂಡಿಯಾಗಿ ಸಾಗುತ್ತಿರುತ್ತದೆ. ರೈಲಿನ ಕಿಟಕಿಗೆ ಮುಖ ಕೊಟ್ಟು ನೀವು ಬೊಗಸೆಯಲ್ಲಿ ಮಳೆ ಹನಿ ಹಿಡಿಯುತ್ತೀರಿ, ಆಚೀಚೆ ಮಳೆ ಬಿದ್ದು ಹಸಿರು ಇನ್ನಷ್ಟು ಫಳ ಫಳ ಅನ್ನುತ್ತಿರುತ್ತದೆ. ಮತ್ತೆ ಬಾಗಿಲ ಬಳಿ ನಿಂತು ಹೊರಗಿನ ನೋಟದತ್ತ ಕಣ್ಣು ಹಾಯಿಸುತ್ತೀರಿ. ಆಹಾ ದಾರಿಯೆಲ್ಲ ಅಳುವ ಕಂದನ ತುಟಿ ಹೊಳೆದಂತೆ ಕಾಣುತ್ತದೆ. ಕೆಲವೇ ಕ್ಷಣದಲ್ಲಿ ರೈಲು ಸುರಂಗದೊಳಗೆ ಹೋಗಿಬಿಡುತ್ತದೆ. ಒಂದಷ್ಟು ಹೊತ್ತು ಕತ್ತಲಲ್ಲೂ ಸುರಂಗದೊಳಗೆ ಸಾಗುತ್ತದೆ. ಆದರೆ ರೈಲುಯಾನದಲ್ಲಿ ಸಿಗುವ ಇಂತಹ ಸುರಂಗದ ಕತ್ತಲಲ್ಲೇ ಖುಷಿ, ಪುಳಕದ ರಮ್ಯಾನಂದ ಮೂಡುತ್ತದೆ. ಇಂತಹ ಮಧುರಾನುಭೂತಿ ಸಿಗುವುದು ಬೆಂಗಳೂರು-ಮಂಗಳೂರು ರೈಲು ಹಾದಿಯಲ್ಲಿ. ನೀವು ಆ ದಾರಿಯನ್ನು ಬೆರಗಿನಿಂದ ಸಂಭ್ರಮಿಸಲೆಂದೇ ಪಯಣ ಮಾಡಬಹುದು. ಸಕಲೇಶಪುರ-ಸುಬ್ರಹ್ಮಣ್ಯ-ಹಾಸನ ಜಿಲ್ಲೆಯನ್ನು ವ್ಯಾಪಿಸಿರುವ ಪಶ್ಚಿಮಘಟ್ಟದ ಹಸಿರು ಚಾವಣಿಯಂತಿರುವ ಗಿರಿ ಕಾನನಗಳನ್ನು, ಕಣಿವೆಗಳನ್ನು ಹಾದುಹೋಗುವ ರೈಲು, ನಿಚ್ಚಳವಾಗಿ ನಿಮ್ಮನ್ನು ಹೊಸ ಲೋಕವೊಂದರಲ್ಲಿ ಕಳೆದುಹಾಕುತ್ತದೆ.

ಹಸಿರ ಕಾಡನ್ನು ಚುಂಬಿಸುವಂತಿರುವ ಈ ಪಯಣ ನಿಮ್ಮೆದೆಯಲ್ಲಿ ಹಸಿರಾಗಿ ಉಳಿಯುವುದರಲ್ಲಿ ಅನುಮಾನವೇ ಬೇಡ. ಬಹುನಿರೀಕ್ಷೆಯ ವಿಸ್ಟಡೋಮ್‌ ಕೋಚ್ ಈ ಮಾರ್ಗದಲ್ಲಿ ಓಡತೊಡಗಿದೆ. ಸಂಪೂರ್ಣ ಗಾಜಿನ ಚಾವಣಿ ಹೊಂದಿರುವ ಈ ಕೋಚ್‌ನಿಂದ ನೀವು ಪಶ್ಚಿಮಘಟ್ಟದ ಹಸಿರ ದಾರಿಯ ಸೌಂದರ್ಯವನ್ನು ಸವಿಯಬಹುದು. ದರ ಕೊಂಚ ದುಬಾರಿಯಾದರೂ ಆಸಕ್ತರು ಈ ಪಯಣದ ಆನಂದವನ್ನೊಮ್ಮೆ ಅನುಭವಿಸಿ ಬಿಡಿ. ಮುಂಬೈ-ಗೋವಾ ಕೊಂಕಣ್ ರೈಲ್ವೆ, ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ, ಬೆಂಗಳೂರು-ಗೋವಾ, ಪುಣೆ-ಎರ್ನಾಕುಲಂ, ಮೆಟ್ಟುಪಾಳ್ಯಂ–ಊಟಿ ಹಾಗೂ ಕೇರಳದ ದಾರಿಯಾಗಿ ಸಾಗುವ ರೈಲುಗಳು ಇನ್ನಷ್ಟು ಥ್ರಿಲ್ಲಿಂಗ್ ಅನುಭವ ಕೊಡುವ, ನಮ್ಮ ಸುತ್ತಲಿನ ಜಗತ್ತನ್ನು ಇನ್ನಷ್ಟು ಕಾಡಿಸುವ ದಾರಿಗಳು. ಸಾಧ್ಯವಾದರೆ ಈ ದಾರಿಯಲ್ಲೂ ಒಮ್ಮೆ ಪಯಣ ಮಾಡಿ.

ಜಲಪಾತಗಳ ದಾರಿ ಹಿಡಿದು

ಭೋರೆಂದು ಸುರಿವ ಮುಂಗಾರು ಮಳೆಗೆ ಒಂದಷ್ಟು ಜಲಪಾತಗಳನ್ನು ನೋಡದೇ ಇದ್ದರೆ ಹೇಗೆ ಹೇಳಿ. ಹುಣ್ಣಿಮೆಯ ಹಾಲು ಹರಿದಂತೆ ಕಾಣುವ ಜಲಪಾತಗಳನ್ನೊಮ್ಮೆ ನೋಡಿದರೆ ಬದುಕಿನ ಹುಮ್ಮಸ್ಸು ಜಾಸ್ತಿಯಾಗುತ್ತದೆ. ಗೋವಾ-ಕರ್ನಾಟಕ ಗಡಿಯಲ್ಲಿರುವ ದೂಧ್‌ ಸಾಗರದ ಶ್ವೇತರಸಧಾರೆಯನ್ನು ನೀವು ಮಳೆಗಾಲದಲ್ಲೇ ನೋಡಿ ಸಂಭ್ರಮಿಸಬೇಕು. ಮಾಂಡೋವಿ ನದಿ ಧಾರೆಯಾಗಿ ಬೀಳುವುದನ್ನು ನೋಡುತ್ತಾ ನಿಮ್ಮ ಮನಸ್ಸು ಹಗುರಾಗಿ ಕಾಣದ ಲೋಕದತ್ತ ತೇಲಿಬಿಡುತ್ತದೆ. ಒಮ್ಮೆ ಕೆನೆಮೊಸರಿನಂತೆ, ಮತ್ತೊಮ್ಮೆ ನೊರೆ ಹಾಲಿನಂತೆ, ಕೆಲವೊಮ್ಮೆ ಕಡೆದ ಮಜ್ಜಿಗೆಯಂತೆ ನಿಮ್ಮೊಳಗನ್ನು ಅಪ್ಪಿಡಿಯುವ ದೂಧ್‌ ಸಾಗರ, ಬಿಟ್ಟೂ ಬಿಡದೇ ಸುರಿವ ಅಲ್ಲಿನ ಮಳೆ, ಸ್ವರ್ಗಚುಂಬಕ ಹಸಿರು ನಿಮ್ಮೊಳಗೆ ಚಿರಂತನವಾಗಿ ಕೂತುಬಿಡುತ್ತವೆ. ಕರ್ನಾಟಕದಿಂದ ದೂಧ್‌ ಸಾಗರಕ್ಕೆ ಹೋಗಬೇಕಾದರೆ ಗೋವಾ ಮಾರ್ಗದ ರೈಲಿನಲ್ಲಿ ಹೋಗಬೇಕು. ಅಲ್ಲಿಂದ ಕ್ಯಾಸಲ್ ರಾಕ್‌ಗೆ ತಲುಪಿ ಅಲ್ಲಿನ ಕಾಡು ಹಾದಿಯ ಮೂಲಕ ದೂಧ್‌ ಸಾಗರಕ್ಕೆ ಹೋಗಬಹುದು.

ಕೊಡಗಿನ ಅಷ್ಟಾಗಿ ಬೆಳಕಿಗೆ ಬಾರದ ಹಾಲಧಾರೆಯ ಹೆಸರು ಮಲ್ಲಳ್ಳಿ. ಕೊಡಗಿನ ಸೋಮವಾರಪೇಟೆ ಪಟ್ಟಣದಿಂದ 26 ಕಿ.ಮೀ. ದೂರದಲ್ಲಿರುವ ಈ ಜಲಧಾರೆ ಪುಷ್ಪಗಿರಿ ಬೆಟ್ಟದ ಸೆರಗಿನಲ್ಲಿದೆ. ಹೆಸರು ಮಲ್ಲಳ್ಳಿ, ನೋಡಲು ಥೇಟ್ ಚಂದುಳ್ಳಿ. ಮಳೆಗಾಲದಲ್ಲಿ ಈ ಚಂದುಳ್ಳಿಯ ಆಲಾಪವೆಂದರೆ ಕರ್ಣಾನಂದವೇ ಸರಿ. ಹಾಗೆ ಹರಿವ ಅವಳ ಆಲಾಪಕ್ಕೆ ಪುಷ್ಪಗಿರಿ ಸಂತೃಪ್ತಗೊಳ್ಳುತ್ತದೆ. ನೀವು ಮಳೆಗಾಲದಲ್ಲಿ ಈ ಚೆಂದುಳ್ಳಿಯ ಕಂಡರೆ ಹಾಗೇ ಅವಳನ್ನು ಎಷ್ಟೊತ್ತು ನೋಡುತ್ತ ಕೂರುತ್ತೀರೋ ಗೊತ್ತಿಲ್ಲ, ನೋಡಿದಷ್ಟೂ ಕಾಡುವ, ಹಾಡುವ ಅವಳು ನಿಮ್ಮನ್ನು ಸುಲಭಕ್ಕೆ ಬಿಡುವವಳಲ್ಲ. ನಿಮ್ಮೊಳಗೆ ತಣ್ಣಗೆ ಆವರಿಸಿ ನಿಮ್ಮ ಜೀವಮಾನದ ಎಲ್ಲಾ ಮಳೆಗಾಲಗಳನ್ನೂ ಬಿಟ್ಟೂ ಬಿಡದೇ ಪೊರೆಯುತ್ತಾಳೆ.

ಇನ್ನು ಉತ್ತರ ಕನ್ನಡ ಜಿಲ್ಲೆಯ ವಿಭೂತಿ ಜಲಪಾತ, ಉಂಚಳ್ಳಿ ಜಲಪಾತ, ಮಾಗೋಡು ಜಲಪಾತ, ಶಿರ್ಲೆ ಜಲಪಾತ ಇಲ್ಲಿಗೂ ಭೇಟಿ ನೀಡಬಹುದು. ಜೋಗದ ಕುರಿತು ನಿಮಗೆ ಗೊತ್ತೇ ಇದೆ.

ಹಳ್ಳಿಗಳಲ್ಲ, ಸ್ವರ್ಗದಿಂದ ಇಳಿಬಿಟ್ಟ ತುಣುಕುಗಳು!

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನಲ್ಲಿರುವ ಪುಟ್ಟ ಪುಟ್ಟ ಊರುಗಳಿಗೂ ನಿಸರ್ಗದತ್ತ ಸಾಗಿಸುವ ಅಯಸ್ಕಾಂತೀಯ ಗುಣವಿದೆ. ಈ ಊರಿನ ಹೆಜ್ಜೆ ಹೆಜ್ಜೆಗೂ ಹಸಿರೇ. ಇಲ್ಲೊಂದು ಮೈದಾಡಿ ಅನ್ನುವ ಮಂಜು ಮುಸುಕಿರುವ ಪರ್ವತ ತಾಣವಿದೆ. ಹಚ್ಚಹಸಿರಿನ ಹುಲ್ಲು ಮುತ್ತಿರುವ ಈ ತಾಣದಲ್ಲಿ ನಿಂತು ಪಶ್ಚಿಮಘಟ್ಟದ ಅಪೂರ್ವ ಗಿರಿಶ್ರೇಣಿಯನ್ನು ನೋಡಿದರೆ ಆಹಾ ಆ ಅನುಭವದ ಮುಂದೆ ಬೇರೆಲ್ಲವೂ ನಗಣ್ಯ ಅನ್ನಿಸತೊಡಗುತ್ತದೆ. ನಿಸರ್ಗ ಪ್ರೇಮಿಗಳಿಗಂತೂ ಕನಸಲ್ಲೂ ಕಾಡುವ ಸ್ಥಳವಿದು.

ಬದುಕು ಅದೆಷ್ಟು ಸಂತಸದಾಯಕ, ಅದೆಷ್ಟು ಚೈತನ್ಯಕರ ಎಂದು ಗೊತ್ತಾಗಬೇಕಿದ್ದರೆ ಇಂತಹ ವಿಹಂಗಮ ತಾಣದಲ್ಲಿ ನಿಂತು ಸ್ವಚ್ಛಂದವಾಗಿ ಮಳೆಗೆ ಒದ್ದೆಯಾಗುತ್ತ, ಒಮ್ಮೆ ಮುದುಡಿ, ಮತ್ತೊಮ್ಮೆ ಬಿರಿಯುವ ಪ್ರಕೃತಿಯನ್ನು ಧೇನಿಸುತ್ತಿರಬೇಕು, ಕಳಸದಲ್ಲೇ ಗಾಳಿಗುಡ್ಡ (ಕ್ಯಾತನಮಕ್ಕಿ), ಬಲ್ಲಾಳರಾಯನ ದುರ್ಗ ಎನ್ನುವ ಇನ್ನೂ ಕೆಲವು ಪ್ರಾಕೃತಿಕ ತಾಣಗಳಿವೆ. ಆ ತಾಣಗಳಲ್ಲೂ ಮಳೆಗಾಲದ ಕಾಡು, ಮಂಜು ಮಲೆಯ ಹಾಡು ಕಾಡತೊಡಗುತ್ತವೆ.

ಲೊನಾವಲಾದಲ್ಲೊಂದು ಮಳೆಗಾಲ

ಮಹಾರಾಷ್ಟ್ರದ ಮುಂಬೈ-ಪುಣೆ ನಗರದ ಮಧ್ಯದಲ್ಲಿರುವ ಲೊನಾವಲಾ ಎನ್ನುವ ಮಂಜು ಓಡುವ, ಹಸಿರು ಓಲಾಡುವ, ಗಾಳಿ ಜೋಕಾಲಿ ಜೀಕಿಸಿದಂತಾಗುವ ಸ್ಥಳವೊಂದಿದೆ. ಇದರ ಅಪೂರ್ವ ನೋಟವನ್ನು ಮಳೆಗಾಲದಲ್ಲೇ ಆನಂದಿಸಬೇಕು. ಇಲ್ಲಿನ ಖಂಡಾಲಾ ಗಿರಿಧಾಮವನ್ನು ನೋಡಿದರೆ ಅದು ಬದುಕಿನ ಕಟ್ಟಕಡೆವರೆಗೂ ಮತ್ತೆ ಮತ್ತೆ ಕಾಡುತ್ತಲೇ ಇರುತ್ತದೆ (ಬೇಂದ್ರೆ ಅವರು ‘ಶ್ರಾವಣಾ ಬಂತು...’ ಹಾಡು ಬರೆಯಲು ಪ್ರೇರಣೆಯಾದ ಜಾಗ ಇದು). ಕೃಷ್ಣಾ ನದಿಯ ಉಗಮಸ್ಥಾನ ಮಹಾರಾಷ್ಟ್ರದ ಮಹಾಬಲೇಶ್ವರ ಕೂಡ ಬದುಕಿಗೆ ಹಿಗ್ಗು ತರುತ್ತದೆ. ಇಲ್ಲಿ ಮಂಜು ಆವರಿಸುವುದು ಹೇಗಿರುತ್ತದೆಂದರೆ ಕಂಡ ಕನಸೇ ಬೊಗಸೆಗೆ ಸಿಕ್ಕಂತೆ. ಇಲ್ಲಿರುವ ಧೋಬಿ ಜಲಪಾತ, ಚೈನಾಮನ್ ಜಲಪಾತ ಇವೆಲ್ಲಾ ನಿಮ್ಮ ಕಳೆದುಹೋದ ಸಂತಸವನ್ನು ಮರಳಿಸುವುದು ಖಂಡಿತ.

ದೆಹೆನೆ ಅನ್ನುವ ಗ್ರಾಮ್ಯ ಸೊಗಡು

ಮಹಾರಾಷ್ಟ್ರದ ಪಶ್ಚಿಮಘಟ್ಟದ ತಡಿಯಲ್ಲಿರುವ ಅತ್ಯಂತ ಮನಮೋಹಕ ಊರಿದು. ಇಲ್ಲಿ ಅಪ್ಪಟ ಹಳ್ಳಿಯ ಸೊಗಡಿದೆ, ಗ್ರಾಮ್ಯ ಬದುಕಿನ ಸಹಜತೆ, ಹಚ್ಚ ಹಸುರಿನ ಅರಣ್ಯದ ಚೆಲುವಿದೆ, ಇಲ್ಲಿನ ಹುಲ್ಲುಗಾವಲು, ಧೋ.. ಧೋ.. ಎಂದು ಸುರಿವ ಮಳೆ, ಗ್ರಾಮೀಣ ಜನರ ಕೃಷಿ ಬದುಕು, ಕಾಡಿನ ತೊರೆಗಳ ಹಿತವಾದ ಜೋಗುಳದ ಹಾಡು, ಬೆಟ್ಟ ಬಯಲುಗಳ ಅಪೂರ್ವ ಸಂಗಮ ಇವೆಲ್ಲಾ ಸ್ವರ್ಗದಲ್ಲಿಯೇ ಇರುವಂತಹ ಅನುಭವ ಕೊಟ್ಟುಬಿಡುತ್ತವೆ. ಇಲ್ಲಿನ ಬುಡಕಟ್ಟು ಜನಾಂಗದವರ ಜೀವನಶೈಲಿಯೂ ಎಷ್ಟೊಂದು ಚೆಂದ ಅನ್ನಿಸುತ್ತದೆ. ಖುಷಿ, ಸಹಜತೆ, ಧ್ಯಾನಸ್ಥತೆಗೆ ಇದೊಂದು ಅದ್ಭುತ ಜಾಗ. ಮಳೆಗಾಲದ ವಿಶೇಷ ತಿಂಡಿ ತಿನಿಸುಗಳ ಆತಿಥ್ಯ ಬೇರೆ. ಪ್ರವಾಸ ಎಂದರೆ ಮೋಜು ಮಾತ್ರವಲ್ಲ ಅದು ಪ್ರವಾಸ ಜನಸಂಸ್ಕೃತಿ, ಭಾಷೆ, ಸ್ಥಳೀಯತೆ ಎಲ್ಲವನ್ನೂ ಅರ್ಥಮಾಡಿಸಬೇಕು. ದೆಹೆನೆ ಅವೆಲ್ಲವನ್ನೂ ನಿಮಗೆ ಧಾರೆಯೆರೆಯುತ್ತದೆ.

ದೇವರನಾಡಿನ ತೆಕ್ಕಾಡಿ

ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ತೆಕ್ಕಾಡಿ, ವನ್ಯಜೀವಿ ಪ್ರಿಯರಿಗೂ ನಿಸರ್ಗಾರಾಧಕರಿಗೂ ಇನ್ನಷ್ಟು ಪರಿಸರದ ಹುಚ್ಚು ಹಿಡಿಸುವ ತಾಣ. ಇಲ್ಲಿನ ಪೆರಿಯಾರ್ ರಾಷ್ಟ್ರೀಯ ಉದ್ಯಾನವನದ ಗಜಗಳನ್ನು, ಅವುಗಳ ಹಿನ್ನೆಲೆಯಲ್ಲಿರುವ ಕಾಡು, ಸ್ವಲ್ಪ ದೂರ ಹೋದರೆ ಕಾಣಿಸುವ ಪುಟ್ಟ ಜಲಪಾತ, ತೊರೆಗಳನ್ನು ನೋಡುವುದೇ ಒಂದು ಆನಂದ. ಇಲ್ಲಿನ ಸಂಬಾರ್ ಜಿಂಕೆಗಳು, ಚಿರತೆ, ಕಾಡುಕೋಣ, ಅಳಿಲು ಮೊದಲಾದವುಗಳು ಕಾಡಿನ ಸೂಕ್ಷ್ಮತೆಗಳನ್ನು ಇನ್ನಷ್ಟು ಅರ್ಥ ಮಾಡಿಸುತ್ತವೆ.

ಮಳೆಯ ನಾಡು ತೀರ್ಥಹಳ್ಳಿಯ ಆಗುಂಬೆ, ಕೇರಳದ ವಯನಾಡು, ಚಾರ್ಮಾಡಿ ಘಾಟ್, ಶಿರಾಡಿ ಘಾಟ್, ಬಿಸಿಲೆಘಾಟ್, ಹುಲಿಕಲ್ ಘಾಟಿ, ತೀರ್ಥಹಳ್ಳಿ ತಾಲ್ಲೂಕಿನ ಕವಲೇದುರ್ಗ, ಕುಪ್ಪಳ್ಳಿ, ಶೃಂಗೇರಿಯ ಸಿರಿಮನೆ ಜಲಪಾತ, ಇವೆಲ್ಲ ಪಶ್ಚಿಮಘಟ್ಟದ ಅಪರಿಮಿತ ಸೊಬಗನ್ನು, ಮುಂಗಾರಿನ ವರ್ಣ ವೈಭವವನ್ನು ಇನ್ನಷ್ಟು ಕಾಡಿಸುವ ವರ್ಣನಾತೀತ ತಾಣಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.