ADVERTISEMENT

ವಿವೇಕಾನಂದರನ್ನು ನೆನಪಿಸುವ ಮನೆ...

ಸ್ವರೂಪಾನಂದ ಎಂ.ಕೊಟ್ಟೂರು
Published 24 ಅಕ್ಟೋಬರ್ 2019, 6:36 IST
Last Updated 24 ಅಕ್ಟೋಬರ್ 2019, 6:36 IST
   

ಸ್ವಾಮಿ ವಿವೇಕಾನಂದರು ಉಪಯೋಗಿಸಿದ ಬಹುತೇಕ ಮೂಲ ವಸ್ತುಗಳು ಕೊಲ್ಕತ್ತದಲ್ಲಿರುವ ಮ್ಯೂಸಿಯಂನಲ್ಲಿವೆ. ಅವುಗಳ ಪ್ರತಿಕೃತಿಗಳನ್ನು ಇಲ್ಲಿ ಇಡಲಾಗಿದೆ. ಅದೂ ಸ್ಥಳವಕಾಶಕ್ಕೆ ತಕ್ಕಂತೆ ಮುಖ್ಯವಾದವುಗಳನ್ನಷ್ಟೇ ಇಡಲಾಗಿದೆ.

ಸ್ವಾಮಿ ವಿವೇಕಾನಂದರ ಬಾಲ್ಯ, ಜೀವನ ಹೇಗಿತ್ತು? ಅವರ ಸಂದೇಶ, ಜೀವಮಾನ ಸಾಧನೆಗಳೇನು? ಅವರು ಉಪಯೋಗಿಸಿದ ವಸ್ತುಗಳು ಹೇಗಿವೆ? ಇಂಥ ಕುತೂಹಲಕಾರಿ ವಿಷಯ ತಿಳಿಯಬೇಕೆ. ಹಾಗಾದರೆ, ಬೆಳಗಾವಿಯ ರಿಸಾಲದಾರ್‌ ಗಲ್ಲಿಯಲ್ಲಿರುವ ಸ್ವಾಮಿ ವಿವೇಕಾನಂದ ಮೆಮೊರಿಯಲ್ ಹಾಲ್‌ಗೆ ಬನ್ನಿ. ಅಲ್ಲಿ, ವಿವೇಕರ ಜೀವನ ಚರಿತ್ರೆ ಪರಿಚಯದ ಜತೆಗೆ, ಅವರು ಬಳಸುತ್ತಿದ್ದ ವಸ್ತುಗಳ ಪ್ರತಿಕೃತಿಗಳಿವೆ. ಇದು ರಾಜ್ಯದಲ್ಲಿರುವ ಏಕೈಕ ವಿವೇಕಾನಂದರ ಮೆಮೊರಿಯಲ್ ಮ್ಯೂಸಿಯಂ ಮತ್ತು ಎಕ್ಸಿಬಿಷನ್‌ ಕೇಂದ್ರ.

ಈಗಿರುವ ಮ್ಯೂಸಿಯಂ ಕಟ್ಟಡ ಸುಮಾರು ನೂರ ನಲವತ್ತು ವರ್ಷಗಳಷ್ಟು ಹಳೆಯದು. ನಡುವೆ ನವೀಕರಣ ಕಾರ್ಯಗಳು ನಡೆದಿದ್ದರೂ ಅದರ ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ, ನವೀಕರಣ ಮಾಡಿದ್ದಾರೆ. ಸ್ವಾಮಿ ವಿವೇಕಾನಂದರು ಬೆಳಗಾವಿಗೆ ಬಂದಾಗ ಇದೇ ಕಟ್ಟಡದಲ್ಲಿ ಉಳಿದಿದ್ದರು. ಆ ಕಾರಣಕ್ಕೆ, ಈ ಕಟ್ಟಡವನ್ನು ಸ್ಮಾರಕವಾಗಿಸಿದ್ದಾರೆ.

ADVERTISEMENT

ಮ್ಯೂಸಿಯಂನಲ್ಲಿ ಏನೇನಿದೆ?
ಸ್ವಾಮಿ ವಿವೇಕಾನಂದರು ಉಪಯೋಗಿಸಿದ ಬಹುತೇಕ ಮೂಲ ವಸ್ತುಗಳು ಕೊಲ್ಕತ್ತದಲ್ಲಿರುವ ಮ್ಯೂಸಿಯಂನಲ್ಲಿವೆ. ಅವುಗಳ ಪ್ರತಿಕೃತಿಗಳನ್ನು ಇಲ್ಲಿ ಇಡಲಾಗಿದೆ. ಅದೂ ಸ್ಥಳವಕಾಶಕ್ಕೆ ತಕ್ಕಂತೆ ಮುಖ್ಯವಾದವುಗಳನ್ನಷ್ಟೇ ಇಡಲಾಗಿದೆ.

ವಿವೇಕಾನಂದರು ಬೆಳಗಾವಿಗೆ ಬಂದಾಗ ಬಳಸಿದ್ದ ಮಂಚ, ಕನ್ನಡಿ, ಸ್ಟಿಕ್ ಹಾಗೂ ಅವರ ತಾಯಿಯ ಮೂಲ ಫೋಟೊವನ್ನು ಒಂದು ಕೊಠಡಿಯಲ್ಲಿಟ್ಟಿದ್ದಾರೆ. ಅದೇ ಅವಧಿಯಲ್ಲಿ ಇಲ್ಲಿದ್ದ ಬೆಂಗಾಲಿ ಅರಣ್ಯ ಅಧಿಕಾರಿ ಹರಿಪದ ಮಿತ್ರ ಅವರ ಒತ್ತಾಯಕ್ಕೆ ಮಣಿದು ವಿವೇಕಾನಂದರು ಕೊಲ್ಲಾಪುರ ಮಹಾರಾಣಿ ಕೊಟ್ಟ ಟರ್ಬನ್ ಹಾಗೂ ಉಡುಪು ಧರಿಸಿ (ಕೊಲ್ಲಾಪುರ ಚಪ್ಪಲಿಯೂ ಸೇರಿ) ಎಸ್.ಮಹಾದೇವ ಅಂಡ್ ಸನ್ಸ್ ಫೋಟೊ ಸ್ಟುಡಿಯೊದಲ್ಲಿ ಛಾಯಾಗ್ರಾಹಕ ಗೋವಿಂದ ವೆಲ್ಲಿಂಗ್‍ರಿಂದ ಫೋಟೊ ತೆಗೆಸಿಕೊಂಡಿದ್ದಾರೆ. ಇದರ ಮ್ಯೂರಲ್ ಪ್ರತಿಮೆ ಇದೆ. ಅದು ಇಲ್ಲಿನ ಪ್ರಮುಖ ಆಕರ್ಷಣೆ.

ಸುಮಾರು ಇಪ್ಪತ್ತೆರೆಡು ಡಿಜಿಟಲ್ ಪೇಂಟಿಂಗ್ಸ್ ಇದೆ. ಅವುಗಳಲ್ಲಿ ರಾಮಕೃಷ್ಣ ಪರಮಹಂಸರ ಮತ್ತು ವಿವೇಕಾನಂದರ ಜೀವನ ಚರಿತ್ರೆ ಮನೋಜ್ಞವಾಗಿ ಅಭಿವ್ಯಕ್ತವಾಗಿದೆ. ಸ್ಪಾಟ್‍ಲೈಟ್ ಬೆಳಕು, ಪೇಂಟಿಂಗ್‌ಗಳಿಗೆ ವಿಶೇಷ ಮೆರಗು ಕೊಟ್ಟಿದೆ. ‘ನೀನು ಆಲದ ಮರದಂತೆ ಜೀವಿಸು, ಅದರಡಿ ಎಲ್ಲರಿಗೂ ಆಶ್ರಯ, ಮಾರ್ಗದರ್ಶನ ನೀಡು’ ಎಂಬ ಪರಮಹಂಸರ ಅಣತಿಯಂತೆ ವಿವೇಕಾನಂದರು ಮಾಡಿದ ಸೇವಾ ಕೆಲಸಗಳು, ಆಶ್ರಮ ಕೈಗೊಂಡ ಸಮಾಜಮುಖಿ ಕಾರ್ಯಗಳನ್ನು ಫೈಬರ್‌ನಲ್ಲಿ ಮಾಡಿದ ಕಂದು ಬಣ್ಣದ ವಾಲ್ ಮ್ಯೂರಲ್‍ನಲ್ಲಿ ಅದ್ಭುತವಾಗಿ ಚಿತ್ರಿಸಲಾಗಿದೆ. ನವೀರಣಕ್ಕೆ ಮುನ್ನ ಹಾಗೂ ನಂತರದಲ್ಲಿ ಕಟ್ಟಡ ಹೇಗಿತ್ತು ಎಂದು ವಿವರಿಸುವ ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ. ಕಟ್ಟಡದ ನವೀಕರಣದ ವೇಳೆ ದೊರೆತ ಹಳೆಯ ವಸ್ತುಗಳನ್ನು ವೀಕ್ಷಣೆಗೆ ಇಡಲಾಗಿದೆ.

ವಿವೇಕಾನಂದ ಸಂದೇಶ ನೀಡುವ ಟ್ಯಾಬ್‌

ಡಿಜಿಟಲ್ ಹಾಲ್
ಈ ಹಾಲ್‍ನಲ್ಲಿ ಟ್ಯಾಬ್ಲೆಟ್‌ಳನ್ನು ಜೋಡಿಸಿದ್ದಾರೆ. ಪ್ರತಿ ಟ್ಯಾಬ್‌ಲೆಟ್‌ನಲ್ಲಿ ವಿವೇಕಾನಂದರ ಮುಖವಿರುವ ಚಿತ್ರಗಳು ಬೇರೆಬೇರೆ ಯಾಗಿರುತ್ತವೆ. ಮಕ್ಕಳು ಬೇರೆಯಾಗಿರುವ ಚಿತ್ರಗಳನ್ನು ಆಟವಾಡುತ್ತಾ ಜೋಡಿಸುತ್ತಾರೆ. ಆಟ ಪೂರ್ಣಗೊಂಡ ಮೇಲೆ ಟ್ಯಾಬ್ಲೆಟ್‌ನಲ್ಲಿ ವಿವೇಕಾನಂದರ ಸಂದೇಶಗಳು ಬರುತ್ತವೆ. ಮಕ್ಕಳು ಕುತೂಹಲದಿಂದ ಅವುಗಳನ್ನು ಓದುತ್ತಾರೆ.

ಇನ್ನೊಂದು ಭಾಗದಲ್ಲಿ, ಹಿಂದೆ ದನದ ಕೊಟ್ಟಿಗೆಯಾಗಿದ್ದ ಕೊಠಡಿಯನ್ನು ಆಡಿಯೊ ವಿಶ್ಯುವಲ್ ರೂಮ್‌ ಆಗಿ ಪರಿವರ್ತಿಸಲಾಗಿದೆ. ಸುಮಾರು 60 ಮಕ್ಕಳು ಇಲ್ಲಿ ಕುಳಿತುಕೊಳ್ಳಲು ಅವಕಾಶವಿದೆ. ಇಲ್ಲಿ ಮಕ್ಕಳಿಗೆ ವಿವೇಕಾನಂದರ ಬಗ್ಗೆ 40 ನಿಮಿಷಗಳ ವಿಡಿಯೊ ತೋರಿಸಲಾಗುತ್ತೆ. ಸಣ್ಣ ಮಕ್ಕಳಿದ್ದರೆ ವಿವೇಕಾನಂದರ ಬಾಲ್ಯ ಜೀವನವನ್ನು ಅನಿಮೇಷನ್ ಮೂಲಕ ಪರಿಚಯಿಸಲಾಗುತ್ತದೆ. ನಂತರ ಆಶ್ರಮದ ಸ್ವಾಮೀಜಿ ಮಕ್ಕಳೊಂದಿಗೆ ಮಾತುಕತೆ ನಡೆಸುತ್ತಾರೆ.

ಧ್ಯಾನದ ಕೊಠಡಿ
ಇಲ್ಲಿ ಪರಮಹಂಸರು, ಶಾರದಾದೇವಿ, ವಿವೇಕಾನಂದರ ಮೂರ್ತಿಗಳಿವೆ. ವಾರವಿಡಿ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8ಗಂಟೆವರೆಗೆ ಇದು ತೆರೆದಿರುತ್ತದೆ. ಏಕ ಕಾಲಕ್ಕೆ ಮೂವತ್ತು ಮಂದಿ ಕುಳಿತು ಧ್ಯಾನ ಮಾಡುವಷ್ಟು ಸ್ಥಳವಕಾಶ ಇದೆ.

ಪ್ರಮುಖ ಪ್ರವಾಸಿ ತಾಣ
ಮೂವತ್ತು ವರ್ಷದಿಂದ ಆಶ್ರಮದ ವತಿಯಿಂದ ಇಲ್ಲಿ ವಿವಿಧ ಸ್ಪರ್ಧೆ, ಜಯಂತಿಗಳು ನಡೆಯುತ್ತಿದ್ದವು. ಪ್ರತಿ ಶನಿವಾರ ಪ್ರವಚನ ಮಾತ್ರ ನಡೆಯುತ್ತಿತ್ತು. ಹೀಗಾಗಿ ಈ ಮೆಮೊರಿಯಲ್ ಹಾಲ್ ಅಷ್ಟಾಗಿ ಬೆಳಕಿಗೆ ಬಂದಿರಲಿಲ್ಲ. ಈ ವರ್ಷ ಫೆಬ್ರವರಿ 1 ರಂದು ಈ ಕಟ್ಟಡ ಸ್ವಾಮಿ ವಿವೇಕಾನಂದರ ಸ್ಮಾರಕವಾಗಿ ಉದ್ಘಾಟನೆಯಾಯಿತು. ಆ ನಂತರ, ಇಲ್ಲಿಗೆ ಭೇಟಿ ನೀಡುತ್ತಿರುವವರ ಸಂಖ್ಯೆಯೂ ಹೆಚ್ಚಿದೆ.

ವಿವೇಕಾನಂದರು ಬಂದಿದ್ದು ಹೀಗೆ..
ಸ್ವಾಮಿ ವಿವೇಕಾನಂದರು ಭಾರತ ಸಂಚಾರ ಹೊರಟಿದ್ದು ಕೋಲ್ಕತ್ತಾದಿಂದ. ಕೊಲ್ಲಾಪುರಕ್ಕೆ ಬಂದ ವಿವೇಕಾನಂದರಿಗೆ, ಮಹಾರಾಣಿಯ ಕಾರ್ಯದರ್ಶಿ ಲಕ್ಷ್ಮಣ್ ಗೋಲ್ವಾಲ್ಕರ್ ಬೆಳಗಾವಿಯ ಪ್ರಸಿದ್ಧ ವಕೀಲರಾಗಿದ್ದ ಸದಾಶಿವ ಭಾಟೆಯನ್ನು ಭೇಟಿಯಾಗುವಂತೆ ಪತ್ರ ಕೊಟ್ಟು ಕಳುಹಿಸಿದರು. ಅ.16, 1892ರಂದು ಬೆಳಗಾವಿಗೆ ಬಂದ ವಿವೇಕಾನಂದರು, ಭಾಟೆಯವರ ಆತಿಥ್ಯ ಸ್ವೀಕರಿಸಿ, ಮೂರು ದಿನ ಅವರ ಮನೆಯಲ್ಲೇ ಉಳಿದರು. ಆ ಸಮಯದಲ್ಲಿ ಪ್ರವಚನ ನೀಡಿದರು. ಭಾಟೆ ಮನೆಗೆ ವಿವೇಕರು ಬಂದಿರುವ ವಿಷಯ ತಿಳಿದ ಬೆಂಗಾಲಿ ಮೂಲದ ಅರಣ್ಯ ಅಧಿಕಾರಿ ಹರಿಪದ ಮಿತ್ರ, ತಮ್ಮ ಮನೆಗೆ ಆಹ್ವಾನಿಸಿದರು. ಮಿತ್ರರವರ ಮನೆಗೆ ತೆರಳಿ, ಅಲ್ಲಿ ಒಂಬತ್ತು ದಿನ ವಾಸ್ತವ್ಯ ಮಾಡಿದರು. ಅಲ್ಲಿಂದ ವಿವೇಕಾನಂದರು ಗೋವಾಗೆ ಹೋದರು. ಹೀಗೆ ಕೊಲ್ಲಾಪುರದಿಂದ ಬೆಳಗಾವಿಗೆ ಬಂದ ವಿವೇಕಾನಂದರು ಮೊದಲಿಗೆ ಉಳಿದಿದ್ದು ಈಗ ಸ್ಮಾರಕವಾಗಿರುವ ಕಟ್ಟಡದಲ್ಲಿ.

ಆಶ್ರಮಕ್ಕೆ ಕಟ್ಟಡ ಬಂದಿದ್ದು ಹೀಗೆ..
ಸದಾಶಿವ ಭಾಟೆಗೆ ಸೇರಿದ್ದ ಈ ಕಟ್ಟಡವನ್ನು ಅವರ ಮಗ ಗಣೇಶ ಭಾಟೆ 1913 ರಲ್ಲಿ ದತ್ತೋಪಂತ ಬೆಳವಿಗೆ ಮಾರಿದರು. 1960 ರಲ್ಲಿ ಬೆಳವಿ ಕುಟುಂಬದ ಬಲವಂತ ಬೆಳವಿ ಮತ್ತು ವಿಷ್ಣು ಬೆಳವಿ ನಡುವೆ ಈ ಮನೆ ಇಬ್ಭಾಗ ಆಯ್ತು. 1987 ರಲ್ಲಿ ಬಲವಂತ ಬೆಳವಿ ತಮ್ಮ ಭಾಗದ್ದನ್ನು (ದತ್ತ ಕೃಪ) ಆಶ್ರಮಕ್ಕೆ ದಾನ ಕೊಟ್ಟರು. ಆಶ್ರಮ, 2014ರಲ್ಲಿ ವಿಷ್ಣು ಬೆಳವಿ ಮಗನಿಂದ ಉಳಿದರ್ಧ ಮನೆಯನ್ನು ಖರೀದಿಸಿತು.

ಮೆಮೊರಿಯಲ್ ಹಾಲ್ ವಿವರ
ಈ ಮೆಮೊರಿಯಲ್ ಹಾಲ್‌ಗೆ ಸೋಮವಾರ ರಜೆ. ಉಳಿದ ದಿನಗಳಲ್ಲಿ ನಿತ್ಯ ಬೆಳಗ್ಗೆ 10.30 ರಿಂದ ಸಂಜೆ 6ರವರೆಗೆ ತೆರೆದಿರುತ್ತದೆ. ಶಾಲಾ-ಕಾಲೇಜು ಮಕ್ಕಳ ಸಾಮೂಹಿಕ ಭೇಟಿಗೆ ಮಂಗಳವಾರ, ಗುರುವಾರ ಮತ್ತು ಶನಿವಾರ ದಿನ ನಿಗದಿಪಡಿಸಲಾಗಿದೆ. ಇದಕ್ಕೆ ಪೂರ್ವಾನುಮತಿ ಪಡೆಯಬೇಕು. ಪ್ರವಾಸಿಗರು ಇಲ್ಲಿರುವ ವಸ್ತು ಮತ್ತು ಸ್ವಾಮೀಜಿ ಸಂದೇಶಗಳನ್ನು ಕನ್ನಡ, ಇಂಗ್ಲಿಷ್‌ ಮತ್ತು ಮರಾಠಿ ಭಾಷೆಗಳಲ್ಲಿ ಓದಿ ತಿಳಿದುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.