ADVERTISEMENT

ಕುತೂಹಲ ಕೆರಳಿಸುವ ನಾಂಗನೂಚ್ ಉದ್ಯಾನ

ಎಸ್.ಎಂ.ಜಂಬುಕೇಶ್ವರ
Published 11 ಜುಲೈ 2020, 19:31 IST
Last Updated 11 ಜುಲೈ 2020, 19:31 IST
ಟೆರ್‍ರಾಕೋಟಾ ಮುಖವಾಡಗಳಲ್ಲಿ ನವರಸಗಳ ಅಭಿವ್ಯಕ್ತಿ
ಟೆರ್‍ರಾಕೋಟಾ ಮುಖವಾಡಗಳಲ್ಲಿ ನವರಸಗಳ ಅಭಿವ್ಯಕ್ತಿ   
""

ಥಾಯ್ಲೆಂಡ್‌ನ ಬ್ಯಾಂಕಾಕ್ ಹಾಗೂ ಪಟ್ಟಾಯಗಳಲ್ಲಿ ವಿದೇಶಿ ಪ್ರವಾಸಿಗರಿಗಾಗಿಯೇ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿದ್ದಾರೆ. ವಿದೇಶಿ ಪ್ರವಾಸಿಗರು ಏನೆಲ್ಲ ನಿರೀಕ್ಷಿಸಿ ಆ ದೇಶಗಳಿಗೆ ಹೋಗುವರೋ ಅವರ ನಿರೀಕ್ಷೆಗಳಿಗೆ ಧಕ್ಕೆಯಾಗಬಾರದು ಎಂಬ ರೀತಿಯಲ್ಲಿ ಅಲ್ಲಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ನಾವು ಥಾಯ್ಲೆಂಡ್ ದೇಶದ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಪಟ್ಟಾಯದಿಂದ ಸುಮಾರು 22 ಕಿ.ಮೀ. ದೂರದ, ಕಲಾಹಿರಿಮೆಯನ್ನು ಸಾರುವ ‘ನಾಂಗ್‍ನೂಚ್’ ಎಂಬ ಸಾಂಸ್ಕೃತಿಕ ಗ್ರಾಮಕ್ಕೆ ಭೇಟಿ ನೀಡಿದ್ದೆವು. ಅಲ್ಲಿ ಪ್ರಪಂಚದ ಎಲ್ಲೆಡೆಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಉದ್ಯಾನವಿದೆ. ನಾಂಗ್‍ನೂಚ್ ಉದ್ಯಾನವು ಅಂದಾಜು 500 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದೆ. ಇಲ್ಲಿ ಒಟ್ಟು ಒಂಬತ್ತು ಬಗೆಯ ಟ್ರಾಪಿಕಲ್ ಉದ್ಯಾನಗಳಿವೆ.

1954ರಲ್ಲಿ ಪಿಸಿಟ್ ಹಾಗೂ ನಾಂಗ್‍ನೂಚ್ ತನ್‍ಸಚ್ಚ ಎಂಬ ದಂಪತಿ ಹಣ್ಣಿನ ತೋಟ ಮಾಡುವ ಸಲುವಾಗಿ ಈ ಜಾಗ ಕೊಂಡುಕೊಂಡರಂತೆ. ಈ ಜಾಗ ಗುಡ್ಡಗಾಡು ಪ್ರದೇಶವಾಗಿದ್ದರಿಂದ ಹಣ್ಣಿನ ಗಿಡಗಳನ್ನು ಬೆಳೆಯಲು ಸಾಧ್ಯವಿಲ್ಲವೆಂದು ತಿಳಿದ ಅವರು ಹಣ್ಣಿನ ತೋಟ ಮಾಡುವ ಬದಲು ಸುಂದರವಾದ ಉದ್ಯಾನಗಳನ್ನು ನಿರ್ಮಿಸಲು ತೀರ್ಮಾನಿಸಿದರು. ಅವರ ಪ್ರಯತ್ನದಿಂದಾಗಿ 1980ರಲ್ಲಿ ವಿಶ್ವಪ್ರವಾಸಿಗರಿಗೆ ಒಂದು ಹೊಸ ಉದ್ಯಾನ ವೀಕ್ಷಿಸಲು ಲಭ್ಯವಾಯಿತು. ಇಂದು ಈ ಉದ್ಯಾನವನ ಪಟ್ಟಾಯದಲ್ಲಿಯೇ ಅತ್ಯಂತ ಪ್ರಮುಖ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಇದನ್ನು 2001ರಿಂದ ನಾಂಗ್‍ನೂಚ್‍ರವರ ಮಗ ಕಾಮ್‍ಸನ್ ತಾನ್‍ಸಚ್ಚ ನೋಡಿಕೊಳ್ಳುತ್ತಿದ್ದಾರೆ.

ADVERTISEMENT

ನಾವು ಮೊದಲು ಅಲ್ಲಿ ಟೆರ್‍ರಾಕೋಟಾದಿಂದ ಸಿದ್ಧಪಡಿಸಿರುವ ಕಲಾಕೃತಿಗಳ ಉದ್ಯಾನವನಕ್ಕೆ ಭೇಟಿ ನೀಡಿದೆವು. ಉದ್ಯಾನವನದೊಳಗೆ ಹೊಕ್ಕರೆ ಎದುರುಗಡೆಯಲ್ಲಿಯೇ ಒಬ್ಬ ವ್ಯಕ್ತಿ ಭಾರಿ ಗಾತ್ರದ ಹುಲಿಯನ್ನು ತನ್ನ ಪಕ್ಕದಲ್ಲಿ ಕಟ್ಟೆಯ ಮೇಲೆ ಕುಳ್ಳಿರಿಸಿಕೊಂಡು ಕುಳಿತಿರುತ್ತಾನೆ! ಆ ದೃಶ್ಯ ನೋಡಿದ ತಕ್ಷಣ ಪ್ರವಾಸಿಗರಿಗೆ ಆಶ್ಚರ್ಯ! ಆತನಿಗೆ ಹಣ ನೀಡಿ ಪ್ರವಾಸಿಗರು ಹುಲಿಯ ಪಕ್ಕದಲ್ಲಿ ನಿಂತು ಛಾಯಾಚಿತ್ರ ತೆಗೆಸಿಕೊಳ್ಳಬಹುದು. ಪ್ರವಾಸಿಗರಿಗೆ ಇದೊಂದು ದೊಡ್ಡ ಆಕರ್ಷಣೆ. ಅಲ್ಲಿಂದ ಮುಂದೆ ಸಾಗಿದರೆ ನಾನಾ ಅಳತೆಗಳ ಕುಂಡಗಳಿಂದ ಸುಂದರವಾಗಿ ಜೋಡಿಸಿರುವ ದೊಡ್ಡ ದೊಡ್ಡ ಕಮಾನುಗಳು, ಒಂದೂವರೆಯಿಂದ ಎರಡು, ಮೂರು ಅಡಿ ಎತ್ತರದ, ವಿವಿಧ ರೀತಿಯ ಭಾವನೆಗಳನ್ನು ವ್ಯಕ್ತಪಡಿಸುವ ಮುಖವಾಡದ ಮಡಕೆ ಕಲಾಕೃತಿಗಳು ಕಾಣುತ್ತವೆ.

ಆಳೆತ್ತರದ ಹೂದಾನಿಗಳು ಹಾಗೂ ಆಲಂಕಾರಿಕ ಕಂಬಗಳನ್ನು ಅಲ್ಲಿ ಕಾಣಬಹುದು. ತೋಟದ ಮಧ್ಯದಲ್ಲಿ ಕೊಳ ನಿರ್ಮಿಸಿ ಅದರ ಮಧ್ಯಭಾಗದಲ್ಲಿ ಇರಿಸಿರುವ ಸುಂದರ ಹೂದಾನಿಗಳು, ಅವುಗಳಲ್ಲಿ ಅರಳಿಸಿದ ಹೂ ಬಳ್ಳಿಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇವೆಲ್ಲವನ್ನೂ ಟೆರ್‍ರಾಕೋಟಾದಿಂದಲೇ ತಯಾರಿಸಿರುವುದು ವಿಶೇಷ.

ನೀರಿನ ಚಿಲುಮೆಗಳನ್ನೂ ಸಹ ಆಲಂಕಾರಿಕ ಕುಂಡಗಳಿಂದ ನಿರ್ಮಿಸಿದ್ದಾರೆ. ಕರಡಿ, ಆನೆಗಳಂಥ ದೊಡ್ಡ ಪ್ರಾಣಿಗಳಿಂದ ಹಿಡಿದು ಪಕ್ಷಿಗಳು, ಇರುವೆಗಳ ಸಾಲುಗಳು, ಮೂರು ಚಕ್ರದ ಸೈಕಲನ್ನೂ ಟೆರ್‍ರಾಕೋಟಾದಲ್ಲಿಯೇ ತಯಾರಿಸಿದ ಸಣ್ಣ ಸಣ್ಣ ಕುಂಡಗಳ ಜೋಡಣೆಯಿಂದ ಮಾಡಿ ಇರಿಸಿದ್ದಾರೆ. ಅದರಲ್ಲಿ ಪ್ರವಾಸಿಗರು ಕುಳಿತುಕೊಳ್ಳಲು ಅವಕಾಶಮಾಡಿಕೊಟ್ಟಿದ್ದಾರೆ.

ಮುಂದೆ ಸಾಗಿದಂತೆಲ್ಲ ಆರರಿಂದ ಎಂಟು ಅಡಿ ಎತ್ತರದ ಹೂ ಕುಂಡಗಳ ಸಾಲು ಸಾಲುಗಳು, ಎತ್ತೆತ್ತ ನೋಡಿದರೂ ಲಕ್ಷಾಂತರ ಕುಂಡಗಳಿಂದಲೇ ತಯಾರಿಸಿದ ಕಮಾನುಗಳು, ಇವನ್ನೆಲ್ಲ ಹೇಗೆ ಮಾಡಿರಬಹುದೆಂಬುದೇ ನಮಗೆ ಆಶ್ಚರ್ಯವೆನಿಸಿತು. ಇದರಲ್ಲಿ ಕಲಾವಿದರ ಕೈಚಳಕ ಎದ್ದು ಕಾಣುತ್ತದೆ.

ಅಲ್ಲಿ ನಮ್ಮನ್ನು ಬಹಳವಾಗಿ ಆಕರ್ಷಿಸಿದ್ದೆಂದರೆ ಟೆರ್‍ರಾಕೋಟಾದಿಂದಲೇ ನಿರ್ಮಿಸಿರುವ ಮಡಕೆಗಳಲ್ಲಿ ನಗು, ವಿಸ್ಮಯ, ದುಃಖ, ಆಶ್ಚರ್ಯ, ಬೀಭತ್ಸ ಮುಂತಾದ ಭಾವಗಳನ್ನು ವ್ಯಕ್ತಪಡಿಸುವ ದೊಡ್ಡದಾದ ಮುಖವಾಡದ ಕಲಾಕೃತಿಗಳು. ನವರಸಗಳನ್ನು ವ್ಯಕ್ತಪಡಿಸುವ ಅದ್ಭುತ ಕಲಾಕೃತಿಗಳು ಮನಸೆಳೆಯುತ್ತವೆ. ಜೊತೆಗೆ ಅವುಗಳನ್ನು ಜೋಡಿಸಿರುವ ರೀತಿ ಬಹಳ ಚೆನ್ನಾಗಿದೆ. ಸುತ್ತಲೂ ಹಚ್ಚಹಸಿರಿನಿಂದ ಕೂಡಿದ ಉದ್ಯಾನವನ, ಅಲ್ಲಿ ಬೆಳೆದು ನಿಂತ ಹೂಗಿಡಗಳು ಈ ಕಲಾಕೃತಿಗಳಿಗೆ ಪೂರಕವಾಗಿವೆ. ಈ ಕಲಾಕೃತಿಗಳು ಸುಂದರವಾಗಿ ಬೆಳೆದುನಿಂತ ಉದ್ಯಾನವನಕ್ಕೆ ಮೆರುಗು ನೀಡುತ್ತಿವೆ.

ಈ ಉದ್ಯಾನವನದಲ್ಲಿ ಸುಮಾರು 2 ರಿಂದ 3 ಗಂಟೆಗಳ ಕಾಲ ಸಂತೋಷದಿಂದ ಸುತ್ತಾಡಿ ವಿರಮಿಸಿಕೊಂಡು ಬರಬಹುದು. ನಂತರ ಉದ್ಯಾನವನದವರೇ ಏರ್ಪಡಿಸಿದ್ದ ಬಸ್ಸಿನಲ್ಲಿ ಉಳಿದ ಎಂಟು ಉದ್ಯಾನಗಳನ್ನು ಸಂಜೆಯವರೆಗೆ ಸುತ್ತಾಡಿಸುತ್ತಾರೆ. ಸಂಜೆ-ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತಂದು ಬಿಡುತ್ತಾರೆ. ಇಂತಹ ಸ್ಥಳದಲ್ಲಿ ಉದ್ಯಾನದ ಕನಸು ಕಂಡ ನಾಂಗ್‍ನೂಚ್ ತನಸಚ್ಚ ದಂಪತಿಗೆ ಅಭಿನಂದನೆ ಸಲ್ಲಿಸಬೇಕಾಗುತ್ತದೆ. ಅಂತರಾರಾಷ್ಟ್ರೀಯ ಮಟ್ಟದ ಹತ್ತು ಗಾರ್ಡನ್‍ಗಳಲ್ಲಿ ಈ ಉದ್ಯಾನವೂ ಸೇರಿದೆ.

ಟೆರ್‍ರಾಕೋಟಾ ಮಡಿಕೆಗಳಿಂದ ಸಿದ್ಧವಾದ ತ್ರಿಚಕ್ರವಾಹನ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.