ADVERTISEMENT

ಐಷಾರಾಮಿ ಸಾಗರಯಾನಕ್ಕೆ ‘ಸ್ಕಾರ್ಲೆಟ್ ಲೇಡಿ’

ರಾಧಿಕ ಎನ್‌.ಆರ್.
Published 24 ಅಕ್ಟೋಬರ್ 2019, 6:38 IST
Last Updated 24 ಅಕ್ಟೋಬರ್ 2019, 6:38 IST
‘ಸ್ಕಾರ್ಲೆಟ್ ಲೇಡಿ’ ಹಡಗಿನ ಹೊರನೋಟ
‘ಸ್ಕಾರ್ಲೆಟ್ ಲೇಡಿ’ ಹಡಗಿನ ಹೊರನೋಟ   

ಮಿತ ಖರ್ಚಿನಲ್ಲಿ ಪ್ರವಾಸ ಕೈಗೊಳ್ಳಲು ಬಯಸುವ ವರ್ಗ ಒಂದೆಡೆಯಾದರೆ, ಖರ್ಚು ಎಷ್ಟಾದರೂ ಅಡ್ಡಿಯಿಲ್ಲ ಪ್ರವಾಸ ಮಜಾ ಕೊಡಬೇಕು ಎನ್ನುವುದು ಇನ್ನೊಂದು ವರ್ಗ. ಇಲ್ಲಿ ಹೇಳಹೊರಟಿರುವುದು ಎರಡನೇ ವರ್ಗಕ್ಕೆ ಸಂಬಂಧಿಸಿದ್ದಾಗಿದೆ.

ಐಷಾರಾಮಿ ಸಾಗರಯಾನ ಕೈಗೊಳ್ಳುವ ಮನದಾಸೆ ಇದ್ದವರು ಸ್ಕಾರ್ಲೆಟ್‌ ಲೇಡಿಯಲ್ಲಿ ಪ್ರಯಾಣ ಆರಂಭಿಸಬಹುದು. ವರ್ಜಿನ್‌ ವಾಯೇಜಸ್‌ ಕಂಪನಿ ಮುಂದಿನ ವರ್ಷದ ಏಪ್ರಿಲ್‌ನಲ್ಲಿ ಈ ರೀತಿಯ ಹಡಗುಯಾನ ಆರಂಭಿಸಲಿದೆ. ಇದಕ್ಕಾಗಿ ಈಗಾಗಲೇ ಬುಕಿಂಗ್‌ ಸಹ ಆರಂಭವಾಗಿದೆ.

‘ವರ್ಜಿನ್ ಗ್ರೂಪ್’ ಹಾಗೂ ‘ಬೇನ್ ಕ್ಯಾಪಿಟಲ್’ ಜಂಟಿಯಾಗಿ ಈ ಕಂಪೆನಿ ಸ್ಥಾಪಿಸಿದೆ.

ADVERTISEMENT

ಮಿಯಾಮಿಯಿಂದ ಹೊರಡುವ ಹಡಗು ಹವಾನಾ, ಕ್ಯೂಬಾ, ಪ್ಯುರ್ಟೊ ಪ್ಲೆಟಾ, ಡೊಮಿನಿಕನ್ ರಿಪಬ್ಲಿಕ್ ಹಾಗೂ ಕಾಸ್ಟ ಮಾಯಾ ಹಾದು ಮೆಕ್ಸಿಕೊಗೆ ತಲುಪಲಿದೆ.

ಅತ್ಯಾಧುನಿಕ ಒಳಾಂಗಣ
ಅತ್ಯಾಧುನಿಕ ರೀತಿಯಲ್ಲಿ ಸಮುದ್ರ ಪ್ರವಾಸ ಕೈಗೊಳ್ಳಲು ಹಂಬಲಿಸುವವರಿಗೆ ‘ಸ್ಕಾರ್ಲೆಟ್ ಲೇಡಿ’ ಹಡಗಿನ ಒಳಾಂಗಣ ವಿನ್ಯಾಸ ಮುದ ನೀಡಲಿದೆ.

ಜಾಗತಿಕವಾಗಿ ಮುಂಚೂಣಿಯಲ್ಲಿರುವ ವಿನ್ಯಾಸ ಸಂಸ್ಥೆಗಳ ಜತೆ ಸೇರಿ, ಕಂಪೆನಿಯ ವಿನ್ಯಾಸ ತಂಡ ಒಳಾಂಗಣ ರೂಪುಗೊಳಿಸಿದೆ.ಮ್ಯಾಸಿವ್, ಫ್ಯಾಬ್, ಪಾಷ್ ಹಾಗೂ ಗಾರ್ಜಿಯಸ್ ಎನ್ನುವ ವಿಭಾಗಗಳಲ್ಲಿ ಕೋಣೆಗಳನ್ನು ವಿನ್ಯಾಸಗೊಳಿಸಲಾಗಿದೆ. ಪ್ರವಾಸಿಗರು ಹಡಗು ಯಾನವನ್ನು ವಿಲಾಸಿಯಾಗಿ ಕಳೆಯುವಂತೆ ಮಾಡುವುದು ತಂಡದ ಮುಖ್ಯಗುರಿ. ಇದಕ್ಕೆ ತಕ್ಕಂತೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಹಡಗುಯಾನಕ್ಕೆ ಹೊಸ ಆಯಾಮ ನೀಡಲು ಕಂಪೆನಿ ಸಿದ್ಧವಾಗಿದೆ. ಇದಕ್ಕೆ ತಕ್ಕುದಾಗಿ ಇಟಲಿಯ ಹಡಗು ನಿರ್ಮಾಣ ಕಂಪನಿ ‘ಫಿನ್‌ಕ್ಯಾಂಟಿಯೆರಿ’ ಇದನ್ನು ತಯಾರಿಸಿದೆ.

ಆಹಾರ, ಆರೋಗ್ಯ
ವಿಶ್ವದರ್ಜೆಯ 20ಕ್ಕೂ ಹೆಚ್ಚು ರೆಸ್ಟೊರೆಂಟ್‌ಗಳ ಬಗೆಬಗೆಯ ಖಾದ್ಯಗಳು ಲಭ್ಯವಿರುತ್ತದೆ. ಆಹಾರದ ಜತೆ ಆರೋಗ್ಯಕ್ಕೂ ಪ್ರಾಮುಖ್ಯತೆ ನೀಡುವ ಸಲುವಾಗಿ ಇಲ್ಲಿ ಫಿಟ್‌ನೆಸ್ ತರಗತಿಗಳನ್ನು ನಡೆಸಲಾಗುತ್ತದೆಯಂತೆ.

ಈ ಹಡಗು ಒಂದು ಹಗಲು ‘ಬಿಮಿನಿ’ ದ್ವೀಪಸಮೂಹದಲ್ಲಿ ಲಂಗರು ಹಾಕುತ್ತದೆ. ಈ ವೇಳೆ ‘ದಿ ಬೀಚ್‌ ಕ್ಲಬ್’ ನಲ್ಲಿ ಕಾಲ ಕಳೆಯಬಹುದು. ಜಲಕ್ರೀಡೆ ಹಾಗೂ ಸ್ವಿಮ್ಮಿಂಗ್ ಪೂಲ್‌ನಲ್ಲಿ ವೈವಿಧ್ಯಮಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು. ಸದ್ಯಕ್ಕೆ ವೆಬ್‌ಸೈಟ್ ನಲ್ಲಿ 3ಡಿ ಮೂಲಕ ಈ ಹಡಗಿನ ಒಳ-ಹೊರ ನೋಟವನ್ನು ಸಂಪೂರ್ಣವಾಗಿ ವೀಕ್ಷಿಸಬಹುದು.

ಐಷಾರಾಮಕ್ಕೆ ಹೊಸ ವ್ಯಾಖ್ಯೆ
‘ಐಷಾರಾಮಕ್ಕೆ ಹೊಸ ವ್ಯಾಖ್ಯಾನ ನೀಡಲಿದ್ದೇವೆ. ನಿಮ್ಮ ಕಾಳಜಿ ವಹಿಸುವುದಷ್ಟೇ ಅಲ್ಲ, ನಿಮಗಿಂತ ಮೊದಲೇ ನಿಮ್ಮ ಅಗತ್ಯಗಳನ್ನು ಅರಿತು ಆತಿಥ್ಯ ಒದಗಿಸಲಾಗುತ್ತದೆ’ ಎನ್ನುತ್ತಾರೆ ವರ್ಜಿನ್ ವಾಯೇಜಸ್ ಅಧ್ಯಕ್ಷ ಹಾಗೂ ಸಿಇಒ ಟಾಮ್ ಮೆಕ್ ಆಲ್ಪಿನ್.

‘ಸಂಗೀತ ಸೇರಿದಂತೆ ವರ್ಜಿನ್ ಬ್ರ್ಯಾಂಡ್‌ನ ಎಲ್ಲಾ ಅಂಶಗಳನ್ನೂ ಈ ಹಡಗಿನಲ್ಲಿ ಬಳಸಲಾಗಿದೆ’ ಎಂದು ವರ್ಜಿನ್ ವಾಯೇಜಸ್‌ನ ಹಿರಿಯ ವಿನ್ಯಾಸಗಾರ ಜೇಮಿ ಡಗ್ಲಾಸ್ ಅವರು ಕಂಪನಿಯ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದ್ದಾರೆ.

ನಿತ್ಯ ಭಿನ್ನ ಮನೋರಂಜನೆ
‘ದಿ ಈವೆಂಟ್ಸ್ ಆಂಡ್ ಗಿಗ್ಸ್’ ತಂಡ ದಿನವೂ ವಿನೂತನ ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುತ್ತದೆ. ಅತಿಥಿಗಳು ಇದರಲ್ಲಿ ಭಾಗಿಯಾಗುವಂತೆ ಮಾಡುವ ಮೂಲಕ, ಸಾಂಪ್ರದಾಯಿಕ ಹಡಗು ಯಾನಕ್ಕಿಂತ ಭಿನ್ನವಾದ ಅನುಭವಗಳನ್ನು ಪ್ರವಾಸಿಗರಿಗೆ ಕಟ್ಟಿಕೊಡಲು ತಯಾರಾಗಿದೆ ಕಂಪನಿ. ಆದರೆ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಈ ಹಡಗುಯಾನಕ್ಕೆ ಅವಕಾಶ.

2770ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ 1100ಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊತ್ತೊಯ್ಯುವ ಸಾಮರ್ಥ್ಯ ಈ ಹಡಗಿಗೆ ಇದೆ. ಹೆಚ್ಚಿನ ಮಾಹಿತಿಗೆ virginvoyages.com ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.