ADVERTISEMENT

ಸಾಹಸೋತ್ಸವದ ಸೊಬಗು

ಕೆ.ನರಸಿಂಹ ಮೂರ್ತಿ
Published 8 ಜನವರಿ 2020, 19:30 IST
Last Updated 8 ಜನವರಿ 2020, 19:30 IST
ಕಮಲಾಪುರ ಕೆರೆಯಲ್ಲಿ ತಾಲೀಮು... –ಶಿವಶಂಕರ ಬಣಗಾರ
ಕಮಲಾಪುರ ಕೆರೆಯಲ್ಲಿ ತಾಲೀಮು... –ಶಿವಶಂಕರ ಬಣಗಾರ   
""
""
""
""

ಖುಷಿ ಪಡುವುದೇ ನಿಮ್ಮ ಗುರಿಯಾಗಿದ್ದರೆ, ಖಂಡಿತವಾಗಿ ಸಾಹಸವೇ ಆದ್ಯತೆಯಾಗಬೇಕು; ಈ ಮಾತನ್ನು ಕೇಳದ ಸಾಹಸಿಗಳು ಕಡಿಮೆ. ಅಂಥ ಖುಷಿ ಬೇಕೆನ್ನುವವರು ಈ ಬಾರಿ ನಡೆಯಲಿರುವ ಹಂಪಿ ಉತ್ಸವಕ್ಕೆ ಬರಲೇಬೇಕು.

ವಿಜಯನಗರ ಸಾಮ್ರಾಜ್ಯದ ವೈಭವವನ್ನು ನೆನಪಿಗೆ ತರುವ ಸಾಂಸ್ಕೃತಿಕ ಉತ್ಸವದಲ್ಲಿ ನಡೆಯುವ ಸಾಹಸೋತ್ಸವದ ಸೊಗಸೇ ಬೇರೆ. ಒಂದೊಂದೂ ರೋಮಾಂಚಕ, ಅಚ್ಚರಿದಾಯಕ. ‘ಒಂದು ಕೈ ನೋಡೋಣ ಎಂದು ಮುಂದೆ ಬಂದರೆ ನಿಮ್ಮದೇ ಒಂದು ಸಾಹಸದ ಕಥೆ ಸೃಷ್ಟಿಯಾಗಲೂಬಹುದು.

ಭೂಸಾಹಸ ಬೇಕೆ? ಹಂಪಿಯ ವಿರೂಪಾಕ್ಷೇಶ್ವರ ಗುಡಿಯ ಸುತ್ತಮುತ್ತಲಿನ ಬೃಹತ್ ಬಂಡೆಗಳು ನಿಮಗಾಗಿ ಕಾಯುತ್ತಿವೆ. ಬಂಡೆ ಏರುವ, ಇಳಿಯುವ, ಹಗ್ಗ ಕಟ್ಟಿ ಬಂಡೆಯಿಂದ ಬಂಡೆಗೆ ಜಾರುವ, ಹಗ್ಗದ ಏಣಿ ಹತ್ತುವ, ಬಂಡೆಗಳಿಗೆ ಒರಗಿಸಿದ ಕೃತಕ ಗೋಡೆ ಹತ್ತುವ ಸಾಹಸಗಳು ಚಳಿಗಾಳಿಯಲ್ಲೂ ಬೆವರಿಳಿಸುವಂತೆ ಮಾಡುತ್ತವೆ.

ADVERTISEMENT

ಮನೆ ಮಂದಿಯೊಂದಿಗೆ ಬಂದರೆ ಅಪ್ಪ, ಅಮ್ಮ, ಮಕ್ಕಳು ಜೊತೆಯಾಗಿಯೇ ಈ ಸಾಹಸಕ್ಕೆ ಕೈ ಹಾಕಬಹುದು. ಬಂಡೆಗಳಲ್ಲಿಯೇ ಬಹುತೇಕ ಸಾಹಸ ಚಟುವಟಿಕೆಗಳು ನಡೆಯಲಿವೆ. ವಿವಿಧ ವಯೋಮಾನದ ಎಲ್ಲರೂ ಭಾಗವಹಿಸಬಹುದು. ನಗರ ಪ್ರದೇಶಗಳಲ್ಲಿ ಇಂಥ ಒಂದೊಂದು ಸಾಹಸಕ್ಕೂ ನೂರಾರು ರೂಪಾಯಿ ಶುಲ್ಕ ಕಟ್ಟಬೇಕು. ಆದರೆ ಉತ್ಸವದಲ್ಲಿ ಎಲ್ಲರಿಗೂ ಉಚಿತ ಪ್ರವೇಶ. ವಯಸ್ಸಿನ ಮಿತಿ ಇಲ್ಲ.

ಅಪಾಯವಾದರೆ? ಈ ಆತಂಕ ಸಹಜ. ಆದರೆ ಯೋಚಿಸಬೇಕಾಗಿಲ್ಲ. ಸಾಹಸೋತ್ಸವವನ್ನು ಆಯೋಜಿಸುವಲ್ಲಿ ರಾಜ್ಯದ ಹೊರಗೂ ಹೆಸರುವಾಸಿಯಾಗಿರುವ ನೊಪಾಸನ–ನ್ಯಾಷನಲ್‌ ಆರ್ಗನೈಜೇಶನ್‌ ಫಾರ್ ಪ್ರಮೋಷನ್‌ ಆಫ್‌ ಅಡ್ವೆಂಚರ್ ಸ್ಪೋರ್ಟ್ಸ್ ಅಂಡ್ ನೇಚರ್ ಅವೇರ್‌ನೆಸ್‌ನ ತಜ್ಞರು ನಿಮ್ಮ ನೆರಳಾಗಿರುತ್ತಾರೆ. ‘ಸುರಕ್ಷತೆ ಇಲ್ಲಿ 200 ಪರ್ಸೆಂಟ್‌’ ಎನ್ನುತ್ತಾರೆ ಸಂಸ್ಥೆಯ ಸಂಚಾಲಕ ಎಂ.ಎ.ಷಕೀಬ್.

ರಾಕ್‌ ಕ್ಲೈಂಬಿಂಗ್‌ ಅನ್ನು ಗಂಭೀರವಾಗಿ ಪರಿಗಣಿಸಿರುವವರಿಗೆ ಒಂದು ಸ್ಪರ್ಧೆಯೂ ಉಂಟು. ಬಹುಮಾನವೂ ಉಂಟು. ಅದು ಅಂತರರಾಷ್ಟ್ರೀಯ ರಾಕ್‌ ಕ್ಲೈಂಬಿಂಗ್‌ ಸ್ಪರ್ಧೆ. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಬಹುತೇಕರು ವಿದೇಶಿಯರು. ಅವರೊಂದಿಗೆ ಪೈಪೋಟಿ ನೀಡಿ ಗೆಲ್ಲುವ ಛಲವುಳ್ಳವರು ಬೇಗ ಬರಬೇಕಷ್ಟೇ.

ಎಟಿವಿ ಬೈಕ್ ರೈಡ್‌!
ಗುಡ್ಡಗಾಡುಗಳಲ್ಲಿ ದೊಡ್ಡ ಚಕ್ರಗಳ ಎಟಿವಿ ಬೈಕ್ ರೈಡ್‌ನ ರೋಮಾಂಚನ ಅನುಭವಿಸಿದವರಿಗಷ್ಟೇ ಗೊತ್ತು. ಹಂಪಿ ಉತ್ಸವದಲ್ಲೂ ಈ ರೈಡ್‌ಗೆ ಅವಕಾಶವಿರುವುದು ಈ ಬಾರಿಯ ವಿಶೇಷ. ಹಂಪಿಯ ಅಕ್ಕ ತಂಗಿ ಗುಡ್ಡದ ಎದುರು ಸಾಹಸ ರೈಡಿಂಗ್ ನಡೆಯಲಿದ್ದು, ಮೂರು ಬೈಕ್‌ಗಳು ಸಿದ್ಧವಾಗಿವೆ. ರೈಡಿಂಗ್‌ಗೆ ಬರಬೇಕಷ್ಟೇ.

ಬಿಡಾರದಲ್ಲಿ ನೆಲೆಸಿ..
ಅಂದ ಹಾಗೆ, ಈ ಬಾರಿ ಎರಡು ದಿನಗಳ ಹಂಪಿ ಉತ್ಸವದಲ್ಲಿ ನಡೆಯುವ ಸಾಹಸೋತ್ಸವ ಚಟುವಟಿಕೆಗಳು ಜ.12ರವರೆಗೂ ಮುಂದುವರಿಯಲಿವೆ.

ಈ ಉತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಉಚಿತವಾಗಿ ಕಡಲೆಕಾಳು ಗಣಪತಿಯ ಮುಂಭಾಗದ ಆವರಣದ ಬಿಡಾರಗಳಲ್ಲಿ ವಾಸ್ತವ್ಯ ಹೂಡುವ ವಿನೂತನ ಅವಕಾಶವೂ ದೊರಕಲಿದೆ. ಜೊತೆಗೆ ಊಟ, ಉಪಹಾರದ ವ್ಯವಸ್ಥೆಯೂ ಉಂಟು.

ಜಲಸಾಹಸವೂ ಉಂಟು!
ಹೊಸಪೇಟೆಯ ಕಮಲಾಪುರದ ಕೆರೆಯಲ್ಲಿ ಪುರುಷ ಮತ್ತು ಮಹಿಳಾ ಮೀನುಗಾರರಿಗೆ ನೊಪಾಸನಾ ಸಂಸ್ಥೆಯು ನಡೆಸಲಿರುವತೆಪ್ಪದ ಸ್ಪರ್ಧೆಯಲ್ಲಿ ಕಾಣುವ ಪೈಪೋಟಿಯನ್ನು ನೋಡಿಯೇ ಆಸ್ವಾದಿಸಬೇಕು. ಹುಟ್ಟು ಹಾಕಿ ಮುನ್ನುಗ್ಗಲು ತೋರುವ ಉತ್ಸಾಹಕ್ಕೆ ಕೆರೆಯ ನೀರಿನ ಅಲೆಗಳ ಸದ್ದೂ ಅಡಗಿಬಿಡುತ್ತದೆ! ಅದರೊಂದಿಗೆ, ಕಾರವಾರದ ನೇತ್ರಾಣಿ ಸ್ನಾರ್ಕ್‌ಲಿಂಗ್ ಅಡ್ವೆಂಚರ್ಸ್‌ ಸಂಸ್ಥೆಯು ನಡೆಸುವ ಜಲಸಾಹಸ ಕ್ರೀಡೆಗಳೂ ಈ ಬಾರಿ ಸಾಹಸೋತ್ಸವದ ಮೆರುಗನ್ನು ಹೆಚ್ಚಿಸಲಿವೆ.

ಕುಸ್ತಿ, ಗುಂಡೆತ್ತುವ ಸ್ಪರ್ಧೆ
ಭೂಸಾಹಸ ಕ್ರೀಡೆಗಳಲ್ಲಿ ಪಾಲ್ಗೊಂಡು ಇನ್ನೊಂದಿಷ್ಟು ರೋಚಕ ಸಾಹಸವನ್ನು ನೋಡಬೇಕೆನ್ನುವವರಿಗಾಗಿಯೇ ಕುಸ್ತಿ ಮತ್ತು ಗುಂಡೆತ್ತುವ ಸ್ಪರ್ಧೆಗಳೂ ನಡೆಯಲಿವೆ, ಹೊಸಮಲಪನ ಗುಡಿಯ ಸರ್ಕಾರಿ ಶಾಲೆ ಮೈದಾನದಲ್ಲಿ ನಡೆಯುವ ಈ ಸ್ಪರ್ಧೆಗಳನ್ನು ವೀಕ್ಷಿಸಲು ಗ್ರಾಮೀಣ ಪ್ರದೇಶದ ನೂರಾರು ಯುವಜನರು ಧಾವಿಸುವುದು ವಿಶೇಷ. ಹಿಂದಿನ ವರ್ಷದ ಉತ್ಸವದಲ್ಲಿ ಇಬ್ರಾಹಿಂ ಸಾಬ್‌ 150 ಕೆಜಿ ತೂಕದ ಗುಂಡನ್ನು ಕೇವಲ 3ನಿಮಿಷ 10 ಸೆಕೆಂಡುಗಳಲ್ಲಿ ಎತ್ತಿ ಬಿಸಾಕಿದ್ದರು!

ಭೂಸಾಹಸ (ಹಂಪಿಯ ವಿರೂಪಾಕ್ಷೇಶ್ವರ ಗುಡಿ ಸಮೀಪ)

ರಾಕ್‌ ಕ್ಲೈಂಬಿಂಗ್‌ (ಬಂಡೆ ಹತ್ತುವುದು)
ಟ್ರೆಕ್ಕಿಂಗ್‌ (ಚಾರಣ)
ಲ್ಯಾಡರ್‌ ಕ್ಲೈಂಬಿಂಗ್‌ (ಹಗ್ಗದ ಏಣಿ ಹತ್ತುವುದು)
ಝಿಪ್‌ ಲೈನ್ (ಹಗ್ಗ ಹಿಡಿದು ಜಾರುವುದು)
ರ‍್ಯಾಪ್ಲಿಂಗ್ (ಬಂಡೆಯಿಂದ ಇಳಿಯುವುದು)
ರೋಪ್‌ ಕ್ಲೈಂಬಿಂಗ್ (ಹಗ್ಗ ಹಿಡಿದು ಹತ್ತುವುದು)
ಸ್ಪೋರ್ಟ್‌ ಕ್ಲೈಂಬಿಂಗ್‌(ಕೃತಕ ಗೋಡೆ ಹತ್ತುವುದು)
ಟಾರ್ಗೆಟ್‌ ಶೂಟ್‌
ಜಲಸಾಹಸ (ಕಮಲಾಪುರ ಕೆರೆ)
ಜೆಟ್‌ ಸ್ಕೈ ಸ್ಪೀಡ್‌ ಬೋಟ್
ಬನಾನಾ ಬಂಪರ್‌ ಕಾಯಕ್
ಸ್ಲೋ ಬೋಟ್‌ ಬಂಪರ್ಡ್‌

ಬಂಡೆ ಏರುವ ಸಾಹಸ

ತಡವೇಕೆ? ನೀವೂ ಬನ್ನಿ, ನಿಮ್ಮ ಮಕ್ಕಳನ್ನೂ ಕರೆತನ್ನಿ!

ಸಂಪರ್ಕಕ್ಕೆ ಎಂ.ಎ.ಷಕೀಬ್‌: 98451 45046, 9483641234.

(ಚಿತ್ರಗಳು: ತಾಜುದ್ದೀನ್‌ ಆಜಾದ್‌, ಸಿ.ಶಿವಾನಂದ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.