ADVERTISEMENT

ಹಸಿರುಟ್ಟ ‘ಸಾಗರ’

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 19:30 IST
Last Updated 30 ಅಕ್ಟೋಬರ್ 2019, 19:30 IST
ಚಿತ್ರಗಳು: ಲೇಖಕರವು
ಚಿತ್ರಗಳು: ಲೇಖಕರವು   

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯದಲ್ಲಿ ನೀರಿನ ಮಟ್ಟ 90 ಅಡಿ ದಾಟಿದೆ. ಸುತ್ತಲಿನ ಗುಡ್ಡಗಳಲ್ಲಿ ಹಸಿರು ಉಕ್ಕಿದೆ.

ಕಳೆದ ಮೂರ್ನಾಲ್ಕು ವರ್ಷಗಳಿಂದ ‘ಬರಗಾಲ’ ಆವರಿಸಿದ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ನೀರು ಕಡಿಮೆಯಾಗಿತ್ತು. ಸುತ್ತಲಿನ ಗುಡ್ಡಗಳಲ್ಲಿ ಹಸಿರು ಮಾಯವಾಗಿತ್ತು. ಇತ್ತೀಚೆಗೆ ಸುರಿದ ಮಳೆ ಆ ಬೋಳುಗುಡ್ಡಗಳಲ್ಲಿ ಹಸಿರು ಚಿಗುರಿಸಿದೆ. ಸೊರಗಿದ್ದ ಗಿಡ–ಮರಗಳು ಚಿಗುರಿವೆ. ಪಕ್ಷಿ–ಪ್ರಾಣಿಗಳು ಬಿತ್ತಿದ್ದ ಬೀಜಗಳೆಲ್ಲ ಮೊಳೆತು, ಗುಡ್ಡಕ್ಕೆ ಹಸಿರು ಪರದೆ ಹೊದಿಸಿವೆ. ಗುಡ್ಡಗಳ ನಡುವಿರುವ ಜಲಪಾತ್ರೆಯಲ್ಲಿ ಪ್ರಶಾಂತವಾಗಿ ಅಲೆಗಳು ನರ್ತಿಸುತ್ತಿವೆ. ಜಲಾಶಯಕ್ಕೆ ಜೀವಕಳೆ ಬಂದಿದೆ. ಇತ್ತೀಚೆಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ಜಲಾಶಯಕ್ಕೆ ನೀರು ಬರುತ್ತಿರುವುದರಿಂದ, ಬಹುಶಃ ಭವಿಷ್ಯದಲ್ಲಿ ವಾಣಿವಿಲಾಸ ಸಾಗರದ ಹಸಿರ ಸೊಬಗು ನಿರಂತರವಾಗಿರುವ ಸೂಚನೆ ಇದೆ.

ಹೀಗೆ ಬನ್ನಿ..

ADVERTISEMENT

ವಾಣಿವಿಲಾಸಪುರದಿಂದ ಪ್ರವೇಶದ್ವಾರದ ಮೂಲಕ ಜಲಾಶಯ ಪ್ರವೇಶಿಸಿದರೆ, ಎದುರುಗಡೆ ಪ್ರವಾಸಿ ಮಂದಿರಕ್ಕೆ ಹೋಗುವ ದಾರಿ ಕಾಣುತ್ತದೆ. ಗುಡ್ಡದ ನೆತ್ತಿಯಲ್ಲಿ ಪ್ರವಾಸಿ ಮಂದಿರವಿದೆ. ಅಲ್ಲಿಂದ ಮೆಟ್ಟಿಲುಗಳನ್ನು ಇಳಿದು, ಜಲಾಶಯದ ಸೇತುವೆ ಮೇಲೆ ಇಳಿಯಬಹುದು. ಇನ್ನು, ಪ್ರವೇಶದ್ವಾರದಿಂದ ಬಲಭಾಗಕ್ಕೆ ಚಲಿಸಿದರೆ ನೇರವಾಗಿ ಜಲಾಶಯಕ್ಕೆ ತೆರಳಬಹುದು.

ಅಣೆಕಟ್ಟಿನ ಎರಡೂ ತುದಿಗಳಲ್ಲಿ ಕಪ್ಪುಶಿಲೆಯ ಅಪರೂಪದ ಸುಂದರ ಮಂಟಪಗಳಿವೆ. ಇಲ್ಲಿ ಫೋಟೊ ಕ್ಲಿಕ್ಕಿಸಲು ವಿಶೇಷ ಕೋನಗಳು ಸಿಗುತ್ತವೆ. ಕಮಾನು ದ್ವಾರದಿಂದ ಹಸಿರುಟ್ಟ ಬೆಟ್ಟಗಳ ಸೌಂದರ್ಯವನ್ನು ಕ್ಲಿಕ್ಕಿಸುವ ಸೊಬಗೇ ಅದ್ಭುತ.ಸುತ್ತಲೂ ಗುಡ್ಡಗಳ ಸಂಕೀರ್ಣ. ಎಲ್ಲೆಲ್ಲೂ ಹಸಿರೇ ಹಸಿರು, ಅಡಿಕೆ, ತೆಂಗು, ಬಾಳೆ, ಮಾವು, ತೋಟಗಳ ಸೌಂದರ್ಯ ನಯನಮನೋಹರ.

ಇಂಥ ಸನ್ನಿವೇಶ ಇರುವುದರಿಂದಲೇ ಇಲ್ಲಿ, ‘ನಾಗರಹಾವು, ಹುಚ್ಚ, ಕೃಷ್ಣ ನೀ ಬೇಗನೆ ಬಾರೋ ಕೃಷ್ಣ’ ಸೇರಿದಂತೆ ಹಲವು ಸಿನಿಮಾಗಳನ್ನು ಚಿತ್ರೀಕರಿಸಿದ್ದಾರೆ. ಜಲಾಶಯದ ಒಂದು ತುದಿಯಲ್ಲಿ ನಿಂತರೆ, ‘ಭಾರತ ಭೂಪಟ’ದ ಆಕಾರವೊಂದು ಕಾಣಿಸುತ್ತದೆ. ಇದು ಈ ವಿವಿ ಸಾಗರದ ವಿಶೇಷ. ಅಲ್ಲಿ ಛಾಯಾಗ್ರಹಣಕ್ಕಾಗಿ ಜನ ಸಾಲಿಟ್ಟಿರುತ್ತಾರೆ.

ಸೂರ್ಯಾಸ್ತ ಇಲ್ಲಿನ ಮತ್ತೊಂದು ವಿಶೇಷ. ಗುಡ್ಡಗಳ ನಡುವೆ ಮರೆಯಾಗುವ ಸೂರ್ಯನನ್ನು ಕಣ್ತುಂಬಿಕೊಳ್ಳುವುದು, ಕ್ಯಾಮೆರಾದಲ್ಲಿ ಸೆರೆ ಹಿಡಿಯುವುದುದೇ ಒಂದು ಸೊಬಗು. ಸಂಜೆ 4 ರಿಂದ 5 ಗಂಟೆಯೊಳಗೆ ಜಲಾಶಯದಲ್ಲಿದ್ದರೆ, ಸಂಜೆ ಸೂರ್ಯಾಸ್ತ ವನ್ನು ಸೆರೆ ಹಿಡಿಯ ಬಹುದು.

ಹೋಗುವುದು ಹೇಗೆ ?

ಬೆಂಗಳೂರಿಂದ ರಾ.ಹೆ4ರಲ್ಲಿ 160 ಕಿ.ಮೀ. ಕ್ರಮಿಸಿದರೆ ಹಿರಿಯೂರು ತಲುಪುತ್ತೇವೆ. ಹಿರಿಯೂರಿನಿಂದ 20ಕಿ.ಮೀಟರ್ ಸಂಚರಿಸಿದರೆ ವಾಣಿ ವಿಲಾಸಪುರ ಗ್ರಾಮ ತಲುಪುತ್ತೇವೆ. ಪಕ್ಕದಲ್ಲಿರುವುದೇ ವಾಣಿವಿಲಾಸ ಸಾಗರ ಜಲಾಶಯ. ಚಿತ್ರದುರ್ಗದಿಂದ 40ಕಿ.ಮೀಟರ್ ದೂರ. ‌ ಹಿರಿಯೂರು ಪಟ್ಟಣದಿಂದ ವಾಣಿವಿಲಾಸಪುರಕ್ಕೆ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳಿವೆ. ಆಟೊಗಳು ಸಿಗುತ್ತವೆ. ಟ್ಯಾಕ್ಸಿಗಳೂ ಲಭ್ಯ. ಖಾಸಗಿ ಟೆಂಪೊಗಳಲ್ಲೂ ಪ್ರವಾಸಿಗರನ್ನು ಕರೆದೊಯ್ಯುತ್ತವೆ. ಸ್ವಂತ ವಾಹನ / ಟೂರಿಸ್ಟ್‌ ವಾಹನದಲ್ಲೇ ಹೋಗಿ ಬರುವುದು ಉತ್ತಮ

ಊಟ – ಉಪಹಾರಕ್ಕೆ..
ಜಲಾಶಯ ಸುತ್ತಿ ದಣಿದು ಬಂದವರಿಗೆ ಪ್ರವೇಶ ದ್ವಾರ ಬಳಿ ಸಾಲು ಸಾಲು ಪುಟ್ಟ ಹೋಟೆಲ್‌ಗಳಿವೆ. ಆಗತಾನೇ ಬಲೆಗೆ ಬಿದ್ದ ಶುದ್ಧ ಮೀನುಗಳ ರುಚಿಯಾದ ಮೀನೂಟ ಸಿಗುತ್ತದೆ. ಶಾಖಾಹಾರಿಗಳಿಗೆ ಹಳ್ಳಿಶೈಲಿಯ ಅಪ್ಪಟ ಸಸ್ಯಹಾರ, ತಾಜಾ ಚಹಾ, ಕಾಫಿ, ಏಳನೀರು, ಮಜ್ಜಿಗೆ ತಣ್ಣಗಾಗಿಸುತ್ತವೆ. ಮನೆಯಿಂದ ಬುತ್ತಿ ಕಟ್ಟಿಕೊಂಡು ಹೋಗುವವರಿಗೆ, ವನಭೋಜನ ಶೈಲಿಯಲ್ಲಿ ಊಟ ಮಾಡಲು ಎರಡು ಉದ್ಯಾನಗಳಿವೆ. ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಎಲ್ಲವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.