ADVERTISEMENT

ಯಾದಗಿರಿ: ಅವಕಾಶ ಇದ್ದರೂ 'ಪ್ರವಾಸೋದ್ಯಮ' ವಿಫಲ

ಇಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ; ಗಿರಿ ಜಿಲ್ಲೆಯಲ್ಲಿ ಮೂಲಸೌಕರ್ಯ ಕೊರತೆ

ಬಿ.ಜಿ.ಪ್ರವೀಣಕುಮಾರ
Published 27 ಸೆಪ್ಟೆಂಬರ್ 2019, 12:05 IST
Last Updated 27 ಸೆಪ್ಟೆಂಬರ್ 2019, 12:05 IST
 ಶಹಾಪುರ ಹೊರವಲಯದ ಬೆಟ್ಟದ ಸಾಲುಗಳ ಮೇಲೆ ‘ಸ್ಲೀಪಿಂಗ್‌ ಬುದ್ಧ’
 ಶಹಾಪುರ ಹೊರವಲಯದ ಬೆಟ್ಟದ ಸಾಲುಗಳ ಮೇಲೆ ‘ಸ್ಲೀಪಿಂಗ್‌ ಬುದ್ಧ’   

ಯಾದಗಿರಿ: ಬೆಟ್ಟ, ಗುಡ್ಡಗಳು ಹೆಚ್ಚಿರುವ ಗಿರಿ ಜಿಲ್ಲೆ ಯಾದಗಿರಿಯಲ್ಲಿ ಹಲವಾರು ಪ್ರವಾಸಿತಾಣಗಳಿವೆ. ಅವುಗಳಿಗೆ ಸಮರ್ಪಕವಾಗಿ ಮೂಲ ಸೌಕರ್ಯ ಕಲ್ಪಿಸದಿರುವುದರಿಂದ ವಿಫುಲ ಅವಕಾಶಗಳಿದ್ದರೂ ಪ್ರವಾಸೋದ್ಯಮ ವಿಫಲವಾಗಿದೆ.

ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಗತ ಇತಿಹಾಸ ಸಾರುವ ತಾಣಗಳು ಈಗ ಮೂಲೆಗುಂಪಾಗಿವೆ. ಜಿಲ್ಲೆಯಾಗಿ ಹತ್ತು ವರ್ಷಗಳಾಗುತ್ತ ಬಂದರೂ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ. ಕೃಷ್ಣಾ, ಭೀಮಾ ನದಿಗಳು ಜಿಲ್ಲೆಯಲ್ಲಿ ಹರಿಯುತ್ತಿದ್ದರೂ ಪ್ರವಾಸೋದ್ಯಮಕ್ಕೆ ಬಳಕೆ ಆಗುತ್ತಿಲ್ಲ.

ನಗರದಲ್ಲಿ ಯಾದವರ ಕಾಲದ ಐತಿಹಾಸಿಕ ಕೋಟೆ ಇದೆ. ಅದು ಪ್ರವಾಸೋದ್ಯಮ, ಪುರಾತತ್ವ ಇಲಾಖೆಗಳ ನಿರ್ಲಕ್ಷ್ಯದಿಂದ ಪಾಳು ಬಿದ್ದಿದೆ. ಕೋಟೆಗೆ ಹೋಗಬೇಕಾದರೆ ಮೂಗು ಮುಚ್ಚಿಕೊಂಡೇ ತೆರಳಬೇಕಿದೆ.

ADVERTISEMENT

‘ಪ್ರವಾಸೋದ್ಯಮ ಹಾಗೂ ಉದ್ಯೋಗ– ಸರ್ವರಿಗೂ ಉಜ್ವಲ ಭವಿಷ್ಯ’ – ಇದು ಈ ವರ್ಷದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಘೋಷಣೆಯಾಗಿದೆ.

ಜಿಲ್ಲೆಯ ಶಹಾಪುರದಲ್ಲಿ ಬುದ್ದ ಮಲಗಿದಂತೆ ತೋರುವ ಬೆಟ್ಟ ಇದೆ. ಅಲ್ಲಿಗೆ ಮೂಲ ಸೌಕರ್ಯ ಕಲ್ಪಿಸಲು ಮಲ್ಲಿಕಾರ್ಜುನ ಖರ್ಗೆ ₹5 ಕೋಟಿ ವೆಚ್ಚದ ಯೋಜನೆ ರೂಪಿಸಿದ್ದರು. ಆದರೆ, ಅದು ಕಾರ್ಯಗತವಾಗದೆ ನನೆಗುದಿಗೆ ಬಿದ್ದಿದೆ. ಭೂಸ್ವಾಧೀನ ಮಾಡಿಕೊಂಡದ್ದು ಬಿಟ್ಟರೆ ಮತ್ಯಾವ ಕೆಲಸವೂ ಆಗಿಲ್ಲ. ಅದರ ಪಕ್ಕದಲ್ಲಿಯೇ ಬುದ್ಧ ವಿಹಾರ ಇದೆ. ಅಲ್ಲಿಯೇ ಕೆರೆ ಕೂಡ ಇದೆ.

ಸುರಪುರ ತಾಲ್ಲೂಕು ಹಲವಾರು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಟೇಲರ್ ಮಂಜಿಲ್, ಅರಮನೆ ಇಂದಿಗೂ ಚಿತ್ತಾಕರ್ಷಕವಾಗಿವೆ. ಆದರೆ, ಅದನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ.

ಪ್ರವಾಸೋದ್ಯಮಕ್ಕೆ ನೆಚ್ಚಿನ ತಾಣವಾದ ಬೋನಾಳ ಕೆರೆ ಬಳಿ ಉದ್ಯಾನ ನಿರ್ಮಿಸಲಾಗಿದೆ. ಆದರೆ ಅದೂ ಕೂಡ ನಿರ್ವಹಣೆ ಕೊರತೆಯಿಂದ ಬಳಲುತ್ತಿದೆ. ಪ್ರವಾಸಿಗರಿಗೆ ತೆರಳಲು ಸರಿಯಾದ ರಸ್ತೆ, ಮೂಲ ಸೌಕರ್ಯ ಇಲ್ಲವಾಗಿದೆ.

ಹುಣಸಗಿ ತಾಲ್ಲೂಕಿನ ರಾಜನಕೊಳ್ಳೂರಿನ ಬಳಿ ಶಿಲಾಯುಗಕ್ಕೆ ಸೇರಿದ್ದು ಎನ್ನಲಾದ ಬುಡ್ಡರ ಸಮಾಧಿಗಳಿವೆ. 2000 ರಿಂದ 3400 ವರ್ಷಗಳ ಹಿಂದೆ ಇಲ್ಲಿಯೂ ಜನವಸತಿ ಇತ್ತು ಎನ್ನಲಾಗಿದೆ. ಇದರ ಬಗ್ಗೆ ಬೆಳಕು ಚೆಲ್ಲಿಅದನ್ನು ಅಭಿವೃದ್ಧಿ ಪಡಿಸಿ ಪ್ರವಾಸಿಗರಿಗೆ ಪರಿಚಯಿಸುವ ಕಾರ್ಯ ಆಗಬೇಕಾಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಇಲ್ಲಿ ಒಬ್ಬರು ಮಾರ್ಗದರ್ಶಕರು ಇದ್ದರೆ ಪ್ರವಾಸಿಗರಿಗೆ ಅನುಕೂಲ ಆಗುತ್ತದೆ.

ಆಲಮಟ್ಟಿ ಜಲಾಶಯದ ಬಳಿ ಸುಂದರ ಉದ್ಯಾನ ನಿರ್ಮಿಸಿದ್ದಾರೆ. ಪ್ರವಾಸಿಗರು ಅಲ್ಲಿಗೇ ತೆರಳಲು ಇಚ್ಛಿಸುತ್ತಾರೆ. ನಾರಾಯಣಪುರ ಜಲಾಶಯದ ಬಳಿ 60 ಎಕರೆ ಜಾಗವಿದ್ದರೂ ಇಚ್ಛಾಶಕ್ತಿ ಕೊರತೆಯಿಂದ ಉದ್ಯಾನ ನಿರ್ಮಿಸಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಇದರ ಬಳಿಯೇ ಮೂರು ಜಿಲ್ಲೆಗಳುಸಂಧಿಸುವ ಜಿಲ್ಲಾ ರಸ್ತೆ ಇದೆ. ಉದ್ಯಾನ ನಿರ್ಮಾಣವಾದರೆ ಇಲ್ಲಿಗೂ ಪ‍್ರವಾಸಿಗರು ಬರುವ ಸಾಧ್ಯತೆ ಇದೆ.

ಗುರುಮಠಕಲ್ ತಾಲ್ಲೂಕಿನಲ್ಲಿ ಗವಿಸಿದ್ದಲಿಂಗೇಶ್ವರ ಗುಹೆ ಮತ್ತು ದಬ್‌ ದಭಿ, ಬಂಡಲೋಗು ಜಲಪಾತ ಇದೆ. ಬಂಡಲೋಗು, ದಬ್‌ ದಭಿ ಜಲಪಾತಕ್ಕೆ ತೆರಳಲು ಸರಿಯಾದ ಮಾರ್ಗವಿಲ್ಲ. ಕಚ್ಚಾ ರಸ್ತೆ ಇದೆ. ದಬ್‌ ದಭಿ ಮತ್ತು ಬಂಡಲೋಗು ಜಲಪಾತ ಗುರಮಠಕಲ್‌ನಿಂದ3 ಕಿ.ಮೀ. ಅಂತರವಿದೆ. ದಬ್‌ ದಭಿಗೆ ತೆರಳುವ ಗುರುಮಠಕಲ್–ನಜರಾಪುರ ರಸ್ತೆ ಮಾರ್ಗಕ್ಕೆತಡೆಗೋಡೆ ನಿರ್ಮಾಣ ಆಗಬೇಕಿತ್ತು. ಆದರೆ, ಇಲ್ಲಿ ಕನಿಷ್ಠ ಸೌಕರ್ಯಗಳಿಲ್ಲ.ಹೀಗಾಗಿ ಪ್ರವಾಸಿಗರು ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ಏರ್‌ ಕಾರ್‌ ವ್ಯವಸ್ಥೆ ಮಾಡುತ್ತೇವೆ ಎಂದು ಜನಪ್ರತಿನಿಧಿಗಳು ಹೇಳಿದ್ದರು. ಆದರೆ, ಮತ್ತೆ ಆ ಕಡೆ ಮುಖ ಮಾಡಿಲ್ಲ. ಅಲ್ಲದೆ ಇಲ್ಲಿ ಅಕ್ರಮ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ. ಕುಡಿದುಬಿಸಾಕಿದ ಬಾಟಲುಗಳು ಕಾಣ ಸಿಗುತ್ತವೆ. ಹೀಗಾಗಿ ಇಲ್ಲಿ ಪೊಲೀಸ್‌ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಾರೆ.

‘ಜಿಲ್ಲೆಯ ಹತ್ತಿಕುಣಿ ಜಲಾಶಯದ ಬಳಿ ₹1 ಕೋಟಿ ವೆಚ್ಚದಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಪ್ರವಾಸಿ ತಾಣ ಮಾಡಲಾಗಿದೆ. ಈ ಮುಂಚೆ ಇದು ಅಕ್ರಮ ಚಟುವಟಿಕೆಗಳ ತಾಣವಾಗಿತ್ತು. ಈಗ ಅದನ್ನು ಅಭಿವೃದ್ಧಿ ಪಡಿಸಲಾಗಿದೆ. ಪ್ರವಾಸಿ ತಾಣಗಳನ್ನು ರಕ್ಷಿಸಲು ಜನರ ಸಹಕಾರವೂ ಮುಖ್ಯ’ ಎಂದು ಪ್ರವಾಸೋದ್ಯಮ ಸಹಾಯಕ ನಿರ್ದೇಶಕ ರಜನಿಕಾಂತ ಹೇಳುತ್ತಾರೆ.

**

ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯ ಕೊರತೆ ಇದೆ. ನಮಗಿರುವ ಅನುದಾನದಲ್ಲಿಯೇ ಯೋಜನೆ ರೂಪಿಸಿಕೊಂಡು ಸೌಕರ್ಯ ಕಲ್ಪಿಸುತ್ತೇವೆ.
- ರಜನಿಕಾಂತ, ಪ್ರವಾಸೋದ್ಯಮ ಸಹಾಯಕ ನಿರ್ದೇಶಕ.

**

ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಿಗೆ ಮೂಲ ಸೌಲಭ್ಯ ಒದಗಿಸಿಕೊಡಬೇಕು. ಈ ಮೂಲಕ ಪ್ರವಾಸಿಗರನ್ನು ಸೆಳೆಯಬೇಕು.
- ದೌಲತ್ ಚವ್ಹಾಣ್, ವಿದ್ಯಾರ್ಥಿ.

**

ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳ ಬಗ್ಗೆ ಬೆಳಕು ಚೆಲ್ಲಬೇಕು. ಈ ಬಗ್ಗೆ ಆಗಾಗ ಕಾರ್ಯಕ್ರಮ ಏರ್ಪಡಿಸುವ ಮೂಲಕ ಜಾಗೃತಿ ಮೂಡಿಸಬೇಕು.
– ಸುಮಂಗಲಾ, ವಿದ್ಯಾರ್ಥಿನಿ

**

ನಗರದಲ್ಲಿರುವ ಯಾದಗಿರಿ ಕೋಟೆಗೆ ಅನುದಾನ ಲಭ್ಯವಿದ್ದರೂ ಪಾಳುಬಿದ್ದು ಪ್ರವೇಶಿಸಲು ಸಾಧ್ಯವಿಲ್ಲದಂತಾಗಿದೆ. ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕು.
- ಸ್ವಪ್ನಾ ಯಾದಗಿರಿ, ವಿದ್ಯಾರ್ಥಿನಿ.

**

ಜಿಲ್ಲೆಯಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಇವುಗಳನ್ನು ಜನರಿಗೆ ಪರಿಚಯಿಸಬೇಕು. ಈ ಮೂಲಕ ಆದಾಯ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಬೇಕು.
- ಲಿಂಗಪ್ಪ ಅಯ್ಯಪ್ಪ, ವಿದ್ಯಾರ್ಥಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.