ADVERTISEMENT

ಎಕತರಿನಬರ್ಗ್

ಪಾಂಡುರಂಗ ಹೆಗಡೆ
Published 31 ಜುಲೈ 2019, 19:30 IST
Last Updated 31 ಜುಲೈ 2019, 19:30 IST
yekaterinburg
yekaterinburg   

ರಷ್ಯಾ ಜಗತ್ತಿನಲ್ಲಿಯೇ ಅತೀ ದೊಡ್ಡ ದೇಶ. ಯೂರೋಪ್ ಖಂಡದಿಂದ ಹೊರಟರೆ, ಏಷ್ಯಾ ಖಂಡ ದಾಟಿ ಜಪಾನ್ ಹತ್ತಿರದ ಗಡಿ ತಲುಪುವ ಹೊತ್ತಿಗೆ ಎಂಟು ಸಾವಿರ ಕಿಲೋಮೀಟರ್ ಆಗುತ್ತದೆ.

ಸಾಮಾನ್ಯವಾಗಿ ರಷ್ಯಾಕ್ಕೆ ಹೋಗುವ ಹೆಚ್ಚಿನ ಪ್ರವಾಸಿಗರು ರಾಜಧಾನಿ ಮಾಸ್ಕೊ ಮತ್ತು ಪ್ರಾಚೀನ ರಾಜಧಾನಿ ಸೇಂಟ್‌ಪೀಟರ್ಸ್ ಬರ್ಗ್‌ಗೆ ಭೇಟಿ ಕೊಡುತ್ತಾರೆ. ನಾನು ಸ್ವಲ್ಪ ಭಿನ್ನವಾಗಿ ಯೋಚಿಸಿ, ಆ ದೇಶದ ನಾಲ್ಕನೆಯ ದೊಡ್ಡ ನಗರ ಎಕತರಿನಬರ್ಗ್ (Yekaterinburg) ಮೂಲಕ ರಷ್ಯಾ ಪ್ರವೇಶಿಸುವ ನಿರ್ಣಯ ಮಾಡಿದೆ. ಆ ಊರಿಗಿರುವ ವಿಚಿತ್ರವಾದ ಹೆಸರೇ, ನನ್ನನ್ನು ಅಲ್ಲಿಗೆ ಹೋಗುವಂತೆ ಮಾಡಿತು.

ನಿಜವಾದ ರಷ್ಯಾ ನೋಡಬೇಕೆಂದರೆ ಎರಡು ಖಂಡಗಳ ಮಧ್ಯೆ ನೆಲೆಸಿರುವ ಆ ನಗರವನ್ನು ನೋಡಬೇಕು ಎಂಬುದು ಒಂದು ಕಾರಣವಾದರೆ, ಇನ್ನೊಂದು ಕಾರಣ, ದಟ್ಟವಾದ ಹಸಿರಿನ, ಉರಾಲ್ ಪರ್ವತಶ್ರೇಣಿಯ ನಡುವೆ ಇರುವ ಈ ಐತಿಹಾಸಿಕ ನಗರವನ್ನು ಕಾಣುವ ಹಂಬಲ.

ADVERTISEMENT

ರಷ್ಯಾದ ಒಂದು ಭಾಗ ಯುರೋಪ್ ಖಂಡದಲ್ಲಿದೆ, ಆದರೆ ಹೆಚ್ಚಿನ ಭಾಗ ಏಷ್ಯಾ ಖಂಡದಲ್ಲಿದೆ. ಇದನ್ನು ಸೈಬೀರಿಯಾ ಪ್ರದೇಶ ಎಂದು ಕರೆಯುತ್ತಾರೆ. ಎಕತರಿನಬರ್ಗ್ ಈ ಎರಡೂ ಖಂಡಗಳನ್ನು ವಿಂಗಡಿಸುವ ರೇಖೆಯ ಮಧ್ಯದಲ್ಲಿದೆ. ಇಂತಹ ಮಹತ್ವ ಹೊಂದಿರುವ ಪಟ್ಟಣದ ಮೂಲಕ ರಷ್ಯಾ ಪ್ರವೇಶಿಸಿದರೆ ಅಲ್ಲಿನ ಸಂಸ್ಕೃತಿ ಮತ್ತು ಇತಿಹಾಸ ಅರಿಯಲು ಸಾಧ್ಯ ಎನ್ನುವುದು ನನ್ನ ಉದ್ದೇಶವಾಗಿತ್ತು. ಹೀಗಾಗಿ ಎಕತರೀನಬರ್ಗ್ ಮೂಲಕ ರಷ್ಯಾ ಪ್ರವೇಶಿಸಿದೆ.

ಮುಂಜಾವಿನ ಬೆಳಕಿನಲ್ಲಿ ನಾನು ಕುಳಿತ ವಿಮಾನದ ಕಿಟಕಿಯಿಂದ ಕಂಡು ಬಂದ ದೃಶ್ಯ ಮನಮೋಹಕವಾಗಿತ್ತು. ಹಸಿರು ವನಸಿರಿಯ ಮಧ್ಯೆ, ಅಲ್ಲಲ್ಲಿ ಹರಿಯುವ ನದಿಗಳ ಪಕ್ಕದಲ್ಲಿ ಎಕತರಿನಬರ್ಗ್ ಪಟ್ಟಣದ ದರ್ಶನವಾಯಿತು. ಉರಾಲ್ ಪರ್ವತಮಾಲೆಯು ಪಶ್ಚಿಮಘಟ್ಟ ಅಥವಾ ಹಿಮಾಲಯದಷ್ಟು ಕಡಿದಾಗಿರದಿದ್ದರೂ ಸುತ್ತಲಿನ ಹಸಿರು, ವಿಶಾಲವಾದ ಕಾಡು, ವಿರಳ ಜನವಸತಿ ನಾನು ಊಹಿಸಿದ್ದಕ್ಕಿಂತಲೂ ಚೆನ್ನಾಗಿರುವ ಸ್ಥಳ ಎಂದೆನಿಸಿತು.

ರಷ್ಯಾದ ಚಕ್ರವರ್ತಿಯ ಪಟ್ಟದ ರಾಣಿಯ ಹೆಸರು ಎಕತರಿನ. ಅವಳು 17ನೇಯ ಶತಮಾನದಲ್ಲಿ ಸ್ಥಾಪಿಸಿದ ನಗರವಾಗಿದ್ದರಿಂದ ಇದಕ್ಕೆ ಎಕತರಿನಬರ್ಗ್ ಎಂದು ಕರೆಯುತ್ತಾರೆ.

ರಷ್ಯಾದಲ್ಲಿ 1917 ರಲ್ಲಿ ನಡೆದ ಕಮ್ಯುನಿಸ್ಟ್ ಕ್ರಾಂತಿಯ ನಂತರ ಅಲ್ಲಿನ ಚಕ್ರವರ್ತಿ ಮತ್ತು ಕುಟುಂಬದವರನ್ನು ಸೆರೆಹಿಡಿದು ದೂರದ ಸೈಬೀರಿಯಾದ ಮರುಭೂಮಿಯಲ್ಲಿ ಬಂಧಿಸಿಡಲಾಗಿತ್ತು. ನಂತರ ಅವರನ್ನು ಎಕತರಿನಬರ್ಗ್‌ವರೆಗೆ ಕರೆತಂದು ಕುಟುಂಬದ ಎಲ್ಲಾ ಸದಸ್ಯರನ್ನು ಇಲ್ಲೇ ಹತ್ಯೆ ಮಾಡಲಾಯಿತು. ಹತ್ಯೆಗೀಡಾದ ಸ್ಥಳದಲ್ಲಿ ಇಂದು ಬೃಹತ್ ಆಕಾರದ ಇಗರ್ಜಿ ಕಟ್ಟಲಾಗಿದೆ. ಇದರ ಹೆಸರು ‘ಚರ್ಚ್ ಆನ್ ಬ್ಲಡ್‌’. ಅಂದರೆ ರಕ್ತದ ಮಡುವಿನ ಇಗರ್ಜಿ ಎಂದು ಪ್ರಖ್ಯಾತವಾಗಿದೆ. ವಿಚಿತ್ರವೆಂದರೆ ಕಮ್ಯುನಿಸ್ಟ್ ಕ್ರಾಂತಿ ಧಿಕ್ಕರಿಸಿದ ಚಕ್ರವರ್ತಿ ಮತ್ತು ಧರ್ಮವು ಪುನಃ ಪ್ರಬಲವಾಗಿ ಪುನರ್ಜನ್ಮ ಪಡೆದು ಹತ್ಯೆಗೆ ಈಡಾದ ಎಲ್ಲಾ ಸದಸ್ಯರನ್ನು ದೇವರ ದರ್ಜೆಗೆ ಏರಿಸಿ ಪೂಜಿಸಲಾಗುತ್ತದೆ. ಒಂದು ಕ್ರಾಂತಿಯ ಮಾನಸಿಕತೆಯನ್ನು ಧಿಕ್ಕರಿಸಿ ಮರುಜನ್ಮ ಪಡೆದ ಸಂಕೇತದಂತಿದೆ ಈ ಬೃಹತ್ ಇಗರ್ಜಿ.

ಎಕತರಿನಬರ್ಗ್ ಆಧುನಿಕ ನಗರವಾದರೂ ಐತಿಹಾಸಿಕವಾಗಿ ಗ್ರೀಕ್ ನಾಗರಿಕತೆಯ ಪ್ಲೇಟೊನ ಬರಹಗಳಲ್ಲಿ ಈ ಶಹರದ ಸಂಪತ್ತಿನ ವರ್ಣನೆ ಇದೆ. ಜಗತ್ತಿನಲ್ಲಿ ಈಜಿಪ್ಟ್‌ನ ಪಿರಮಿಡ್‌ಗಳಿಗಿಂತ ಹಳೆಯದಾದ 9500 ವರ್ಷಗಳ ಹಿಂದಿನ ಕಟ್ಟಿಗೆಯಿಂದ ಮಾಡಿದ ‘ದೊಡ್ಡ ಶಿಗಿರ್’ ಎಂಬ ಕಲಾಕೃತಿ ಸಂರಕ್ಷಿಸಿ ಇಡಲಾಗಿದೆ. ಮಾನವ ಜನಾಂಗದಲ್ಲಿಯೇ ಅತ್ಯಂತ ಪುರಾತನವಾದದ್ದು ಎಂದು ರೇಡಿಯೊ ಕಾರ್ಬನ್ ವಿಶ್ಲೇಷಣೆಗೆ ಒಳಪಡಿಸಿದಾಗ ತಿಳಿದು ಬಂದಿದೆ.

ರಷ್ಯಾದ ಔದ್ಯಮಿಕ ಕ್ರಾಂತಿಗೆ ಭದ್ರ ಬುನಾದಿ ಹಾಕಿದ ಪಟ್ಟಣ ಇದು. ಇಲ್ಲಿನ ಕುಲುಮೆಗಳಲ್ಲಿ ತಯಾರಾದ ಕಬ್ಬಿಣವು ತನ್ನ ಉತ್ಕಷ್ಠ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ಪ್ಯಾರಿಸ್‌ನಲ್ಲಿರುವ ವಿಶ್ವವಿಖ್ಯಾತ ಐಫೆಲ್ ಟವರ್, ಲಂಡನ್‍ನ ಪಾರ್ಲಿಮೆಂಟ್ ಭವನ ಮತ್ತು ಅಮೆರಿಕದ ಸ್ವಾತಂತ್ರದ ಪ್ರತಿಮೆ(ಸ್ಟ್ಯಾಚ್ಯು ಆಫ್ ಲಿಬರ್ಟಿ)ಯಲ್ಲಿ ಈ ಕಬ್ಬಿಣ ಬಳಕೆಯಾಗಿದ್ದು, ಈ ಶಹರದ ಮಹತ್ವವನ್ನು ಸೂಚಿಸುತ್ತದೆ.

ಜಗತ್ತಿನಲ್ಲಿಯೇ ಹೆಸರುವಾಸಿಯಾದ, 7000 ಕಿ.ಮೀ ದೂರ ಕ್ರಮಿಸುವ ಟ್ರಾನ್ಸ್ ಸೈಬೀರಿಯನ್ ರೈಲು ಇದೆ. ಇದು ಯುರೋಪ್ ಖಂಡವನ್ನು ದಾಟಿ ಎಕತರಿನಬರ್ಗ್‌ ಮೂಲಕ ಏಷ್ಯಾ ಖಂಡ ಪ್ರವೇಶಿಸುತ್ತದೆ. ವಿಶ್ವಸಂಸ್ಥೆಯು ಈ ಶಹರವನ್ನು ಜಗತ್ತಿನ 12 ಮಾದರಿ ನಗರಗಳಲ್ಲಿ ಒಂದಾಗಿ ಗುರುತಿಸಿದೆ.

ಈ ನಗರದಲ್ಲಿ ಒಮ್ಮೆ ಹಸಿರನ್ನು ನಾಶಪಡಿಸಿ ಚರ್ಚ್ ನಿರ್ಮಿಸುವುದನ್ನು ವಿರೋಧಿಸಿದ ಆಂದೋಲನ ನಡೆಯಿತು. ಆ ಆಂದೋಲನದ ಕಾರ್ಯಕರ್ತ ವ್ಲಾಡಿಮೀರ್‌, ಆ ದಿನಗಳ ಹೋರಾಟದ ವೀಡಿಯೊ ತೋರಿಸಿದ. ಸಾವಿರಾರು ಜನರು ಸರ್ಕಾರ ಮತ್ತು ಧರ್ಮದ ಬಲವನ್ನು ಹಿಮ್ಮೆಟ್ಟಿಸಿ ನಗರದ ಹಸಿರನ್ನು ಕಾಪಾಡಿದರು ಎಂಬುದನ್ನು ಹೇಳಿದ. ಆಗ ನಮ್ಮ ಅಪ್ಪಿಕೊ ಚಳವಳಿ, ಬೆಂಗಳೂರಿನಲ್ಲಿ ಕಬ್ಬಿಣದ ಸೇತುವೆ ನಿರ್ಮಾಣಕ್ಕಾಗಿ ಹಸಿರು ನಾಶ ಪಡಿಸುವುದನ್ನು ವಿರೋಧಿಸಿದ ಹೋರಾಟದ ನೆನಪಾಯಿತು. ಹಸಿರನ್ನು ಸಂರಕ್ಷಿಸುವ ಬದಲು, ಅದನ್ನು ನಾಶಪಡಿಸುವುದಕ್ಕೇ ಆದ್ಯತೆ ನೀಡುವ ವಿಷಯದಲ್ಲಿ ವಿಶ್ವದ ಯಾವುದೇ ಭಾಗದಲ್ಲಿರುವ ಸರ್ಕಾರ ಮತ್ತು ರಾಜಕಾರಿಣಿಗಳೆಲ್ಲ ಒಂದೇ ರೀತಿ ಕಾಣುತ್ತಾರೆ.

ಪುರಾತನ ಇತಿಹಾಸವಿರುವ, ಆಧುನಿಕ ರಷ್ಯಾ ಕ್ರಾಂತಿಗೆ ಸಾಕ್ಷಿಯಾದ, ಹಸಿರಿನ ಮಧ್ಯೆ ಕಂಗೊಳಿಸುವ ಎಕತರಿನಬರ್ಗ್‌ಗೆ ಪ್ರವಾಸಿಗರು ಭೇಟಿ ನೀಡುವದು ವಿರಳ. ಆದರೂ ನನ್ನ ರಷ್ಯಾ ಪ್ರವಾಸದ ಪ್ರವೇಶಕ್ಕೆ ನಾಂದಿ ಹಾಡಿದ ಈ ನಗರವನ್ನು ನೆನಪನ್ನು ಮರೆಯಲು ಆದೀತೆ?

ತಲುಪುವುದು ಹೇಗೆ?

ದೆಹಲಿಯಿಂದ ಏರ್ ಆಸ್ತಾನಾದಲ್ಲಿ ಎಕತರಿನಬರ್ಗ್‌ವರೆಗೆ ತಲುಪಬಹುದು. ದೆಹಲಿಯಿಂದ ಮಾಸ್ಕೊಗೆ ನೇರವಾಗಿ ವಿಮಾನ ಹಾರಾಟವಿದೆ. ಅಲ್ಲಿಂದ ಎರಡು ತಾಸು ವಿಮಾನದಲ್ಲಿ ಇಲ್ಲವೇ ಒಂದು ದಿನ ರೈಲಿನ ಪ್ರಯಾಣ ಮಾಡಿ ರಷ್ಯಾದ ಪಕೃತಿ ಸೌಂದರ್ಯವನ್ನು ಸವಿದು ಎಕತರಿನಬರ್ಗ್‌ ತಲುಪಲು ಸಾಧ್ಯ.

ವರ್ಷದ ಆರು ತಿಂಗಳು ಹಿಮದಿಂದ ಆವೃತವಾಗಿರುವದರಿಂದ, ಜೂನ್, ಜುಲೈ, ಆಗಸ್ಟ್ ಸಮಯದಲ್ಲಿ ಇಲ್ಲಿಗೆ ಬರುವುದು ಸ್ವಲ್ಪ ಕಷ್ಟ. ವಸತಿಗೆ ದುಬಾರಿ ಹೋಟೆಲ್‌ ಮತ್ತು ಉತ್ತಮವಾಗಿರುವ ಲಾಡ್ಜ್‌ಗಳು ಲಭ್ಯವಿವೆ. ಭಾರತೀಯರಿಯರಿಗೆ ಸೋವಿ ಎನಿಸುವ ಹಾಗಿದೆ ಹೋಟೆಲ್ ದರಗಳು. ಭಾರತೀಯ ಊಟ ಸಿಗುವುದಿಲ್ಲ. ಸಸ್ಯಹಾರಿ ಭೋಜನಾಲಯ ಒಂದೇ ಒಂದು ಇದೆ.

ಇಡೀ ನಗರವನ್ನು ನಡೆದಾಡುತ್ತಲೇ ನೋಡಬಹುದು. ಆದರೂ ಇಲ್ಲಿನ ಮೆಟ್ರೊ, ಟ್ರಾಮ್‌ಗಳಲ್ಲಿ ಸಂಚರಿಸಿ ಪ್ರವಾಸಿ ಸ್ಥಳಗಳನ್ನು ನೋಡಲು ಅವಕಾಶವಿದೆ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.