ADVERTISEMENT

ಹೋರಾಟ ನಡೆಯದಿದ್ದರೆ ಪ್ರಜಾತಂತ್ರಕ್ಕೆ ಧಕ್ಕೆ

ಸುದ್ದಿಗೋಷ್ಠಿಯಲ್ಲಿ ನೀರಾವರಿ ಹೋರಾಟಗಾರ ಎಂ.ಜಿ.ಪ್ರಭಾಕರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 11:51 IST
Last Updated 28 ಏಪ್ರಿಲ್ 2018, 11:51 IST

ಕೋಲಾರ: ‘ಜಿಲ್ಲೆಯ ನೀರು ಮತ್ತು ನಿರುದ್ಯೋಗ ಸಮಸ್ಯೆ ಬಗ್ಗೆ ಜನ ಪ್ರಶ್ನೆ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಗೆ ಎದುರಾಗಿರುವ ಅಪಾಯದ ಬಗ್ಗೆ ಹೋರಾಟ ನಡೆಯದಿದ್ದರೆ ಪ್ರಜಾತಂತ್ರಕ್ಕೆ ಧಕ್ಕೆಯಾಗುತ್ತದೆ’ ಎಂದು ನೀರಾವರಿ ಹೋರಾಟಗಾರ ಎಂ.ಜಿ.ಪ್ರಭಾಕರ್ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಚುನಾವಣೆಯಲ್ಲಿ ಯಾವ ವ್ಯಕ್ತಿ ಗೆಲ್ಲುತ್ತಾನೋ ಆತನಿಗೆ ಜವಾಬ್ದಾರಿ ಇರುತ್ತದೆ. ಜನಪ್ರತಿನಿಧಿಗಳು ಐದು ವರ್ಷಗಳ ಕಾಲ ವರ್ಷದ 365 ದಿನವೂ ಜನರಿಗೆ ಉತ್ತರದಾಯಿಯಾಗಿರುತ್ತಾರೆ’ ಎಂದರು.

‘ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಎಂಬುದು ಪ್ರಜಾಪ್ರಭುತ್ವದ ಅರ್ಥ. ಮತದಾನ ಎಂದರೆ ಮತವನ್ನು ದಾನ ಮಾಡುವುದಲ್ಲ, ಮತದಾರ ತನ್ನ ಹಕ್ಕು ಚಲಾಯಿಸುವುದು. ಜಿಲ್ಲೆಯಲ್ಲಿ ಜನಪ್ರತಿನಿಧಿಗಳು ಏನು ಮಾಡಿದ್ದಾರೆ ಎಂಬುದನ್ನು ಚರ್ಚಿಸುವ ಬದಲು ಜಾತಿ ಲೆಕ್ಕಾಚಾರ, ಹಣ, ಎಷ್ಟು ಆಸ್ತಿವಂತರು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ’ ಎಂದು ವಿಷಾದಿಸಿದರು.

ADVERTISEMENT

ನೀರು ತರಲು ಆಗಿಲ್ಲ: ‘ಭ್ರಷ್ಟಾಚಾರ ಕುರಿತು ಎಲ್ಲರೂ ಮಾತನಾಡುತ್ತಾರೆ. ಆದರೆ, ಜನರ ಬದುಕಿನ ಬಗ್ಗೆ ಯಾರೂ ಮಾತನಾಡುವುದಿಲ್ಲ. ಇಷ್ಟು ವರ್ಷಗಳಿಂದ ಕೋಟಿ ಕೋಟಿ ಖರ್ಚು ಮಾಡಿ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಗುಟುಕು ನೀರು ತರಲು ಆಗಿಲ್ಲ. ರಾಜಕೀಯ ಪಕ್ಷಗಳು ಜನರ ನೈಜ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತಿಲ್ಲ. ಈ ಅಂಶಗಳ ಕುರಿತು ಸಂಘಟನೆಯು ಜನರ ಮುಂದೆ ಪ್ರಣಾಳಿಕೆ ಇಡುತ್ತದೆ’ ಎಂದು ಡಿವೈಎಫ್‍ಐ ಜಿಲ್ಲಾ ಸಮಿತಿ ಸದಸ್ಯ ವೆಂಕಟಾಚಲಪತಿ ಹೇಳಿದರು.

‘ನೀರು ಮತ್ತು ನಿರುದ್ಯೋಗ ಸಮಸ್ಯೆ ಮುಂದಿಟ್ಟುಕೊಂಡು ಜನರತ್ತ ಹೊರಟಿದ್ದೇವೆ. ಜನರನ್ನು ಹೋರಾಟಕ್ಕೆ ಸಜ್ಜುಗೊಳಿಸುತ್ತೇವೆ. ಅಭಿಪ್ರಾಯ ರೂಪಿಸಿ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಯೋಜನೆ ರೂಪಿಸಿದ್ದೇವೆ’ ಎಂದು ವಿವರಿಸಿದರು.

ಚರ್ಚೆಗೆ ಕರೆಯುತ್ತೇವೆ: ‘ಮುಳಬಾಗಿಲಿನಲ್ಲಿ ನಡೆದ ಸಮಾವೇಶದಲ್ಲಿ ವ್ಯಕ್ತವಾದ ಅಭಿಪ್ರಾಯ ಕ್ರೂಢೀಕರಿಸಿ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ. ಪ್ರಣಾಳಿಕೆಯನ್ನು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಮುಂದಿಟ್ಟು ಬಹಿರಂಗ ಚರ್ಚೆಗೆ ಕರೆಯುತ್ತೇವೆ. ಚರ್ಚೆಗೆ ಬರದಿದ್ದರೆ ಆ ಅಭ್ಯರ್ಥಿಯ ಮನೆ ಅಥವಾ ಪಕ್ಷದ ಕಚೇರಿ ಎದುರು ಒಂದು ದಿನ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ. ಚುನಾವಣೆ ನಂತರ ಹೋರಾಟ ತೀವ್ರಗೊಳಿಸುತ್ತೇವೆ’ ಎಂದು ಡಿವೈಎಫ್‍ಐ ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ವಾಸುದೇವರೆಡ್ಡಿ ಹೇಳಿದರು.

‘ನೀರಾವರಿ ತಜ್ಞ ಪರಮಶಿವಯ್ಯ ವರದಿ ಅನ್ವಯ ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕು. ನೀರಾವರಿ ಯೋಜನೆ ಜಾರಿಗೆ ಬಜೆಟ್‌ನಲ್ಲಿ ₹ 25 ಸಾವಿರ ಕೋಟಿ ಮೀಸಲಿಡಬೇಕು. ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೃಷಿ ಆಧಾರಿತ ಕೈಗಾರಿಕೆ, ಸಿದ್ಧ ಉಡುಪು ಕಾರ್ಖಾನೆ ತೆರೆದು ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಡಿವೈಎಫ್‍ಐ ಜಿಲ್ಲಾ ಸಮಿತಿ ಸದಸ್ಯರಾದ ಡಿ.ಎಸ್.ವೆಂಕಟಾಚಲಪತಿ, ನರೇಶ್‌ಬಾಬು, ಲೋಕೇಶ್, ಎ.ಆರ್.ಸತೀಶ್‌ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.