ADVERTISEMENT

ಭಾರತೀಯ ವೃತ್ತಿಪರರಿಗೆ ವಿಪುಲ ಅವಕಾಶ

ಬ್ರಿಟನ್‌ ವೀಸಾ ನಿಯಮ ಸರಳ

ಪಿಟಿಐ
Published 16 ಜೂನ್ 2018, 18:54 IST
Last Updated 16 ಜೂನ್ 2018, 18:54 IST
ಭಾರತೀಯ ವೃತ್ತಿಪರರಿಗೆ ವಿಪುಲ ಅವಕಾಶ
ಭಾರತೀಯ ವೃತ್ತಿಪರರಿಗೆ ವಿಪುಲ ಅವಕಾಶ   

ಲಂಡನ್‌:  ಬ್ರಿಟನ್‌ ಸರ್ಕಾರವು ತನ್ನ ವಲಸೆ ನೀತಿಯಲ್ಲಿ ಹಲವು ಬದಲಾವಣೆ ಮಾಡಿಕೊಂಡಿದೆ. ಸಂಸತ್‌ನಲ್ಲಿ ಈ ಕುರಿತ ಮಸೂದೆ ಮಂಡಿಸಿದ್ದು, ವೀಸಾ ಪಡೆಯಲು ಇದ್ದ ಮಿತಿಯನ್ನು ಸಡಿಲಿಸಿದೆ. ಇದರಿಂದ ಭಾರತದಂತಹ ದೇಶಗಳ ವೃತ್ತಿಪರರಿಗೆ ಅನುಕೂಲವಾಗಲಿದೆ.

ದೇಶಕ್ಕೆ ವಲಸೆ ಬರುವ ವೃತ್ತಿಪರರ ಸಂಖ್ಯೆಯನ್ನು ಪರಿಶೀಲನೆಗೆ ಒಳಪಡಿಸುವಾಗ ಸ್ವತಂತ್ರ ವಲಸೆ ಸಲಹಾ ಸಮಿತಿಯ ಸಲಹೆ ಪಡೆಯುವುದಾಗಿ ಬ್ರಿಟನ್‌ ಸರ್ಕಾರ ಹೇಳಿದೆ. ಸಹಜವಾಗಿ, ಬ್ರಿಟನ್‌ಗೆ ಹೆಚ್ಚಿನ ಸಂಖ್ಯೆಯ ವೃತ್ತಿಪರರು ವಲಸೆ ಬರಲು ಈ ಸಡಿಲಿಕೆ ಅನುಕೂಲ ಕಲ್ಪಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

‘ಐರೋಪ್ಯ ಒಕ್ಕೂಟ ಹೊರತುಪಡಿಸಿ ಉಳಿದ ದೇಶಗಳ ವೈದ್ಯರು ಮತ್ತು ಶುಶ್ರೂಷಕರನ್ನು ಟೈರ್‌ 2 (ಸಾಮಾನ್ಯ) ವೀಸಾ ಮಿತಿಯಿಂದ ಮುಕ್ತಗೊಳಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಎಚ್‌ಎಸ್‌) ಅನುಷ್ಠಾನದಲ್ಲಿ ಎದುರಾಗುತ್ತಿರುವ ಸಿಬ್ಬಂದಿ ಕೊರತೆ ನಿವಾರಿಸಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಬ್ರಿಟನ್‌ ಸಂಸತ್‌ ಪ್ರಕಟಣೆ ತಿಳಿಸಿದೆ.

ADVERTISEMENT

ವಿದ್ಯಾರ್ಥಿ ವೀಸಾ ಕಠಿಣ

ಭಾರತೀಯ ವಿದ್ಯಾರ್ಥಿಗಳು ವೀಸಾ ಪಡೆಯುವುದನ್ನು ಬ್ರಿಟನ್ ಸರ್ಕಾರ ಕಠಿಣಗೊಳಿಸಿದೆ.

ಸರಳವಾಗಿ ವೀಸಾ ನೀಡಬಹುದಾದ ದೇಶಗಳ ಪಟ್ಟಿಯಿಂದ ಭಾರತದ ಹೆಸರನ್ನು ಬ್ರಿಟನ್‌ ತೆಗೆದು ಹಾಕಿದ್ದು, ಇಂಗ್ಲೆಂಡ್‌ನ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳುವ ಭಾರತದ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗಲಿದೆ.

ಅಮೆರಿಕ, ಕೆನಡಾ, ನ್ಯೂಜಿಲೆಂಡ್‌ ಅಲ್ಲದೆ, ಚೀನಾ, ಬಹರೇನ್‌, ಸರ್ಬಿಯಾ ಸೇರಿ, 25 ರಾಷ್ಟ್ರಗಳು ಸುಲಭವಾಗಿ ವೀಸಾ ನೀಡಬಹುದಾದ ದೇಶಗಳ ಪಟ್ಟಿಯಲ್ಲಿವೆ. ಈ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ಬ್ರಿಟನ್‌ ವಿಶ್ವವಿದ್ಯಾಲಯಗಳಲ್ಲಿ ಓದಲು ಶೈಕ್ಷಣಿಕ, ಆರ್ಥಿಕ ಹಾಗೂ ಇಂಗ್ಲಿಷ್‌ ಭಾಷಾ ಕೌಶಲದ ಅಗತ್ಯಗಳಲ್ಲಿ ಸಡಿಲಿಕೆ ನೀಡಲಾಗಿದೆ. ಆದರೆ, ನಿರ್ದಿಷ್ಟ ಕೋರ್ಸ್‌ ಓದಬಯಸುವ ಭಾರತೀಯ ವಿದ್ಯಾರ್ಥಿಗಳು, ಈ 25 ದೇಶಗಳ ವಿದ್ಯಾರ್ಥಿಗಳಿಗಿಂತ ಹೆಚ್ಚು ಪರಿಶೀಲನೆಗೆ ಒಳಗಾಗಬೇಕಾಗುತ್ತದೆ. ಜುಲೈ 6ರಿಂದ ಈ ಬದಲಾವಣೆ ಜಾರಿಗೆ ಬರಲಿದೆ.

‘ಬ್ರಿಟನ್‌ನ ಈ ಕ್ರಮವು ಭಾರತಕ್ಕೆ ಮಾಡಿದ ಅವಮಾನವಾಗಿದೆ. ಅಲ್ಲದೆ, ಇದು ಆ ದೇಶದ ನಾಯಕರ ಆರ್ಥಿಕ ಅನಕ್ಷರತೆಯನ್ನು ತೋರಿಸುತ್ತದೆ’ ಎಂದು ಭಾರತೀಯ ಮೂಲದ ಉದ್ಯಮಿ ಹಾಗೂ ಅಂತರರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಇಂಗ್ಲೆಂಡ್‌ ಮಂಡಳಿ ಅಧ್ಯಕ್ಷ ಲಾರ್ಡ್‌ ಕರನ್‌ ಬಿಲಿಮೊರಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.