ADVERTISEMENT

ಮನೆಯೊಳಗೇ ಇದೆ ಸಂತಸದ ಸಮಯ

ಅಮೃತ ಕಿರಣ ಬಿ.ಎಂ.
Published 15 ಜನವರಿ 2021, 19:30 IST
Last Updated 15 ಜನವರಿ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾರಾಂತ್ಯ ಬಂದರೆ ಸಾಕು, ಮನೆ ಸ್ವಚ್ಛ ಮಾಡುವುದು, ಬಟ್ಟೆ ಒಗೆಯಲು ಹಾಕುವುದು, ಅಡುಗೆ ಮನೆಯಲ್ಲಿ ಡಬ್ಬಿಗಳನ್ನು ಆಚೆ– ಈಚೆ ಸರಿಸಿ ಇಡುವುದು, ಫ್ರಿಜ್‌ ಶುದ್ಧ ಮಾಡುವುದು, ಒಗೆದ ಉಡುಪುಗಳಿಗೆ ಇಸ್ತ್ರಿ ಹಾಕುವುದು... ಕೆಲಸ ಮುಗಿಯುವುದೇ ಇಲ್ಲ. ಈಗ ಮನೆಯೊಳಗೇ ಇದ್ದರೂ ಕೂಡ ಇವುಗಳನ್ನು ಮಾಡಲು ಕೊಂಚ ಬೇಸರವೇ. ಆದರೆ ಮನೆಯೆಂದರೆ ನಮ್ಮ ಮನಃಸ್ಥಿತಿಗೆ ಹಿಡಿದ ಕೈಗನ್ನಡಿಯಂತೆ. ನಾಲ್ಕು ಗೋಡೆಯ ಮಧ್ಯೆ ನಾವು ಮಾಡುವ ಕೆಲಸ ನಮ್ಮ ಭಾವನೆಗಳ ಏರಿಳಿತಕ್ಕೆ ಕಾರಣವಾಗುವುದಲ್ಲದೇ, ನಮ್ಮ ಉತ್ಪಾದಕತೆಯ ಮೇಲೆಯೂ ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞರು. ಹಾಗೆಯೇ ಬದುಕಿನ ಕುರಿತ ನಮ್ಮ ಧೋರಣೆಯ ಮೇಲೂ ಪ್ರಭಾವ ಬೀರುತ್ತದೆ. ಹೀಗಾಗಿ ನಿತ್ಯದ ಕೆಲಸಗಳನ್ನು ಬೇಸರವಿಲ್ಲದೆ ಮಾಡುತ್ತ ಹೋದರೆ ಮನಸ್ಸೂ ಪ್ರಫುಲ್ಲವಾಗುತ್ತದೆ.

* ಬೆಳಿಗ್ಗೆ ಎದ್ದ ಕೂಡಲೇ ಮಾಡುವ ಕೆಲಸ ಯಾವುದೆಂದು ಹತ್ತು ಜನರನ್ನು ಕೇಳಿದರೆ ಹತ್ತು ತರಹದ ಉತ್ತರಗಳೇ ಬರಬಹುದು. ಆದರೆ ಮುಂಜಾನೆ ಹಾಸಿಗೆ– ಹೊದಿಕೆಯನ್ನು ಸರಿಪಡಿಸಿ ಇಡುವ ಸರಳವಾದ 2–3 ನಿಮಿಷಗಳ ಕೆಲಸ ಮನಸ್ಸಿಗೆ ಖುಷಿ ನೀಡುವುದಲ್ಲದೇ ಇಡೀ ದಿನ ಮನಸ್ಸು ಆಹ್ಲಾದಕರವಾಗಿರುವಂತೆ ಮಾಡುತ್ತದೆ.

* ಮನೆಯ ಎಲ್ಲಾ ಕೊಠಡಿಗಳನ್ನು ಯಾವುದೇ ಅವ್ಯವಸ್ಥೆ ಇಲ್ಲದೇ ಸರಿಯಾಗಿ ಇಟ್ಟುಕೊಳ್ಳುವುದೂ ಒಂದು ಕಲೆ. ಎಲ್ಲಾ ವಸ್ತುಗಳು ಹರಡಿಕೊಂಡಿದ್ದರೆ ಕಿರಿಕಿರಿಯಾಗಿ ಒತ್ತಡ ಎನಿಸುವುದು ನಿಶ್ಚಿತ. ಹೀಗಾಗಿ ಮನಸ್ಸಿಗೆ ಸಂತಸ ನೀಡುವ ಕೆಲಸವೆಂದರೆ ಎಲ್ಲವನ್ನೂ ಸರಿಪಡಿಸಿ ಸುವ್ಯವಸ್ಥಿತ ರೀತಿಯಲ್ಲಿ ಇಡುವುದು. ಇದಕ್ಕೆ ತಗಲುವ ಸಮಯವೂ ಹೆಚ್ಚೆಂದರೆ ಐದು ನಿಮಿಷಗಳು. ಪದೇ ಪದೇ ವಸ್ತುಗಳನ್ನು ಹರಡಿ ಸಿಟ್ಟು ಬರಿಸುವ ತುಂಟ ಮಕ್ಕಳಿಲ್ಲದಿದ್ದರೆ ಈ ನಿತ್ಯದ ಕೆಲಸವೂ ಸುಲಭವೇ.

ADVERTISEMENT

* ಮನೆಯಲ್ಲಿ ಐಷಾರಾಮಿ ವಸ್ತುಗಳನ್ನು ತಂದಿಟ್ಟುಕೊಳ್ಳುವ ಬದಲು ನಿಮ್ಮ ಸಿಹಿ ನೆನಪುಗಳನ್ನು ಮರಳಿಸುವಂತಹ ಸ್ಮರಣಿಕೆಗಳನ್ನು ಇಟ್ಟುಕೊಳ್ಳಬಹುದು. ಟೇಬಲ್‌, ಟಿವಿ ಸ್ಟ್ಯಾಂಡ್‌, ಗೋಡೆಯ ಮೇಲೆ ಇಂತಹ ಹಳೆಯ ಅನುಭವಗಳು, ನೆನಪುಗಳನ್ನು ಮೆಲುಕು ಹಾಕುವಂತಹ ಸ್ಮರಣಿಕೆಗಳನ್ನು ಇರಿಸಿಕೊಳ್ಳಿ.

* ಕೆಲವರಿಗೆ ಮನೆ ಸ್ವಚ್ಛ ಮಾಡುವುದು, ಪಾತ್ರೆ ತೊಳೆಯುವುದು ಖುಷಿ ನೀಡುವ ಕ್ಷಣಗಳು. ನಳದಿಂದ ಹರಿಯುವ ನೀರಿನಡಿ ಕೊಳೆಯಾದ ಪಾತ್ರೆಗಳನ್ನು ಹಿಡಿದು ಸ್ವಚ್ಛಗೊಳಿಸಿ, ಅದನ್ನು ಒರೆಸಿ, ಓರಣವಾಗಿ ಜೋಡಿಸಿಡುವುದು ಒಂದು ರೀತಿಯ ಮುದ ನೀಡುತ್ತದೆ. ಪಾತ್ರೆ ತೊಳೆಯುವ ಸಂದರ್ಭ ನಿಮ್ಮ ಇಷ್ಟವಾದ ಸಂಗೀತಕ್ಕೂ ಕಿವಿಗೊಡಬಹುದು.

* ಮನೆಯಲ್ಲಿರುವವರಿಗೆ ಸಹಾಯ ಮಾಡುವುದೂ ಖುಷಿ ಕೊಡುವ ಕೆಲಸ. ಅಡುಗೆ ಮಾಡುವಾಗ ಪತ್ನಿಗೆ ತರಕಾರಿ ಹೆಚ್ಚಿ ಕೊಡುವುದು, ಕಸದ ವಿಲೇವಾರಿ ಮಾಡುವುದು, ಉಡುಪುಗಳನ್ನು ಜೋಡಿಸಿ ಇಡುವುದು... ಇವೆಲ್ಲ ಕುಟುಂಬದ ಸದಸ್ಯರ ಮಧ್ಯೆ ಪರಸ್ಪರ ಸಂಬಂಧವನ್ನೂ ಗಟ್ಟಿಗೊಳಿಸುತ್ತವೆ.

* ನಿತ್ಯ ಒಬ್ಬ ಸ್ನೇಹಿತನಿಗೆ/ ಸ್ನೇಹಿತೆಗೆ ಅಥವಾ ಸಂಬಂಧಿಕರಿಗೆ ಅಥವಾ ದೂರದಲ್ಲಿರುವ ಕುಟುಂಬದ ಸದಸ್ಯರಿಗೆ ಫೋನ್‌ ಮಾಡಿ ಮಾತನಾಡಿ. ಮೆಸೇಜ್‌ ಮಾಡುವುದರಿಂದ ಪರಸ್ಪರ ಒಳ್ಳೆಯ ಸಂವಹನ ಸಾಧ್ಯವಿಲ್ಲ. ಹೀಗಾಗಿ ವಾಕಿಂಗ್‌ ಹೋಗುವಾಗ ಅಥವಾ ಊಟದ ನಂತರ ವಿಶ್ರಮಿಸುವಾಗ ಒಂದೈದು ನಿಮಿಷ ಮಾತನಾಡಿ, ಕುಶಲೋಪರಿ ವಿಚಾರಿಸಿ. ಹರಟೆ ಹೊಡೆಯಿರಿ. ಇದರಿಂದ ಮನಸ್ಸು ನಿರಾಳವಾಗುತ್ತದೆ.

*ಮಲಗುವ ಮೊದಲು ಮಾಡುವ ಕೆಲಸ ಏನು ಎಂದು ಕೇಳಿ ನೋಡಿ– ಟಿವಿ ನೋಡುವುದು, ಮೊಬೈಲ್‌ನಲ್ಲಿ ಸಾಮಾಜಿಕ ಜಾಲತಾಣ, ವಾಟ್ಸ್‌ಆ್ಯಪ್‌ ನೋಡುವುದು... ಎಂದು ಹಲವರು ಉತ್ತರಿಸಬಹುದು. ಆದರೆ ಅಂದು ನೀವು ಅನುಭವಿಸಿದಂತಹ ಖುಷಿಯ ಕ್ಷಣಗಳನ್ನು ನೆನಪು ಮಾಡಿಕೊಳ್ಳುವುದರಿಂದ ರಾತ್ರಿ ಚೆನ್ನಾಗಿ ನಿದ್ರೆ ಬರುತ್ತದೆ ಎನ್ನುತ್ತಾರೆ ತಜ್ಞರು. ಸಣ್ಣ ನೋಟ್‌ಬುಕ್‌ನಲ್ಲಿ ಈ ಘಟನೆಗಳನ್ನು ಒಂದೆರಡು ವಾಕ್ಯದಲ್ಲಿ ಬರೆದಿಟ್ಟು ಮಲಗಬಹುದು; ಯಾವತ್ತಾದರೂ ಸಮಯವಿದ್ದಾಗ ಇದನ್ನು ಓದಿ ಪುಳಕಗೊಳ್ಳಬಹುದು.

*ದಿನದ ಕೊನೆಗೆ ಒಂದಿಷ್ಟು ಸಮಯ ಏಕಾಂತದಲ್ಲಿ ಕಳೆಯುವುದು ಕೂಡ ಖುಷಿ ಕೊಡುತ್ತದೆ. ಟೆರೇಸ್‌ ಮೇಲೆ ಅಥವಾ ಮನೆಯ ಮುಂದೆ ಜಾಗ ಇದ್ದರೆ ಹತ್ತಾರು ಹೆಜ್ಜೆ ಓಡಾಡಿ. ಒಳ್ಳೆಯ ಪುಸ್ತಕ ಓದಿ. ಬರವಣಿಗೆಯ ಹವ್ಯಾಸ ಇದ್ದರೆ ಒಂದೆರಡು ಪುಟ ಬರೆಯಲು ಯತ್ನಿಸಿ. ಕೈಕಾಲಿಗೆ ತೈಲದಿಂದ ಮಸಾಜ್‌ ಮಾಡಿಕೊಂಡು ಬಿಸಿ ನೀರು ಹಾಕಿಕೊಂಡರೆ ಆಹ್ಲಾದವೆನಿಸುತ್ತದೆ. ಒಟ್ಟಿನಲ್ಲಿ ಖುಷಿಯಿಂದ ದಿನ ಕಳೆಯುವುದು ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.