ADVERTISEMENT

ಮನೆಯ ಅಲಂಕಾರವೂ, ಮನದ ಉಲ್ಲಾಸವೂ

ರೇಷ್ಮಾ
Published 2 ಡಿಸೆಂಬರ್ 2020, 19:30 IST
Last Updated 2 ಡಿಸೆಂಬರ್ 2020, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೋವಿಡ್‌–19ನಿಂದಾಗಿ ಕಳೆದ ಏಳೆಂಟು ತಿಂಗಳುಗಳಿಂದ ಹೆಚ್ಚುಕಡಿಮೆ ಮನೆಯೊಳಗೇ ಇದ್ದು ಪ್ರತಿದಿನ ಒಂದೇ ರೀತಿಯ ವಾತಾವರಣ ಹಾಗೂ ಒಳಗಿನ ಪರಿಸರ ನೋಡಿ ಮನಸ್ಸು ಬೇಸತ್ತಿರುತ್ತದೆ. ಅದೇ ಸೋಫಾ, ಬೆಡ್‌, ಕೋಣೆ, ಪೀಠೋಪಕರಣಗಳು, ಕರ್ಟನ್‌, ಅಡುಗೆಕೋಣೆಯ ಕಮಟು ವಾಸನೆ.. ಇವು ಮನಸ್ಸಿನಲ್ಲಿ ರೇಜಿಗೆ ಹುಟ್ಟಿಸಿರಬಹುದು. ಈ ರೀತಿ ಜಡ್ಡು ಹಿಡಿದಿರುವ ಮನಸ್ಸು ಉಲ್ಲಾಸದಿಂದ ಇರಬೇಕು ಎಂದರೆ ಮನೆಯ ಒಳಾಂಗಣ ಪರಿಸರದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎನ್ನುತ್ತಾರೆ ಮನಶ್ಶಾಸ್ತ್ರಜ್ಞರು.

‘ಮನೆಯೊಳಗಿನ ಸಣ್ಣಪುಟ್ಟ ಬದಲಾವಣೆಯೂ ಮನಸ್ಸಿಗೆ ಖುಷಿ ನೀಡುವುದಲ್ಲದೇ ಮನಸ್ಸನ್ನು ಹೊಸ ಅನುಭವಕ್ಕೆ ತೆರೆದುಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೇ ನಕಾರಾತ್ಮಕ ಭಾವನೆಗಳು ಮನಸ್ಸಿನಲ್ಲಿ ಮೂಡುವುದನ್ನು ತಡೆಯಬಹುದು’ ಎನ್ನುತ್ತಾರೆ ಆಪ್ತಸಮಾಲೋಚಕಿ ಜಾಹ್ನವಿ ಕೆ.

‘ನೇಚರ್‌ ನ್ಯೂರೊಸೈನ್ಸ್’ ಎಂಬ ಆಂಗ್ಲ ನಿಯತಕಾಲಿಕೆ ನಡೆಸಿದ ಅಧ್ಯಯನದ ಪ್ರಕಾರ ದೈನಂದಿನ ಜೀವನಕ್ರಮದಲ್ಲಿ ಆಗುವ ಸಣ್ಣಪುಟ್ಟ ಬದಲಾವಣೆಗಳು ಮನುಷ್ಯನಿಗೆ ಹೆಚ್ಚು ಸಂತೋಷ ಸಿಗುವಂತೆ ಮಾಡುತ್ತವೆಯಂತೆ.

ADVERTISEMENT

ಮಲಗುವ ಕೋಣೆಯಲ್ಲಿ ಬದಲಾವಣೆ

ನಗರದ ಹಲವು ಮನೆಗಳಲ್ಲಿ ಮಲಗುವ ಕೋಣೆ ಹಾಗೂ ಕೆಲಸ ಮಾಡುವ ಸ್ಥಳ ಒಂದೇ ಆಗಿರುತ್ತದೆ. ಸ್ಥಳಾವಕಾಶದ ಕೊರತೆಯಿಂದ ಹಲವರು ಬೆಡ್‌ರೂಂ ಅನ್ನು ಕೆಲಸದ ಸ್ಥಳವನ್ನಾಗಿಯೂ ಪರಿವರ್ತಿಸಿಕೊಂಡಿರುತ್ತಾರೆ. ಅದು ಅನಿವಾರ್ಯ. ಅದೇ ನಾಲ್ಕು ಗೋಡೆಗಳ ಒಳಗೆ ಕುಳಿತು ಮನಸ್ಸು ಬೇಸರಗೊಂಡಿದ್ದರೆ 15 ದಿನಗಳಿಗೊಮ್ಮೆ ಬೆಡ್‌ಶೀಟ್‌, ಬೆಡ್‌ ಕವರ್ ಬದಲಿಸುವುದು, ಕರ್ಟನ್‌ ಬದಲಿಸುವುದು ಹೀಗೆ ಸಣ್ಣಪುಟ್ಟ ಬದಲಾವಣೆ ಮಾಡಿಕೊಳ್ಳುವ ಮೂಲಕ ಮನಸ್ಸಿಗೆ ಹೊಸತನ ಸಿಗುವಂತೆ ಮಾಡಬಹುದು.

ಜೊತೆಗೆ ಕೆಲಸ ಮಾಡುವ ಟೇಬಲ್ ಮೇಲೆ ಮೇಕಪ್‌ ಸಾಮಗ್ರಿಗಳು, ಕೆಲವೊಂದು ಅನಾವಶ್ಯಕ ವಸ್ತುಗಳನ್ನು ಇರಿಸಿಕೊಂಡು ಅದರ ನಡುವೆಯೇ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಇರಿಸಿ ಕೆಲಸ ಮಾಡುವುದು ಒಳ್ಳೆಯ ಅಭ್ಯಾಸವಲ್ಲ. ಆ ಕಾರಣಕ್ಕೆ ಸಮಯವಿದ್ದಾಗ ಟೇಬಲ್‌ ಅನ್ನು ಸ್ವಚ್ಛ ಮಾಡಿಕೊಳ್ಳಿ. ಕೆಲಸ ಮಾಡುವಾಗ ಯಾವುದೇ ಅಡೆತಡೆಗಳಿಲ್ಲದೇ ಆರಾಮಾಗಿ ಇರಿ.

ಲಿವಿಂಗ್‌ ಕೋಣೆಯನ್ನು ಮರುಜೋಡಿಸಿ

ಹಲವರಿಗೆ ಬೆಳಿಗ್ಗೆ ಎದ್ದ ಕೂಡಲೇ ಲಿವಿಂಗ್‌ ಕೋಣೆಯಲ್ಲಿರುವ ಆರಾಮ ಕುರ್ಚಿಯಲ್ಲಿ ಕುಳಿತು ಕಾಫಿ ಹೀರುವ ಅಭ್ಯಾಸ. ಈ ಅಭ್ಯಾಸ ಇನ್ನಷ್ಟು ಖುಷಿ ಕೊಡಬೇಕು ಎಂದರೆ ಆರಾಮ ಕುರ್ಚಿಯನ್ನು ಕೋಣೆಯ ದೊಡ್ಡ ಕಿಟಕಿಯ ಬಳಿ ಇರಿಸಿ. ಕಿಟಕಿಯ ಬಾಗಿಲು ತೆಗೆದಿರಲಿ. ಬಾಲ್ಕನಿ ಗಾರ್ಡನ್, ಹೊರಗಿನ ಸುಂದರ ನೋಟ ನೇರವಾಗಿ ಕಣ್ಣಿಗೆ ತಾಕುವಂತಿರಲಿ. ಸಾಧ್ಯವಾದರೆ ಕೆಲಸದ ಟೇಬಲ್‌ ಅನ್ನು ಕಿಟಕಿಯ ಬಳಿ ಇರಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಿ. ಇದರಿಂದ ಹೊರಗಿನ ಪರಿಸರದೊಂದಿಗೆ ನಮ್ಮ ನೋಟ ಹಾಗೂ ಮನಸ್ಸು ತೆರೆದುಕೊಂಡು ಮನಸ್ಸು ಉಲ್ಲಸಿತವಾಗಿರುತ್ತದೆ. ಒತ್ತಡವೂ ಕಡಿಮೆಯಾಗುತ್ತದೆ.

ಹೆಚ್ಚು ಸಮಯ ಕಳೆಯುವ ಜಾಗದ ಗೋಡೆಗೆ ಆಹ್ಲಾದಕರ ರಂಗನ್ನು ಬಳಿಯಿರಿ. ಗುಲಾಬಿ, ಕಿತ್ತಳೆ, ಕೆಂಪು ಬಣ್ಣ ಮನಸ್ಸಿನ ಖುಷಿಯನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ತಜ್ಞರು.

ಬೆಳಕಿರಲಿ

ಈಗ ಚಳಿಗಾಲ. ಹೊರಗಡೆಯೂ ಮಂಜು ಕವಿದ ವಾತಾವರಣವಿರುತ್ತದೆ. ಇದರಿಂದ ಮನೆಯೊಳಗೆ ನೇರವಾಗಿ ಬೆಳಕಿನ ಕಿರಣಗಳು ಬೀಳುವುದು ಕಡಿಮೆ. ಹಾಗಾಗಿ ಕರ್ಟನ್‌ಗಳನ್ನು ಸರಿಸಿ. ಸಾಧ್ಯವಾದಷ್ಟು ಮನೆಯೊಳಗೆ ನೇರವಾಗಿ ಬೆಳಕು ಬೀಳುವಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ಎಲ್‌ಇಡಿ ಬಲ್ಬ್‌ಗಳಿಂದ ಹಗಲಿನ ವೇಳೆ ಮನೆಯೊಳಗೆ ಬೆಳಕು ಹರಡಿರುವಂತೆ ನೋಡಿಕೊಳ್ಳಿ. ಬೆಳಕು ಮನಸ್ಸು ಕ್ರಿಯಾಶೀಲವಾಗಿ ಇರಲು ಸಹಾಯ ಮಾಡುತ್ತದೆ.

ಅಡುಗೆಕೋಣೆಯನ್ನು ಸರಿಪಡಿಸಿ

ಅಡುಗೆಕೋಣೆಯಲ್ಲಿ ನಾವು ಹೆಚ್ಚು ಸಮಯ ಕಳೆಯುವುದಿಲ್ಲ. ಆದರೆ ಮನಸ್ಸಿನ ಬೇಸರ ಕಳೆಯಲು ಅಡುಗೆಕೋಣೆಯನ್ನು ವ್ಯವಸಿತವಾಗಿ ಇರಿಸುವುದು ಮುಖ್ಯ. ಕೊಳೆತ ತರಕಾರಿ, ಕಮಟು ವಾಸನೆ ತಡೆಯಲು ರೂಮ್ ಪ್ರೆಷ್‌ನರ್‌ ಬಳಸಿ. ಕೆಲಸದ ಒತ್ತಡದ ನಡುವೆ ಹಲವರು ಅಡುಗೆಕೋಣೆಯ ಸ್ವಚ್ಛತೆಗೆ ಹೆಚ್ಚು ಗಮನ ನೀಡುವುದಿಲ್ಲ. ಆದರೆ ಪ್ರತಿದಿನ ಮನೆ ಗುಡಿಸುವುದು, ಒರೆಸುವುದು ಮಾಡಬೇಕು. ಮನೆಯೊಳಗೆ ತುಂಬಿರುವ ಕಸ-ಕಡ್ಡಿ, ದುರ್ವಾಸನೆ ಮನಸ್ಸನ್ನು ಒಂದೇ ಕಡೆ ಕೇಂದ್ರಿಕರಿಸಿ ಕೆಲಸ ಮಾಡುವುದಕ್ಕೆ ಅಡ್ಡಿಪಡಿಸುತ್ತವೆ ಎಂಬುದನ್ನು ಹಲವು ಅಧ್ಯಯನಗಳು ಸಾಬೀತುಪಡಿಸಿವೆ. ಆ ಕಾರಣಕ್ಕೆ ಎಲ್ಲವನ್ನೂ ಆಗಾಗ ಸ್ವಚ್ಛ ಮಾಡುವುದು ತುಂಬಾ ಅಗತ್ಯ. ಅದು ಕೆಲಸ ಮಾಡುವ ಸ್ಥಳ, ಅಡುಗೆಕೋಣೆ ಅಥವಾ ಮನೆಯ ಇತರ ಸ್ಥಳ ಯಾವುದೇ ಆಗಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.