ADVERTISEMENT

ಮನೆಯೆಂದ ಮೇಲೆ ನೀಟಾಗಿರಬೇಡವೇ? ಇಲ್ಲಿವೆ ಸರಳ ಸಲಹೆಗಳು!

ಪ್ರಜಾವಾಣಿ ವಿಶೇಷ
Published 6 ಆಗಸ್ಟ್ 2021, 19:30 IST
Last Updated 6 ಆಗಸ್ಟ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮನೆಯನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳುವುದೆಂದರೆ ಅದಕ್ಕೆ ಒಂದಿಷ್ಟು ಸಮಯ ಬೇಕು; ಅಪಾರ ಶ್ರಮವೂ ಬೇಕು. ಆದರೆ ಹಾಗಂತ ಅದಕ್ಕೆ ದೊಡ್ಡ ಯೋಜನೆ ಹಾಕಿಕೊಂಡು ಅದಕ್ಕೆಂದೇ ಒಂದು ದಿನ ಮೀಸಲಿಡಬೇಕಾಗಿಲ್ಲ. ಸಮಯದ ಅಭಾವವಿರುವವರು ಸಣ್ಣಪುಟ್ಟ ಕೆಲಸಗಳನ್ನು ಆಗಾಗ ಮಾಡುತ್ತಿದ್ದರೆ ಮನೆಯನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳಬಹುದು. ಇದರಿಂದ ಮನಸ್ಸಿಗೆ ತೃಪ್ತಿಯ ಭಾವವೂ ಸಿಗುತ್ತದೆ. ಇದಕ್ಕಾಗಿ ಹೆಚ್ಚು ಸಮಯವನ್ನು ವ್ಯಯಿಸಬೇಕಾಗಿಲ್ಲ.

ಮನೆಯೊಳಗೆ ಅತ್ತಿಂದಿತ್ತ ಓಡಾಡುವಾಗ ಅವಶ್ಯಕ ವಸ್ತುಗಳನ್ನು ಅವುಗಳನ್ನು ಇಟ್ಟಿರುವ ಜಾಗದಿಂದ ಎತ್ತಿಕೊಂಡು ಬಳಸುವುದು ಸಾಮಾನ್ಯ. ವಸ್ತುಗಳನ್ನು ಎತ್ತಿಕೊಳ್ಳುವುದು ಹೇಗೆ ನಿರಂತರ ಪ್ರಕ್ರಿಯೆಯೋ ಹಾಗೆಯೇ ಅವುಗಳನ್ನು ಯಥಾಸ್ಥಾನದಲ್ಲಿ ಇಡುವುದು ಕೂಡ ನಿರಂತರವಾಗಿರಬೇಕು. ಇಲ್ಲದಿದ್ದರೆ ಮನೆ ಎಂಬುದು ಅವ್ಯವಸ್ಥೆಯ ಗೂಡಾಗುತ್ತದೆ. ಇದನ್ನು ತಪ್ಪಿಸಲು ನಿತ್ಯ ಒಂದಿಷ್ಟು ಚಿಕ್ಕ ಚಿಕ್ಕ ಕೆಲಸ ಮಾಡುವುದನ್ನು ಜೀವನದ ಒಂದು ಭಾಗವಾಗಿ ಅಳವಡಿಸಿಕೊಳ್ಳಬೇಕು.

ಹಾಗಾದರೆ ಎಲ್ಲಿಂದ ಶುರು ಮಾಡಬೇಕು ಎಂಬ ಗೊಂದಲ ಹಲವರಲ್ಲಿರಬಹುದು. ಎಲ್ಲವನ್ನೂ ಪ್ರತಿನಿತ್ಯ ಮಾಡುವುದು ಕಷ್ಟವಾದರೂ ಕೆಲವನ್ನಾದರೂ ಯತ್ನಿಸಿ ನೋಡಬಹುದು.

ADVERTISEMENT

ಮುಂಜಾನೆಯ ಮೊದಲ ಕೆಲಸ

ಮುಂಜಾನೆ ಎದ್ದ ಕೂಡಲೇ ಮಾಡುವ ಮೊದಲ ಕೆಲಸವೆಂದರೆ ಮಲಗುವ ಕೊಠಡಿಯಲ್ಲಿ ಹಾಸಿಗೆಯನ್ನು ಸರಿಪಡಿಸಿ ಇಡುವುದು. ಇದರಿಂದ ಇಡೀ ಕೊಠಡಿಯಲ್ಲಿ ಒಂದು ರೀತಿಯ ಶಿಸ್ತು, ಶಾಂತಿ ತುಂಬಿಕೊಳ್ಳುತ್ತದೆ. ಇದಕ್ಕಾಗಿ ನಿಮಗೆ ಹಿಡಿಯುವ ಸಮಯ ಅರ್ಧ ನಿಮಿಷದಿಂದ ಒಂದು ನಿಮಿಷ. ಒಂದು ದಿನ ಈ ಕೆಲಸಕ್ಕೆ ಕೈ ಹಾಕಿ. ಮರುದಿನ ನೀವು ಎಷ್ಟೇ ಅವಸರದಲ್ಲಿ ಇದ್ದರೂ ಹಾಸಿಗೆಯನ್ನು ಸರಿಪಡಿಸಿದ ಮೇಲೇ ಮುಂದಿನ ಕೆಲಸಕ್ಕೆ ಅಣಿಯಾಗುತ್ತೀರಿ. ಇದಕ್ಕಾಗಿ ಒಂದಿಷ್ಟು ಏಕಾಗ್ರತೆ ಕೂಡ ಅಗತ್ಯ. ಅಂದರೆ ನೀವು ಹೊದಿಕೆಯನ್ನು ಮಡಿಚಿಡುವ, ಹಾಸನ್ನು ಕೊಡವಿ ಹಾಕುವ, ದಿಂಬನ್ನು ಸವರಿ ಸರಿಯಾಗಿಡುವ ಕ್ರಿಯೆಯ ಮೇಲೆ ಗಮನ ಇಡಬೇಕಾಗುತ್ತದೆ. ಇದರಿಂದ ನೀವು ಮಾಡುವ ಕೆಲಸದ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ ಮುಂಜಾನೆಯೇ ಆ ಕೆಲಸವನ್ನು ಆಸ್ವಾದಿಸುವ ರೂಢಿ ಬೆಳೆಸಿಕೊಳ್ಳುತ್ತೀರಿ. ರಾತ್ರಿ ನಿದ್ರೆಯ ಒತ್ತಡದಲ್ಲಿದ್ದರೂ ಆರಾಮವಾಗಿ ಮೇಲಿರುವ ಹೊದಿಕೆಯನ್ನು ತೆಗೆದು ತೂರಿಕೊಂಡರೆ ಸಾಕು, ಯಾವ ಕಿರಿಕಿರಿ ಇಲ್ಲದೇ ಕೆಲಸ ಸುಲಭವಾಗಿಬಿಡುತ್ತದೆ.

ಸ್ನಾನದ ಕೊಠಡಿಯಲ್ಲೂ ಅಷ್ಟೆ, ಸ್ನಾನದ ನಂತರ ಅಲ್ಲಿರುವ ಸೋಪ್‌, ಫೇಸ್‌ವಾಷ್‌, ಬ್ರಷ್‌ ಮೊದಲಾದವುಗಳನ್ನು ಅದಕ್ಕಾಗಿ ಇಟ್ಟಿರುವ ಜಾಗದಲ್ಲೇ ಇಡಿ. ಕೊಳೆ ಬಟ್ಟೆಗಳನ್ನು ಲಾಂಡ್ರಿ ಬ್ಯಾಗ್‌ನಲ್ಲಿ ಹಾಕಿ, ವಾರದ ಕೊನೆಗೆ ವಾಷಿಂಗ್‌ ಮಷೀನ್‌ನಲ್ಲಿ ತೊಳೆಯಬಹುದು. ಟವೆಲ್‌ ಅನ್ನು ರಾಡ್‌ ಮೇಲೆ ಹರಡಿ. ನೀರು ಹೊರಹೋಗುವ ಜಾಗದಲ್ಲಿ ಕೂದಲು ಕಟ್ಟಿಕೊಂಡರೆ ತೆಗೆದು ಹಾಕಿ. ಸಿಂಕ್‌ ಮೇಲೆ ಬೇರೆ ಯಾವುದೇ ವಸ್ತು ಇರದಂತೆ ನೋಡಿಕೊಳ್ಳಿ. ಗೋಡೆಯ ಮೇಲೆ ಸೋಪ್‌ ನೀರು ಬಿದ್ದರೆ ತಕ್ಷಣ ತೊಳೆದುಬಿಡಿ. ಇದಕ್ಕಾಗಿ ನಿಮಗೆ ಬೇಕಾದ ಸಮಯ 1–2 ನಿಮಿಷ.

ಮನೆಯಲ್ಲಿ ಮಕ್ಕಳಿದ್ದರೆ ಅವರ ಆಟಿಕೆಗಳನ್ನು ಒಂದು ಕಡೆ ತುಂಬಿಡಿ. ಇದಕ್ಕಾಗಿ 3–4 ವರ್ಷ ವಯಸ್ಸಿನ ಮಕ್ಕಳ ನೆರವನ್ನೂ ಪಡೆಯಬಹುದು. ಈ ಶಿಸ್ತನ್ನು ಮುಂದೆ ಅವರೂ ಬೆಳೆಸಿಕೊಳ್ಳುತ್ತಾರೆ. ಬಟ್ಟೆಯನ್ನು ಕುರ್ಚಿ, ಮೇಜು, ನೆಲದ ಮೇಲೆ ಹರಡುವುದಕ್ಕಿಂತ ತೊಳೆದ ಉಡುಪುಗಳನ್ನು ಮಡಚಿ ಕಪಾಟಿನಲ್ಲಿ ಜೋಡಿಸಿ. ಕೊಳೆ ಬಟ್ಟೆಯನ್ನೂ ಅಷ್ಟೆ, ಲಾಂಡ್ರಿಬ್ಯಾಗ್‌ ತುಂಬಿ ತುಳುಕುವವರೆಗೆ ಕಾಯದೆ ಎಷ್ಟು ಸಾಧ್ಯವೋ ಅಷ್ಟು ಬಟ್ಟೆಗಳನ್ನು ತೊಳೆದು ಹಾಕಿ.

ಮೇಜು, ಡೈನಿಂಗ್‌ ಟೇಬಲ್‌ ಅಥವಾ ಕಿಟಕಿ ಪಕ್ಕದ ಜಾಗದಲ್ಲಿ ಪೇಪರ್‌, ಇತರ ದಾಖಲೆ ಪತ್ರಗಳನ್ನು ಗುಡ್ಡೆ ಹಾಕಿಕೊಳ್ಳದೇ ಜೋಡಿಸಲು ಒಂದು 10 ನಿಮಿಷ ಮೀಸಲಿಡಿ. ಈ ಕೆಲಸವನ್ನು ವಾರದ ಕೊನೆಗೂ ಇಟ್ಟುಕೊಳ್ಳಬಹುದು. ಎಲ್ಲವನ್ನೂ ಜೋಡಿಸಿ ಫೈಲ್‌ನಲ್ಲಿ ಇಟ್ಟುಕೊಂಡಾಗ ಬೇಕಾದಾಗ ತೆರೆದು ನೋಡಬಹುದು.

ಅಡುಗೆ ಮನೆ ಫಳಫಳ

ಮಲಗುವ ಮುನ್ನ ಅಡುಗೆ ಮನೆಯಲ್ಲಿ ಎಲ್ಲಾ ಪಾತ್ರೆಗಳನ್ನು ತೊಳೆದಿಡಿ. ಮಿಕ್ಕದ ಆಹಾರವನ್ನು ಡಬ್ಬಿಯಲ್ಲಿ ಹಾಕಿ ಫ್ರಿಜ್‌ನಲ್ಲಿ ಇಡಿ. ಬೆಳಿಗ್ಗೆ ಕಾಫಿ ಅಥವಾ ಚಹ ತಯಾರಿಸಲು ಅಡುಗೆ ಮನೆಗೆ ಹೋದರೆ ಎಲ್ಲವೂ ನೀಟಾಗಿ ನಿಮ್ಮನ್ನು ಸ್ವಾಗತಿಸುವಂತಿರಬೇಕು. ಹಾಗೇನಾದರೂ ಕೊಳೆ ಪಾತ್ರೆಗಳು ಉಳಿದರೆ ಅದಕ್ಕೆ ನೀರು ಹಾಕಿ ನೆನೆಸಿಡಿ.

ಶೂಗಳನ್ನು ಕೆಲವರು ಮನೆ ಬಾಗಿಲಿನಲ್ಲಿ ಅಡ್ಡಾದಿಡ್ಡಿ ಬಿಸಾಡಿರುತ್ತಾರೆ. ಆದರೆ ಆದಷ್ಟು ಮನೆಯ ಬಾಗಿಲಿನ ಪಕ್ಕ ಶೂ ಸ್ಟ್ಯಾಂಡ್‌ ಇಟ್ಟು ಹೊರಗಿನಿಂದ ಬಂದ ಕೂಡಲೇ ಅದರ ಮೇಲೆ ಎತ್ತಿಡುವ ಅಭ್ಯಾಸ ಬೆಳೆಸಿಕೊಳ್ಳಿ. ಇದರಿಂದ ಶೂನಿಂದಾಗುವ ದೂಳು, ಗಲೀಜಿಂದ ದೂರ ಇರಬಹುದು. ಹಾಗೆಯೇ ಆ ದೂಳನ್ನು ಗುಡಿಸಿ, ಒರೆಸುವ ಕೆಲಸದಿಂದಲೂ ಮುಕ್ತಿ ಸಿಗುತ್ತದೆ.

ಮನೆಯ ಎಲ್ಲಾ ಜಾಗವನ್ನು ಒಂದೇ ಬಾರಿ ಸ್ವಚ್ಛ ಮಾಡಲು ಸಾಧ್ಯವಿಲ್ಲ. ಒಂದೊಂದು ದಿನವೂ ಒಂದೊಂದು ಕೊಠಡಿ, ಹಾಲ್‌, ಅಡುಗೆ ಮನೆ.. ಎಂದು ಸ್ವಚ್ಛ ಮಾಡುತ್ತ ಹೋಗಿ. ಇದರಿಂದ ಸಮಯದ ಉಳಿತಾಯವೂ ಆಗುತ್ತದೆ.

ಮನೆಯಲ್ಲಿ ಕಸ ಸಂಗ್ರಹವಾಗಲು ಬಿಡಬೇಡಿ. ಉದಾಹರಣೆ ಖರೀದಿಸಿದ ಸಾಮಾನಿನ ಪ್ಯಾಕ್‌ ತೆರೆದಾಗ ಅದನ್ನು ಹಾಗೆಯೇ ಮೂಲೆಯಲ್ಲಿ ತುರುಕುವ ಅಭ್ಯಾಸ ಬೇಡ. ತಕ್ಷಣ ಅದನ್ನು ಕಸದ ಬುಟ್ಟಿಯಲ್ಲಿ ಹಾಕಿ. ಸಂಜೆ ಅಥವಾ ಬೆಳಿಗ್ಗೆ ಹೊರ ಹಾಕುವ ವ್ಯವಸ್ಥೆ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.