ADVERTISEMENT

ಮನಸ್ಸಿಗೆ ಆಹ್ಲಾದ ತುಂಬುವ ಒಳಾಂಗಣ ಗಿಡಗಳು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 19:30 IST
Last Updated 2 ಏಪ್ರಿಲ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುದುಡಿದ ಮನಸ್ಸಿಗೆ ಒಂದಿಷ್ಟು ಖುಷಿ ತುಂಬಲು, ಪುನಃ ಬದುಕಿನ ಏರಿಳಿತಗಳನ್ನು ಎದುರಿಸುವ ಶಕ್ತಿಯನ್ನು ಕ್ರೋಢೀಕರಿಸಲು ಏನೆಲ್ಲಾ ಕಸರತ್ತು ನಡೆಸುತ್ತೇವೆ. ಪ್ರವಾಸ, ವ್ಯಾಯಾಮ, ಯೋಗ, ಮುದ್ದುಪ್ರಾಣಿಗಳು, ಶಾಪಿಂಗ್‌.. ಹೀಗೆ ಎಲ್ಲಾ ಸಲಹೆಗಳ ಸುರಿಮಳೆ ಸ್ನೇಹಿತರಿಂದ, ಬಂಧುಗಳಿಂದ ಆಗುವುದು ಸಹಜವೇ. ಮನೆಯೊಳಗೆ, ಮನಸ್ಸಿನೊಳಗೆ ಒಂದಿಷ್ಟು ಆಹ್ಲಾದ ತುಂಬಲು ಇನ್ನೊಂದು ಮಾರ್ಗವೂ ಇದೆ. ಅದೆಂದರೆ ಪರಿಮಳ ಸೂಸುವ ಗಿಡಗಳನ್ನು ಬೆಳೆಯುವುದು.

ಮನೆಗೆ ಅಂದ, ರಂಗು, ಮನಸ್ಸಿಗೆ ಚೈತನ್ಯ ಎಲ್ಲವನ್ನೂ ನೀಡುವ ಇಂತಹ ಗಿಡಗಳು ಸೌಂದರ್ಯ ಸೂಸುತ್ತ ಇದ್ದರೆ ಮನದೊಳಗಿನ ಕಳವಳ ಮಾಯವಾಗುವುದು ಖಚಿತ. ಇಂತಹ ಕೆಲವು ಗಿಡಗಳನ್ನು ಹೆಚ್ಚಿನ ಶ್ರಮವಿಲ್ಲದೇ ಬೆಳೆದುಕೊಳ್ಳಬಹುದು.

ನಂದಿಬಟ್ಟಲು
ಸ್ವಚ್ಛ ಬಿಳುಪಿನೊಂದಿಗೆ ನಗುವ ಈ ಹೂವುಗಳು ಹೊಳೆಯುವ ಕಡು ಹಸಿರು ಎಲೆಗಳಿಂದ ಒತ್ತಡ ಕಮ್ಮಿ ಮಾಡುವುದಂತೂ ಹೌದು. ಸ್ನಿಗ್ಧ ಪರಿಮಳ ಸೂಸುವ ಈ ಹೂವಿನ ಗಿಡಗಳನ್ನು ಕೈತೋಟದಲ್ಲಿ ಬೆಳೆಯುವುದು ಸಾಮಾನ್ಯ. ಆದರೆ ಒಳಾಂಗಣದಲ್ಲಿ ಕೂಡ ಬೆಳೆಸಬಹುದು. ಉತ್ತಮ ಬೆಳಕು ಮನೆಯೊಳಗಿದ್ದರೆ ದೊಡ್ಡ ಕುಂಡದಲ್ಲಿ ಬೆಳೆಸಬಹುದು. ಬೇಸಿಗೆ, ಚಳಿಗಾಲದಲ್ಲಿ ಹೂ ಬಿಡುವ ಈ ಗಿಡಗಳಿಗೆ ಆಗಾಗ ಮಣ್ಣು, ಗೊಬ್ಬರ ಕೊಡುವುದನ್ನು ಮರೆಯಬಾರದು. ನಿತ್ಯ ಬೆಳಿಗ್ಗೆ ಸ್ವಲ್ಪ ನೀರು ಹನಿಸಿದರೆ ತಮ್ಮಷ್ಟಕ್ಕೇ ಬೆಳೆಯುತ್ತವೆ.

ADVERTISEMENT

ಪರಿಮಳದ ಹೂವುಗಳೆಂದರೆ ಮಲ್ಲಿಗೆಯನ್ನು ಮರೆಯಲಾದೀತೆ. ನಿತ್ಯ ಮಲ್ಲಿಗೆಯ ಗಿಡಗಳನ್ನು ಹಾಕಿದರೆ ರಾತ್ರಿ ಕೂಡ ತಂಗಾಳಿಯೊಂದಿಗೆ ಹೂಗಳ ಕಂಪು ಹರಡುತ್ತಿರುತ್ತದೆ. ಬೇಸಿಗೆ ಮತ್ತು ಚಳಿಗಾಲದಲ್ಲಿ ಹೂವು ಬಿಡುವ ಮಲ್ಲಿಗೆ ಬಳ್ಳಿ ಅಥವಾ ಪೊದೆಯನ್ನು ಕುಂಡದಲ್ಲಿ ಬೆಳೆಸಿ ಮನೆಯೊಳಗೆ ಅಥವಾ ಬಾಲ್ಕನಿಯಲ್ಲಿ ಇಡಬಹುದು. ಹೆಚ್ಚು ಬೆಳಕು ಬೇಕಾಗಿರುವುದರಿಂದ ಬಾಲ್ಕನಿಯೇ ಸೂಕ್ತ. ತೇವಾಂಶ ಸಾಕಷ್ಟಿರಬೇಕು. ಕುಂಡವನ್ನು ಕಲ್ಲು ಹಾಗೂ ನೀರಿರುವ ಟ್ರೇನಲ್ಲಿ ಇಡುವುದು ಉತ್ತಮ. ಸ್ವಲ್ಪ ನೀರುಣಿಸಿದರೆ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.