ADVERTISEMENT

ಒಳಾಂಗಣ ಅಂದಕ್ಕೆ ದೀಪ ವೈವಿಧ್ಯ

ರೇಷ್ಮಾ
Published 13 ಅಕ್ಟೋಬರ್ 2020, 19:30 IST
Last Updated 13 ಅಕ್ಟೋಬರ್ 2020, 19:30 IST
ಮನೆಯ ಒಳಾಂಗಣ ದೀಪಾಲಂಕಾರ
ಮನೆಯ ಒಳಾಂಗಣ ದೀಪಾಲಂಕಾರ    
""

ಅಂದದ, ಸುಂದರವಾದ ಮನೆ ಕಟ್ಟಿಸುವುದು ಹಲವರ ಕನಸು. ಮನೆ ಕಟ್ಟಿಸಿದರೆ ಸಾಲದು. ಮನೆಗೆ ತಕ್ಕ ಹಾಗೇ ಅವಶ್ಯಕತೆಗಳನ್ನು ಜೋಡಿಸುವುದು ಅಷ್ಟೇ ಮುಖ್ಯ. ಅದರಲ್ಲೂ ಅಂದದ ಮನೆಯ ಚೆಂದ ಹೆಚ್ಚಿಸುವಲ್ಲಿ ದೀಪಗಳ ವ್ಯವಸ್ಥೆ ಬಹಳ ಮುಖ್ಯ.

ಮನೆಯಲ್ಲಿ ಅಳವಡಿಸಿದ ದೀಪಗಳು ನಮ್ಮ ಮನಸ್ಸಿನಲ್ಲಿ ಉತ್ಸಾಹ ಮೂಡಿಸುತ್ತವೆ. ಉತ್ಪಾದಕತೆ ಹೆಚ್ಚಲು ಸ್ಫೂರ್ತಿ ನೀಡುತ್ತವೆ. ಮನೆಯಲ್ಲಿ ಬೆಳಗುವ ದೀಪಗಳು ನಮ್ಮ ಬೆಳಗಿನ ದಿನಚರಿ, ನಾವು ಸ್ನೇಹಿತರೊಂದಿಗೆ ಕಳೆಯುವ ಸಮಯ.. ಹೀಗೆ ಸಣ್ಣ ಸಣ್ಣ ಕ್ಷಣಗಳನ್ನು ಜೀವಂತಗೊಳಿಸುತ್ತವೆ.

‘ಒಂದು ಮನೆಗೆ ದೀಪದ ವ್ಯವಸ್ಥೆ ಮಾಡುವ ಮೊದಲು ನೈಸರ್ಗಿಕ ಬೆಳಕಿಗೆ ಮೊದಲ ಪ್ರಾಧಾನ್ಯ ನೀಡಲಾಗುತ್ತದೆ. ನೈಸರ್ಗಿಕ ಬೆಳಕು ಹೊರತು ಪಡಿಸಿ 4 ವಿಭಾಗಗಳಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಆ್ಯಂಬಿಯೆನ್ಸ್‌, ಟಾಸ್ಕ್ ಲೈಟ್‌, ಆಕ್ಸೆಂಟ್‌‌ ಲೈಟ್‌ ಹಾಗೂ ಆಲಂಕಾರಿಕ’ ಎನ್ನುತ್ತಾರೆ ವಾಸ್ತುಶಿಲ್ಪಿ ಹಾಗೂ ಒಳಾಂಗಣ ವಿನ್ಯಾಸಕಿ ಶ್ರುತಿ ಕಡಿಯಾಲ್‌.

ADVERTISEMENT
ಶ್ರುತಿ ಕಡಿಯಾಲ್‌

ಮನೆಯ ವಾತಾವರಣ (ಆ್ಯಂಬಿಯೆನ್ಸ್‌): ಎಲ್ಲರ ಮನೆಯಲ್ಲೂ ಹಾಲ್ ಅಥವಾ ಲಿವಿಂಗ್‌ ರೂಮ್‌ನಲ್ಲೇ ಹೆಚ್ಚು ಬೆಳಕು ಬೇಕಾಗುತ್ತದೆ. ಕೃತಕ ಬೆಳಕು ಬೇಕು ಎಂದಾಗ ಛಾವಣಿಯಿಂದಲೇ ಬೆಳಕು ಬರಬೇಕಾಗುತ್ತದೆ. ಈ ಬೆಳಕು ಇಡೀ ಕೊಠಡಿಯನ್ನು ಆವರಿಸಿರುತ್ತದೆ. ಹಿಂದೆಲ್ಲಾ ಗೋಡೆಗೆ ಬಲ್ಬ್‌ ಅಥವಾ ಟ್ಯೂಬ್‌ಲೈಟ್ ಅಳವಡಿಸುತ್ತಿದ್ದರು. ಆದರೆ ಅದು ಎಲ್ಲಾ ಕಡೆ ಪಸರಿಸುವುದಿಲ್ಲ. ಛಾವಣಿಯಲ್ಲಿ ಅಳವಡಿಸಿದ ಬೆಳಕು ಎಲ್ಲಾ ಕಡೆಗೂ ಪಸರಿಸುತ್ತದೆ. 20, 30 ವ್ಯಾಟ್ ಲೈಟ್‌ ಅನ್ನು 12, 13 ವ್ಯಾಟ್ ಎಂದು ವಿಭಾಗಿಸಿಕೊಂಡು ಅಳವಡಿಸಲಾಗುತ್ತದೆ. ಯಾವ ಜಾಗವನ್ನು ಎಷ್ಟು ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ಬಲ್ಬ್‌ಗಳನ್ನು ಅಳವಡಿಸಬೇಕಾಗುತ್ತದೆ. ಲಿವಿಂಗ್‌, ಅಡುಗೆಕೋಣೆ, ಊಟದ ಹಾಲ್ ಎಲ್ಲದ್ದಕ್ಕೂ ಹೀಗೆ ಲೈಟ್‌ಗಳನ್ನು ಅಳವಡಿಸುವುದು ಸೂಕ್ತ ಎನ್ನುತ್ತಾರೆ ಶ್ರುತಿ.

ಟಾಸ್ಕ್ ಲೈಟ್‌: ಟಾಸ್ಕ್ ಲೈಟಿಂಗ್ ಎಂದರೆ ನಾವು ಬಳಸುವ ಅಥವಾ ಕೆಲಸ ಮಾಡುವ ಜಾಗದಲ್ಲಷ್ಟೇ ಬೆಳಕು ಪಸರಿಸುವಂತೆ ಮಾಡುವುದು. ನಾವು ಕೆಲಸ ಮಾಡುವ ಟೇಬಲ್‌, ಸ್ಟಡಿ ಟೇಬಲ್, ಬೆಡ್ ಲ್ಯಾಂಪ್‌ ‌ಈ ರೀತಿ ಅವಶ್ಯಕತೆ ಇರುವ ಕಡೆಗಷ್ಟೇ ಬೆಳಕು ಬರುವಂತೆ ಮಾಡುವುದು ಟಾಸ್ಕ್‌ ಲೈಟಿಂಗ್‌.

ಆಕ್ಸೆಂಟ್ ಲೈಟ್‌: ಸ್ಪಾಟ್ ಲೈಟ್ ವಿಭಾಗದಲ್ಲಿ ಆಕ್ಸೆಂಟ್ ಲೈಟ್ ಬರುತ್ತದೆ. ಇದು ಒಂದಷ್ಟೇ ಜಾಗದಲ್ಲಿ ಮಾತ್ರ ಬೆಳಕು ನೀಡುತ್ತದೆ. ಗೋಡೆಯಲ್ಲಿರುವ ಕಲಾಕೃತಿ, ಪೇಂಟಿಂಗ್‌, ಫೋಟೊದಂತಹ ವಸ್ತುಗಳನ್ನು ಹೈಲೈಟ್‌ ಮಾಡುವ ಸಲುವಾಗಿ ಅದರ ಮೇಲೆ ಹೆಚ್ಚು ಬೆಳಕು ಬೀರುವಂತಹ ದೀಪವಿದು.

ಅಲಂಕಾರ: ಛಾವಣಿಯಿಂದ ನೇತು ಹಾಕುವಂತಹದ್ದು, ಶಾಂಡಿಲಿಯರ್‌ನಂತಹ ಆಲಂಕಾರಿಕ ದೀಪಗಳು ಈ ವಿಭಾಗದಲ್ಲಿ ಬರುತ್ತವೆ. ಲೋಹ, ಮರದ ಕೆತ್ತನೆ ಇರುವಂತಹದ್ದು ಇದರಲ್ಲಿ ಒಳಗೊಂಡಿರಬಹುದು. ಇದು ತುಂಬಾ ದುಬಾರಿ ಕೂಡ. ಇದು ₹ 1,000 ದಿಂದ ಆರಂಭವಾಗಿ ₹ 3 ಲಕ್ಷದವರೆಗೂ ಬೆಲೆ ಬಾಳುತ್ತವೆ. ಇದನ್ನು ಮನೆಯವರ ಅಭಿರುಚಿಗೆ ತಕ್ಕಂತೆ ಹಾಗೂ ಬಜೆಟ್‌ಗೆ ತಕ್ಕಂತೆ ತಂದು ಮನೆಯನ್ನು ಅಲಂಕರಿಸಬಹುದು.

ಬೆಳಕಿನ ಟೋನ್‌: ಯಾವಾಗಲೂ ಬಿಳಿ ಬಣ್ಣ ಎಲ್ಲದ್ದಕ್ಕೂ ಪ್ರಶಸ್ತವಾಗಿರುತ್ತದೆ. ಪ್ರಕಾಶಮಾನವಾದ ಬೆಳಕಿಗೆ ಬಿಳಿ ಬಣ್ಣ ಸೂಕ್ತ. ನಂತರ ಬರುವುದು ವಾರ್ಮ್‌ ಟೋನ್‌. ಇದರಲ್ಲಿ ಹಳದಿ ಬಣ್ಣವಿರುತ್ತದೆ. ‘ಸ್ವಲ್ಪ ಕಡಿಮೆ ಪ್ರಕಾಶಮಾನವಾದ ಬೆಳಕನ್ನು ಹೊಂದಲು ವಾರ್ಮ್ ಟೋನ್ ಬಳಸುವುದು ಸೂಕ್ತ’ ಎನ್ನುತ್ತಾರೆ ಶ್ರುತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.