ADVERTISEMENT

ಕೊಂಚ ಬದಲಾಗಲಿ ಮನೆಯೊಳಗಿನ ಪರಿಸರ

ರೇಷ್ಮಾ
Published 2 ನವೆಂಬರ್ 2020, 19:30 IST
Last Updated 2 ನವೆಂಬರ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಳೆದ ಏಳೆಂಟು ತಿಂಗಳಿಂದ ಮನೆಯಿಂದಲೇ ಕಚೇರಿ ಕೆಲಸ ಮಾಡುವ ಖಾಸಗಿ ಹಣಕಾಸು ಕಂಪನಿಯೊಂದರ ಉದ್ಯೋಗಿ ರೇಖಾ ಜೋಷಿಗೆ ಸಂಜೆ ನಾಲ್ಕರ ನಂತರ ಕಿರಿಕಿರಿ ಶುರುವಾಗಿಬಿಡುತ್ತಿತ್ತು. ಕೆಲಸ ಮಾಡಲು ಮನಸ್ಸೇ ಸಹಕರಿಸುತ್ತಿರಲಿಲ್ಲ. ಸಹೋದ್ಯೋಗಿಗಳ ಜೊತೆ ಈ ಸಮಸ್ಯೆಯನ್ನು ಹಂಚಿಕೊಂಡಾಗ ಕೆಲಸ ಮಾಡುವ ಸ್ಥಳವನ್ನು ಓರಣವಾಗಿ ಇಟ್ಟುಕೊಳ್ಳುವಂತೆ, ಸಾಕಷ್ಟು ನೈಸರ್ಗಿಕ ಬೆಳಕು ಬರುವ ಕಡೆ ಕೂರುವಂತೆ ಸಲಹೆಗಳು ಬಂದವು. ಹಾಲ್‌ನ ಒಂದು ಮೂಲೆಯಲ್ಲಿ ಕಂಪ್ಯೂಟರ್‌ ಇಟ್ಟುಕೊಂಡು ಕೂರುತ್ತಿದ್ದ ರೇಖಾ ಈಗ ನೈಸರ್ಗಿಕ ಬೆಳಕು ಸಾಕಷ್ಟು ಬರುವ ಕಿಟಕಿ ಪಕ್ಕ ಕೂರುವುದಲ್ಲದೇ, ಟೇಬಲ್‌ ಮೇಲೆ ದಿನಾ ತಾಜಾ ಹೂವು ಜೋಡಿಸಿಕೊಳ್ಳುತ್ತಾಳೆ. ಜೊತೆಗೆ ಎದುರಿನ ಗೋಡೆಯ ಮೇಲೆ ನಿಸರ್ಗದ ರಮಣೀಯ ದೃಶ್ಯವಿರುವ ಚಿತ್ರ ತೂಗು ಹಾಕಿದ್ದಾಳೆ. ಮನಸ್ಸಿಗೆ ಮುದ ನೀಡುವ ಲಘು ಸಂಗೀತ ಮೆಲ್ಲನೆ ಸ್ವರ ಹೊರಡಿಸುತ್ತಿರುತ್ತದೆ.

ಕೊರೊನಾ ಕಾರಣದಿಂದ ಇನ್ನೂ ಕೆಲವು ತಿಂಗಳು ಮನೆಯಿಂದಲೇ ಕೆಲಸ ಮಾಡುವುದು ಹಲವರಿಗೆ ಅನಿವಾರ್ಯವಾಗಿದೆ. ಕೊರೊನಾ ಸಂಕಟವು ನಮ್ಮ ಮನೆ ಹಾಗೂ ಮನಃಸ್ಥಿತಿಯನ್ನು ಬದಲಿಸಿದೆ. ಈ ಬದಲಾವಣೆ ಶಾಶ್ವತವಲ್ಲದಿದ್ದರೂ ಸದ್ಯಕ್ಕೆ ಇದು ಅನಿವಾರ್ಯ. ಕೇವಲ ತಿನ್ನುವ ಆಹಾರ ಮಾತ್ರವಲ್ಲದೇ ನಾವು ಇರುವ ಜಾಗ ಹಾಗೂ ಸುತ್ತಲಿನ ಪರಿಸರವನ್ನೂ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಹೊಂದಿಕೊಳ್ಳುವಂತೆ ಇರಿಸಿಕೊಳ್ಳುವುದು ಮುಖ್ಯ. ಅದರಲ್ಲೂ ಮನೆಯಿಂದಲೇ ಕೆಲಸ ಮಾಡುವಾಗ ನಾವು ಕೂತು ಕೆಲಸ ಮಾಡುವ ಸ್ಥಳ ಮನಸ್ಸಿಗೆ ಉಲ್ಲಾಸ ನೀಡುವಂತಿರಬೇಕು. ದಿನದ 24 ಗಂಟೆಯೂ ಮನೆಯೊಳಗೇ ಇರುವುದೂ ಕೂಡ ಕಿರಿಕಿರಿಗೆ ಕಾರಣವಾಗಿರಬಹುದು. ಹೀಗಾಗಿ ಮನೆಯ ಒಳಗಿನ ಪರಿಸರ ಹಾಗೂ ನಮ್ಮ ದಿನಚರಿಯಲ್ಲಿ ಕೆಲವೊಂದು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅಗತ್ಯ.

ನೈಸರ್ಗಿಕ ಬೆಳಕು

ADVERTISEMENT

ನಗರಗಳಲ್ಲಿ ಬದುಕುವವರಿಗೆ ಮನೆಯಲ್ಲಿ ಸ್ಥಳದ ಕೊರತೆ ಕಾಡುವುದು ಸಹಜ. ಜೊತೆಗೆ ಏಕಾಂತಕ್ಕೆ ಭಂಗವಾಗುವುದು ಸುಳ್ಳಲ್ಲ. ಇದು ಕೆಲಸದ ಮೇಲೂ ಪರಿಣಾಮ ಬೀರಬಹುದು. ಆದರೆ ಇರುವುದರಲ್ಲೇ ಹೊಂದಿಕೊಂಡು ಹೋಗುವುದು ಅನಿವಾರ್ಯ. ಇರುವ ಜಾಗದಲ್ಲಿ ಮನಸ್ಸಿಗೆ ಖುಷಿ ಎನ್ನಿಸುವ ರೀತಿಯಲ್ಲಿ ಪೀಠೋಪಕರಣಗಳನ್ನು ಜೋಡಿಸಿಕೊಳ್ಳಬೇಕು. ನೈಸರ್ಗಿಕ ಬೆಳಕು ಹೆಚ್ಚು ಬೀಳುವ ಜಾಗದಲ್ಲಿ ಕುಳಿತು ಕೆಲಸ ಮಾಡುವ ಅಭ್ಯಾಸ ಮಾಡಿಕೊಳ್ಳಿ.

ಯೋಗ, ಧ್ಯಾನಕ್ಕೆಂದು ಸ್ಥಳ ಮೀಸಲಿಡಿ

ಈಗ ನಮ್ಮ ಸಮಗ್ರ ಯೋಗಕ್ಷೇಮವೂ ಮನೆಯಲ್ಲೇ ನಡೆಯಬೇಕು. ದೈಹಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಯನ್ನು ಬೆಂಬಲಿಸುವ ರೀತಿಯಲ್ಲಿ ನಮ್ಮ ಮನೆಯ ಒಳಾಂಗಣವನ್ನು ವಿನ್ಯಾಸಗೊಳಿಸಿಕೊಳ್ಳುವುದು ಉತ್ತಮ. ನಮ್ಮ ದೈನಂದಿನ ಬದುಕಿನಲ್ಲಿ ಈಗ ಹಿಂದಿಗಿಂತ ಹೆಚ್ಚು ಒತ್ತಡವಿದೆ. ಆ ಕಾರಣಕ್ಕೆ ಮನೆಯಲ್ಲೇ ಯೋಗ, ಧ್ಯಾನವನ್ನು ದಿನಚರಿಯಲ್ಲಿ ರೂಢಿಸಿಕೊಂಡು ಅದಕ್ಕಾಗಿ ಒಂದಿಷ್ಟು ಜಾಗವನ್ನು ಮೀಸಲಿರಿಸಿಕೊಳ್ಳುವುದು ಅಗತ್ಯ. ಕೆಲಸದ ಸ್ಥಳದೊಂದಿಗೆ ಇದಕ್ಕೂ ಪ್ರಾಧಾನ್ಯವಿರಲಿ.

ಸುಸ್ಥಿರ ವಿನ್ಯಾಸಕ್ಕೆ ಆದ್ಯತೆ ನೀಡಿ

ಈ ವರ್ಷ ಪರಿಸರ ಪ್ರಜ್ಞೆ ಹಾಗೂ ಸ್ವಚ್ಛತಾ ಮನೋಭಾವ ಜನರಲ್ಲಿ ಹೆಚ್ಚು ಅರಿವಿಗೆ ಬಂದಿದೆ. ಮನೆಯ ಒಳಾಂಗಣ ವಿನ್ಯಾಸದಲ್ಲಿ ಸುಸ್ಥಿರತೆ ಕಾಪಾಡಿಕೊಳ್ಳುವ ಜೊತೆಗೆ ಮರುಬಳಕೆಯ ವಸ್ತುಗಳಿಗೆ ಹೆಚ್ಚು ಪ್ರಾಧ್ಯಾನ ನೀಡಲಾಗುತ್ತಿದೆ. ಅಲ್ಲದೇ ಇವು ಸುಲಭವಾಗಿ ಸಿಗುವಂತಹವು ಕೂಡ. ಮನೆಯಲ್ಲಿಯೇ ತಾವೇ ಮರುಬಳಕೆಯ ವಸ್ತುಗಳನ್ನು ವಿವಿಧ ರೀತಿಯಲ್ಲಿ ಬಳಸುವ ಕ್ರಮವನ್ನು ಕಲಿಯುವುದು ಅವಶ್ಯ.

ಮನೆಯೇ ಕಚೇರಿಯಾದಾಗ..

ಮನೆಯಿಂದಲೇ ಕೆಲಸ ಮಾಡುವುದರಿಂದ ಅನೇಕ ಉಪಯೋಗಗಳಿವೆ. ಆದರೂ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇನ್ನೂ ಕೆಲವು ತಿಂಗಳುಗಳ ಕಾಲ ನಮ್ಮ ಕೆಲಸ ಹಾಗೂ ಕುಟುಂಬವನ್ನು ಒಂದೇ ಜಾಗದಲ್ಲಿ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಕುಳಿತುಕೊಳ್ಳಲು ಒಂದು ಒಳ್ಳೆಯ ಕುರ್ಚಿ, ಬೆಳಕಿನ ವ್ಯವಸ್ಥೆ ಹಾಗೂ ಶಾಂತಿಯುತ ಮನಸ್ಸು ತುಂಬಾ ಮುಖ್ಯ. ಇದರಿಂದ ಕೇವಲ ಕೆಲಸದಲ್ಲಿ ನಮ್ಮ ಉತ್ಪಾದಕತೆ ಹೆಚ್ಚುವುದು ಮಾತ್ರವಲ್ಲ, ನಮ್ಮ ವೈಯಕ್ತಿಕ ಹಾಗೂ ಕೆಲಸದ ಸಮಯವನ್ನು ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಆನ್‌ಲೈನ್ ಮೀಟಿಂಗ್‌ಗಳು, ಕಾನ್ಫರೆನ್ಸ್‌ ಕರೆಗಳು ನಡೆಯುವಾಗ ನಮ್ಮ ಹಿಂದಿರುವ ಜಾಗವನ್ನು ಬ್ಲರ್ಬ್ ಮಾಡಿಕೊಂಡು ಕುಳಿತುಕೊಳ್ಳುವ ಬದಲು ಆ ಜಾಗಕ್ಕಷ್ಟೇ ಹೊಂದುವಂತೆ ಬದಲಾವಣೆ ಮಾಡಿಕೊಳ್ಳುವುದು ಅವಶ್ಯ. ಆಗ ಜಾಗಕ್ಕಷ್ಟೇ ಹೊಂದುವಂತೆ ಮೈಕ್ರೊ ಡಿಸೈನ್ ಮಾಡುವ ಸೌಲಭ್ಯಗಳು ಈಗ ಲಭ್ಯವಿದ್ದು ಅದನ್ನು ಮಾಡಿಸಿಕೊಳ್ಳಬಹುದು. ವಾಲ್‌ ಪೇಪರ್‌ ಅಂಟಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.