ADVERTISEMENT

PV Web Exclusive| ಹೀಗಿರಲಿ ಗೃಹಕಚೇರಿಯ ರೂಪಲಕ್ಷಣ...

ಸುಶೀಲಾ ಡೋಣೂರ
Published 2 ಡಿಸೆಂಬರ್ 2020, 9:02 IST
Last Updated 2 ಡಿಸೆಂಬರ್ 2020, 9:02 IST
Home Interior
Home Interior   
""

ಜನರ ಬದುಕಿನ ದಿಕ್ಕನ್ನೇ ಬದಲಿಸಿದ ಸಾಂಕ್ರಾಮಿಕ ರೋಗ ಕೋವಿಡ್‌–19 ರಿಯಲ್ ಎಸ್ಟೇಟ್ ಉದ್ಯಮದ ಮೇಲೂ ತನ್ನ ಪ್ರಭಾವ ಬೀರಿದೆ. ಮನೆಯೇ ಕಚೇರಿಗಳಾಗಿರುವ ಈ ದಿನಮಾನಗಳಲ್ಲಿ ಹೊಸ ರೀತಿಯ ಡಿಜಿಟಲ್ ಮನೆಗಳಿಗೆ ಬೇಡಿಕೆ ಹೆಚ್ಚಿದೆ.

ಖರೀದಿದಾರರಿಗೆ ಸ್ಟಾಂಪ್ ಡ್ಯೂಟಿ ದರ ಹಾಗೂ ಗೃಹ ಸಾಲದ ಬಡ್ಡಿ ದರಗಳಲ್ಲಿ ಕಡಿತ ಉಂಟಾಗಿರುವ ಈ ಸಂದರ್ಭದಲ್ಲಿ ಅತಿ ಹೆಚ್ಚು ಜನ ಹೊಸ ಮನೆಯ ಕನಸಿಗೆ ಜಾರುತ್ತಿದ್ದಾರೆ. ಆದರೆ ಅವು ಕಚೇರಿಯೂ ಆಗಿರಬೇಕು, ಮನೆಯೂ ಆಗಿರಬೇಕು ಎನ್ನುವುದು ಬಹುಜನರ ಬೇಡಿಕೆ. ಕಚೇರಿಯಲ್ಲಿ ದೊರೆಯುವ ಅನುಕೂಲಗಳು–ಸೌಲಭ್ಯಗಳನ್ನು ಮನೆಗಳಲ್ಲೇ ನಿರೀಕ್ಷಿಸುತ್ತಿದ್ದಾರೆ. ಇತ್ತ ಮನೆಯ ಲಕ್ಷಣಗಳೂ ಇರುವ, ಅತ್ತ ಕಚೇರಿಯ ನೋಟವನ್ನೂ ಹೊಂದಿರುವ ಮನೆಗಳ ಅಗತ್ಯ ಈಗ ಹೆಚ್ಚಿದೆ.

ನವೀನ ಮಾದರಿ ಒಳಾಂಗಣ

ADVERTISEMENT
ವಿಕ್ರಮ್ ಚಾರಿ

ಮನೆಯ ಒಳಾಂಗಣ ಅಚ್ಚುಕಟ್ಟಾಗಿರಬೇಕು. ಅದರಲ್ಲೂ ದಿನದ ಹೆಚ್ಚಿನ ಸಮಯವನ್ನು ಕಳೆಯುವ ಕಚೇರಿ ಕೋಣೆಯ ವಿನ್ಯಾಸ ವಿನೂತನವಾಗಿರಬೇಕು. ಸರಿಯಾದ ಗಾಳಿ–ಬೆಳಕು ಅತ್ಯಗತ್ಯ. ಹೊರಗಿನಿಂದ ವಿಪರೀತ ಶಬ್ದ ಬರಬಾರದು, ಬಿಡುವಾದಾಗೊಮ್ಮೆ ಕಿಟಕಿಯಾಚೆ ದೂರಕ್ಕೆ ಕಣ್ಣು ಹಾಯಿಸಿದರೆ ತಂಪೆನಿಸಬೇಕು.... ಗೃಹ ಕಚೇರಿಯ ರೂಪರೇಶಗಳು ಹೀಗೇ ಇರಬೇಕು ಎನ್ನುವ ಬಗ್ಗೆ ಹೊಸ ಗ್ರಾಹಕರು ಬಹಳ ನಿರ್ದಿಷ್ಟವಾಗಿದ್ದಾರೆ. ಕೆಲವರು ಇರುವ ಮನೆಯನ್ನೇ ಕಚೇರಿ–ಶಾಲೆಯ ಪಾತ್ರಗಳನ್ನೂ ಸರಿದೂಗಿಸಿಕೊಂಡು ಹೋಗುವಂತೆ ಮರು ವಿನ್ಯಾಸ ಮಾಡಿದರೆ, ಇನ್ನೂ ಕೆಲವರು ಹೊಸ ಮನೆಯ ಆಯ್ಕೆಯಲ್ಲಿ ಈ ರೂಪಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಕಚೇರಿಗಳೂ, ಶಾಲೆಗಳೂ ಮನೆಗೆ ಸ್ಥಳಾಂತರಗೊಂಡಿರುವ ಈ ಸಮಯದಲ್ಲಿ ಇದೊಂದು ಅನಿವಾರ್ಯ ಹೆಜ್ಜೆ ಕೂಡ ಹೌದು.

ಕಚೇರಿಯಲ್ಲಿ ದೊರೆಯುವ ಅನುಕೂಲಗಳು ಹಾಗೂ ವಾತಾವರಣವನ್ನು ಈಗ ಮನೆಯಲ್ಲಿಯೇ ತುಂಬಬೇಕಾದ ಅನಿವಾರ್ಯತೆ ಉಂಟಾಗಿದೆ. ಇದರಿಂದಾಗಿ ರಿಯಾಲ್ಟಿ ಉದ್ಯಮದಲ್ಲಿ ಹೊಸ ರೀತಿಯ ಮನೆಗಳ ಬೇಡಿಕೆ ಹೆಚ್ಚಿದ್ದು, ಕಚೇರಿ ಕೆಲಸಗಳಿಗೂ ಅನುಕೂಲವಾಗುವಂತೆ ವಿನ್ಯಾಸಗಳು ಹೊಸ ರೂಪ ಪಡೆಯುತ್ತಿವೆ.

‘ಕೋವಿಡ್‌–19 ನಂತರ ಬಹಳ ಜನರ ಮನೆಯ ಕನಸಿಗೆ ರೆಕ್ಕೆಗಳು ಮೂಡಿವೆ. ಸಂಬಳದಲ್ಲಿ ಖಡಿತ ಉಂಟಾದದ್ದನ್ನೂ ಲೆಕ್ಕಿಸದೇ ಹಿಂದೆ ಮಾಡಿದ ಉಳಿತಾಯದ ಹಣವನ್ನು ಕನಸಿನ ಮನೆಗೆ ವಿನಿಯೋಗಿಸಲು ಹೆಚ್ಚು ಜನ ಉತ್ಸುಕರಾಗಿದ್ದಾರೆ. ಕಾರಣ ಮನೆ ಕೊಳ್ಳುವವರಿಗೆ ಸರ್ಕಾರ ಹಾಗೂ ರಿಯಾಲ್ಟಿ ಲೋಕ ಪೂರಕ ವಾತಾವರಣವನ್ನು ಸೃಷ್ಟಿಸುತ್ತಿವೆ. ಇದರಿಂದಾಗಿ ಮನೆ ಖರೀದಿಸುವವರ ವಯೋಮಾನದಲ್ಲಿಯೂ ಸಾಕಷ್ಟು ಇಳಿಕೆ ಕಂಡುಬರುತ್ತಿದೆ’ ಎನ್ನುತ್ತಾರೆ ಸ್ಮಾರ್ಟ್ ಓನರ್ಸ್ ಸಂಸ್ಥೆಯ ಸಿಇಒ ವಿಕ್ರಮ್ ಚಾರಿ.

ಇಂದಿನ ಯುವ ಪೀಳಿಗೆ 30 ವರ್ಷದ ಒಳಗೇ ಕನಸಿನ ಮನೆಯನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. ಅವರ ಆಯ್ಕೆಯೂ ಅಷ್ಟೇ ಜಾಗರೂಕತೆಯಿಂದ ಕೂಡಿರುತ್ತದೆ ಎನ್ನುವುದು ಹೊಸ ಬೆಳವಣಿಗೆ. ಈ ಖರೀದಿದಾರರು ಬೆಲೆಗಳಲ್ಲಿ ಪಾರದರ್ಶಕತೆ, ಗುಣಮಟ್ಟ ಹಾಗೂ ಸರ್ವ ರೀತಿಯ ಅನುಕೂಲಗಳನ್ನು ಅಪೇಕ್ಷಿಸುತ್ತಾರೆ.

‘ಆದರೆ ಹಣ, ಸಮಯ ಮತ್ತು ಶಕ್ತಿಯನ್ನು ಉಳಿಸಲು ಈ ಯುವ ಗ್ರಾಹಕರು ಅನುಭವಿ ಗ್ರಾಹಕರ ಅಭಿಪ್ರಾಯ, ಸಲಹೆ, ಸೂಚನೆ ಪಡೆದು ಮುಂದುವರೆಯುವುದು ಸೂಕ್ತ’ ಎನ್ನುತ್ತಾರೆ ವಿಕ್ರಮ್ ಚಾರಿ.

ಮನೆಯೊಂದು, ಪಾತ್ರ ಹಲವು

ಮನೆ ಎಂದರೆ ಮನೆಯಂತಿದ್ದರೆ ಸಾಲದು. ಈಗ ಮನೆಯ ಒಂದೊಂದು ಕೋಣೆಗಳನ್ನು ಒಂದೊಂದು ಕೆಲಸಗಳಿಗೆ ನಿಯೋಜಿಸಲಾಗುತ್ತದೆ. ಅವು ಮಕ್ಕಳ ಆನ್‌ಲೈನ್‌ ಕ್ಲಾಸುಗಳಿಗೆ, ತಂದೆ–ತಾಯಿಯ ಜೂಮ್‌ ಮೀಟಿಂಗ್‌, ಸೆಮಿನಾರ್‌ಗಳಿಗೆ ಹಾಗೂ ಕಚೇರಿ ಕೆಲಸಗಳಿಗೆ ಹೊಂದುವಂತಿರಬೇಕು. ಇವುಗಳ ಜೊತೆಗೆ ಮನೆಯಲ್ಲಿರುವ ಹಿರಿಯರಿಗೂ ಅವರದೇ ಆದ ವೈಯಕ್ತಿಕ ಜಾಗವೊಂದಿರಬೇಕು. ಮಕ್ಕಳ ಕಚೇರಿ ಕೆಲಸಗಳು, ಮೀಟಿಂಗ್‌ಗಳೂ, ಮೊಮ್ಮಕ್ಕಳ ಆನ್‌ಲೈನ್‌ ಪಾಠಗಳು ಅವರಿಗೆ ಕಿರಿಕಿರಿಯಾಗದಂತೆ ಮನೆಯನ್ನು ವಿನ್ಯಾಸಗಳಿಸಬೇಕು.

ಹೊರಾಂಗಣಕ್ಕೂ ಆದ್ಯತೆ

ಈ ಕಂಫರ್ಟ್‌ ಮನೆಯ ನಾಲ್ಕು ಗೋಡೆಗಳ ಒಳಗಿನ ಅನುಕೂಲಕ್ಕೆ–ಆರಾಮಕ್ಕೆ ಮಾತ್ರ ಸೀಮಿತವಾಗಿಲ್ಲ. ಮನೆಯ ಹೊರಗಿನ ವಾತಾವರಣಕ್ಕೂ ಅಷ್ಟೇ ಪ್ರಾಮುಖ್ಯತೆ ಇದೆ. ಮನೆಯ ಅಥವಾ ಸಮುಚ್ಛಯದ ಸುತ್ತಮುತ್ತ ವ್ಯಾಯಾಮಕ್ಕೆ, ವಾಯುವಿಹಾರಕ್ಕೆ, ದೈಹಿಕ ಚಟುವಟಿಕೆಗೆ, ಕ್ರೀಡಾ ಸೌಲಭ್ಯಗಳು ಸೇರಿದಂತೆ ಸಾಕಷ್ಟು ಸ್ಥಳಾವಕಾಶ ಇರಬೇಕು ಎನ್ನುವುದು ಬಹುಮುಖ್ಯ ಬೇಡಿಕೆ. ಇವೆಲ್ಲ ಮನೆಯ ಆಯ್ಕೆಯಲ್ಲಿ ಮಹತ್ವದ ಮೈಲಿಗಲ್ಲುಗಳಾಗಿವೆ.

ಅಂತೆಯೇ, ಅನೇಕ ಡೆವಲಪರ್‌ಗಳು ಮಾರ್ಕೆಟಿಂಗ್‌ಗಿಂತ ಮುಖ್ಯವಾಗಿ ಈ ಎಲ್ಲಾ ಅಂಶಗಳನ್ನು ಹೊಂದಿರುವ ಉತ್ತಮ ವಿನ್ಯಾಸಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಖರೀದಿದಾರರೂ ಸಹ ಅದೇ ದರದಲ್ಲಿ ಈ ಹೊಸ ನೋಟಗಳನ್ನು ಹೊಂದಿರುವ ಮನೆಗಳ ಕಡೆಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಆದ್ದರಿಂದ ವಿಲ್ಲಾ ಮತ್ತು ಅಪಾರ್ಟ್‌ಮೆಂಟ್‌ ವಿಭಾಗಗಳಲ್ಲಿ ಮನೆ ಕಟ್ಟುವಾಗ ಸಾಕಷ್ಟು ತೆರೆದ ಸ್ಥಳಗಳು, ವ್ಯಾಪಕವಾದ ಸೌಕರ್ಯಗಳು ಮತ್ತು ಚಿಂತನಶೀಲವಾಗಿ ವಿನ್ಯಾಸಗೊಳಿಸಲಾದ ಒಳಾಂಗಣ ವಿನ್ಯಾಸಕ್ಕೆ ಹೆಚ್ಚಿನ ಗಮನ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.