ADVERTISEMENT

ಮನೆಯೂ ಸ್ವಚ್ಛ: ಮನಸ್ಸೂ ನಿರಾಳ

ಎಸ್‌.ಜಿ.ಹುತ್ತಗಾರ
Published 2 ಏಪ್ರಿಲ್ 2021, 19:30 IST
Last Updated 2 ಏಪ್ರಿಲ್ 2021, 19:30 IST
Young woman vacuuming a hotel room.Young woman vacuuming
Young woman vacuuming a hotel room.Young woman vacuuming   

‘ಮ ನೆಯೆಲ್ಲ ಸ್ವಚ್ಛವಾಗಿದ್ದರೂ ಮನಸ್ಸಿಗೆ ಬೇಸರವಾದಾಗಲೆಲ್ಲ ಮತ್ತೆ ಮತ್ತೆ ವಸ್ತುಗಳನ್ನೆಲ್ಲ ನೀಟಾಗಿಟ್ಟು, ನೆಲ ಒರೆಸುತ್ತೇನೆ. ಉಡುಪುಗಳನ್ನೆಲ್ಲ ಆಚೆ ತೆಗೆದು ಜೋಡಿಸಿಟ್ಟರೆ ಮನಸ್ಸಿನೊಳಗಿನ ದುಗುಡವೆಲ್ಲ ಮಂಗಮಾಯ’ ಎಂದು ಸ್ನೇಹಿತೆ ನವ್ಯಾ ನಕ್ಕಾಗ, ಹೌದಲ್ಲ, ಇದೊಂದು ಚಿಕಿತ್ಸಾ ಪದ್ಧತಿಯಿದ್ದಂತೆ ಎಂದು ಎಲ್ಲಿಯೋ ಓದಿದ್ದು ನೆನಪಾಯಿತು.

ಮನಸ್ಸಿನಲ್ಲಿ ಆತಂಕ ಮೂಡಿದಾಗ ಅಥವಾ ಖಾಲಿ ಖಾಲಿ ಎನಿಸಿದಾಗ ಮನೆಯನ್ನು ಸ್ವಚ್ಛ ಮಾಡುವ ಹವ್ಯಾಸ ಇಟ್ಟುಕೊಂಡವರ ಬಗ್ಗೆ ನೋಡಿ ಅಥವಾ ಕೇಳಿದ ಅನುಭವ ಬಹುತೇಕ ಮಂದಿಗೆ ಇರಬಹುದು. ಮನೆಯಲ್ಲಿ ಯಾರಾದರೂ ಇಂಥವರಿದ್ದರೆ, ಅಂದರೆ ಸಂಗಾತಿ, ಅತ್ತೆ– ಮಾವ ಅಥವಾ ಅವಿವಾಹಿತರಾಗಿದ್ದರೆ ಒಂದೇ ಕೊಠಡಿಯಲ್ಲಿ ವಾಸವಾಗಿರುವ ಸ್ನೇಹಿತ/ ಸ್ನೇಹಿತೆ ಇದ್ದರೆ ನಿರಾಳವಾಗುವುದು ನಿಶ್ಚಿತ. ನಮ್ಮ ಕಪಾಟಿನಿಂದ ಹಿಡಿದು, ಮೇಜಿನ ಮೇಲೆ, ಟಿಪಾಯ್‌, ಅಡುಗೆಮನೆ, ಸ್ನಾನದ ಕೊಠಡಿಯಲ್ಲಿ ಹರಡಿಕೊಂಡಿರುವ ವಸ್ತುಗಳನ್ನು ಜೋಡಿಸಿ, ನೆಲ, ಗೋಡೆಯ ದೂಳು ಹೊಡೆದು, ಲಕಲಕ ಹೊಳೆಯುವಂತೆ ತೊಳೆದು, ಒರೆಸಿದರೆ ಯಾರಿಗೆ ಖುಷಿಯಾಗುವುದಿಲ್ಲ ಹೇಳಿ!

ಮಾನಸಿಕ ಚಿಕಿತ್ಸೆ

ADVERTISEMENT

ವಸ್ತುಗಳೆಲ್ಲ ಹರಡಿಕೊಂಡು, ಮನೆಯೆಲ್ಲ ಧೂಳು, ಕಸದಿಂದ ಗಲೀಜಾಗಿದ್ದರೆ ಒತ್ತಡ ಸರ‍್ರಂತ ಏರಿಬಿಡುತ್ತದೆ. ಬೇಕಾದಷ್ಟು ಜನರಿಗೆ ಇದರ ಅನುಭವ ಆಗಿರಬಹುದು. ಮನೆಯಲ್ಲಿ ಪೇಪರ್‌ ಹರಡಿಕೊಂಡಿದ್ದರೂ ಸಾಕು, ‘ನೀಟಾಗಿಡಲು ನಿನಗೇನು ಸಮಸ್ಯೆ (ಜೊತೆಗೆ ಬೈಗಳವೂ ಸೇರಿಕೊಂಡಿರುತ್ತದೆ)?’ ಎಂಬ ಕೂಗಾಟದಿಂದಲೇ ಬೆಳಗು ಶುರುವಾಗಬಹುದು.

ಆದರೆ ತಾತ್ಕಾಲಿಕವಾಗಿ ಆತಂಕದ ಛಾಯೆ ಮನಸ್ಸಿನೊಳಗೆ ಮೂಡಿದಾಗ, ಎಲ್ಲೋ ಬೇಸರದ ನೆರಳು ಹಾದು ಹೋದಾಗ ಉಗುರು ಕಚ್ಚುತ್ತ, ಶತಪಥ ಓಡಾಡುತ್ತ ಇರುವ ಬದಲು ಈ ರೀತಿ ಮನೆಯೊಳಗೆ, ಹೊರಗೆ ಸ್ವಚ್ಛತಾ ಕಾರ್ಯ ಕೈಗೊಳ್ಳುವುದು ಒಂದು ರೀತಿ ಮಾನಸಿಕ ಚಿಕಿತ್ಸೆಯಿದ್ದಂತೆ ಎನ್ನುತ್ತಾರೆ ತಜ್ಞರು. ವಸ್ತುಗಳು ಚೆಲ್ಲಾಪಿಲ್ಲಿ ಹರಡಿಕೊಂಡಿದ್ದರೆ ಕೆಲವರಿಗೆ ಕಿರಿಕಿರಿಯಾಗಿ ಕೋಪ ಏರುಮುಖದಲ್ಲಿರುತ್ತದೆ. ಅಮ್ಮಂದಿರು ಮಕ್ಕಳ ಮೇಲೆ ಹೆಚ್ಚು ಸಲ ಕೂಗಾಡುವುದು ಇದೇ ಕಾರಣಕ್ಕಾಗಿಯೇ. ಅವೆಲ್ಲವನ್ನೂ ಜೋಡಿಸಿಟ್ಟಾಗಲೇ ಧುಮುಗುಡುವ ಕೋಪ ಶಾಂತವಾಗಿ ಕೂಲ್‌ ಪಾಯಿಂಟ್‌ಗೆ ಬರುವುದು. ಈ ರೀತಿಯ ಸ್ವಚ್ಛತಾ ಕಾರ್ಯದಿಂದ ಹಲವರಿಗೆ ಒತ್ತಡ ಕಡಿಮೆಯಾಗುವುದಂತೂ ನಿಜ.

ಈ ‘ಸ್ವಚ್ಛತಾ ಕಾರ್ಯ’ ಇದೆಯಲ್ಲ, ಆತಂಕವನ್ನು ಹೋಗಲಾಡಿಸಿ ಮನಸ್ಸನ್ನು ನಿಯಂತ್ರಿಸುವ ಹಾಗೇ, ಮನೆಯೊಳಗಿನ ವಾತಾವರಣವನ್ನು ನಿಯಂತ್ರಿಸುವ ಕೀ ನಮ್ಮ ಬಳಿಯೇ ಇದೆ ಎಂಬ ಸಮಾಧಾನದ ಭಾವನೆಯನ್ನು ಮೂಡಿಸುತ್ತದೆ ಎನ್ನುತ್ತಾರೆ ತಜ್ಞರು. ಬದುಕಿನಲ್ಲಿ ಕೆಲವೊಂದು ವಿಷಯ ನಮ್ಮ ನಿಯಂತ್ರಣ ಮೀರಿ ಏನೇನೋ ತಿರುವು ಪಡೆಯಬಹುದು. ಆದರೆ ಕನಿಷ್ಠ ನಮ್ಮ ಮನೆಯೊಳಗಿನ ವಾತಾವರಣವನ್ನಾದರೂ ನಿಯಂತ್ರಣದಲ್ಲಿ ಇಡಬಹುದಲ್ಲ ಎಂಬ ಸಮಾಧಾನ ಇದಕ್ಕೆ ಕಾರಣವಂತೆ.

ಮರೆಯೋಣ ಚಿಂತೆಯ...

ನೀವೇ ಅನುಭವ ಪಡೆದು ನೋಡಿ. ನಿಮ್ಮ ಮನೆಯ ವಾರ್ಡ್‌ರೋಬ್‌ ಅಥವಾ ಪುಸ್ತಕದ ಗೂಡಿನಲ್ಲಿ ಯದ್ವಾತದ್ವಾ ಹರಡಿಕೊಂಡಿರುವ ವಸ್ತುಗಳನ್ನು ಚೆಂದವಾಗಿ ಜೋಡಿಸಿ. ಸ್ವಲ್ಪ ಸಮಯದಲ್ಲೇ ಮನಸ್ಸಿನೊಳಗಿನ ಒತ್ತಡವೆಲ್ಲ ಕಡಿಮೆಯಾಗುತ್ತ ಬರುತ್ತದೆ. ಇದೇ ರೀತಿ ಯೋಜಿತ ರೀತಿಯಲ್ಲಿ ಬದುಕು ಸಾಗಬಹುದು ಎಂಬ ಹೋಲಿಕೆ ಕೂಡ ಮನಸ್ಸಿನಲ್ಲಿ ನಿರಾಳ ಮೂಡಿಸುತ್ತದೆ. ಹಾಗೆಯೇ ಸ್ವಚ್ಛತಾ ಕಾರ್ಯದಲ್ಲಿ ಸಂಪೂರ್ಣ ಮನಸ್ಸು ತಲ್ಲೀನವಾಗಿ ಬೇರೆ ಎಲ್ಲ ಚಿಂತೆಯನ್ನು ತಾತ್ಕಾಲಿಕವಾಗಿಯಾದರೂ ಮರೆಯಬಹುದು.

ಇದು ಮನಸ್ಸಿಗೆ ಮಾತ್ರವಲ್ಲ, ದೈಹಿಕವಾಗಿಯೂ ಒಂದಿಷ್ಟು ಕಸರತ್ತು ಕೊಡುತ್ತದೆ. ಮನೆಯೊಳಗೆ ಓಡಾಡುತ್ತ, ಮೆಟ್ಟಿಲು ಹತ್ತುತ್ತ– ಇಳಿಯುತ್ತ, ದೂಳು ಹೊಡೆಯುವಾಗ ಬಗ್ಗುತ್ತ ಸಾಕಷ್ಟು ವ್ಯಾಯಾಮ ಸಿಗುತ್ತದೆ. ಪಾತ್ರೆ ತೊಳೆಯುವಾಗ, ನೆಲ ಒರೆಸುವಾಗ ತೋಳಿಗೆ ಕೂಡ ವ್ಯಾಯಾಮ ಒದಗಿಸುತ್ತದೆ. ಈ ತರಹದ ಸಣ್ಣಪುಟ್ಟ ವ್ಯಾಯಾಮ ಮಾನಸಿಕ ಲವಲವಿಕೆಗೂ ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞರು.

ಆದರೆ ನೀವು ನಿಮ್ಮ ಒತ್ತಡ ಮತ್ತು ಚಿಂತೆ ಮರೆಯಲು ಮತ್ತು ಮನಸ್ಸನ್ನು ನಿರಾಳವಾಗಿಟ್ಟುಕೊಳ್ಳಲು ಹರಡಿಕೊಂಡಿರುವ ವಸ್ತುಗಳನ್ನು ಸರಿಪಡಿಸಿ. ಅದರ ಬದಲು ನಿಮ್ಮ ಕುಟುಂಬದ ಸದಸ್ಯರಿಗೂ ಕೂಡ ಇದೇ ರೀತಿ ಎಲ್ಲ ವಸ್ತುಗಳನ್ನು ನೀಟಾಗಿ ಇಟ್ಟುಕೊಳ್ಳಬೇಕು ಎಂಬ ಉಪದೇಶ ಮಾಡಲಿಕ್ಕೆ ಹೋಗಬೇಡಿ.

ಏಕಾಗ್ರತೆ

ನಮ್ಮ ಸುತ್ತಮುತ್ತಲಿನ ಜಾಗ ಸ್ವಚ್ಛಗೊಳಿಸುವುದರಿಂದ ಮನಸ್ಸು ಪ್ರಫುಲ್ಲವಾಗಿ ಬೇರೆ ಕೆಲಸ ಮಾಡುವಾಗಲೂ ಏಕಾಗ್ರತೆ ಮೂಡುತ್ತದೆ. ಉದಾಹರಣೆಗೆ ನಾವು ಬೆಳಿಗ್ಗೆ ಎದ್ದ ನಂತರ ಹಾಸಿಗೆಯ ಹೊದಿಕೆಯನ್ನು ಸರಿಪಡಿಸಿ ಇಡುವುದರಿಂದ ಇಡೀ ದಿನ ಖುಷಿಯಾಗಿರಬಹುದು, ಕಚೇರಿ ಕೆಲಸವೂ ಸುಲಭವಾಗಿ ಸಾಗುತ್ತದೆ ಎನ್ನುತ್ತಾರೆ ತಜ್ಞರು.

ಈ ಸ್ವಚ್ಛ ಮಾಡುವ ಕೆಲಸ, ಜೋಡಿಸಿಡುವುದು ಇವಕ್ಕೆಲ್ಲ ಕೊನೆ ಎಂಬುದಿಲ್ಲ. ನಿರಂತರವಾಗಿ ನಡೆಯುತ್ತಿರುತ್ತದೆ. ಒಂದು ಮನೆಯಲ್ಲಿ ಸ್ವಚ್ಛತೆಯ ಗೀಳು ಇರುವವರಿದ್ದರೆ, ಹಾಗೆಯೇ ಎಲ್ಲವನ್ನೂ ಹರಡಿಕೊಂಡು ಅದರ ಮಧ್ಯೆಯೇ ಆರಾಮವಾಗಿರುವವರೂ ಇರುತ್ತಾರೆ. ಹೀಗಾಗಿ ಒಬ್ಬರು ಕೊಳೆ ಮಾಡುವುದು, ಇನ್ನೊಬ್ಬರೂ ಸ್ವಚ್ಛ ಮಾಡುವುದು ಒಂದು ಚಕ್ರದಂತೆ ನಡೆಯುತ್ತಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.