ADVERTISEMENT

ನೃತ್ಯ ಸಾಧನೆಯ ಸಾರ್ಥಕ ಅಭಿವ್ಯಕ್ತಿ

ನಾದ ನೃತ್ಯ

ವೈ.ಕೆ.ಸಂಧ್ಯಾಶರ್ಮ
Published 30 ಆಗಸ್ಟ್ 2016, 19:30 IST
Last Updated 30 ಆಗಸ್ಟ್ 2016, 19:30 IST
ಅವನಿ
ಅವನಿ   

ಎತ್ತರದ ಸಪೂರ ನಿಲುವು, ಭಾವ ಸ್ಪಂದನ ಹೊರ ಸೂಸುವ ಹೊಳಪು ಕಂಗಳು, ಮೆಲುನಗೆ ಬೀರುವ ಹಸನ್ಮುಖಿ ಹದಿನಾರರ ಹರಿಣಿ– ಅವಳ ಹೆಸರು ಅವನಿ. ಜ್ಞಾನಗಂಗಾ ಶಿವಯೋಗಿ ಸಭಾ ಭವನದಲ್ಲಿ ಈಚೆಗೆ ನಡೆದ ‘ನೃತ್ಯಾಂಕುರ’ ಕಾರ್ಯಕ್ರಮದಲ್ಲಿ ಅವನಿ ತನ್ನ ಪ್ರತಿಭೆ ಮೆರೆದರು.

‘ಕಲಾಕ್ಷಿತಿ’ ಖ್ಯಾತಿಯ ಎಂ.ಆರ್.ಕೃಷ್ಣ ಮೂರ್ತಿ ಅವರ ಶಿಷ್ಯೆ ವಿದುಷಿ ದೀಪಾಭಟ್ ಅವರಲ್ಲಿ ಬದ್ಧತೆಯಿಂದ ಭರತನಾಟ್ಯಾಭ್ಯಾಸ ಮಾಡಿದ ಅವನಿ ಸಾಧನೆಯ ಮಜಲು ನೃತ್ಯ ಪ್ರಸ್ತುತಿಯಲ್ಲಿ ವ್ಯಕ್ತಗೊಂಡಿತು.

ಸಾಂಪ್ರದಾಯಿಕ ಶೈಲಿಗೆ ನಿಷ್ಠರಾಗಿ, ಶಾಸ್ತ್ರೀಯ ಚೌಕಟ್ಟಿಗೆ ಬದ್ಧರಾಗಿದ್ದರು ಅವನಿ. ಪ್ರಸ್ತುತಪಡಿಸಿದ ಎಲ್ಲ ಕೃತಿಗಳಲ್ಲೂ ಶುದ್ಧ ರೂಪ ಕಾಯ್ದುಕೊಂಡಿದ್ದರು. ಇದು ಮನಸ್ಸಿಗೆ ಆಹ್ಲಾದ ತಂದಿತು. ಗುರು ದೀಪಾ ಅವರ ನಟುವಾಂಗ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.

ಗಂಭೀರ ನಾಟ ರಾಗ-ಆದಿತಾಳದ ‘ಪುಷ್ಪಾಂಜಲಿ’ಯ ಸುಂದರ ನೃತ್ತಗಳೊಂದಿಗೆ ನೃತ್ಯ ಪ್ರದರ್ಶನ ಆರಂಭಗೊಂಡಿತು. ವೈವಿಧ್ಯಪೂರ್ಣ ನೃತ್ತಗಳಿಂದ ಕೂಡಿದ ಪುಷ್ಪಾಂಜಲಿಯನ್ನು ಅವನಿ ಅಚ್ಚುಕಟ್ಟಾಗಿ ನಿರ್ವಹಿಸಿದರು.

ಖಂಡಜಾತಿಯ ಸಾಂಪ್ರದಾಯಿಕ ‘ಅಲಾರಿಪು’ವನ್ನು ಅವನಿ, ಖಚಿತ ಹಸ್ತಮುದ್ರೆ, ಆಕರ್ಷಕ ಅಡವುಗಳ ಸುಂದರ ಅಭಿವ್ಯಕ್ತಿಯಲ್ಲಿ ಸರಳ ಪ್ರಾರ್ಥನಾ ರೂಪದ ನೃತ್ಯವನ್ನು ಅರ್ಪಿಸಿದಳು.

ಇದರಲ್ಲಿ ದೇವರು, ಭೂಮಿ, ಗುರುಗಳು ಹಾಗೂ ಸಭಾಸದನಲ್ಲಿ ನೆರೆದಿದ್ದ ಪ್ರೇಕ್ಷಕರಿಗೂ ಸವಿನಯವಾಗಿ ನೃತ್ಯದ ಮೂಲಕ ವಂದನೆ  ಸಲ್ಲಿಸಿದಳು. ಹಿನ್ನಲೆಯಲ್ಲಿ ಕಲ್ಯಾಣಿ ರಾಗದ ಮುರುಗ ಸ್ತುತಿ ಮೂಡಿಬಂತು. 

ತಂಜಾವೂರು ಸಹೋದರರ ರಚನೆಯಾದ ‘ಗೋಕುಲಾಂಬುಧಿ ಚಂದ್ರ ಸುಂದರ’ (ರಾಗ ಮಾಲಿಕಾ, ಮಿಶ್ರಛಾಪು ತಾಳ) ಕೃತಿಗೆ ನೃತ್ಯ ಸಂಯೋಜಿಸಿದವರು ಖ್ಯಾತ ನೃತ್ಯಜ್ಞೆ ರುಕ್ಮಿಣಿದೇವಿ ಅರುಂಡೆಲ್. ಶ್ರೀಕೃಷ್ಣನ ಬಾಲಲೀಲೆಗಳ ವಿವರಗಳನ್ನು ಕಲಾವಿದೆ, ಬಹು ಸೂಕ್ಷ್ಮವಾಗಿ ಸಾಕಾರಗೊಳಿಸುತ್ತ ಕಲಾಸಕ್ತರ ಮನಸೂರೆಗೊಂಡರು.

ಬೆಣ್ಣೆಕಳ್ಳನಾದ ಬಾಲಗೋಪಾಲನ ತುಂಟ ತನಗಳು ಮತ್ತು ಗೋಪಿಕೆಯರ ಮನಸೆಳೆದ ಸುಂದರ ಕೃಷ್ಣನ ಅನುಪಮ ವರ್ಣನೆಗಳಿಗೆ ತನ್ನ ಮನೋಹರ ಭಾವಭಂಗಿಗಳ ಅಭಿನಯದಲ್ಲಿ ಮುಗ್ಧತೆ ಮೆರೆದಳು.

ತಂಜಾವೂರಿನ ಬೃಹದೀಶ್ವರಸ್ವಾಮಿಯ ಕುರಿತಾದ ವರ್ಣ ‘ಮನವಿಚೆ ಕೋ ನಾ’ (ಶಂಕರಾಭರಣ ರಾಗ, ಆದಿತಾಳ, ರಚನೆ– ತಂಜಾವೂರು ಸೋದರರು). ಗುರುಗಳು ಹೇಳಿಕೊಟ್ಟದ್ದನ್ನು ಅಚ್ಚುಕಟ್ಟಾಗಿ ಸರಳ ಆಂಗಿಕಾಭಿನಯದಿಂದ ಪ್ರದರ್ಶಿಸಿದರು.

ತನ್ನ ಸ್ವಾಮಿಯಿಂದ ದೂರವಾಗಿ ಕಡುನೊಂದ ನಾಯಕಿಗೆ ಹಿತವಾದ ತಂಗಾಳಿ, ಸುಂದರ ಗಿಳಿ, ದುಂಬಿಗಳ ಝೇಂಕಾರ ಹಿತವೆನಿಸದೆ, ಅವಳ ಮನಸ್ಸು ಇನಿಯನೆಡೆಗೆ ಒಂದೇಸಮನೆ ತುಡಿಯುವ ತೀವ್ರ ಪರಿತಾಪದ ಭಾವನೆಯನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದರು.

ಯಾವುದೇ ಕೃತಕ ಮೆರುಗು-ಮೋಡಿಗಳನ್ನು ತೋರದೆ, ಸಹಜತೆಯಿಂದ ಅರಳಿದ ಸಾಂಪ್ರದಾಯಿಕ ಶೈಲಿಯ ಘಮದಿಂದ ನೃತ್ಯ ಮುದ ನೀಡಿತು. ಆಕೆಯ ಲಯ ಜ್ಞಾನ-ತಾಳಬದ್ಧತೆ ಮೆಚ್ಚುವಂತಿತ್ತು.

‘ಪದಂ’ಗಾಗಿ ಸುರುಟಿ ರಾಗ– ಮಿಶ್ರಛಾಪು ತಾಳದ, ‘ಇದೆಂದು ವಚ್ಚೀತಿವಿರಾ’ ಕೃತಿಗೆ ಗೌರಿ ಅಮ್ಮಾಳ್ ನೃತ್ಯ ಸಂಯೋಜನೆ ಸೊಗಸಾಗಿತ್ತು. ಇದೊಂದು ಖಂಡಿತಾ ನಾಯಕಿ ಪ್ರಧಾನವಾದ ಕ್ಷೇತ್ರಜ್ಞನ  ಪದ.

ಇದರಲ್ಲಿ ಅಲಂಕೃತಳಾದ ನಾಯಕಿ ತನ್ನ ಪ್ರಿಯಕರನಲ್ಲಿ ವಿಪ್ರಲಂಬ ಶೃಂಗಾರ ತೋರುವ ಸಂದರ್ಭ. ಕಲಾವಿದೆಯ ಮೆಲುನಡೆ, ಮೃದುಭಾವದ ಅಭಿನಯ, ಭಾವುಕತೆಯ ತನ್ಮಯತೆ ನಿರಾಡಂಬರವಾಗಿ ವ್ಯಕ್ತವಾದದ್ದು ವಿಶೇಷ.

ಪಾಪನಾಶಂ ಶಿವನ್ ರಚಿಸಿದ ಕೀರ್ವಾಣಿ ರಾಗದ ಕೀರ್ತನೆಗೆ ಪ್ರೊ. ಎಂ.ಅರ್.ಕೃಷ್ಣಮೂರ್ತಿ ಅವರ ನೃತ್ಯ ಸಂಯೋಜನೆ ವಿಶಿಷ್ಟವಾಗಿತ್ತು. ಮಧುರೈಯಲ್ಲಿ ನೆಲೆಸಿರುವ, ಸುಂದರೇಶ್ವರನ ಹೃದಯ ಗೆದ್ದ ಭುವನಸುಂದರಿ ಮೀನಾಕ್ಷಿಯ ಸುಂದರ ವರ್ಣನೆಯ ವಿವರಗಳನ್ನು  ಅವನಿ ಪ್ರಸ್ತುಪಡಿಸಿ, ಭಕ್ತಿರಸ ಹೊಮ್ಮಿಸಿದರು.

ಕಲಾವಿದೆಯ ಮುಂದಿನ ಪ್ರಸ್ತುತಿ ಶಾಸ್ತ್ರೀಯ ಮಾರ್ಗದಿಂದ ಕೊಂಚ ಭಿನ್ನವಾದ, ಅಷ್ಟೇ ಆಹ್ಲಾದಕರವಾದ ಭಾವಗೀತೆಯತ್ತ ಹೊರಳಿತ್ತು. ಮಧುವಂತಿ ರಾಗದ ಪು.ತಿ.ನ. ಅವರ ‘ಗೋಕುಲ ನಿರ್ಗಮನ’ದಿಂದ ಸುಂದರ ಭಾವಗೀತೆಯ ಭಾಗವನ್ನು ಆರಿಸಿಕೊಳ್ಳಲಾಗಿತ್ತು.

ತನ್ನ ಪ್ರಿಯತಮ ಶ್ರೀಕೃಷ್ಣನ  ಆಗಮನವನ್ನು ನಿರೀಕ್ಷಿಸುತ್ತ ರಾಧೆ, ಅನುಭವಿಸುವ ಕಾತರತೆ, ತಲ್ಲಣ, ನಿರೀಕ್ಷೆಗಳ ಭಾವಸಮ್ಮಿಲನವನ್ನು ಕಲಾವಿದೆ ತನ್ನ ಸಹಜಾಭಿನಯದ ಓಘದಿಂದ ಕಲಾಸಕ್ತರಿಗೆ ತಲುಪಿಸಿದರು.

ನೃತ್ಯಾಂಕುರದ ಅಂತಿಮ ಭಾಗದಲ್ಲಿ ನೃತ್ತ ಪ್ರಮುಖವಾದ ‘ತಿಲ್ಲಾನ’ದಲ್ಲಿ ಅಪೂರ್ವ ಜತಿಗಳ ಪ್ರದರ್ಶನದೊಂದಿಗೆ ನೃತ್ಯ ರಸಧಾರೆಯನ್ನು ಹರಿಸಿದಳು (ರಚನೆ– ಸೀತಾರಾಮಶರ್ಮ, ರಾಗ– ಹಿಂದೋಳ).

ಮಾಲಾ ವೆಂಕಟೇಶ್ (ಗಾಯನ), ಜಿ.ಎಸ್.ನಾಗರಾಜ್ (ಮೃದಂಗ) ಮತ್ತು ಸ್ಕಂದಕುಮಾರ್ (ಕೊಳಲು) ಸಂಗೀತದಲ್ಲಿ ಸಹಕರಿಸಿದರು. ಪುಟ್ಟರಾಯ ಭಟ್ ಕೃತಿಗಳ ಹಿನ್ನಲೆ ಪರಿಚಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT