ADVERTISEMENT

ಕೆಸರಲ್ಲಿ ಅರಳಿ ಬೆಳಕಿನೆಡೆಗೆ ತುಡಿವ ಕಮಲ

ಪದ್ಮನಾಭ ಭಟ್ಟ‌
Published 1 ಸೆಪ್ಟೆಂಬರ್ 2016, 19:30 IST
Last Updated 1 ಸೆಪ್ಟೆಂಬರ್ 2016, 19:30 IST
ಮಾಳವಿಕಾ ಸಾರುಕ್ಕೈ
ಮಾಳವಿಕಾ ಸಾರುಕ್ಕೈ   

ತಮಿಳುನಾಡು ಮೂಲದ ಮಾಳವಿಕಾ ಸಾರುಕ್ಕೈ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ನಾಟ್ಯ ಕಲಾವಿದೆ. ಕಲಾವಿದೆಯಾಗಿ, ನೃತ್ಯ ಸಂಯೋಜಕಿಯಾಗಿ ಭರತನಾಟ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅನನ್ಯ.

ಮಾಳವಿಕಾ ಅವರ ತಾಯಿಯೂ ಭರತನಾಟ್ಯ ಕಲಾವಿದೆಯಾಗಿದ್ದರು. ಆದ್ದರಿಂದ ಎಳವೆಯಲ್ಲಿ ನೃತ್ಯದ ಗೆಜ್ಜೆ ಸದ್ದು ಕೇಳುತ್ತ ಬೆಳೆದ ಅವರು ಏಳನೇ ವಯಸ್ಸಿನಲ್ಲಿ ಭರತನಾಟ್ಯ ಅಭ್ಯಾಸಕ್ಕೆ ತೊಡಗಿಕೊಂಡರು. ಕಳೆದ ಐದು ದಶಕಗಳಿಂದ ಭರತನಾಟ್ಯ ಕ್ಷೇತ್ರದಲ್ಲಿರುವ ಮಾಳವಿಕಾ ಕೂಚಿಪುಡಿಯನ್ನೂ ಕಲಿತಿದ್ದಾರೆ.

‘ಶಾಸ್ತ್ರೀಯತೆಯ ಚೌಕಟ್ಟಿನಲ್ಲಿಯೇ ಹೊಸದನ್ನು ಕಟ್ಟಬೇಕು. ಹೊಸದನ್ನು ಕಟ್ಟುವ ಭರದಲ್ಲಿ ಪರಂಪರೆಯನ್ನು ಪೂರ್ತಿ ಮರೆಯುವುದು ಸರಿಯಲ್ಲ. ಹಾಗೆಂದು ಪರಂಪರೆಯ ಚೌಕಟ್ಟಿಗೆ ಅಂಧರಾಗಿ ಅಂಟಿಕೊಂಡಿರುವುದೂ ಸಮಂಜಸವಲ್ಲ’ ಎನ್ನುವ ಮಾಳವಿಕಾ ‘ಪರಂಪರೆಯ ಸತ್ವವನ್ನು ಉಳಿಸಿಕೊಂಡೇ ಹೊಸದನ್ನು ಕಟ್ಟಬೇಕು. ಆಗ ನಾವು ಹೊಸದಾಗಿ ರೂಪಿಸಿದ್ದು ಪರಂಪರೆಗೆ ವಿರುದ್ಧವಾಗಿಯಲ್ಲ, ಅದರ ಮುಂದುವರಿಕೆಯೇ ಆಗಿರುತ್ತದೆ’ ಎಂದು ನಂಬಿದ್ದಾರೆ.

ಮಾಳವಿಕಾ ಅವರ ನೃತ್ಯಪ್ರತಿಭೆಗೆ ಹಲವಾರು ಪ್ರಶಸ್ತಿಗಳೂ ಸಿಕ್ಕಿವೆ. ಸಂಗೀತ ನಾಟ್ಯ ಅಕಾಡೆಮಿ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿಗಳು ಈ ಪೈಕಿ ಪ್ರಮುಖವಾದವು.

ಏಕವ್ಯಕ್ತಿ ನಾಟ್ಯ ಸಂಯೋಜನೆ ಮತ್ತು ಪ್ರದರ್ಶನಕ್ಕೆ ಹೆಸರಾಗಿದ್ದ ಮಾಳವಿಕಾ ಈಗ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಸಮೂಹ ನೃತ್ಯವನ್ನೂ ಸಂಯೋಜಿಸಿದ್ದಾರೆ.

‘ವಾಮತಾರಾ– ಟು ದ ಲೈಟ್‌’ ಇದು ಅವರ ಸಂಯೋಜನೆಯ ನೂತನ ನೃತ್ಯಕೃತಿ. ಈ ನೃತ್ಯವು ಇಂದು (ಸೆ. 02) ನಗರದ ಚೌಡಯ್ಯ ಸ್ಮಾರಕ ಭವನದದಲ್ಲಿ ಪ್ರದರ್ಶಿತವಾಗಲಿದೆ. ‘ವಾಮತಾರಾ’ ಭಾರತೀಯ ಪುರಾಣಕಥನಗಳಲ್ಲಿ ಪದೇ ಪದೇ ಸಾಂಕೇತಿಕವಾಗಿ ಬಳಕೆಯಾಗುವ ಕೆಸರಿನಲ್ಲಿ ಅರಳಿ ಬೆಳಕಿನೆಡೆಗೆ ತುಡಿಯುವ ಕಮಲದ ರೂಪಕವನ್ನು ಬಳಸಿಕೊಂಡು ರೂಪಿತಗೊಂಡ ನೃತ್ಯಕೃತಿ. ಪುರಾಣದ ಬೇರೆ ಬೇರೆ ಪ್ರಸಂಗವನ್ನು ಕಮಲ ಹೂವಿನ ಮೂಲಕ ಮರುನಿರ್ವಚಿಸುವ ವಿಶಿಷ್ಟ ನೃತ್ಯ ಸಂಯೋಜನೆ ಇದು.

‘ಇದು ಕಮಲದ ರೂಪಕವನ್ನು ಬಳಸಿಕೊಂಡು ರೂಪಿಸಿದ ನೃತ್ಯಕೃತಿ. ಭಾರತೀಯ ಚಿಂತನ ಪರಂಪರೆ, ಸಂಸ್ಕೃತಿ, ಅಧ್ಯಾತ್ಮಗಳಲ್ಲಿ ಕಮಲ ತುಂಬ ಮಹತ್ವದ ಸಂಕೇತವಾಗಿ ಬಳಕೆಯಾಗಿದೆ.  ಈ ಕಮಲದ ಪ್ರತಿಮೆಯನ್ನು ಬಳಸಿಕೊಂಡು ಪರಂಪರೆಯನ್ನು ಬಿಂಬಿಸುವ ಕೃತಿ ಇದು’ ಎನ್ನುವ ಮಾಳವಿಕಾ ಒಂದು ನಿದರ್ಶನವನ್ನೂ ಕೊಡುತ್ತಾರೆ.

‘ಈ ನೃತ್ಯದ ಒಂದು ಭಾಗದಲ್ಲಿ ಮೀರಾ ಭಜನ್‌ ಬಳಸಿಕೊಳ್ಳಲಾಗಿದೆ. ಅಲ್ಲಿ ಮೀರಾ ಎದೆಯಲ್ಲಿ ಕಮಲ ಅರಳುತ್ತಿರುವಂತೆ ಸಂಯೋಜಿಸಲಾಗಿದೆ. ಇಲ್ಲಿ ಕಮಲ ಅವಳ ಆತ್ಮಸಾಕ್ಷಾತ್ಕಾರದ ಪ್ರತೀಕವಾಗಿಯೂ ಕಾಣುತ್ತದೆ’ ಎನ್ನುವುದು ಅವರ ವಿವರಣೆ.

‘ವಾಮತಾರಾ’ದಲ್ಲಿ ಮಾಳವಿಕಾ ಅವರ ಎರಡು ಸೋಲೊ ನೃತ್ಯಗಳಿವೆ. ಹಾಗೆಯೇ ಎರಡು ಸಮೂಹ ನೃತ್ಯವೂ ಇದೆ. ಇದೇ ಮೊದಲ ಬಾರಿಗೆ ಸಮೂಹ ನೃತ್ಯ ಸಂಯೋಜನೆ ಮಾಡಿರುವ ಮಾಳವಿಕಾ ಅವರಿಗೆ ಇದರಿಂದ ಸಾಕಷ್ಟು ಕಲಿತುಕೊಳ್ಳಲು ಸಾಧ್ಯವಾಗಿದೆಯಂತೆ. ಸಮೂಹ ನೃತ್ಯ ಮತ್ತು ಏಕವ್ಯಕ್ತಿ ನೃತ್ಯಗಳ ನಡುವಣ ವ್ಯತ್ಯಾಸಗಳ ಕುರಿತು ಅವರು ವಿವರಿಸುವುದು ಹೀಗೆ.

‘ಸೋಲೊ ನೃತ್ಯದಲ್ಲಿ ಸಾಕಷ್ಟು ಸ್ವಾತಂತ್ರ್ಯವಿರುತ್ತದೆ. ಇಡೀ ವೇದಿಕೆ ನಿಮ್ಮದಾಗಿರುತ್ತದೆ. ಆದರೆ ಸಮೂಹ ನೃತ್ಯದಲ್ಲಿ ನಾವು ಬೇರೆ ಸಹಕಲಾವಿದರೊಡನೆ ವೇದಿಕೆಯನ್ನು ಹಂಚಿಕೊಳ್ಳುತ್ತಿರುತ್ತೇವೆ. ಬರಿ ವೇದಿಕೆಯನ್ನಷ್ಟೇ ಅಲ್ಲ, ನೃತ್ಯ ಚೈತನ್ಯವನ್ನೂ ಹಂಚಿಕೊಳ್ಳುತ್ತಿರುತ್ತೇವೆ. ಪ್ರತಿ ನೃತ್ಯಗಾರರಿಗೂ ಅವರದೇ ಆದ ಚೈನತ್ಯವಿರುತ್ತದೆ.

ಸಮೂಹ ನೃತ್ಯದ ಸಂದರ್ಭದಲ್ಲಿ ಆ ಚೈತನ್ಯವನ್ನೂ ಹಂಚಿಕೊಂಡು ನೃತ್ಯವನ್ನು ಕಟ್ಟಬೇಕಾಗುತ್ತದೆ. ಇದೊಂದು ವಿಶಿಷ್ಟ ಅನುಭವ. ನಾನಿದನ್ನು ಸಾಕಷ್ಟು ಎಂಜಾಯ್‌ ಮಾಡಿದ್ದೇನೆ’ ಎನ್ನುತ್ತಾರೆ ಮಾಳವಿಕಾ. ಪ್ರದರ್ಶನದ ವಿವರಗಳು ಮಾಳವಿಕಾ ಸಾರುಕ್ಕೈ ಸಂಯೋಜನೆಯ ’ವಾಮತಾರಾ– ಟು ದ ಲೈಟ್‌’ ನೃತ್ಯವು ಇಂದು (ಸೆ.2) ಚೌಡಯ್ಯ ಸ್ಮಾರಕ ಭವನದಲ್ಲಿ ಪ್ರದರ್ಶನಗೊಳ್ಳಲಿದೆ.

ವಿಳಾಸ: ಚೌಡಯ್ಯ ಸ್ಮಾರಕ ಭವನ, 16ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, ಜಿ.ಡಿ. ಪಾರ್ಕ್‌ ವಿಸ್ತರಣೆ, ವಯ್ಯಾಲಿಕಾವಲ್‌, ಮಲ್ಲೇಶ್ವರ.  ಸಂಜೆ 7.30.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.