ADVERTISEMENT

ವೈದ್ಯರಾಗಿ ಇದನ್ನೂ ಮಾಡೋಣ!

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2016, 19:30 IST
Last Updated 16 ಸೆಪ್ಟೆಂಬರ್ 2016, 19:30 IST
ವೈದ್ಯರಾಗಿ ಇದನ್ನೂ ಮಾಡೋಣ!
ವೈದ್ಯರಾಗಿ ಇದನ್ನೂ ಮಾಡೋಣ!   

ಐದೂವರೆ ವರ್ಷಗಳ ಎಂ.ಬಿ.ಬಿ.ಎಸ್. ಕೋರ್ಸ್ ಮುಗಿಸಿ, ನಂತರದ ಒಂದು ವರ್ಷ ಪ್ರವೇಶ ಪರೀಕ್ಷೆಗೆ ತಯಾರಾಗಿ, ಮೂರು ವರ್ಷಗಳ ಎಂ.ಡಿ./ಎಂ.ಎಸ್. ಮುಗಿಸುವಷ್ಟರಲ್ಲಿ ಎಂತಹ ಒಳ್ಳೆಯ ವಿದ್ಯಾರ್ಥಿಗೂ ಸುಸ್ತು. 

ಕೆಲಸಕ್ಕೆ ಸೇರಿ ದುಡಿಯಲು ಪ್ರಾರಂಭಿಸಿದರೆ ಸಾಕು ಎಂಬ ಆತುರ.  ನಿಧಾನವಾಗಿ ಪ್ರಾಕ್ಟೀಸ್ ಜಾಸ್ತಿಯಾಗಿ, ರೋಗಿಗಳಿಗೆ ಚಿಕಿತ್ಸೆ ನೀಡಿ, ಅವರು ಗುಣಮುಖವಾಗುವುದನ್ನು ಕಂಡರೆ ಏನೋ ತೃಪ್ತಿ, ಹಾಗೆಯೇ ಜೀವನ ನಿರ್ವಹಣೆಗೆ ಬೇಕಾದ ಹಣದ ಆವಶ್ಯಕತೆಯೂ ನೀಗತೊಡಗಿದಾಗ ಸಂತಸ. 

ಆದರೆ ಕೇವಲ ನಾಲ್ಕು ಗೋಡೆಯ ಮಧ್ಯೆ ಕುಳಿತು ತಮ್ಮಲ್ಲಿ ಬಂದ ರೋಗಿಗಳ ಚಿಕಿತ್ಸೆ ನೀಡುವುದು ಮಾತ್ರ ವೈದ್ಯರ ಕರ್ತವ್ಯವೇ?  ಕ್ಯಾನ್ಸರ್ ಸರ್ಜನ್ (Onco Surgeon) ಆಗಿ ರೋಗಿಗಳಿಗೆ ಗಡ್ಡೆಯಾದಾಗ ಆಪರೇಷನ್ ಮಾಡಿ ತೆಗೆದರೆ ಸಾಕೇ?  ಅಥವಾ ನಲವತ್ತು ವರ್ಷಕ್ಕೆ ಮೇಲ್ಪಟ್ಟ ಎಲ್ಲ ಮಹಿಳೆಯರೂ ‘ಮ್ಯಾಮೊಗ್ರಾಮ್’ ಮಾಡಿಸಿಕೊಳ್ಳಬೇಕೆಂದು ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕೇ? 

ತಮ್ಮ ಕನ್ಸಲ್ಟೇಷನ್ ಕೋಣೆಯಲ್ಲಿ ಕುಳಿತು, ಬಂದ ಮಧುಮೇಹದ ರೋಗಿಗೆ ವ್ಯಾಯಾಮದ ಬಗ್ಗೆ ಸಲಹೆ ನೀಡಿದರೆ ಸಾಕೇ?  ಅಥವಾ ಆರೋಗ್ಯವಂತ ಜನರಲ್ಲಿ ವ್ಯಾಯಾಮದಿಂದ ಆಗುವ ಲಾಭಗಳ ಬಗ್ಗೆ ತಿಳಿವಳಿಕೆ ನೀಡಬೇಕೇ?  ಮನೋವೈದ್ಯರೊಬ್ಬರು ಬಂದ ರೋಗಿಗೆ ಹೇಳುತ್ತಾರೆ.

‘ನೋಡಮ್ಮಾ, ಚಿಕಿತ್ಸೆ ಎಷ್ಟು ತಡವಾಯಿತು. ದೇವರು-ದೆವ್ವ ಎಂದು ಓಡಾಡಿ, ಕಾಯಿಲೆಯಾಗಿ ಒಂದು ವರ್ಷದ ನಂತರ ನನ್ನಲ್ಲಿ ಬಂದಿದ್ದೀರಾ, ನೀವು ಹೀಗೆ ಮಾಡಬಾರದಿತ್ತು’.  ಇದೇ ಮನೋವೈದ್ಯರು ಈ ಬಗ್ಗೆ ಸರಿಯಾದ ಮಾಹಿತಿ ಸಮಾಜದಲ್ಲಿ ಹೆಚ್ಚು ಜನರಿಗೆ ತಲುಪುವಂತೆ ಮಾಡಿದರೆ, ಈ ರೋಗಿಯೊಬ್ಬರಲ್ಲದೇ, ಸಾವಿರಾರು ಜನರಿಗೆ ಉಪಯುಕ್ತವಲ್ಲವೇ?

ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಪ್ರಬಲ ಸಾಧನ, ಮಾಧ್ಯಮಗಳು.  ಇನ್ನುಳಿದಂತೆ ಶಾಲಾ ಕಾಲೇಜು / ಸಂಘಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಉಪನ್ಯಾಸ-ಸಂವಾದ.  ಆಸ್ಪತ್ರೆಯಲ್ಲಿ ಕೆಲಸ ಮಾಡಿದಾಗ ಬರುವಷ್ಟು ಹಣ ಈ ಕೆಲಸಗಳಲ್ಲಿ ಬರದೇ ಇರಬಹುದು. 

ಆದರೆ ಮನಸ್ಸಿಗೆ ತೃಪ್ತಿ?  ಇದರಲ್ಲೇ ಹೆಚ್ಚು.  ಸಮಾಜದ ಒಳಿತು ನಮ್ಮ ಮುಂದಿರಬೇಕು.  ವೈದ್ಯರಾಗಿದ್ದಕ್ಕೆ, ನಮಗೆ ಪ್ರಾಕ್ಟೀಸ್ ಚೆನ್ನಾಗಿ ಆಗಬೇಕೆಂದ ಮಾತ್ರಕ್ಕೆ, ಸಮಾಜದಲ್ಲಿ ರೋಗಗಳು ಹೆಚ್ಚಾಗಬಾರದು.

ಜನರು ಆರೋಗ್ಯವಂತರಾಗಿರಬೇಕು. ರೋಗಗಳನ್ನು ಬರದಂತೆ ತಡೆಗಟ್ಟಲು, ಅನಿವಾರ್ಯವಾಗಿ ರೋಗಗಳು ಬಂದಾಗ, ಬೇಗ ಕಂಡುಹಿಡಿಯಲು, ಚಿಕಿತ್ಸೆ ನೀಡಲು, ನಾವು ಸಿದ್ಧರಿರಬೇಕು.

ಇತ್ತೀಚೆಗೆ ನನ್ನಲ್ಲಿ ಬಂದ ರೋಗಿಯೊಬ್ಬರು ಹೀಗೆ ಹೇಳಿದರು: ‘ಮೇಡಮ್, ಹತ್ತು ವರ್ಷಗಳಿಂದ ಈ ಕಾಯಿಲೆ ಇದೆ ನನ್ನ ಹೆಂಡತಿಗೆ.  ಅವಳಿಗಿರುವ ಭ್ರಮೆಯಿಂದ ಈಗಾಗಲೇ ಹತ್ತು ಮನೆಗಳನ್ನು ಬದಲಾಯಿಸಿದ್ದೇನೆ.  ಹತ್ತಾರು ದೇವಸ್ಥಾನಗಳಲ್ಲಿ ಪೂಜೆ-ಹೋಮಗಳಾಗಿವೆ. 

ಮಾಟ-ಮಂತ್ರ ಎಂದು ಲಕ್ಷಗಟ್ಟಲೇ ಖರ್ಚು ಮಾಡಿದ್ದೇವೆ.  ಆದರೆ ಇದೊಂದು ಮನೋರೋಗ ಎಂದು ತಿಳಿದದ್ದು ಪತ್ರಿಕೆಯಲ್ಲಿ ಬಂದ ನಿಮ್ಮ ಲೇಖನ ಓದಿ.’
ಈ ಮಾಧ್ಯಮಗಳ ಮೂಲಕ ಆರೋಗ್ಯ ಅರಿವು ಮೂಡಿಸುವ ಪ್ರಯತ್ನದಲ್ಲಿ ಈಗಾಗಲೇ ರೋಗಗಳಿಂದ ಬಳಲುತ್ತಿರುವವರು, ಚಿಕಿತ್ಸೆ ತೆಗೆದುಕೊಳ್ಳುತ್ತಿರುವವರಿಗೂ ಲಾಭವಿದೆ. 

ಹಾಗಾದರೆ, ನೀವೂ ವೈದ್ಯರಾಗಿದ್ದಲ್ಲಿ, ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಿ, ಸಮಾಜದ ಸ್ವಾಸ್ಥ್ಯ ಕಾಪಾಡಲು ವೃತ್ತಿಜೀವನದ ಸ್ವಲ್ಪ ಸಮಯವನ್ನಾದರೂ ಮೀಸಲಿಡುತ್ತೀರಾ? ಪುರಂದರದಾಸರು ಹೇಳಿದಂತೆ: ‘ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆಯೋಣವೇ?’
–ಡಾ. ಕೆ.ಎಸ್. ಶುಭ್ರತಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT