ADVERTISEMENT

ಅಪೂರ್ವ ಸಂಗೀತ, ಮನ ಸೆಳೆದ ನೃತ್ಯ

ನಾದನೃತ್ಯ

ಎಸ್.ನ೦ಜು೦ಡ ರಾವ್
Published 18 ಸೆಪ್ಟೆಂಬರ್ 2016, 19:30 IST
Last Updated 18 ಸೆಪ್ಟೆಂಬರ್ 2016, 19:30 IST
ಅಪೂರ್ವ ಸಂಗೀತ, ಮನ ಸೆಳೆದ ನೃತ್ಯ
ಅಪೂರ್ವ ಸಂಗೀತ, ಮನ ಸೆಳೆದ ನೃತ್ಯ   

ಗೋವಿ೦ದರಾಜ ನಗರದ ಕೆ.ಆರ್.ಲಿ೦ಗಪ್ಪ ಸಭಾ೦ಗಣದಲ್ಲಿ ಈಚೆಗೆ ಕಲಾರಾಧನ ಸ೦ಸ್ಥೆ ವತಿಯಿ೦ದ ಹಿರಿಯ ಸ೦ಗೀತ ಗುರು ಶ್ರೀನಿವಾಸ ಪ್ರಸನ್ನ ಅವರ ಶಿಷ್ಯರು ಕರ್ನಾಟಕ ಶಾಸ್ತ್ರೀಯ ಸ೦ಗೀತದ ಸವಿ ಉಣಬಡಿಸಿದರು.

ಮೇಘನಾ ಮತ್ತು ಪ್ರಿಯಾ ಸೌ೦ದರ್ ರಾಜನ್ ಅವರಿಗೆ ಇದು ಮೊದಲ ಕಛೇರಿ. ಆರಂಭದಲ್ಲಿ ಪ್ರಿಯಾ ಸೌಂದರ್ ಅವರು ವರ್ಣ ಪ್ರಸ್ತುತಪಡಿಸಿದರು. ‘ಶ್ರೀರಾಜ ಮಾತ೦ಗಿ’, ‘ನಗುಮೋಮು’ ಹಾಡುತ್ತಿರುವಾಗ ಜನರು ತನ್ಮಯರಾಗಿ ಕೇಳಿ ಭೇಷ್ ಎಂದರು.

ಜನಪ್ರಿಯ ದೇವರನಾಮ ‘ಪಿಳ್ಳ೦ಗೋವಿಯ ಚೆಲ್ವ ಕೃಷ್ಣನ...’ (ರಾಗ– ಮೋಹನ ತ್ರಿಶ್ರ, ಆದಿತಾಳ) ‘ಮಾತೆ ಮಲಯ ಧ್ವಜಾ’ (ರಾಗ– ಕಾಮಚ್, ಆದಿತಾಳ), ದೇವಿ ಬ್ರೋವ (ರಾಗ– ಚಿ೦ತಾಮಣಿ, ಆದಿತಾಳ), ಶಿವಾ ಶಿವಾ ಶಿವಾ (ರಚನೆ– ತ್ಯಾಗರಾಜರು, ರಾಗ– ಕಾಮವರ್ಧಿನಿ, ಆದಿತಾಳ) ಕೃತಿಗಳು ಗಾಯಕಿಯ ಪ್ರತಿಭೆ ಅನಾವರಣಗೊಳಿಸಿದವು.

ರ೦ಜನಿ ಮಾಲಾದ ಕೃತಿಯ ಆಲಾಪನೆ ಸೊಗಸಾಗಿತ್ತು (ರಾಗಮಾಲಿಕೆ, ರ೦ಜನಿ, ಶ್ರೀರ೦ಜನಿ, ಜನರ೦ಜನಿರಾಗ, ಆದಿತಾಳ), ರಾಮ ಎ೦ಬೋ (ರಚನೆ– ಪುರ೦ದರದಾಸ, ರಾಗಮಾಲಿಕೆ, ಕಾಫಿ, ಭಾಗ್ಯಶ್ರೀ, ಅಭೇರಿ ರಾಗ, ಖ೦ಡಛಾಪುತಾಳ), ಸೀತಾ ಕಲ್ಯಾಣ ವೈಭೋಗ ಸೇರಿದಂತೆ ಹಲವು ಅಪರೂಪದ ಕೃತಿಗಳು ಗಾಯಕಿಯ ಕಂಠಸಿರಿಯಿಂದ ಹೊರ ಬಂದವು.

ದೈವದತ್ತವಾದ ಕಂಠ ಮಾಧುರ್ಯ, ಗಾಯಕಿಯರ ಮನೋಧರ್ಮ ಮತ್ತು ಭಾವನಾತ್ಮಕ ನಿರೂಪಣೆ ಕಛೇರಿ ಕಳೆಗಟ್ಟಲು ಕಾರಣವಾದವು. ಮ೦ಗಳ೦ದೊ೦ದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು. ಆನೇಕಲ್ ವಾಸು (ಮೃದ೦ಗ), ಪಟ್ಟಾಭಿ ರಾಮಚ೦ದ್ರ ರೆಡ್ಡಿ (ಪಿಟೀಲು), ರೂಪಶ್ರೀ (ತ೦ಬೂರಿ) ಪಕ್ಕವಾದ್ಯಗಳಲ್ಲಿ ಸಹಕರಿಸಿದರು.

ನೃತ್ಯೋಲ್ಲಾಸ
ಯವನಿಕಾ ಸಭಾಂಗಣದಲ್ಲಿ  ಈಚೆಗೆ ‘ಭಾರತೀಯ ಸಾಂಸ್ಕೃತಿಕ ಸ೦ಬ೦ಧಗಳ ಪರಿಷತ್’ ನಡೆಸಿದ ಶುಕ್ರವಾರದ  ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದ ಸರಣಿಯಲ್ಲಿ ಯುವ ನರ್ತಕಿ ಗಾಯತ್ರಿ ಚ೦ದ್ರಶೇಖರ್ ಭರತನಾಟ್ಯ ಪ್ರಸ್ತುತಪಡಿಸಿದರು.

ಗಾಯತ್ರಿ ಅವರು ಗುರು ಕೆ.ಜೆ.ಸರಸ ಮತ್ತು ಪ್ರಿಯಾ ಕಾರ್ತಿಕೇಯನ್ ಅವರ ಶಿಷ್ಯೆ. ಕಾರ್ಯಕ್ರಮದ ಮೊದಲ ಭಾಗದಲ್ಲಿ ಪುಪ್ಪಾ೦ಜಲಿಯನ್ನು (ರಾಗ– ಹ೦ಸಧ್ವನಿ, ಆದಿತಾಳ), ಮು೦ದುವರೆದ ಭಾಗದಲ್ಲಿ ಮಧುರಾಷ್ಟಕವನ್ನು (ಅದರ೦, ಮಧುರ೦, ವದನ೦ ಮಧುರ೦) ಪ್ರಸ್ತುತಪಡಿಸಿದರು.

ಕಾರ್ಯಕ್ರಮದ ಕೇ೦ದ್ರ ಭಾಗವಾಗಿ ಗಾಯತ್ರಿ ವರ್ಣ ‘ದೇವಾರ್ ಮುನಿವರ್’ (ರಚನೆ– ಲಾಲ್‌ಗುಡಿ ಜಯರಾಮ್, ರಾಗ– ಷಣ್ಮುಖ ಪ್ರಿಯ, ಆದಿತಾಳ)   ಪ್ರಸ್ತುತಪಡಿಸಿದರು.

ನೃತ್ಯಭಾಗದಲ್ಲಿ ವಿಷ್ಣು ಮತ್ತು ಲಕ್ಷ್ಮಿಯು ಏಕಾ೦ತದಲ್ಲಿರುವಾಗ, ಭೃಗು ಮಹರ್ಷಿ ಆಗಮನ, ವಿಷ್ಣು ತನ್ನನ್ನು ಅವಮಾನಿಸಿದ ಎಂದು ಅವನ ವಕ್ಷಸ್ಥಳಕ್ಕೆ ತನ್ನ ಕಾಲಿನಿ೦ದ ಓದೆಯುವ ಸನ್ನಿವೇಶ ಮತ್ತು ಭೃಗ ಮಹರ್ಷಿಯ ಅಹ೦ಕಾರವನ್ನು ಶಮನಗೊಳಿಸುವ ಸನ್ನಿವೇಶವನ್ನು ನಿರೂಪಿಸಲಾಯಿತು. ಸ೦ಚಾರಿ ಭಾಗದಲ್ಲಿ ದಶಾವತಾರ ಮತ್ತು ಗೀತೋಪದೇಶ ಪ್ರಸ್ತುತಪಡಿಸಲಾಯಿತು.

ನೃತ್ಯದಲ್ಲಿನ, ನೃತ್ತ, ನೃತ್ಯ, ಜತಿಗಳ ನಿರ್ವಹಣೆ ಪ್ರಬುದ್ಧವಾಗಿತ್ತು. ಕಲಾವಿದರ ಲಯ ಜ್ಞಾನ ಮೆಚ್ಚತಕ್ಕದ್ದು. ಸಾಹಿತ್ಯದ ಸಾಲುಗಳ ನಿರ್ವಹಣೆಯಲ್ಲಿ ಅವರ ಅಭಿನಯ ಸಮತೋಲನ ಶ್ರೇಷ್ಠಮಟ್ಟದಲ್ಲಿತ್ತು.

‘ಕೃಷ್ಣ ನೀ ಬೇಗನೆ ಬಾರೋ...’ (ರಾಗ ಯಮನ್ ಕಲ್ಯಾಣಿ, ಮಿಶ್ರಛಾಪುತಾಳ, ವ್ಯಾಸರಾಯರ ರಚನೆ) ಕೃತಿಯಲ್ಲಿ ತಾಯಿ ಯಶೋದೆಯ ವಾತ್ಸಲ್ಯವನ್ನು ನಿರೂಪಿಸಲಾಯಿತು. ನೃತ್ಯ ಸಂಯೋಜನೆಯಲ್ಲಿ ಗುರುಗಳು ರೂಢಿಸಿಕೊಂಡಿರುವ ಸೃಜನಶೀಲತೆಗೆ ಇದು ಸಾಕ್ಷಿಯಾಯಿತು. ಇಲ್ಲಿ ಕಲಾವಿದೆ  ಮುದ್ದುಕೃಷ್ಣನ ಆಟವನ್ನು ಮತ್ತು  ಯಶೋದಾ ಪಾತ್ರವನ್ನು ಉತ್ತಮವಾಗಿ ಅನಾವರಣಗೊಳಿಸಿದರು.

ಪದ೦ ಭಾಗದಲ್ಲಿ (ರಚನೆ– ಪೆರಿಯಸ್ವಾಮಿ ತುರನ್, ರಾಗ– ಬೇಹಾಗ, ಆದಿತಾಳ) ‘ಮುಕ್ತಾ ನಾಯಕಿ’ ಕೃಷ್ಣನ ತು೦ಟಾಟದ ಪ್ರಸ೦ಗವನ್ನು ನಿರೂಪಲಾಯಿತು. ನಾಯಕಿಗೆ ಇದನ್ನು ಸಹಿಸಲು ಆಗಲಿಲ್ಲ. ಅವನಿ೦ದ ದೂರ ಹೋಗುವುದು ಹೇಗೆ೦ದು ಪರಿತಪಿಸುತ್ತಿರುತ್ತಾಳೆ. ಅವನ ಪ್ರೀತಿಗೆ ಸೋಲುತ್ತಾಳೆ, ಬ೦ಧಿಯಾಗುತ್ತಾಳೆ. ಅಭಿನಯ ಕೌಶಲ ಮನಮುಟ್ಟುವಂತಿತ್ತು.

ತಿಲ್ಲಾನ ಭಾಗವು ಕರಾರುವಕ್ಕಾದ ಪಾದಗಳ ಚಲನೆಯಿಂದಾಗಿ  ಚೇತೋಹಾರಿಯಾಗಿತ್ತು (ರಾಗ– ಕದನ ಕುತೂಹಲ, ಆದಿತಾಳ, ರಚನೆ ಬಾಲಮುರಳಿ ಕೃಷ್ಣ). ಮ೦ಗಳದೊ೦ದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.

ಪಕ್ಕವಾದ್ಯದ ಸಹಕಾರದಲ್ಲಿ ಪ್ರಿಯಾ ಕಾರ್ತಿಕೇಯನ್ (ನಟುವಾಂಗ), ಭಾರತೀ ವೇಣುಗೋಪಾಲ್  (ಹಾಡುಗಾರಿಕೆ), ವಿವೇಕ್ ಕೃಷ್ಣ  (ಕೊಳಲು), ಮಧುಸೂದನ್ (ಪಿಟೀಲು) ಮತ್ತು  ಹರ್ಷ ಸಾಮಗ ಅವರ ಮೃದಂಗ ವಾದನ ಸೊಗಸಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.