ADVERTISEMENT

ಮನಕ್ಕೆ ಆಹ್ಲಾದ ನೀಡಿದ ಲಾಸ್ಯಪೂರ್ಣ ನೃತ್ಯ

ನಾದ ನೃತ್ಯ

ವೈ.ಕೆ.ಸಂಧ್ಯಾಶರ್ಮ
Published 21 ಸೆಪ್ಟೆಂಬರ್ 2016, 19:30 IST
Last Updated 21 ಸೆಪ್ಟೆಂಬರ್ 2016, 19:30 IST
ಮನಕ್ಕೆ ಆಹ್ಲಾದ ನೀಡಿದ ಲಾಸ್ಯಪೂರ್ಣ ನೃತ್ಯ
ಮನಕ್ಕೆ ಆಹ್ಲಾದ ನೀಡಿದ ಲಾಸ್ಯಪೂರ್ಣ ನೃತ್ಯ   

ಕಣ್ಮನಗಳಿಗೆ ತಂಪೆರೆದ ರಮಣೀಯ ನರ್ತನ ಮನಸಿಗೂ ಆಹ್ಲಾದ ನೀಡಿತ್ತು. ಮಲ್ಲೇಶ್ವರದ ‘ಗ್ರೀನ್ ಪಾತ್ ಆರ್ಗಾನಿಕ್ ಸ್ಟೇಟ್’ನ ಆಪ್ತ ರಂಗಮಂದಿರದಲ್ಲಿ ಈಚೆಗೆ ನಡೆದ ಸುಂದರ ನೃತ್ಯ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

‘ಶ್ರದ್ಧಾ’ ನೃತ್ಯಸಂಸ್ಥೆಯ ಕಲಾವಿದರು ಗುರು ಶಮಾ ಕೃಷ್ಣ ಅವರ ನೇತೃತ್ವದಲ್ಲಿ  ‘ಲಾಸ್ಯೋಲ್ಲಾಸ’ ಪ್ರಸ್ತುತಪಡಿಸಿದರು. ಬೆಂಗಳೂರು ಅಂತರರಾಷ್ಟ್ರೀಯ ಕಲಾ ಮಹೋತ್ಸವಕ್ಕಾಗಿ ‘ಏಮ್ಸ್’ ಕಲಾ ಸಂಸ್ಥೆ ಈ ಕಾರ್ಯಕ್ರಮ ಆಯೋಜಿಸಿತ್ತು.

ಅನುಹಿತಾ ನಾಗರಾಜ್, ಮೋನಾಲಿಸಾ, ದೀಪ್ತಿ ನಾಯಕ್, ಸುರಭಿ ಮತ್ತು ಶ್ರೀವಿದ್ಯಾ ಸೇರಿದಂತೆ ಪಂಚಕನ್ಯೆಯರ ಉತ್ಸಾಹಿ ತಂಡ ಅಂದು ಪ್ರಸ್ತುತಪಡಿಸಿದ ಎಲ್ಲ ನೃತ್ಯಗಳಲ್ಲೂ ಒಂದು ಬಗೆಯ ವಿಶಿಷ್ಟ ಮೆರುಗಿತ್ತು.

‘ಲಾಸ್ಯೋಲ್ಲಾಸ’ ಎಂಬ ಹೆಸರಿಗೆ ಅನ್ವರ್ಥಕವಾದ ವಿಶೇಷ ನೃತ್ಯ ಕೃತಿಗಳನ್ನೇ ನರ್ತಿಸಲು ಆಯ್ಕೆ ಮಾಡಿಕೊಳ್ಳಲಾಗಿತ್ತು. ಪಾದದ ವೇಗ ಗತಿಯ ಚಲನೆಗಳಾದ ಚಾರಿಗಳು, ನೃತ್ಯ ಹಸ್ತಗಳು ಮತ್ತು ಕರಣಗಳನ್ನು ಕಲಾವಿದೆಯರು ಬಹು ಸಮರ್ಥವಾಗಿ, ಅಚ್ಚುಕಟ್ಟಾಗಿ ಪ್ರದರ್ಶಿಸಿದರು.

ಲಾಸ್ಯ ಪ್ರಧಾನ ನರ್ತನದಲ್ಲಿ ನಯವಾದ ಹೆಜ್ಜೆಗಳೊಂದಿಗೆ ತಮ್ಮ ಬಾಗು-ಬಳುಕುಗಳ ವಿಶೇಷ ಭಂಗಿಗಳಿಂದ ನೆರೆದ ಕಲಾರಸಿಕರನ್ನು ಆಕರ್ಷಿಸಿದರು.
ಸಾಂಪ್ರದಾಯಿಕ ‘ನೃತ್ಯಾಂಜಲಿ’ಯೊಂದಿಗೆ ಕಾರ್ಯಕ್ರಮದ ಆರಂಭವಾಯಿತು. ವಿಘ್ನ ನಿವಾರಕ ಗಣಪತಿಯನ್ನು ಮನಸಾರೆ ಅರ್ಚಿಸುವ ವಿವಿಧ ಪರಿಗಳಲ್ಲಿ ಜತಿಸ್ವರಗಳು ಮಿಳಿತಗೊಂಡಿದ್ದವು. ಹೆಜ್ಜೆಗಳ ಸಂಯೋಜನೆ, ಸುಂದರ ವಿನ್ಯಾಸ ಗಮನ ಸೆಳೆಯಿತು.

ಮುಂದಿನ ಕೃತಿ ‘ಅರಿಷಡ್ವರ್ಗ’  ಮಾನವೀಯ ಆಯಾಮವನ್ನು ಅನಾವರಣಗೊಳಿಸುತ್ತ ಹಲವು ದೃಷ್ಟಾಂತಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಗೊಳಿಸಿತು.

ಕಾಮ-ಕ್ರೋಧ, ಲೋಭ-ಮೋಹ, ಮದ-ಮತ್ಸರಗಳು  ಮನುಷ್ಯ ಸಹಜ ಗುಣಗಳು. ಮಾನವನ ಬಾಳಿಗೆ ವಿನಾಶಕಾರಿಯಾದ, ಶತ್ರುಗಳಂತಿರುವ ಈ ಆರು ದೌರ್ಬಲ್ಯ ಅಥವಾ ಕೆಟ್ಟ ಶಕ್ತಿಗಳು ಉಂಟುಮಾಡುವ ದುಷ್ಟಭಾವವನ್ನು ಎತ್ತಿತೋರಿಸುವಂತೆ ಡಾ.ಶತಾವಧಾನಿ ಆರ್.ಗಣೇಶ್ ಅವರು ಉದಾಹರಣೆಗಳ ಮೂಲಕ ಸುಂದರ ರೂಪಕ ರಚಿಸಿದ್ದಾರೆ. ಈ ಪ್ರಸಂಗಗಳ ಸಂಚಾರಿ ಭಾಗಗಳಲ್ಲಿ ಅಭಿನಯ, ನಾಟ್ಯಕ್ಕೆ ಸಾಕಷ್ಟು ಅವಕಾಶಗಳಿದ್ದದ್ದು ವಿಶೇಷ.

ಊರ್ವಶಿಯು ಅರ್ಜುನನ ರೂಪಕ್ಕೆ ಮನಸೋತು ಅವನನ್ನು ಆಕರ್ಷಿಸಲು ಮಾಡುವ ಸರ್ವ ಪ್ರಯತ್ನಗಳನ್ನು, ಕಾಮದ ಹಪಾಹಪಿತನವನ್ನು ವರ್ಣಿಸುವಂತೆ ಕಲಾವಿದೆಯರು, ಮನೋಹರವಾಗಿ ಅಭಿನಯಿಸಿದರು.

ಭಗೀರಥ ತನ್ನ ಪಿತೃಗಳ ವಿಮುಕ್ತಿಗಾಗಿ ಗಂಗೆಯನ್ನು ಭೂಮಿಗೆ ತರುವ ಪ್ರಯತ್ನ ಪ್ರಸಂಗದಲ್ಲಿ ಮದೋನ್ಮತ್ತ ಗಂಗೆ ತನ್ನ ಸೊಕ್ಕಿಗೆ ಶಿಕ್ಷೆಯಾಗಿ ಶಿವನ ಜಟೆಯಲ್ಲಿ ಬಂಧಿತಳಾಗುವ ದೃಷ್ಟಾಂತವನ್ನು ಕಲಾವಿದೆಯರು ತಮ್ಮ ಸೊಗಸಾದ ಅಭಿನಯ, ಮನೋಹರ ಲಾಸ್ಯಭಿವ್ಯಕ್ತಿಗಳಲ್ಲಿ  ಅನನ್ಯ ಅನುಭವವನ್ನು ಕಟ್ಟಿಕೊಟ್ಟರು.

ದ್ರೌಪದಿಯಿಂದ ಅಪಮಾನಿತರಾಗಿ, ಮತ್ಸರದಿಂದ, ಪಾಂಡವರ ವಿರುದ್ಧ ಪಿತೂರಿ ನಡೆಸಿ ನಾಶವಾದ ಕೌರವರ ಚಿತ್ರಣವನ್ನು ಪಂಚನರ್ತಕಿಯರು ದೃಶ್ಯವತ್ತಾಗಿ ನಿರೂಪಿಸಿದರು. ವಿವಿಧ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಟಿಸಿ, ನೃತ್ಯ ಪದಗತಿಯಲ್ಲಿ, ಜತಿಗಳ ಮೇಳದಲ್ಲಿ, ಆಂಗಿಕಾಭಿನಯದ ಸಾಮರ್ಥ್ಯದಲ್ಲಿ ಮನನಗೊಳಿಸಿದರು.

ಮುಂದಿನ ಪ್ರಸ್ತುತಿ ಡಿ.ವಿ.ಜಿ. ಅವರ ‘ಅಂತಃಪುರ ಗೀತೆ’ಯಿಂದಾಯ್ದ  ‘ಏನೀ ಮಹಾನಂದವೇ’ ಎಂಬ ಸುಶ್ರಾವ್ ಗೀತೆ.  ಈ ಗೀತೆಯಲ್ಲಿ ಒಳಗೊಳಗೇ ಹಿಗ್ಗುತ್ತಾ, ಪರಸ್ಪರ ಜೊತೆಗಾತಿಯರನ್ನು ಛೇಡಿಸುತ್ತ, ‘ನಿನ್ನ ಆನಂದಕ್ಕೇನು ಕಾರಣ?’ ಎಂದು ಕೇಳುತ್ತಾ, ಮುಗ್ಧರಂತೆ ನಟಿಸುವ ನರ್ತಕಿಯರ ಭಾವಲಾಸ್ಯದ ಅಭಿನಯ, ನಾಜೂಕಿನ ವಿಶಿಷ್ಟ ಹೆಜ್ಜೆಗಳ ಪಲುಕು ರಮ್ಯವಾಗಿತ್ತು.

ಪ್ರತಿಯೊಂದು ಕೃತಿಯ ಮುಕ್ತಾಯದಲ್ಲೂ ಕಲಾವಿದೆಯರು ಕಡೆದಿಟ್ಟ ಶಿಲ್ಪಗಳಂತೆ ಮನೋಜ್ಞ ವಿನ್ಯಾಸದಲ್ಲಿ, ಅನುಪಮ ಭಂಗಿಗಳಲ್ಲಿ  ‘ಫ್ರೀಜ್’ ಆಗುತ್ತಿದ್ದುದು ಸ್ವೋಪಜ್ಞತೆಯಿಂದ ಕೂಡಿತ್ತು.

ಡಾ.ಪದ್ಮಾಸುಬ್ರಹ್ಮಣ್ಯಂ  ರಚಿಸಿ, ಸಂಯೋಜಿಸಿದ ‘ತಿಲ್ಲಾನ’ದೊಂದಿಗೆ ನಾಟ್ಯ ಕಾರ್ಯಕ್ರಮ ಸಂಪನ್ನವಾಯಿತು. ಹಿನ್ನೆಲೆ ಧ್ವನಿ ಮಾನಸಿ ಪ್ರಸಾದ್, ಗುರುಮೂರ್ತಿ ಮತ್ತು ಬಾಲಸುಬ್ರಮಣ್ಯ ಶರ್ಮ ಅವರ ಸಿರಿಕಂಠದಿಂದ ಶೋಭಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.