ADVERTISEMENT

ಒಡಿಸ್ಸಿ-ಭರತನಾಟ್ಯ ರಸದೌತಣ

ನಾದ ನೃತ್ಯ

ವೈ.ಕೆ.ಸಂಧ್ಯಾಶರ್ಮ
Published 12 ಅಕ್ಟೋಬರ್ 2016, 19:30 IST
Last Updated 12 ಅಕ್ಟೋಬರ್ 2016, 19:30 IST
ಒಡಿಸ್ಸಿ-ಭರತನಾಟ್ಯ ರಸದೌತಣ
ಒಡಿಸ್ಸಿ-ಭರತನಾಟ್ಯ ರಸದೌತಣ   

ನೃತ್ಯಾಂತರ ತಂಡವು ಮಲ್ಲೇಶ್ವರದ ಸೇವಾ ಸದನದಲ್ಲಿ ಆಯೋಜಿಸಿದ್ದ ಎರಡು ದಿನಗಳ ‘ಶಾಸ್ತ್ರೀಯ ಹಬ್ಬ-ರಸಾಸ್ವಾದ’ ರಸದೌತಣವನ್ನೇ ನೀಡಿತು.
ನವರಸಗಳನ್ನು ಆಸ್ವಾದಿಸಲು ಅನುವು ಮಾಡಿಕೊಟ್ಟಿತ್ತು. ಅಂದು ರಂಗಸ್ಥಳದ ಮೇಲೆ ಬೇರೊಂದು ಲೋಕ ಸೃಷ್ಟಿಸಿದ ನೃತ್ಯ ತಂಡಗಳು ಒಟ್ಟು ಮೂರು. ಮೊದಲೆರಡು ಒಡಿಸ್ಸಿ ನೃತ್ಯ ಶೈಲಿಯ ಸೊಗಸು ಕಾಣಿಸಿದರೆ ಕಡೆಯದು ಭರತನಾಟ್ಯದ ಬೆಡಗಿನದು.

ರಸ ಕಲೆಕ್ಟಿವ್ ನೃತ್ಯ ಸಂಸ್ಥೆಯ ಇಬ್ಬರು ತರುಣಿಯರೊಂದಿಗೆ ತರುಣನೊಬ್ಬ ಸರಳ ರೇಷ್ಮೆವಸ್ತ್ರದ ಉಡುಗೆ-ತೊಡುಗೆಯಲ್ಲಿ, ಮನಸ್ಸಿಗೆ ಲಗ್ಗೆ ಹಾಕುತ್ತ ಮಂದಾನಿಲನ ಹೆಜ್ಜೆಗಳಿಂದ ನೃತ್ಯಾರಂಭಿಸಿದರು.

ಅಂತ್ಯವಿಲ್ಲದ ಅನಂತತೆಯನ್ನು ನಿರೂಪಿಸಲು ಹೊರಟ ಕಲಾವಿದರು, ಒಡಿಸ್ಸಿ ನೃತ್ಯತಂತ್ರಗಳು ಹಾಗೂ ಕೆಲವು ವಿಶಿಷ್ಟ ಚಲನೆಗಳನ್ನು ಬಳಸಿಕೊಂಡು ಆಧ್ಯಾತ್ಮಿಕ ಕಲ್ಪನೆಗಳನ್ನು ಆಂಗಿಕಾಭಿನಯಗಳಿಂದ ಕಣ್ಮುಂದೆ ಕಟ್ಟಿಕೊಟ್ಟರು.

ದಶಾವತಾರಗಳನ್ನು ಪ್ರಭಾವಶಾಲಿ ಅಭಿನಯ, ಸುಂದರ ವಿನ್ಯಾಸಗಳಲ್ಲಿ ಮನೋಹರವಾಗಿ,  ಸೃಷ್ಟಿ- ಪಂಚಭೂತಗಳು ಮತ್ತು ಮೋಕ್ಷದ ಸಾಕ್ಷಾತ್ಕಾರವನ್ನು ಪ್ರಬುದ್ಧ ಅಭಿನಯದಲ್ಲಿ ಸಾದರಪಡಿಸಿದರು.

ನೃತ್ಯ ಪ್ರದರ್ಶನ ನೀಡಿದ ಕಲಾವಿದರಲ್ಲಿ ಶ್ರೇಯಾಶಿಡೇ, ಅರ್ನಬ್ ಬಂಡೋಪಾಧ್ಯಾಯ ಮತ್ತು ಅದಿತಿ  ಬಂಡೋಪಾಧ್ಯಾಯ ಪ್ರಮುಖರು.
ನೃತ್ಯಾಂತರ ಒಡಿಸ್ಸಿ ಕಲಾಶಾಲೆಯ ನೃತ್ಯ ಕಲಾವಿದರು ಪ್ರಸ್ತುತಪಡಿಸಿದ ‘ಮಾಲ್ ಕೌನ್ಸ್’ ಸುಶ್ರಾವ್ಯತೆ ಹಾಗೂ ಲಯಕ್ಕೆ ಸಮಾನ ಒತ್ತು ನೀಡಿತ್ತು. ಪಂಚಕನ್ಯೆಯರು ಕಿರುನಗೆ ಬೀರುತ್ತ ಹಿನ್ನೆಲೆಯ ಕೊಳಲಗಾನಕ್ಕೆ ತಕ್ಕಂತೆ ಕೋಮಲವಾದ ಭಾವ-ಭಂಗಿಗಳಲ್ಲಿ ಗೆಲುವಾಗಿ ನರ್ತಿಸುತ್ತಾ, ಸುತ್ತಣ ವಾತಾವರಣವನ್ನು ಆನಂದಮಯವಾಗಿಸಿದರು.

ವೈಯ್ಯಾರಿಯರ ಮೈಮಾಟದ ನಯವಾದ ಅಂಗಚಲನೆ, ಬಾಗು-ಬಳುಕು, ಮಿಂಚಿನ ಕಣ್ಣೋಟ, ಕುತ್ತಿಗೆ ಹಾಗೂ ಹುಬ್ಬುಗಳ ಕೊಂಕಿಸುವ ಆಮೋದ ದೃಶ್ಯ ನೋಡುಗರನ್ನು ಮೋಡಿ ಮಾಡಿತ್ತು. ಮಾಲ್‌ಕೌನ್ಸ್‌ ಮಾಧುರ್ಯಕ್ಕೆ ಅನುಗುಣವಾದ ಲತೆಯ ಬಳುಕಾಟದಂಥ ಸುಂದರ ನೃತ್ಯವಾಹಿನಿ ಸಲಿಲವಾಗಿ ಹರಿಯಿತು. ಜೊತೆಗ ವಿರಹಾರ್ತ ರಾಧೆಯ ಪ್ರಣಯ ಸಂಕಟವನ್ನು ಮನದಟ್ಟಾಗುವಂತೆ ನಿರೂಪಿಸಲಾಯಿತು. ಕೃಷ್ಣನ ಸಾನ್ನಿಧ್ಯವನ್ನು ನೆನೆದು ಪುಳಕಿತಳಾದ ಪ್ರಣಯಿನಿ ರಾಧೆ (ಮಧುಲಿತಾ ಮೋಹಪಾತ್ರ) ಮೋಹಪರವಶಳಾಗಿ ಬಗೆ ಬಗೆಯಾಗಿ ವಿಲಪಿಸುತ್ತಾಳೆ.

ಕಾಳಿದಾಸನ ‘ಋತುಸಂಹಾರ’ದಿಂದ ಆಯ್ದ ಭಾಗ ವರ್ಷ ಅವಿಸಾರ್. ಬಿಸಿಲ ಬೇಗೆಯಿಂದ ಬಿರಿದ ಭೂಮಿಯೊಡಲ ಮೇಲೆ ಬಿದ್ದ ಮೊದಲ ಮಳೆಯ ಹನಿ ಕಂಡು ಸಂತಸ, ಮಳೆಯ ಆಗಮನವನ್ನು ಸಂಭ್ರಮಿಸುವ ರೋಮಾಂಚದ ಅನುಭವವನ್ನು, ತಾವು ಸ್ವತಃ ಅನುಭವಿಸಿ, ಕಲಾ ರಸಿಕರಿಗೆ ಉಣಬಡಿಸಿದ ಕಲಾವಿದೆಯರು ಮೋಡದ ಅಲೆಗಳಂತೆ, ಜಲಧಾರೆಯಂತೆ ಒನಪಿನಿಂದ  ಬಳುಕುತ್ತ, ಸುಂದರ ವಿನ್ಯಾಸಗಳನ್ನು ರೂಪಿಸಿ ಹೊಸ ಬಗೆಯ ದೃಶ್ಯರೂಪಕಗಳನ್ನು ಕಟ್ಟಿಕೊಟ್ಟರು. ಪರಿಧಿ ಜೋಷಿ, ಸಹನಾ ಮಯ್ಯ, ಸೋನಾಲಿ ಮೊಹಂತಿ, ವಿವೇಕಿನಿದಾಸ್ ಮತ್ತು ಅಂಜಲಿ ಅರಸ್ ಅವರ ನೃತ್ಯ ಬಹುಕಾಲ ಮನದಲ್ಲಿ ಉಳಿಯುವಂತಿತ್ತು.

ಮನೋಜ್ಞ ನೃತ್ಯ
ರಸಿಕಡಾನ್ಸ್ ಎನ್ಸೆಂಬಲ್‌ ಸಂಸ್ಥೆಯ ಶಿವರಂಜಿನಿ ಹರೀಶ್, ರಸಿಕಾ ಕಿರಣ್, ಸುಶ್ಮಿತಾ ಸುರೇಶ, ಎಂ.ರಕ್ಷಿತಾ ಮತ್ತು ವರ್ಷ ವೇಣುಗೋಪಾಲ್ ಅಪೂರ್ವ ಹೊಂದಾಣಿಕೆಯಿಂದ ವಿವಿಧ ವಿನ್ಯಾಸಗಳಲ್ಲಿ ಚಲಿಸಿ ಮನೋಜ್ಞ ನೃತ್ಯ ಪ್ರದರ್ಶನ ನೀಡಿದರು.

ಸಾಂಪ್ರದಾಯಿಕ ಪುಷ್ಪಾಂಜಲಿ– ಮಧುರೈ ಮುರಳೀಧರನ್ ರಚಿಸಿದ ವಿಜಯವಸಂತ  ರಾಗದ ರಾಗಮಾಲಿಕ ಮತ್ತು ಕಾಳಿದಾಸ ನವರತ್ನ ಮಾಲಿಕಾದಿಂದ ಆರಿಸಿಕೊಂಡ ದೇವಿ ಪಾರ್ವತಿಯ ವಿವಿಧ ಸ್ವರೂಪದ ವರ್ಣನೆಗಳನ್ನು, ಶ್ವೇತವಸ್ತ್ರ ಧರಿಸಿದ ಸಪ್ತ ನರ್ತಕಿಯರು ಶಾಸ್ತ್ರೀಯ ಸೊಬಗಿನ ಭರತನಾಟ್ಯದ ಶೈಲಿಯಲ್ಲಿ ಸುಂದರವಾಗಿ ಪ್ರಸ್ತುತಗೊಳಿಸಿದರು.

ಓಂಕಾರವೆಂಬ ಪಂಜರದಲ್ಲಿ ಗಿಣಿ, ಉಪನಿಷತ್ ಎಂಬ ತೋಟದಲ್ಲಿ ಹಾಡುವ ಕೋಗಿಲೆ, ವೇದ ಎಂಬ ಕಾಡಿನಲ್ಲಿ ನರ್ತಿಸುವ ನವಿಲು ಮುಂತಾದ ಉಪಮೆಗಳಲ್ಲಿ ದೇವಿಯ ಗುಣ-ಮಹಿಮೆಗಳನ್ನು ಬಣ್ಣಿಸುತ್ತಾ ವೈವಿಧ್ಯ ಜತಿಗಳನ್ನು ಸಮರ್ಥವಾಗಿ ನಿರ್ವಹಿಸಿ, ಆಮೋಘವಾಗಿ ನರ್ತಿಸಿದರು. ರಂಗ ನಿಷ್ಕ್ರಮಣವೂ ಗಮನೀಯವಾಗಿತ್ತು.

ಮುಂದಿನ ಪ್ರಸ್ತುತಿಯಲ್ಲಿ ‘ಲಯ ಕವಿತೈ’ ಲಯಾತ್ಮಕ  ರಚನೆ, ಕಲಾವಿದರಿಗೆ ಸವಾಲಿನದಾಗಿತ್ತು. ಅದನ್ನು ನರ್ತಕಿಯರು, ಅಭಿನಯ ಮಿಳಿತದೊಂದಿಗೆ ವೈಶಿಷ್ಟ್ಯ ಪೂರ್ಣವಾಗಿ ಪ್ರದರ್ಶಿಸಿದರು. ಕಪಾಲಿನಿ- ಶಿವಸ್ತುತಿಯಲ್ಲಿ ಪರಿಪೂರ್ಣ ಸಮಾನತೆಗೆ ರೂಪಕವಾದ ಅರ್ಧ ನಾರೀಶ್ವರ  ಪ್ರಸ್ತುತಿ ಗುರು ಕಿರಣ್ ಸುಬ್ರಮಣ್ಯಂ ಅವರ ನೃತ್ಯ ಸಂಯೋಜನೆಯಲ್ಲಿ ಸೃಜನಾತ್ಮಕವಾಗಿ ಮೂಡಿಬಂತು.

ಅಂತಿಮವಾಗಿ ಗಮನ ಸೆಳೆದ ಲಯ ವಿನ್ಯಾಸಂ ವಿವಿಧ ಲಯವಾದ್ಯಗಳ ಪ್ರತಿಭಾ ಪಾಂಡಿತ್ಯ ತನಿ ಮೆಲುಗತಿಯಲ್ಲಿ ಸೆಳೆದುಕೊಳ್ಳಲಾರಂಭಿಸಿದ್ದು, ಬರಬರುತ್ತಾ ವೇಗದ ಪರಾಕಾಷ್ಠೆ ತಲುಪಿ ರೋಮಾಂಚಕ ಹಂತಕ್ಕೆ ಏರಿಸಿತ್ತು. ಇದರ ನೃತ್ಯದಲ್ಲಿದ್ದ ದೃಶ್ಯಗಳ ಅಳವಡಿಕೆಗಳು, ಲಯ ಸಂಕೀರ್ಣತೆಗಳಿಂದ ಕೂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.