ADVERTISEMENT

ನೃತ್ಯಗುಚ್ಛದಲ್ಲಿ ಅರಳಿದ ‘ಶಿಲಪ್ಪದಿಕಾರಂ’

ನಾದನೃತ್ಯ

ಮಂಜುಶ್ರೀ ಎಂ.ಕಡಕೋಳ
Published 13 ಅಕ್ಟೋಬರ್ 2016, 19:30 IST
Last Updated 13 ಅಕ್ಟೋಬರ್ 2016, 19:30 IST
ನೃತ್ಯಗುಚ್ಛದಲ್ಲಿ ಅರಳಿದ ‘ಶಿಲಪ್ಪದಿಕಾರಂ’
ನೃತ್ಯಗುಚ್ಛದಲ್ಲಿ ಅರಳಿದ ‘ಶಿಲಪ್ಪದಿಕಾರಂ’   

ಕುರುಡು ಪ್ರಭುತ್ವಕ್ಕೆ ಸವಾಲೆಸೆಯುವ ಸಾತ್ವಿಕ ಹೆಣ್ಣೊಬ್ಬಳ ಕಥಾ ಹಂದರವುಳ್ಳ ‘ಶಿಲಪ್ಪದಿಕಾರಂ’ ತಮಿಳು ಮಹಾಕಾವ್ಯ. ಮೂರನೇ ಶತಮಾನದಲ್ಲಿ ತಮಿಳುನಾಡಿನ ರಾಜಕುಮಾರ ಇಳಂಗೊ ಅಡಿಗಳ್ ಮದಿಲಗಂ ತಮಿಳಿನಲ್ಲಿ ರಚಿಸಿದ ಈ ಕೃತಿ ದಕ್ಷಿಣ ಭಾರತದ ಮೊದಲ ಮಹಾಕಾವ್ಯವೆಂದೂ ಪ್ರಸಿದ್ಧಿಯಾಗಿದೆ. ಈ ಮಹಾಕಾವ್ಯವನ್ನಾಧರಿಸಿದ ಅನೇಕ ಕತೆ, ಸಿನಿಮಾ, ನೃತ್ಯ, ನಾಟಕಗಳು ಬಂದಿವೆ.

ಅಂಥದ್ದೇ ಒಂದು ಪ್ರಯೋಗ ಮೊನ್ನೆ ನಗರದ ಮಲ್ಲೇಶ್ವರಂನ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ನಡೆಯಿತು. ಬೆಂಗಳೂರು ಕ್ಲಬ್ ಫಾರ್ ಕಥಕ್ಕಳಿ ಅಂಡ್‌ ದಿ ಆರ್ಟ್ಸ್‌ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಈ ಮಹಾಕಾವ್ಯವನ್ನು ಮೆಗಾ ಬ್ಯಾಲೆ ರೂಪದಲ್ಲಿ ನೃತ್ಯರೂಪಕಕ್ಕೆ ಸಜ್ಜುಗೊಳಿಸಿದ್ದು ಖ್ಯಾತ ಭರತನಾಟ್ಯ, ಕೂಚಿಪುಡಿ ಕಲಾವಿದೆ ವೀಣಾಮೂರ್ತಿ ವಿಜಯ.
ಮೋಹಿನಿಯಾಟ್ಟಂ, ಕಳರಿಪಯಟ್ಟು, ಕಥಕ್, ಭರತನಾಟ್ಯ, ಕೂಚಿಪುಡಿ, ಒಡಿಸ್ಸಿ, ಕಥಕ್ಕಳಿ ಹೀಗೆ ವಿವಿಧ ನೃತ್ಯಮಣಿ ಹಾರದಲ್ಲಿ ಅಲಂಕೃತಗೊಂಡ ಶಿಲಪ್ಪದಿಕಾರಂ ಸಹೃದಯರ ಮನ ಗೆಲ್ಲುವಲ್ಲಿ ಸಫಲವಾಯಿತು.

‘ಶಿಲಪ್ಪು’  ಅಂದರೆ ಕಾಲಂದುಗೆ. ‘ಅದಿಗಾರಂ’  ಅಂದರೆ ಕತೆ. ‘ಒಥೆಲೋ’ ನಾಟಕದಲ್ಲಿ  ಡೆಸ್ಟಿಮೋನಾಳ ಕರವಸ್ತ್ರ ಹೇಗೆ ಮುಖ್ಯ ಪಾತ್ರವಹಿಸುತ್ತದೆಯೋ ಅಂತೆಯೇ, ‘ಶಿಲಪ್ಪದಿಕಾರಂ’ನಲ್ಲಿ ಕಾಲಂದುಗೆಯದು ಮುಖ್ಯ ಪಾತ್ರ.

ನೃತ್ಯರೂಪಕಕ್ಕೆ ನಾಂದಿ ಭರತನಾಟ್ಯದ ಮೂಲಕ ಆಯಿತು. ಕೋವಲನ್ ಮತ್ತು ಕನ್ನಕಿ ಅವರ ವಿವಾಹದ ದೃಶ್ಯಗಳ ಮೂಲಕ ನೃತ್ಯರೂಪಕಕ್ಕೆ ಚಾಲನೆ ದೊರೆಯಿತು.  ಕೋವಲನ್ ಆಗಿ ಮಿಥುನ್ ಶ್ಯಾಮ್, ಕನ್ನಕಿಯಾಗಿ ದಿವ್ಯಾ ರವಿ ಅವರದು  ಮನಮೋಹಕ ನೃತ್ಯಾಭಿನಯ.

ದೇಹ, ಮನಸ್ಸು, ಆತ್ಮಗಳ ಸಮ್ಮಿಲನದಂತಿರುವ ಈ ದಂಪತಿ ಆಪ್ತ ಕ್ಷಣಗಳನ್ನು ದೃಶ್ಯಕಾವ್ಯದಲ್ಲಿ ಕಟ್ಟಿಕೊಟ್ಟ ರೀತಿ ಅನನ್ಯವಾಗಿ ಮೂಡಿಬಂತು.
ನಾಟ್ಯದ ಬಗೆಬಗೆಯ ಭಾವಭಂಗಿಗಳಲ್ಲಿ ರಸಿಕರ ಮನಗೆಲ್ಲುವಲ್ಲಿ ಮಿಥುನ್ ಶ್ಯಾಮ್ ಮತ್ತು ದಿವ್ಯಾ ರವಿ ಯಶಸ್ವಿಯಾದರು.

ವ್ಯಾಪಾರಕ್ಕೆಂದು ಪರವೂರಿಗೆ ತೆರಳುವ ಕೋವಲನ್, ರಾಜನ ಆಸ್ಥಾನ ನರ್ತಕಿ ಮಾಧವಿ ದೇವಿಯ ಮೋಹಪಾಶಕ್ಕೆ ಸಿಲುಕುತ್ತಾನೆ.
ಅವಳಲ್ಲೇ ಅನುರಕ್ತನಾಗಿ, ಮನೆ, ಪತ್ನಿಯನ್ನು ತೊರೆಯುವ ಸನ್ನಿವೇಶಗಳಲ್ಲಿ ಮಿಥುನ್ ಅವರ ಆಂಗಿಕ ಚಲನೆ ಸಹಜವಾಗಿ ಮೂಡಿಬಂತು. ನೃತ್ಯಗಾರ್ತಿ ಮಾಧವಿಯಾಗಿ ಪ್ರತೀಕ್ಷಾ ಕಾಶಿ ಅವರು ನೃತ್ಯಗಳ ವಿವಿಧ ಪ್ರಕಾರಗಳಿಗೆ ಜೀವ ತುಂಬಿ ನರ್ತಿಸಿದರು. ಒಡಿಸ್ಸಿ, ಭರತನಾಟ್ಯಂ, ಕಥಕ್, ಮೋಹಿನಿಯಾಟ್ಟಂ ಹೀಗೆ ವಿವಿಧ ನೃತ್ಯಗಳಿಗೆ ಪ್ರತೀಕ್ಷಾ ಕಾಶಿ ಅರ್ಪಿಸಿಕೊಂಡರು.

ಮೊದಲ ಬಾರಿಗೆ ಕೋವಲನ್ ಅನ್ನು ನೋಡಿ ಮೈಮರೆಯುವ ಕ್ಷಣ, ಪ್ರಣಯ, ಶೃಂಗಾರ ಪ್ರಸಂಗಗಳನ್ನು ಪ್ರತೀಕ್ಷಾ–ಮಿಥುನ್ ಜೋಡಿ ರಂಗದ ಮೇಲೆ ಸಹಜಗತಿಯಲ್ಲಿ ಅನಾವರಣ ಮಾಡಿತು.  ದಿವ್ಯಾರವಿ ಅವರು ವಿರಹ ವೇದನೆಗೆ ಜೀವ ತುಂಬಿದರು.

‘ತತ್ವಿ ನಾಮಯಾತ್, ಜೀವಜೀವಿತಂ, ತುಮ್ ಹೀ ಸುಂದರಂ, ದೈವಮಂದಿರಂ’ ಎನ್ನುತ್ತಾ ತನ್ನ ಮನೋಭೂಮಿಕೆ ಯಲ್ಲಿ ಗಂಡನ ಇರುವಿಕೆಯನ್ನು ಖಾತ್ರಿಪಡಿಸಿಕೊಳ್ಳುವ ಪಾತ್ರದಲ್ಲಿ ದಿವ್ಯಾ ಅವರದ್ದು ಮನಮೋಹಕ ಅಭಿನಯ.

ಕೈಯಲ್ಲಿದ್ದ ಹಣ ಖಾಲಿಯಾಗಿ, ಸಮಸ್ತ ಆಸ್ತಿಯನ್ನೂ ಕಳೆದುಕೊಂಡು ಮಾಧವಿಯ ಸಹವಾಸ ತೊರೆದು, ಹೆಂಡತಿ ಕನ್ನಕಿ ಬಳಿ ಬರುವ ಕೋವಲನ್ ನನ್ನನ್ನು ಕ್ಷಮಿಸು, ನಾನು ನಿನಗೆ ತಕ್ಕವನಲ್ಲ. ನಿನಗೆ ಹೇಗೆ ಕ್ಷಮೆ ಕೇಳಬೇಕೆಂದು ತಿಳಿಯುತ್ತಿಲ್ಲ ಎಂದು ಒದ್ದಾಡುತ್ತಾನೆ. ಆಗ ಕಾಲಂದಿಗೆಯನ್ನು ತೋರಿಸಿ ಗಂಡನಿಗೆ ಮತ್ತೆ ವ್ಯಾಪಾರ ಶುರು ಮಾಡು ಎಂದು ಆತ್ಮವಿಶ್ವಾಸ ತುಂಬುತ್ತಾಳೆ ಕನ್ನಕಿ.

ಅವಳ ಕಾಲಂದುಗೆಗಳಲ್ಲಿ ಒಂದನ್ನು ಮಾರಿ ಹೊಸ ವ್ಯಾಪಾರ ಶುರು ಮಾಡಬೇಕೆಂದು ಮಧುರೆಯ ಅಕ್ಕಸಾಲಿಗರ ಬಳಿಗೆ ಕೋವಲನ್‌ ತೆರಳುತ್ತಾನೆ.
ಆ ಕಾಲಂದುಗೆಯಂತೆಯೇ ಇರುವ ರಾಣಿಯ ಕಾಲಂದುಗೆ ಕಳುವಾಗಿರುತ್ತದೆ. ಅದನ್ನು ಕದ್ದವನು ಆ ಅಕ್ಕಸಾಲಿಗನೇ. ತಾನು ಸಿಕ್ಕಿಬೀಳುವ ಭಯದಲ್ಲಿ ಅಕ್ಕಸಾಲಿಗ ಕೋವಲನ್‌ ಅನ್ನು ರಾಜಭಟರಿಗೆ ಒಪ್ಪಿಸುತ್ತಾನೆ. ರಾಜಾಜ್ಞೆಯ ಮೇರೆಗೆ ಭಟರು ಕೋವಲನನ್ನು ಕೊಲ್ಲುತ್ತಾರೆ.

ವಿಚಾರಣೆ ಮಾಡದೇ ಗಂಡನನ್ನು ಕೊಲ್ಲಿಸಿದ ರಾಜನ ವಿರುದ್ಧ ಸೇಡು ತೀರಿಸಿಕೊಳ್ಳಲು ಇಡೀ ಮಧುರೆ ನಗರವನ್ನೇ ಸುಟ್ಟು ಭಸ್ಮ ಮಾಡುವ ಪ್ರಸಂಗದಲ್ಲಿ ದಿವ್ಯಾ ಸಾಕ್ಷಾತ್ ಕನ್ನಕಿಯಾಗಿ ಪ್ರೇಕ್ಷಕರ ಹೃನ್ಮನಗಳನ್ನು ಆವರಿಸಿದರು.

ಮುಖ್ಯ ಕಲಾವಿದರೊಂದಿಗೆ ಸಹ ಕಲಾವಿದರ ಸಾಥ್, ನೇಪಥ್ಯದ ತಂಡದ (ಪರಿಕಲ್ಪನೆ, ನಿರ್ಮಾಣ–ಲಲಿತಾ ದಾಸ್‌, ನಿರ್ದೇಶನ–ಮೀನಾ ದಾಸ್ ನಾರಾಯಣ್‌, ಸಂಗೀತ ನಿರ್ದೇಶನ–ಪ್ರವೀಣ್ ಡಿ. ರಾವ್, ಗಾಯನ–ಫಯಾಜ್ ಖಾನ್) ಸಹಕಾರ ನೃತ್ಯ ರೂಪಕವನ್ನು ಯಶಸ್ವಿಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.