ADVERTISEMENT

ನೃತ್ಯದಲ್ಲಿ ಕಂಗೊಳಿಸಿದ ಅಷ್ಟಲಕ್ಷ್ಮಿಯರು

ನೃತ್ಯಲೋಕ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2016, 19:30 IST
Last Updated 21 ನವೆಂಬರ್ 2016, 19:30 IST
ನೃತ್ಯದಲ್ಲಿ ಕಂಗೊಳಿಸಿದ ಅಷ್ಟಲಕ್ಷ್ಮಿಯರು
ನೃತ್ಯದಲ್ಲಿ ಕಂಗೊಳಿಸಿದ ಅಷ್ಟಲಕ್ಷ್ಮಿಯರು   

ಚಾರಿ ತಾಳ ಲಯಜ್ಞಾನದೊಂದಿಗೆ ಹಸ್ತ ನೈಪುಣ್ಯ, ಜತೆಗೆ ವಿಲಾಸಿನಿ ಸ್ವರೂಪದ ಹೊಳಪು. ಹೀಗೆ ಮೆಚ್ಚುವಂಥ ನಾಟ್ಯಾಚಾರ್ಯರ ಸೂತ್ರವನ್ನು ಪರಿಪಾಲಿಸಿ ನೃತ್ಯದ ಬೆಡಗಿನಲ್ಲಿ ಅಷ್ಟಲಕ್ಷ್ಮಿ ಕಂಗೊಳಿಸುವಂತೆ ಮಾಡಿದವರು ಕೇಶವ ಸಂಗೀತ ಹಾಗೂ ನೃತ್ಯ ಕಾಲೇಜಿನ ವಿದ್ಯಾರ್ಥಿನಿಯರು.

ಜಯನಗರದ ಶ್ರೀ ಜಯರಾಮ ಸೇವಾ ಮಂಡಳಿಯಲ್ಲಿ ನಡೆದ ಕಾಲೇಜಿನ ವಾರ್ಷಿಕ ಕಲಾ ಉತ್ಸವ ಸಂಗೀತ ಮತ್ತು ನೃತ್ಯ ಸ್ನಾತಕ ಶಿಕ್ಷಣಾರ್ಥಿಗಳು ಪ್ರದರ್ಶಿಸಿದ ನೃತ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಸಂತಾನಲಕ್ಷ್ಮಿ, ಗಜಲಕ್ಷ್ಮಿ... ಹೀಗೆ ಪ್ರತಿಯೊಂದು  ಪಾತ್ರ ಪರಿವರ್ತನೆಯ ಕಾಲದಲ್ಲಿ ಪುನರಾವರ್ತನೆಗೊಂಡ ಸಂಗೀತ ಸಹಿತ ಜತಿ ಸಂಯೋಜನೆಯು ವಿಶಿಷ್ಟವೆನಿಸಿತು.

ಈ ಪುನರಾವರ್ತನೆಯ ಲಯಪೂರ್ಣ ಗಾನವು ಪ್ರೇಕ್ಷಕರ ಮನದಲ್ಲಿ ಗಟ್ಟಿಯಾಗಿ ನೆಲೆನಿಂತು ಗುನುಗುವಂತೆ ಮಾಡಿತು. ಜತಿಸ್ವರ, ಶ್ಲೋಕ, ದೇವರ ನಾಮಕ್ಕೂ ನೃತ್ಯ ಗುರು  ಬಿ.ಕೆ.ಶ್ಯಾಮ್ ಪ್ರಕಾಶ್ ಅವರು ಕಠಿಣವಾದ ಅಡವುಗಳ ಬಂಧದಿಂದ ಸೊಬಗು ನೀಡಲು ಪ್ರಯತ್ನ ಮಾಡಿದ ರೀತಿ ವಿಶಿಷ್ಟ.

ಅಷ್ಟಲಕ್ಷ್ಮಿಯರಾಗಿ ಶೋಭಾ ಲೋಲನಾಥ್, ಆಶಾರಾಣಿ, ಅನುರಾಧಾ, ಮಾಲಾ, ರಾಜೇಶ್ವರಿ, ಸಂಗೀತಾ, ರಾಖಿ ರವೀಂದ್ರನ್ ಹಾಗೂ ಶ್ರೀಲತಾ ಅವರು ಚೆಂದದ ಹಾಡಿನ ಲಯಕ್ಕೆ ಹೆಜ್ಜೆಗೂಡಿಸಿದರು.

ನೃತ್ಯದ ಲಯಕ್ಕೆ ಕಳೆಯಾಗಿ ಹೊಳೆದಿದ್ದು ಭಾರತಿ ವೇಣುಗೋಪಾಲ್ ಭಾವಪೂರ್ಣ ಹಾಡುಗಾರಿಕೆ. ಗುರು ಶ್ಯಾಮ್ ಪ್ರಕಾಶ್ ನಟುವಾಂಗಕ್ಕೆ ವಾದ್ಯ ಸಾಂಗತ್ಯ ನೀಡಿದ್ದು ಮೃದಂಗ ಪ್ರವೀಣರಾದ ರಮೇಶ್ ಹಾಗೂ ಕೊಳಲು ವಾದಕ ವಿವೇಕ್ ಕೃಷ್ಣ. ಕೇಶವ ಕಾಲೇಜ್ ವಿದ್ಯಾರ್ಥಿನಿಯರೇ ಆಗಿರುವ ಸಾಯಿ ಜ್ಯೋತಿ, ಪ್ರಭಾ ಹಾಗೂ ಅರ್ಚನಾ ಅವರು ಬಸವ ವಚನವೂ ಸೇರಿದಂತೆ ವಿಭಿನ್ನ ರಚನೆಗಳಿಗೆ ಮಧುರ ಕಂಠದ ಮೆರುಗು ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.