ADVERTISEMENT

ಪರಿಸರ ಮೌಲ್ಯಮಾಪನ ಬಹು ಅಗತ್ಯ

ಸಂಜಯ್ ಗುಬ್ಬಿ
Published 25 ನವೆಂಬರ್ 2016, 5:45 IST
Last Updated 25 ನವೆಂಬರ್ 2016, 5:45 IST
ಪರಿಸರ ಮೌಲ್ಯಮಾಪನ ಬಹು ಅಗತ್ಯ
ಪರಿಸರ ಮೌಲ್ಯಮಾಪನ ಬಹು ಅಗತ್ಯ   

‘ನೀವು ಹೇಳೋದೆಲ್ಲ ಸರಿ, ಆದರೆ ನಮ್ ರೈತ್ರು ಬೆಳೆನೆಲ್ಲಾ ಈ ಕಾಡು ಹಂದಿಗಳು ತಿಂತವಲ್ಲ ಅದಕ್ಕೆ ಏನ್ ಮಾಡೋದು’ ಎಂದರು  ಮಹದೇಶ್ವರಬೆಟ್ಟ  ಸಾಲೂರು ಮಠದ ಸ್ವಾಮಿಗಳು. ತಮ್ಮ ಅನುಯಾಯಿಗಳಿಗೆ ಬೇಟೆಯ ಬಗ್ಗೆ  ನಾವು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದಿದ್ದೇವೆ ಅದಕ್ಕೆ ತಮ್ಮ ಬೆಂಬಲವಿರಲಿ, ಎಂದು ಮನವಿ ಮಾಡಿದಾಗ ಬಂದ ಉತ್ತರ.

ಇದಾದ ನಂತರದ ವಾರ-ಹನೂರಿನ ಇಗರ್ಜಿಯ ಪಾದ್ರಿಯವರೊಟ್ಟಿಗೆ ಇದೇ ವಿಚಾರವಾಗಿ ಚರ್ಚಿಸಲು ಹೋದರೆ ಅವರ ಉತ್ತರ ‘ನೀವು ಮಾಡುತ್ತಿರುವುದು ಸಮಾಜಕ್ಕೆ ಒಳ್ಳೆಯದಾಗುವ ಕೆಲಸ, ಖಂಡಿತ ಸಹಕರಿಸುತ್ತೇವೆ. ಆದರೆ ಒಂದು ವಿಷಯ ಹೇಳಿ, ನಮ್ಮ ಜಮೀನಿನಲ್ಲಿ ಒಂದೂ ತರಕಾರಿ ಬರುವುದಕ್ಕೆ ಆನೆಗಳು ಮತ್ತು ಕೋತಿಗಳು ಬಿಡುವುದೇ ಇಲ್ಲ. ನಮ್ಮ ಶಾಲೆಯಲ್ಲಿ ಮಕ್ಕಳ ತಿಂಡಿಯ ಡಬ್ಬವನ್ನು ಸಹ ಕೋತಿಗಳು ಕಸಿದು ಕೊಂಡು ಹೋಗುತ್ತವೆ, ಇದಕ್ಕೆ ಏನು ಮಾಡುವುದು?‘   

ಎರಡೂ ಸನ್ನಿವೇಶಗಳಲ್ಲಿ ನಾವು ಭೇಟಿ ಮಾಡಿದವರ ಪ್ರಶ್ನೆ ಒಂದೇ. ಇದು ರಾಜ್ಯದ ಹಲವೆಡೆ ರೈತರ ಮುಖ್ಯ ಸಮಸ್ಯೆಗಳಲ್ಲೊಂದು, ಆದರೆ ಅದಕ್ಕೆ ನಮ್ಮಲ್ಲಿ ಸಮಂಜಸವಾದ ಉತ್ತರವಿಲ್ಲ.  1972ರಲ್ಲಿ ದೇಶದಲ್ಲಿ ತಂದ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಪರಿಣಾಮಕಾರಿ ಅನುಷ್ಠಾನದಿಂದಾಗಿ ಹಲವು ವನ್ಯಜೀವಿ ಪ್ರಭೇದಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ. ಇದೇ ದಶಕದಲ್ಲಿ ಪ್ರಾರಂಭವಾದ ಹಲವು ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳು ಕರ್ನಾಟಕದಲ್ಲೂ ಹಲವಾರು ಸಕಾರಾತ್ಮಕ ಪರಿಣಾಮಗಳನ್ನು ತಂದವು. ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನಗಳು ಸ್ಥಾಪಿತಗೊಂಡವು.

ಅರಣ್ಯ ಇಲಾಖೆಯ ಬಿಗಿ ಕಾರ್ಯಗಳಿಂದ ವನ್ಯಜೀವಿಗಳ ಆವಾಸಸ್ಥಾನಗಳು ಪುನರುಜ್ಜೀವನ ಕಂಡವು. ಬೇಟೆಯ ವಿರುದ್ಧ ಕಠಿಣ ಕ್ರಮದಿಂದ ವನ್ಯಜೀವಿಗಳ ಸಂಖ್ಯೆ ಹೆಚ್ಚಳವಾಯಿತು. ಇದರ ಪರಿಣಾಮವಾಗಿ ಮಾನವ- ವನ್ಯಜೀವಿ ಸಂಘರ್ಷ ಕೂಡ ಹೆಚ್ಚಾಗಿದೆ. ಕಳೆದ ಏಳು ವರ್ಷಗಳಲ್ಲಿ ಆನೆ, ಹುಲಿ, ಚಿರತೆಗಳ ದಾಳಿಯಿಂದ ರಾಜ್ಯದಲ್ಲಿ 286 ಜನ ಜೀವ ಕಳೆದುಕೊಂಡಿದ್ದಾರೆ. ದಶಕಗಳಿಂದ ತಾಳ್ಮೆ, ಸಹಿಷ್ಣುತೆಯಿಂದಿದ್ದ ಅರಣ್ಯದಂಚಿನ ಜನ ಈಗ ಸಹನೆ ಕಳೆದುಕೊಂಡಿದ್ದಾರೆ.  ಬರುವ ದಿನಗಳಲ್ಲಿ ವನ್ಯಜೀವಿ ಸಂಘರ್ಷಕ್ಕೆ ಸಮಂಜಸವಾದ ಉತ್ತರವಿಲ್ಲದಿದ್ದರೆ ಇವುಗಳ ಸಂರಕ್ಷಣೆಗೆ ಬೆಂಬಲ ಸಿಗುವುದು ಇನ್ನೂ ಕಠಿಣವಾಗುತ್ತದೆ.

ವನ್ಯಜೀವಿ ರಕ್ಷಣಾ ತಾಣಗಳು

ವನ್ಯಜೀವಿ ಸಂರಕ್ಷಣೆಗಾಗಿ ಕೈಗೊಳ್ಳುವ ಪ್ರಮುಖವಾದ ಕಾರ್ಯನೀತಿಯೆಂದರೆ ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನಗಳ ಸ್ಥಾಪನೆ. ಮೈಸೂರು ರಾಜ್ಯ ಸ್ಥಾಪನೆಯಾಗುವ ಮುನ್ನವೇ ಘೋಷಣೆಯಾಗಿದ್ದು ರಂಗನತಿಟ್ಟು ವನ್ಯಜೀವಿಧಾಮ. ಇದನ್ನು ಬಿಟ್ಟರೆ ಇನ್ನೆಲ್ಲ ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನಗಳು ರಾಜ್ಯದಲ್ಲಿ ಸ್ಥಾಪಿತವಾಗಿರುವುದು 70ರ ದಶಕದ ನಂತರವೇ.

ಭಾಷಾವಾರು ರಾಜ್ಯಗಳ ವಿಂಗಡಣೆಯಾದಾಗ ಕರ್ನಾಟಕಕ್ಕೆ ಮದ್ರಾಸ್ ಮತ್ತು ಬಾಂಬೆ ಪ್ರಾಂತ್ಯಗಳಿಂದ, ಕೊಡಗು ರಾಜ್ಯ ಹಾಗೂ ಇನ್ನಿತರ ಪ್ರದೇಶಗಳ ಅರಣ್ಯಗಳು ರಾಜ್ಯಕ್ಕೆ ಸೇರಿಕೊಂಡವು.

ದೇಶದಲ್ಲಿ 1970ರ ನಂತರ ಆದ ವನ್ಯಜೀವಿಧಾಮ ಮತ್ತು ರಾಷ್ಟ್ರೀಯ ಉದ್ಯಾನಗಳ ಅತೀ ದೊಡ್ಡ ವಿಸ್ತರಣಾ ಕಾರ್ಯ ನಡೆದ್ದದ್ದು ಸ್ವಾತಂತ್ಯ್ರ ಪೂರ್ವದಲ್ಲಿ ಕೇವಲ ಒಂದೇ ಒಂದು ವನ್ಯಜೀವಿಧಾಮವಿದ್ದ ರಾಜ್ಯದಲ್ಲಿ ಇಂದು 29 ವನ್ಯಜೀವಿಧಾಮಗಳು, 5 ರಾಷ್ಟ್ರೀಯ ಉದ್ಯಾನಗಳು, 8 ಸಂರಕ್ಷಣಾ ಮೀಸಲು ಪ್ರದೇಶಗಳು ಮತ್ತು ಒಂದು ಸಮುದಾಯ ಮೀಸಲು ಪ್ರದೇಶಗಳಿವೆ.

ಇದರಿಂದ ಹಲವು ವನ್ಯಜೀವಿ ಪ್ರಭೇದಗಳಿಗೆ ಸಹಕಾರಿಯಾಗಿದೆ. ಎಪ್ಪತ್ತರ ದಶಕದಲ್ಲಿ ದೇಶಾದಾದ್ಯಂತ ಕೇವಲ 1,200ರಷ್ಟಿದ್ದ ಹುಲಿಗಳ ಸಂಖ್ಯೆ ಚೇತರಿಸಿಕೊಂಡಿದೆ. ಇಂದು ನಮ್ಮ ರಾಜ್ಯದಲ್ಲೇ ಸುಮಾರು 400 ಹುಲಿಗಳಾಗಿವೆ. ಇದು ದೇಶದಲ್ಲಿ ಅತೀ ಹೆಚ್ಚು ಹುಲಿಗಳಿರುವ ರಾಜ್ಯವೆಂಬ ಹೆಗ್ಗಳಿಕೆಯನ್ನು ನಮಗೆ ತಂದು ಕೊಟ್ಟಿದೆ. ಇದಲ್ಲದೆ ಆನೆಗಳ ಸಂಖ್ಯೆ ಹೆಚ್ಚಿರುವುದು  ಕರ್ನಾಟಕದಲ್ಲೇ.

ವನ್ಯಜೀವಿ ಸಂರಕ್ಷಣೆಯಲ್ಲಿ ಪ್ರಮುಖ ಮತ್ತು ನಿರ್ಣಾಯಕ ಪಾತ್ರ ವಹಿಸುವುದು ನಮ್ಮ ಅರಣ್ಯಗಳಲ್ಲಿ ಕರ್ತವ್ಯ ನಿರ್ವಹಿಸುವ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿ. ಅವರ ಕ್ಷೇಮ ಹಾಗೂ, ಪರಿಸ್ಥಿತಿಯನ್ನು ಉತ್ತಮಗೊಳಿಸಲು ಸರ್ಕಾರದ ಬೆಂಬಲ ಬೇಕಾಗಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಾಡು ತಿರುಗುವ ಕೆಲಸಕ್ಕೆ ಜನ ಸಿಗುವುದು ಕಷ್ಟವಾಗುತ್ತದೆ.

ಹಿಂದೆ ಹುಲಿ, ಆನೆಯಂತಹ ದೊಡ್ಡ ಸಸ್ತನಿ ಪ್ರಾಣಿಗಳ ಅಥವಾ ಪಕ್ಷಿಗಳ ಸಂರಕ್ಷಣೆಯ ದೃಷ್ಟಿಕೋನದಲ್ಲಿ ವನ್ಯಜೀವಿಧಾಮಗಳನ್ನು ಘೋಷಿಸಲಾಗುತ್ತಿತ್ತು. ಆದರೆ ಬಹುಶಃ  ದೇಶದಲ್ಲೇ ಇನ್ನೊಂದು ವಿಶಿಷ್ಟ ಯೋಜನೆಯನ್ನು ಕರ್ನಾಟಕ ರಾಜ್ಯದಲ್ಲಿ ಕಾರ್ಯಗತಗೊಳಿಸಲಾಗಿದೆ. ನೀರುನಾಯಿ, ಸಿಂಗಳೀಕ, ಕರಡಿ, ಕೊಂಡುಕುರಿ, ಸಣ್ಣಹುಲ್ಲೆ, ರಣಹದ್ದು ಹೀಗೆ ಹಲವು ವನ್ಯಜೀವಿ ಪ್ರಭೇದಗಳ ಉಳಿವಿಗೆ ಪ್ರದೇಶಗಳನ್ನು ಗುರುತಿಸಿ ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಅಂದು ಪಕ್ಷಿಗಳಿಗಾಗಿ ರಂಗನತಿಟ್ಟು ವನ್ಯಜೀವಿಧಾಮವನ್ನಾಗಿ ಘೋಷಿಸಿದರೆ ಇಂದು ಒಂಭತ್ತು ವನ್ಯಜೀವಿಧಾಮಗಳು ಮತ್ತು ಸಂರಕ್ಷಣಾ ಮೀಸಲು ಪ್ರದೇಶಗಳು ನಿರ್ದಿಷ್ಟ ಪ್ರಾಣಿ ಪ್ರಭೇದಗಳಿಗಾಗಿ ಸಂರಕ್ಷಿಸಲ್ಪಟ್ಟಿವೆ. ಇದರೊಡನೆ ನದಿಪಾತ್ರದಲ್ಲಿ ಸಿಗುವ ವಿಶೇಷ ಸಸ್ಯಪ್ರಭೇದಗಳನ್ನು ಸಂರಕ್ಷಿಸಲು ಶಾಲ್ಮಲಾ ನದಿಯ ಕೆಲ ಭಾಗವನ್ನು ಸಂರಕ್ಷಣಾ ಮೀಸಲು ಪ್ರದೇಶವನ್ನಾಗಿ ಘೋಷಿಸಲಾಗಿದೆ.

ಆದರೆ ವನ್ಯಜೀವಿಧಾಮವೆಂದು ಘೋಷಿಸಿದ ಕೂಡಲೇ ಗಿಡ ನೆಡುವುದು, ಪ್ರಾಣಿಗಳಿಗೆಂದು ನೀರಿನ ಹೊಂಡ ತೊಡುವುದು, ಹೊಸ ಕೆರೆಗಳನ್ನು ಕಟ್ಟುವುದು, ಹೊಸ ರಸ್ತೆಗಳನ್ನು ನಿರ್ಮಿಸುವುದು, ಹೀಗೆ ಹಲವು ಕಾರ್ಯಗಳನ್ನು  ಕೈಗೊಳ್ಳುತ್ತೇವೆ. ಸಕಲ ರೋಗಗಳಿಗೂ ಒಂದೇ ಮದ್ದು ಎಂಬುದು ನಮ್ಮ ಅಭಿಪ್ರಾಯ. ಆದರೆ ನಿರ್ವಹಣಾ ಕಾರ್ಯಗಳು ವಿವಿಧ ಪ್ರಭೇದಗಳನ್ನಾಧಾರಿತವಾಗಿದೆ. ತೋಳಗಳು ಹುಲ್ಲುಗಾವಲುಗಳನ್ನು ಬಯಸುತ್ತವೆ. ಅಲ್ಲಿ ಗಿಡ ನೆಡುವ ಕಾರ್ಯಕ್ರಮಗಳು ಸೂಕ್ತವಲ್ಲ. ಹಾಗೆಯೇ ಒಣ ಪ್ರದೇಶದಲ್ಲಿ ಕಡಿಮೆ ನೀರಿದ್ದರೂ   ಬದುಕಬಲ್ಲ ಪ್ರಾಣಿ ಪಕ್ಷಿಗಳಿರುತ್ತವೆ. ಅಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರು ಒದಗಿಸಿದರೆ ಆ ಪ್ರದೇಶಕ್ಕೆ ಒಗ್ಗಿಕೊಂಡ ಪ್ರಾಣಿ, ಪಕ್ಷಿ ಪ್ರಭೇದಗಳು ಸ್ಥಳೀಯವಾಗಿ ನಶಿಸಿಹೋಗುವ ಸಾಧ್ಯತೆಗಳಿರುತ್ತವೆ.

ರಾಣಿಬೆನ್ನೂರು ವನ್ಯಜೀವಿಧಾಮವನ್ನು ದೊರವಾಯನ ಹಕ್ಕಿ (ಗ್ರೇಟ್ ಇಂಡಿಯನ್ ಬಸ್ಟರ್ಡ್) ಮತ್ತು ತೋಳಗಳ ಸಂರಕ್ಷಣೆಗೆಗಾಗಿ ಮೀಸಲಿಡಲಾಗಿತ್ತು. ಆದರೆ ಇಂದು ಅಲ್ಲಿ ದೊರವಾಯನ ಹಕ್ಕಿ ಸ್ಥಳೀಯವಾಗಿ ನಶಿಸಿಹೋಗಿವೆ, ತೋಳದ ಇರುವಿಕೆ ಅನುಮಾನಾಸ್ಪದವಾಗಿದೆ. ತೋಳಗಳ ಸಂರಕ್ಷಣೆಗೆಂದು ಘೋಷಿಸಿದ್ದ ಮೇಲುಕೋಟೆ ವನ್ಯಜೀವಿಧಾಮದಲ್ಲಿ ತೋಳಗಳ ಸುಳಿವೇ ಇಲ್ಲ.

ಹಾಗೆಯೇ ತುಮಕೂರಿನ ಮೈದೇನಹಳ್ಳಿ ಸಂರಕ್ಷಣಾ ಮೀಸಲು ಪ್ರದೇಶದಲ್ಲಿ ತೋಳಗಳ ಜಾಗದಲ್ಲೀಗ ಚಿರತೆಗಳು ಬಂದು ಸೇರಿಕೊಂಡಿವೆ. ಈ ಮೂರು ಪ್ರದೇಶಗಳಲ್ಲಿ ತೋಳಗಳು ಕಾಣದಿರುವ ಪರಿಸ್ಥಿತಿಗೆ ಮುಖ್ಯ ಕಾರಣವೆಂದರೆ ಇದು ಬಂಜರು ಭೂಮಿ ಎಂಬ ತಪ್ಪು ಕಲ್ಪನೆಯಿಂ ಅಲ್ಲಿ ಅಭಿವೃದ್ಧಿ ಪಡಿಸಿದ ಕಾಡು ಪ್ರದೇಶ. ಹುಲ್ಲುಗಾವಲಿದ್ದ ಪ್ರದೇಶವೆಲ್ಲ ಕಾಡಾದರೆ ಹುಲ್ಲುಗಾವಲಿನಲ್ಲಿರುವ ವನ್ಯಪ್ರಭೇದಗಳು ನಶಿಸಿ ಕಾಡಿಗೆ ಹೊಂದಿಕೊಳ್ಳುವ ಪ್ರಾಣಿಗಳು ಹಾಜರಾಗುತ್ತವೆ. ತೋಳಗಳ ಜಾಗದಲ್ಲಿ ಚಿರತೆಗಳು ಬಂದು ತೋಳಗಳ ಸ್ಥಾನವನ್ನಾಕ್ರಮಿಸುವ ಪ್ರಮೇಯವೇ ಹೆಚ್ಚು. ನಾವು ಇತ್ತೀಚೆಗೆ ಮೈದೇನಹಳ್ಳಿಯಲ್ಲಿ ನಡೆಸಿದ ಅಧ್ಯಯನಗಳಲ್ಲಿ ಅಲ್ಲಿ ಚಿರತೆಗಳಿರುವುದು ಕಂಡುಬಂದಿದೆ. ವಿಶೇಷ ಆವಾಸಸ್ಥಾನದ ಅವಶ್ಯಕತೆಯಿರುವ ವನ್ಯಜೀವಿ ಪ್ರಭೇದಗಳ ಸಂರಕ್ಷಣೆಯಲ್ಲಿ ನಾವು ಎಡವಿದ್ದೇವೆ. 

ಹಾಗೆಯೇ ವನ್ಯಜೀವಿಧಾಮಗಳ ಘೋಷಣೆಯಲ್ಲೂ ಇತ್ತೀಚಿನ ದಿನಗಳಲ್ಲಿ ವನ್ಯಜೀವಿಗಳ ಸಂರಕ್ಷಣೆಯ ದೃಷ್ಟಿಕೋನದಲ್ಲಿ ಹೆಚ್ಚೇನೂ ಪ್ರಾಮುಖ್ಯತೆಯಿಲ್ಲದ ಪ್ರದೇಶಗಳನ್ನು ಘೋಷಿಸಿದ್ದೇವೆ. ಪಾರಿಸರಿಕ ವೈಶಿಷ್ಟ್ಯವಿಲ್ಲದ ಪ್ರದೇಶಗಳನ್ನು ಅಥವಾ ಸಾಮಾನ್ಯವಾಗಿ ಎಲ್ಲಾ ಕಡೆಯೂ ಸಿಗುವ ವನ್ಯಜೀವಿಗಳ ಪ್ರದೇಶಗಳನ್ನು ವನ್ಯಜೀವಿಧಾಮಗಳನ್ನಾಗಿ ಘೋಷಿಸುತ್ತಾ ಹೋದರೆ, ವಿಶೇಷ ವನ್ಯಜೀವಿಪ್ರಭೇದ ಅಥವಾ ಅಳಿವಿನಂಚಿನಲ್ಲಿರುವ ವನ್ಯಜೀವಿಗಳು ಅಥವಾ ಆವಾಸಸ್ಥಾನಗಳನ್ನು (ಉದಾಹರಣೆಗೆ ರಾಮಪತ್ರೆ ಜಡ್ಡಿ ಅಥವಾ ಮೈರಿಸ್ಟಿಕಾ ಸ್ವಾಂಪ್) ಸಂರಕ್ಷಿಸಲು ಸರ್ಕಾರ ಹಿಂಜರಿಯುತ್ತದೆ. ಮೊದಲೇ ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನವೆಂದರೆ ಬೆಂಬಲವಿರುವುದು ಅಷ್ಟಕ್ಕಷ್ಟೇ. ಕೇವಲ ಘೋಷಣೆಯಾದರೆ ಸಾಲದು, ನಿರ್ದಿಷ್ಟವಾದ ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳಬೇಕಲ್ಲವೇ?

ನಾವು ಕಳೆದುಕೊಂಡ ಪ್ರಭೇದಗಳು 
ಸಂರಕ್ಷಣೆಯ ಇಷ್ಟೆಲ್ಲಾ ಪ್ರಯತ್ನಗಳ ನಡುವೆಯೂ ನಾವು ಕೆಲ ಹಿನ್ನಡೆ ಕಂಡಿದ್ದೇವೆ. ರಾಜ್ಯದ ಬಂಡೀಪುರದ ಬಳಿಯಿರುವ ಬೀರಂಬಾಡಿ,  ಚಾಮರಾಜನಗರ ತಾಲ್ಲೂಕಿನ ಅತ್ತಿಕಲ್ ಪುರ, ಕೊಳ್ಳೇಗಾಲ ತಾಲ್ಲೂಕಿನ ಬಂಡಳ್ಳಿ, ಬಳ್ಳಾರಿಯ ಕೆಲ ಭಾಗ ಮತ್ತು ಚಿಕ್ಕಬಳ್ಳಾಪುರದಲ್ಲಿ ಸಹ ಕಂಡು ಬರುತ್ತಿದ್ದ ಸಿವಂಗಿ ಅಥವಾ ಬೇಟೆ ಚಿರತೆ (ಚೀತಾ) ಕರ್ನಾಟಕ ಏಕೀಕರಣಕ್ಕೂ ಮುನ್ನವೇ ಕಣ್ಮರೆಯಾಯಿತು. ಈಗ ಉತ್ತರ ಭಾರತದಿಂದ, ಆಂಧ್ರ ಪ್ರದೇಶದ ಉತ್ತರ ಭಾಗದ ತನಕ ಕಾಣಬರುವ ಮರವಿ (ನೀಲಗಾಯ್) ಹಿಂದೆ ಕರ್ನಾಟಕದಲ್ಲಿಯೂ ಕಂಡುಬರುತ್ತಿತ್ತು. ಬಂಡೀಪುರದಲ್ಲಿ ಮರವಿಯನ್ನು 1940ರಲ್ಲಿ ಮೈಸೂರು ಮಹಾರಾಜರ ವನ್ಯಜೀವಿ ಸಂರಕ್ಷಣಾ ಅಧಿಕಾರಿ, ಡಿ.ಎನ್.ನೀಲಕಂಠ ರಾವ್ ದಾಖಲಿಸಿದ್ದರು. ಹಾಗೆಯೇ, ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುತ್ತಿದ್ದ ಮಂಗಳ ಕುತ್ರಿ (ಮಲಬಾರ್ ಸಿವೆಟ್) ಇಂದು ನಶಿಸಿದೆ ಎನ್ನುವುದು ಹೆಚ್ಚುಕಡಿಮೆ ಖಾತ್ರಿಯಾಗಿದೆ. ಈ ಶತಮಾನದ ಆದಿಭಾಗದಲ್ಲಿ ಕೊಡಗಿನ ಬ್ರಹ್ಮಗಿರಿ ಬೆಟ್ಟಗಳಲ್ಲಿ ನೀಲಗಿರಿ ಥಾರ್ ಸಹ ಇತ್ತೆಂದು ಭಾವಿಸಲಾಗಿದೆ. ಇವು ನಾವು ತಿಳಿದಿರುವ ಹಾಗೆ ಕಳೆದುಕೊಂಡಿರುವ ವನ್ಯಜೀವಿ ಪ್ರಭೇದಗಳು. ನಮಗೆ ತಿಳಿಯದೆ ಹಲವು ಪಕ್ಷಿ, ಉರಗ, ಕಪ್ಪೆ, ಮೀನು ಮತ್ತಿತರ ಪ್ರಭೇಧಗಳು ನಮ್ಮ ಗಮನಕ್ಕೆ ಬರದೇ ನಶಿಸಿ ಹೋಗಿರುವ ಸಾಧ್ಯತೆಗಳಿವೆ.  

ಹಿಂದೆ ಕೊಡಗಿನ ದಕ್ಷಿಣ ಭಾಗದಲ್ಲಿ ಹೆಚ್ಚಾಗಿ ಸಿಗುತ್ತಿದ್ದ  ನೀಲಗಿರಿ ಲಂಗೂರ್ ಅಥವಾ ಕರಿ ಮುಚ್ಚ ಈಗ ಅಲ್ಲಿನ ಬ್ರಹ್ಮಗಿರಿ ವನ್ಯಜೀವಿಧಾಮದ ಕೆಲ ಭಾಗಗಳಿಗೆ ಮಾತ್ರ ಸೀಮಿತವಾಗಿದೆ. ಅತಿಯಾದ ಬೇಟೆಯೇ ಈ ಅವನತಿಗೆ ಮುಖ್ಯ ಕಾರಣ. ದಕ್ಷಿಣ ಭಾರತ ಮತ್ತು ಶ್ರೀಲಂಕಾದ ಕೆಲ ಭಾಗಗಳಲ್ಲಿ ಮಾತ್ರ ಕಂಡುಬರುವ ಬೆಟ್ಟಳಿಲು (ಗ್ರಿಜೆಲ್ಡ್ ಜಯಂಟ್ ಸ್ಕ್ವಿರಿಲ್) ರಾಜ್ಯದ ಕಾವೇರಿ ವನ್ಯಜೀವಿಧಾಮದ ಕಾವೇರಿ ನದಿ ತಟದಲ್ಲಿ ಮಾತ್ರ ಕಂಡು ಬರುತ್ತದೆ.

ಇದೇ ನದಿಯಲ್ಲಿ ವಿನಾಶದ ಅಂಚಿನಲ್ಲಿರುವ ಬಿಳಿ ಮೀನು, ಕೂರ್ಲ, ಊರ್ಲು, ಕೆಂಪು ಪುತ್ರಿ, ಬಾಳೆ ಮೀನು ಇಂತಹ ಅಳಿವಿನ ಅಂಚಿನಲ್ಲಿರುವ ಮತ್ಸ್ಯ ಪ್ರಭೇದಗಳು ಕಂಡುಬರುತ್ತವೆ. ಇವುಗಳಲ್ಲಿ ಕೆಲವು ಈ ನದಿಪಾತ್ರದಲ್ಲಿ ಮಾತ್ರ ಕಂಡುಬರುತ್ತವೆ. ವಿಶೇಷವಾಗಿ ಈ ನದಿಯಲ್ಲಿ ಹೇರಳವಾಗಿ ಕಂಡುಬರುತ್ತಿದ್ದ ಹಂಪ್-ಬ್ಯಾಕ್ಡ್ ಮಹಶೀರ್ ಮೀನು ಇಂದು ನಶಿಸುವ ಹಂತ ತಲುಪಿದೆ. ಇದಕ್ಕೆ ಮುಖ್ಯ ಕಾರಣ 80ರ ದಶಕಗಳಲ್ಲಿ ಕ್ರೀಡೆಗಾಗಿ ಮೀನು ಹಿಡಿಯುವವರು ಈ ನದಿಗೆ ಪರಿಚಯಿಸಿದ ಬ್ಲೂ-ಫಿನ್ಡ್ ಮಹಶೀರ್ ಮೀನು ಎಂದು ಮತ್ಸ್ಯ ವಿಜ್ಞಾನಿಗಳ ಅಭಿಪ್ರಾಯ. ತಿಳಿದೋ, ತಿಳಿಯದೆಯೋ ಮಾಡಿದ ತಪ್ಪಿನಿಂದ ಇಂದು ಮೀನಿನ ಒಂದು ಸಂತತಿಯೇ ವಿನಾಶದ ಹಂತ ತಲುಪಿದೆ. ನಾವು ತೆಗೆದುಕೊಳ್ಳುವ ನಿರ್ಧಾರಗಳಿಗೆ ವೈಜ್ಞಾನಿಕ ತಳಹದಿ ಅಥವಾ ಕನಿಷ್ಠ ಪಕ್ಷ ಸಾಮಾನ್ಯ ಜ್ಞಾನವಾದರೂ ಇಲ್ಲದಿದ್ದರೆ ಈ ಪರಿಸ್ಥಿತಿ ಬರುತ್ತದೆ. ಇಂದು, ರಾಜ್ಯ ಒಂದು ಸುಂದರ ಸಂತತಿಯನ್ನು ಕಳೆದುಕೊಳ್ಳುವ ಹಂತ ತಲುಪಿದೆ. 

ರಾಜ್ಯದಲ್ಲಿ ಕೆಲವು ಪ್ರಭೇದಗಳು ನಶಿಸಿಲ್ಲವಾದರೂ ಅವುಗಳ ಐತಿಹಾಸಿಕ ನೆಲೆಗಳಿಂದ ಕಣ್ಮರೆಯಾಗಿ ಈಗ ಕೆಲವೇ ಕೆಲವು ಪ್ರದೇಶಗಳಿಗೆ ಸೀಮಿತವಾಗಿವೆ. ರಾಜ್ಯಪತ್ರಗಳಲ್ಲಿ ಮತ್ತು ಇತರ ದಾಖಲೆಗಳಲ್ಲಿ ಬಣ್ಣಿಸಿದ್ದ ಹಲವಾರು ಪ್ರದೇಶಗಳಿಂದ ಹುಲಿಗಳು ಇಂದು ಕಣ್ಮರೆಯಾಗಿವೆ. ಹಾಸನ ಜಿಲ್ಲೆಯ ಅರಸೀಕೆರೆ, ತುಮಕೂರು ಜಿಲ್ಲೆಯ ದೇವರಾಯನದುರ್ಗ, ಚಿತ್ರದುರ್ಗ, ರಾಮನಗರ ಜಿಲ್ಲೆಯ ಸಾವನದುರ್ಗ, ಮೈಸೂರು ಜಿಲ್ಲೆಯ ಚಾಮುಂಡಿಬೆಟ್ಟ, ಕೆ.ಆರ್.ನಗರ ಈ ಎಲ್ಲಾ ಪ್ರದೇಶಗಳಿಂದ ಹುಲಿಗಳು ರಾಜ್ಯಗಳ ವಿಂಗಡಣೆಯಾಗುವ ಮೊದಲೇ ಬೇಟೆ ಮತ್ತು ಆವಾಸಸ್ಥಾನದ ನಾಶದಿಂದ ಕಣ್ಮರೆಯಾಗಿವೆ.

ರಾಜ್ಯದ ಶರಾವತಿ ಕಣಿವೆ, ಶೆಟ್ಟಿಹಳ್ಳಿ ಪ್ರದೇಶಗಳಿಂದ ಆನೆಗಳು ಕಾಣೆಯಾಗಿವೆ. ಹಾಗೆಯೇ ತೋಳ, ಸಣ್ಣ ಹುಲ್ಲೆ, ದೊರವಾಯನ ಹಕ್ಕಿಗಳ ಸಂಖ್ಯೆ ರಾಜ್ಯದಲ್ಲಿ ಬಹು ಗಂಭೀರ ಪರಿಸ್ಥಿತಿ ತಲುಪಿವೆ.

ಮುಂದಿನ ದಿನಗಳು
ಇಂದು ಬೆಂಗಳೂರು ನಗರವನ್ನು ದೇಶದ ವನ್ಯಜೀವಿ ವಿಜ್ಞಾನದ ರಾಜಧಾನಿಯೆಂದು ಕರೆಯಲಾಗುತ್ತಿದೆ. ದೇಶದ ಮೂಲ ಮೂಲೆಗಳಿಂದ ಪ್ರತಿಭಾವಂತರು ರಾಜ್ಯದಲ್ಲಿ ನೆಲೆಯೂರಿರುವುದು ಸಂತೋಷದ ವಿಷಯವೇ. ಆದರೆ ವನ್ಯಜೀವಿ ಸಂರಕ್ಷಣೆಯೆನ್ನುವುದು  ಜೀವಿ ವಿಜ್ಞಾನವನ್ನಷ್ಟೇ ಅವಲಂಬಿಸಿಲ್ಲ. ಅದು ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ವಿಷಯ ಕೂಡ. ಇದಕ್ಕೆ ಸ್ಥಳೀಯ ಭಾಷೆ ಗೊತ್ತಿರಬೇಕು, ಸಂಸ್ಕೃತಿಯ ಅರಿವಿರಬೇಕು, ಸ್ಥಳೀಯ ಜನ, ರಾಜಕೀಯ ಮುಖಂಡರ ನಾಡಿ ಮಿಡಿತ ಅರ್ಥೈಸಿಕೊಳ್ಳುವ ಚಾಕಚಕ್ಯತೆ ಬೇಕಾಗುತ್ತದೆ.  ದುರಾದೃಷ್ಟವಶಾತ್ ರಾಜ್ಯದ ಇತರ ಎಲ್ಲಾ ವಿಚಾರಗಳ ಹಾಗೆ ವನ್ಯಜೀವಿ ಸಂರಕ್ಷಣೆಯಲ್ಲಿ ಕೂಡ ಕನ್ನಡಿಗರ ಪಾತ್ರ ಅಳಿವಿನಂಚಿನಲ್ಲಿದೆ. ಉದಾಹರಣೆಗೆ ಸಿದ್ದ ಎಂಬ ಆನೆಯ ವಿಚಾರವಾಗಿ ದೇಶದ ಮೂಲೆ ಮೂಲೆಗಳಿಂದ ವನ್ಯಜೀವಿ ವೈದ್ಯಾಧಿಕಾರಿಗಳ ಸಲಹೆ ತೆಗೆದುಕೊಂಡದ್ದು ಬಹು ಸಂತೋಷದ ವಿಚಾರ. ಆದರೆ ಬೆಂಗಳೂರಿನಿಂದ ಕೇವಲ ಮೂರು ಘಂಟೆ ದೂರದ ದಾರಿಯಲ್ಲಿರುವ, ಬಹುಶಃ ಪ್ರಪಂಚದಲ್ಲೇ ಆನೆಗಳ ವಿಚಾರದಲ್ಲಿ ಅತೀ ಉತ್ತಮ ಜ್ಞಾನ ಹೊಂದಿರುವ ವನ್ಯಜೀವಿ ವೈದ್ಯಾಧಿಕಾರಿ ಚೆಟ್ಟಿಯಪ್ಪರವರ ಸಲಹೆ ನಮ್ಮ ಅರಣ್ಯ ಇಲಾಖೆಗೆ ಬೇಡವಾದುದು ವಿಷಾದಕರ.

ಇನ್ನು ವನ್ಯಜೀವಿ ಸಂರಕ್ಷಣೆ ಮತ್ತು ವಿಜ್ಞಾನದ ಬಗ್ಗೆ ಕೆಲಸ ಮಾಡುತ್ತಿರುವ ಸ್ವಯಂಸೇವಾ ಸಂಸ್ಥೆಗಳು ಒಡಕಿನ ಮನೆ. ಅದರೊಡನೆ ಸ್ವಯಂಸೇವಾ ಸಂಸ್ಥೆಗಳಲ್ಲಿ ಸಮಾಜದಲ್ಲಿರುವ ಎಲ್ಲಾ ಕೆಡಕು ಒಡಕುಗಳು ಸಹ ಇವೆ. ವನ್ಯಜೀವಿ  ಸ್ವಯಂಸೇವಾ ಸಂಘಗಳು ಮತ್ತು ವಿಜ್ಞಾನಿಗಳ ನಡವಳಿಕೆ ಬದಲಾಗದಿದ್ದರೆ ಸಾರ್ವಜನಿಕರಿಗೆ ಅವರ ಮೇಲಿದ್ದ ಅಲ್ಪಸ್ವಲ್ಪ ನಂಬಿಕೆ ಕೂಡ ಸಂಪೂರ್ಣವಾಗಿ ನಶಿಸಿಹೋಗುವ ದಿನಗಳು ದೂರವಿಲ್ಲ.

ನಮ್ಮ ರಾಜ್ಯದ ವನ್ಯಜೀವಿ ಪರಂಪರೆಯ ಸಂರಕ್ಷಣೆಗೆ, ನಮ್ಮ ಭಾಷೆ, ಸಂಸ್ಕೃತಿಯಷ್ಟೇ ಪ್ರಾಮುಖ್ಯತೆಯನ್ನು ನಾವು ಕೊಡಬೇಕಾಗಿದೆ. ಇದಕ್ಕಾಗಿ ಆಸಕ್ತ ಕನ್ನಡಿಗರೆಲ್ಲರೂ ಒಂದೇ ವೇದಿಕೆಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ಕಾವೇರಿ ನದಿಗೆ ಸಾಕಷ್ಟು ಆಣೆಕಟ್ಟು ಕಟ್ಟಿ ಆಗಿದೆ. ಈಗ ಇನ್ನೊಂದು ಯೋಜನೆ ತಯಾರಾಗುತ್ತಿದೆ. ಆದರೆ ಆ ನದಿಗೆ ಮಳೆ ಕೊಡುವ ಕಾಡುಗಳೇ ಇಲ್ಲದಿದ್ದರೆ ಚೆಲುವ ಕನ್ನಡನಾಡಿಗೆ ಕಾವೇರಿ ತಾಯಿ ನೀರು ತರುವುದಾದರೂ ಎಲ್ಲಿಂದ?
ವನ್ಯಜೀವಿ ಮತ್ತು ಕಾಡುಗಳ ಸಂರಕ್ಷಣೆಗೆ ಮುಂದಿನ ಹತ್ತು ವರ್ಷ, ಇಪ್ಪತ್ತು ವರ್ಷಗಳಿಗೆ ನೀಲಿ ನಕ್ಷೆ ತಯಾರಾಗಬೇಕಾಗಿದೆ. ವಾರ್ಷಿಕವಾಗಿ ಪಾರಿಸರಿಕ ಗುರಿ ಸಾಧಿಸುವಲ್ಲಿ ಯಾವ ದಿಕ್ಕಿನತ್ತ ಹೋಗುತ್ತಿದ್ದೇವೆ ಎಂಬುದನ್ನು ಮೌಲ್ಯಮಾಪನ ಮಾಡಿಕೊಳ್ಳಬೇಕಾಗಿದೆ. ಇಲ್ಲವಾದಲ್ಲಿ, ನಾವು ಹಿಂದೆ ಮಾಡಿದ ತಪ್ಪಿನಿಂದ ಆದ ಪ್ರಮಾದಗಳು ಮರುಕಳಿಸುವ ಸಾಧ್ಯತೆಗಳೇ ಹೆಚ್ಚು.

ಹೊಸದಾಗಿ ಸೇರ್ಪಡೆಯಾದದ್ದು
ಇತ್ತೀಚೆಗೆ ನಮ್ಮ ಅಧ್ಯಯನದಿಂದ ತುಮಕೂರಿನ ಬುಕ್ಕಾಪಟ್ಣ ಕಾಡಿನಲ್ಲಿ ಸಣ್ಣ ಹುಲ್ಲೆಗಳಿರುವುದನ್ನು (ಚಿಂಕಾರ)  ದಾಖಲಿಸಿದ್ದು ಈ ಆಡಿನ ಜಾತಿಯ ವನ್ಯಜೀವಿಗಳಿರುವ ಹೊಸ ಪ್ರದೇಶವನ್ನು ಗುರುತಿಸಲು ಸಾಧ್ಯವಾಯಿತು. ಹಾಗೆಯೇ ಅರಣ್ಯ ಇಲಾಖೆಯ ಕ್ಯಾಮರಾ ಟ್ರಾಪಿನಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಸಹ ಎರಳೆಗಳನ್ನು ಹೊಸದಾಗಿ ದಾಖಲಿಸಿರುವುದು ಸಂತೋಷದ ವಿಚಾರ.

ರಾಜ್ಯದಲ್ಲೇ ಪ್ರಥಮ ಬಾರಿಗೆ ಜೇನುಹೀರ್ಕ್ (ಹನಿ ಬ್ಯಾಡ್ಜರ್) ಪ್ರಾಣಿಯು ಕಾವೇರಿ ವನ್ಯಜೀವಿಧಾಮದ ಹಲಗೂರು ವಲಯದಲ್ಲಿ ನಾವು ಅಳವಡಿಸಿದ್ದ ಕ್ಯಾಮರಾ ಟ್ರಾಪ್‌ನಲ್ಲಿ ದಾಖಲಾಗಿದೆ. ಇವುಗಳೊಡನೆ ಹಲವು ಜಾತಿಯ ಕಪ್ಪೆ, ಮೀನು, ಸಸ್ಯಪ್ರಭೇದಗಳನ್ನು ಹಲವು ವಿಜ್ಞಾನಿಗಳು ರಾಜ್ಯದಲ್ಲಿ ಹೊಸದಾಗಿ ಗುರುತಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.