ADVERTISEMENT

ವಿಭಿನ್ನ ದಾರಿಯಲ್ಲಿ ಯಶಸ್ಸಿನ ಪಯಣ

ನೃತ್ಯ ಲೋಕ

ಸುರೇಖಾ ಹೆಗಡೆ
Published 27 ಜನವರಿ 2017, 19:30 IST
Last Updated 27 ಜನವರಿ 2017, 19:30 IST
ಮಾನಸಿ ರಘುನಂದನ್‌
ಮಾನಸಿ ರಘುನಂದನ್‌   

ನೃತ್ಯದ ವಿವಿಧ ಮಜಲುಗಳನ್ನು ಅನ್ವೇಷಿಸುತ್ತಾ, ಅದರಲ್ಲಿ ತೊಡಗಿಕೊಂಡು ಸಾಧನೆಯ ದಾರಿಯಲ್ಲಿ ನಡೆಯುತ್ತಿರುವ ಕಲಾವಿದೆ ಮಾನಸಿ ಪಂಡ್ಯ ರಘುನಂದನ್‌.

ಗುಜರಾತ್‌ ಮೂಲದ ಮಾನಸಿ ಅವರದು ಕಲಾವಿದರ ಕುಟುಂಬ. ತಂದೆತಾಯಿ ನಡೆಸುತ್ತಿದ್ದ ‘ಪೂರ್ವಾ ಸ್ಕೂಲ್‌ ಆಫ್‌ ಡಾನ್ಸ್‌’ನಲ್ಲಿ ನೃತ್ಯದ ಪಟ್ಟುಗಳನ್ನು ಕಲಿತ ಅವರು ಕಲಾವಿದ ಮನೆತನಕ್ಕೇ ಸೊಸೆಯಾಗಿ ಬಂದರು.

ಅತ್ತೆ ವೀಣಾ ವಾದಕಿ. ಮಾವ ನೃತ್ಯ ಕಲಾವಿದರು. ಐಟಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಅವರ ಪತಿ ಕೂಡ ಭರತನಾಟ್ಯ ಕಲಾವಿದ. ‘ಕಲಾವಿದರ ಕುಟುಂಬದಲ್ಲಿರುವುದು ನನ್ನ ಸಾಧನೆಗೆ ಪೂರಕ’ ಎನ್ನುತ್ತಾರೆ ಮಾನಸಿ.

ಪಾಕಿಸ್ತಾನ, ಸಿಂಗಪುರ, ಮಲೇಷ್ಯಾ, ದಕ್ಷಿಣ ಆಫ್ರಿಕಾ, ಸ್ಪೇನ್‌, ನೇಪಾಳ, ಮಾರಿಷಸ್‌, ಫ್ರಾನ್ಸ್‌ ಸೇರಿದಂತೆ ಹಲವೆಡೆ ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸೆಮಿನಾರ್‌, ಕಾರ್ಯಾಗಾರಗಳಲ್ಲಿಯೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಾರೆ.

ತಂದೆ ಶರದ್‌ ಪಂಡ್ಯ ಮತ್ತು ತಾಯಿ ನಿರು ಪಂಡ್ಯ ಮಾನಸಿ ಅವರ ಮೊದಲು ಗುರುಗಳು. ಜಯ ಚಂದ್ರಶೇಖರ್‌ ಹಾಗೂ ಪ್ರೊ.ಪ್ರದೀಪ್‌ ಬರುವಾ ಅವರಿಂದ ಹೆಚ್ಚಿನ ನೃತ್ಯಪಾಠ ಹೇಳಿಸಿಕೊಂಡರು. ಇವರು ಒಡಿಸ್ಸಿ ನೃತ್ಯ ಕಲಾವಿದರೂ ಹೌದು. ಗಂಗಾಧರ ಪ್ರಧಾನ್‌, ಮಾನಸಿ ಅವರ ಒಡಿಸ್ಸಿ ನೃತ್ಯ ಗುರು.

ವಿವಿಧ ರಾಜ್ಯಗಳ ಪ್ರಮುಖ ಉತ್ಸವಗಳಲ್ಲಿ ಕಾರ್ಯಕ್ರಮ ನೀಡಿರುವ ಮಾನಸಿ ದೆಹಲಿ, ಭುವನೇಶ್ವರ, ವಡೋದರ, ಜಾರ್ಖಂಡ್‌, ಬೆಂಗಳೂರು, ಕೋಲ್ಕತ್ತ, ಸೂರತ್‌, ಬರೋಡಾ, ಔರಂಗಾಬಾದ್‌, ಬೃಂದಾವನ, ಗುಜರಾತ್‌, ಮುಂಬೈ, ಪಾಕಿಸ್ತಾನದಲ್ಲಿ ನಡೆದ ಅಂತರರಾಷ್ಟ್ರೀಯ ಕಲಾ ಉತ್ಸವ, ಸ್ಪೇನ್‌ನಲ್ಲಿ ನಡೆದ ‘ಕಲ್ಚರಲ್‌ ನೈಟ್ಸ್‌ ಫ್ರಂ ಇಂಡಿಯಾ’ ಹೀಗೆ ನೂರಕ್ಕೂ ಹೆಚ್ಚು ಪ್ರತಿಷ್ಠಿತ ಉತ್ಸವಗಳಲ್ಲಿ ಮಾನಸಿ ಕಾರ್ಯಕ್ರಮ ನೀಡಿದ್ದಾರೆ.

ಶಾಸ್ತ್ರೀಯ ನೃತ್ಯಕ್ಕೆ ಸಂಬಂಧಿಸಿದಂತೆ ವಿವಿಧೆಡೆ ಪೇಪರ್‌ ಪ್ರಸೆಂಟೇಶನ್‌ ನೀಡಿರುವುದರ ಜೊತೆಗೆ ಸ್ಪೇನ್‌, ಕಾನ್ಪುರ, ರಾಜಕೋಟ್‌, ದೆಹಲಿ, ಕೋಲ್ಕತ್ತ, ಸರ್ಬಿಯಾ, ರಷ್ಯ ಮುಂತಾದೆಡೆ ಕಾರ್ಯಾಗಾರ ಹಾಗೂ ಪ್ರಾತ್ಯಕ್ಷಿಕೆಗಳನ್ನೂ ನೀಡಿದ್ದಾರೆ. ಕಳೆದ ಆರು ವರ್ಷದಿಂದ ಬೆಂಗಳೂರಿನಲ್ಲಿ ಅಭಿವ್ಯಕ್ತಿ ನೃತ್ಯ ಕೇಂದ್ರವನ್ನೂ ಅವರು ನಡೆಸುತ್ತಿದ್ದಾರೆ. ಅಲ್ಲದೆ ಫ್ರೆಂಚ್‌ ಭಾಷಾ ತರಬೇತುದಾರರಾಗಿಯೂ ಕೆಲಸ ಮಾಡುತ್ತಿದ್ದಾರೆ.

ನೃತ್ಯ ಕ್ಷೇತ್ರದಲ್ಲಿ ಅವರ ಸಾಧನೆಗೆ ಅನೇಕ ಪ್ರಶಸ್ತಿಗಳು ಸಂದಿವೆ. ಅನೇಕ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲೂ ಮಾನಸಿ ಅವರು ವಿಜೇತರಾಗಿದ್ದಾರೆ.  ನೃತ್ಯ ವಿಲಾಸಿನಿ ಎನ್ನುವ ಬಿರುದು ಅವರಿಗಿದೆ.

ಅವರು ಸರ್ಕಾರದ ಸಾಂಸ್ಕೃತಿಕ ರಾಯಭಾರಿ. ಅಂದಹಾಗೆ ಅನೇಕ ವಾಹಿನಿಗಳಲ್ಲಿಯೂ ಮಾನಸಿ ಅವರ ನೃತ್ಯ ಕಾರ್ಯಕ್ರಮಗಳು ಪ್ರಸಾರವಾಗಿವೆ. ಇತ್ತೀಚೆಗೆ ಡಿಸ್ಕವರಿ ಚಾನೆಲ್‌ನಲ್ಲಿ ಪ್ರಸಾರವಾದ ‘ಫೆಂಟಾಸ್ಟಿಕ್‌ ಫೆಸ್ಟಿವಲ್ಸ್‌ ಆಫ್‌ ದ ವರ್ಲ್ಡ್‌’ ಕಾರ್ಯಕ್ರಮದಲ್ಲಿಯೂ ಮಾನಸಿ ಅವರ ನೃತ್ಯ ಪ್ರಸಾರಗೊಂಡಿತ್ತು.

ಹಲವು ಪದವಿಗಳ ಅರಸಿ...
ದೇಶ ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಮಾನಸಿ ಅವರು ವಿವಿಧ ಭಾಷೆಗಳಲ್ಲಿಯೂ ಪರಿಣತಿ ಗಳಿಸಿದ್ದಾರೆ. ಬರೋಡಾದ ಫ್ಯಾಕಲ್ಟಿ ಆಫ್‌ ಪರ್ಫಾರ್ಮಿಂಗ್‌ ಆರ್ಟ್ಸ್‌ನಲ್ಲಿ ಭರತನಾಟ್ಯ ಡಿಪ್ಲೊಮಾ, ಮುಂಬೈನ ನಲಂದಾ ಡಾನ್ಸ್‌ ರಿಸರ್ಚ್‌ ಸೆಂಟರ್‌ನಲ್ಲಿ ಓಡಿಸ್ಸಿ ಡಿಪ್ಲೊಮಾ, ಗುಜರಾತ್‌ನ ಗಂಧರ್ವ ಮಹಾವಿದ್ಯಾಲಯ ಮಂಡಲ್‌ನಲ್ಲಿ ಭರತನಾಟ್ಯ ವಿಷಯದಲ್ಲಿ ಅಲಂಕಾರ ಕೋರ್ಸ್‌, ಪೂರ್ವ ಸ್ಕೂಲ್‌ ಆಫ್‌ ಭರತನಾಟ್ಯದಲ್ಲಿ ನೃತ್ಯ ವಿಶಾರದ,

ಭುವನೇಶ್ವರದ ಅಖಿಲ ಭಾರತೀಯ ಗಂಧರ್ವ ಮಂಡಲದಲ್ಲಿ ಒಡಿಸ್ಸಿಯಲ್ಲಿ ಮಧ್ಯಮ ಪೂರ್ಣ ಕೋರ್ಸ್‌, ಚಾವು ನೃತ್ಯದಲ್ಲಿ ಕೋರ್ಸ್‌ ಪೂರೈಸಿದ್ದಾರೆ. ಕೋಲ್ಕತ್ತದ ರವೀಂದ್ರ ಭಾರತಿ ವಿಶ್ವವಿದ್ಯಾಲಯದಲ್ಲಿ ಒಡಿಸ್ಸಿ ವಿಷಯದಲ್ಲಿ ಮಾಸ್ಟರ್‌ ಆಫ್  ಫೈನ್‌ ಆರ್ಟ್ಸ್‌, ಎಂ.ಎಸ್‌. ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ ಸ್ನಾತಕೋತ್ತರ, ಸಂಸ್ಕೃತ ಹಾಗೂ ಫ್ರೆಂಚ್‌ ಭಾಷೆಯಲ್ಲಿ ಪದವಿ ಹೀಗೆ ಅವರ ವಿದ್ಯಾರ್ಹತೆಯ ಪಟ್ಟಿ ಸಾಗುತ್ತದೆ.

ಇಷ್ಟೇ ಅಲ್ಲದೆ ಫ್ರೆಂಚ್‌ ಭಾಷೆಯಲ್ಲಿ ಡಿಪ್ಲೊಮಾ, ಸ್ಪ್ಯಾನಿಶ್‌ ಹಾಗೂ ರಷ್ಯನ್‌ ಭಾಷೆಯಲ್ಲಿ ಸರ್ಟಿಫಿಕೇಟ್‌ ಕೋರ್ಸ್‌ ಮಾಡಿಕೊಂಡಿರುವ ಮಾನಸಿ ಇಂಗ್ಲಿಷ್‌, ಹಿಂದಿ, ಗುಜರಾತಿ, ಕನ್ನಡ, ಓಡಿಯಾ ಹಾಗೂ ಫ್ರೆಂಚ್‌ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು.

ಭಾನುವಾರ ಮಾನಸಿ ನೃತ್ಯ
ಮಾನಸಿ ಅವರ ಒಡಿಸ್ಸಿ ನೃತ್ಯ ಹಾಗೂ ಪ್ರಾತ್ಯಕ್ಷಿಕೆ ಇದೇ ಭಾನುವಾರ (ಜ.29ರಂದು) ನಡೆಯಲಿದೆ. ಸ್ಥಳ– ಅಭಿವ್ಯಕ್ತಿ ಡಾನ್ಸ್‌ ಸೆಂಟರ್‌, 13ನೇ ಮುಖ್ಯರಸ್ತೆ, ಇ ಬ್ಲಾಕ್‌, 2ನೇ ಹಂತ, ರಾಜಾಜಿನಗರ. ಸಂಜೆ 6.

ಫೆ.10ರಂದು ರಘುನಂದನ್‌ ಎಸ್‌. ಹಾಗೂ ಮಾನಸಿ ರಘುನಂದನ್‌ ಅವರ ನೃತ್ಯ. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 5.

ADVERTISEMENT

*
ಶಾಸ್ತ್ರೀಯ ನೃತ್ಯ ನನಗೆ ಸಾಕಷ್ಟು ಮೌಲ್ಯಗಳನ್ನು ಕಲಿಸಿಕೊಟ್ಟಿದೆ. ನೃತ್ಯ ಕಲಿಯುತ್ತಾ, ಹಾಡುಗಳ ಭಾವಗಳಲ್ಲಿ ಹೋಗುತ್ತಾ ಮಾನವ ಸಂಬಂಧಗಳ ಮಹತ್ವ ಅರಿತುಕೊಂಡಿದ್ದೇನೆ. ತಾಳ್ಮೆ ಕಲಿತಿದ್ದೇನೆ.
–ಮಾನಸಿ ಪಂಡ್ಯ ರಘುನಂದನ್‌,
ಭರತನಾಟ್ಯ, ಒಡಿಸ್ಸಿ ನೃತ್ಯ ಕಲಾವಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.