ADVERTISEMENT

ಬಾಲಕಿ ಮೇಲೆ ‘ರಾಜಕೀಯ ಅತ್ಯಾಚಾರ’

ವಿ.ಕೋದಂಡರಾಮೇಗೌಡ
Published 25 ಫೆಬ್ರುವರಿ 2017, 19:30 IST
Last Updated 25 ಫೆಬ್ರುವರಿ 2017, 19:30 IST
ಬಾಲಕಿ ಮೇಲೆ ‘ರಾಜಕೀಯ ಅತ್ಯಾಚಾರ’
ಬಾಲಕಿ ಮೇಲೆ ‘ರಾಜಕೀಯ ಅತ್ಯಾಚಾರ’   

2001. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮವೊಂದರಲ್ಲಿ ಮೂರು ರಾಜಕೀಯ ಪಕ್ಷಗಳ ನಡುವೆ ಭಾರಿ ಪೈಪೋಟಿ ಇದ್ದ ವೇಳೆಯದು. ಆ ಪೈಕಿ ಕಾಂಗ್ರೆಸ್‌ ಹಾಗೂ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಕಾರ್ಯಕರ್ತರ ಎರಡು ಗುಂಪುಗಳ ನಡುವೆ ರಾಜಕೀಯ ದ್ವೇಷದ ಜ್ವಾಲೆ ಕಿಡಿಕಾರುತ್ತಿತ್ತು. ಇದರ ಜೊತೆಗೆ, ಕೆಳಜಾತಿ–ಮೇಲ್ಜಾತಿ ಎಂದು ಜಾತಿಯ ವಿವಾದವೂ ತಳಕು ಹಾಕಿಕೊಂಡಿತ್ತು.

ಇಂತಿಪ್ಪ ಸಂದರ್ಭದಲ್ಲಿ, ಬಿಎಸ್‌ಪಿಯ ಸಕ್ರಿಯ ಕಾರ್ಯಕರ್ತ ಹನುಮಪ್ಪ ಅವರ ಮಗಳು 13 ವರ್ಷದ ಕನಕಾಳ ಮೇಲೆ ಅತ್ಯಾಚಾರ ನಡೆದಿದೆ ಎಂಬ ಸುದ್ದಿ ಇಡೀ ಗ್ರಾಮವನ್ನು ಉದ್ವಿಗ್ನ ಸ್ಥಿತಿಗೆ ತಂದಿತು. ಎಂಟನೆಯ ತರಗತಿಯಲ್ಲಿ ಓದುತ್ತಿದ್ದ ಕನಕಾಳ ಮೇಲೆ ಅದೇ ಗ್ರಾಮದ, ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ ಇಬ್ಬರು ಯುವಕರು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಯಿತು.

ಬೆಳಿಗ್ಗೆ ಸುಮಾರು 9.30ಕ್ಕೆ ಈ ಅತ್ಯಾಚಾರ ನಡೆದಿರುವುದಾಗಿ ದೂರಿದ ಕನಕಾಳ ಅಪ್ಪ, ಅದೇ ರಾತ್ರಿ 11.30ಕ್ಕೆ ಪೊಲೀಸರಲ್ಲಿ ದೂರು ದಾಖಲಿಸಿದರು. ಅವರ ಆರೋಪ ಭೀಮಪ್ಪ ಮತ್ತು ಸೋಮನಾಥ ಎನ್ನುವ ಯುವಕರ ಮೇಲಿತ್ತು. ದೂರಿನಲ್ಲಿ ಅವರು ಭೀಮಪ್ಪನ ಹೆಸರನ್ನು ನೇರವಾಗಿ ಸೇರಿಸಿದ್ದರು. ಆದರೆ ಸೋಮನಾಥನ ಹೆಸರನ್ನು ಸೇರಿಸಿರಲಿಲ್ಲ. ಬದಲಿಗೆ ‘ಭೀಮಪ್ಪ  ಅತ್ಯಾಚಾರ ಎಸಗಿದ್ದಾನೆ, ಕಾಂಗ್ರೆಸ್‌ನ ಮಂಜ ಎಂಬುವವರ ಮಗ ಸಹಕರಿಸಿದ್ದಾನೆ’ ಎಂದು ತಿಳಿಸಿದ್ದರು. ಆಗ ‘ಜಾಣ’ ಪೊಲೀಸರು ಮಂಜ ಅವರ ಒಂಬತ್ತೂ ಮಕ್ಕಳನ್ನು ಪದೇ ಪದೇ ವಿಚಾರಣೆ ನೆಪದಲ್ಲಿ ಪೊಲೀಸ್‌ ಠಾಣೆಗೆ ಕರೆಸಿ ಕಿರಿಕಿರಿ ಮಾಡತೊಡಗಿದರು. ಅನೇಕ ದಿನ ವಿಚಾರಣೆ ನಡೆಸಿದ ಮೇಲೆ ಒಂಬತ್ತು ಮಕ್ಕಳ ಪೈಕಿ ಸೋಮನಾಥನನ್ನು ‘ಫಿಕ್ಸ್‌’ ಮಾಡಿ ಅವನ ಮೇಲೆ ಕೇಸು ಹಾಕಿದರು.

ADVERTISEMENT

ಇವರಿಬ್ಬರೇ ಅತ್ಯಾಚಾರ ಎಸಗಿದ್ದಾರೆ ಎಂಬುದಕ್ಕೆ ಏನೇನು ಸಾಕ್ಷ್ಯಾಧಾರಗಳು ಬೇಕೋ ಎಲ್ಲವನ್ನೂ ಪೊಲೀಸರು ಚೆನ್ನಾಗಿಯೇ ಕಲೆಹಾಕಿದರು. ಎರಡು ರಾಜಕೀಯ ಪಕ್ಷಗಳ ನಡುವಿನ ಕಲಹ ಎಂದ ಮೇಲೆ ಕೇಳಬೇಕೆ? ಯಾವ ಪಕ್ಷದವರ ಕಡೆ ತಮ್ಮ ಪ್ರದೇಶದಲ್ಲಿ ಪ್ರಾಬಲ್ಯ ಹೆಚ್ಚಿಗೆ ಇರುತ್ತದೆಯೋ ಅವರ ಕಡೆಯೇ ಹೆಚ್ಚಾಗಿ ‘ಪೊಲೀಸರ ನ್ಯಾಯ’ ಒಲಿಯುತ್ತದೆ ಎಂಬ ಲೋಕಾರೂಢಿ ಮಾತನ್ನು ಇಲ್ಲಿಯ ಪೊಲೀಸರೂ ಅನೂಚಾನವಾಗಿ ಪಾಲಿಸಿದ್ದರು!
ಅಂತೂ ಭೀಮಪ್ಪ ಮತ್ತು ಸೋಮನಾಥನ ಮೇಲೆ ಕೇಸು ದಾಖಲಾಯಿತು. ಅವರ ವಿರುದ್ಧ ದೋಷಾರೋಪ ಪಟ್ಟಿ ತಯಾರಿಸಿದ ಪೊಲೀಸರು ಕೋರ್ಟ್‌ಗೆ ಅದನ್ನು ಸಲ್ಲಿಸಿದರು.

ಮೊದಲನೆಯ ಆರೋಪಿ ಭೀಮಪ್ಪನ ಪರವಾಗಿ ಬೇರೊಬ್ಬ ವಕೀಲರು ವಕಾಲತ್ತು ವಹಿಸಿದರೆ, ಎರಡನೆಯ ಆರೋಪಿ ಸೋಮನಾಥನ ಪರವಾಗಿ ನಾನು ವಕಾಲತ್ತು ವಹಿಸಿದೆ. ಹೊಸದಾಗಿ ನೇಮಕಗೊಂಡಿದ್ದ ನ್ಯಾಯಾಧೀಶರ ಎದುರು ಸೆಷನ್ಸ್‌ ಕೋರ್ಟ್‌ನಲ್ಲಿ ಈ ಪ್ರಕರಣ ವಿಚಾರಣೆಗೆ ಬಂತು. ಎರಡು ವರ್ಷ ವಾದ, ಪ್ರತಿವಾದ ಬಲು ಬಿರುಸಿನಿಂದ ಸಾಗಿತು. ಪ್ರಕರಣದಲ್ಲಿ ನಡೆದಿರಬಹುದಾದ ಎಲ್ಲಾ ಅಕ್ರಮಗಳ ಬಗ್ಗೆ ಆರೋಪಿಗಳ ಪರ ವಕೀಲರಾದ ನಾವು ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಟ್ಟೆವು. ಸಾಕ್ಷಿಗಳನ್ನು ಪಾಟೀ ಸವಾಲಿಗೆ ಒಳಪಡಿಸಿದಾಗ ಅವರು ನೀಡಿದ್ದ ಗೊಂದಲಮಯ ಹೇಳಿಕೆಗಳ ಬಗ್ಗೆಯೂ ನ್ಯಾಯಾಧೀಶರಿಗೆ ತಿಳಿಸಿದೆವು. ಇನ್ನೊಂದೆಡೆ, ಆರೋಪಿಗಳೇ ಅತ್ಯಾಚಾರ ಎಸಗಿದ್ದಾರೆ ಎಂಬುದಾಗಿ ಪ್ರಾಸಿಕ್ಯೂಷನ್‌ ಪರ ವಕೀಲರು ಹೇಗೆಲ್ಲಾ ಸಾಧ್ಯವೋ ಹಾಗೆಲ್ಲಾ ವಾದಿಸಿದರು.

ದುರದೃಷ್ಟ ಎಂದರೆ ನಮ್ಮ ವಾದಕ್ಕೆ ಸೆಷನ್ಸ್‌ ಕೋರ್ಟ್‌ನಲ್ಲಿ ಮಾನ್ಯತೆ ಸಿಗಲಿಲ್ಲ. ಪ್ರಾಸಿಕ್ಯೂಷನ್‌ ವಾದವೇ ಸರಿ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು. ‘ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು...’ ಎಂದು ನಮ್ಮ ಕಾನೂನು ಸಾರಿಸಾರಿ ಹೇಳಿದರೂ ಈ ಪ್ರಕರಣದಲ್ಲಿ  ನಿರಪರಾಧಿಗಳಿಗೆ ಶಿಕ್ಷೆಯಾಯಿತು. ಅತ್ಯಾಚಾರ ಮಾಡಿದ ಆರೋಪದ ಮೇಲೆ ಭೀಮಪ್ಪನಿಗೆ ಏಳು ವರ್ಷ ಹಾಗೂ ಅವನಿಗೆ ಸಹಕರಿಸಿದ ಆರೋಪದ ಮೇಲೆ ಸೋಮನಾಥನಿಗೆ ನಾಲ್ಕು ವರ್ಷ ಜೈಲು ಶಿಕ್ಷೆಯಾಯಿತು.

ಅಲ್ಲಿಂದ ಕೇಸು ಹೈಕೋರ್ಟ್‌ಗೆ ಬಂತು. ಹೈಕೋರ್ಟ್‌ನಲ್ಲೂ ಸೋಮನಾಥನ ಪರವಾಗಿ ನಾನೇ ವಕಾಲತ್ತು ವಹಿಸಿದೆ. ಕ್ರಿಮಿನಲ್‌ ಪ್ರಕರಣಗಳಲ್ಲಿ ಕೆಳಹಂತದ ಕೋರ್ಟ್‌ಗಳು ಎಲ್ಲಾ ಸಾಕ್ಷ್ಯ, ಸಾಕ್ಷಿಗಳನ್ನು ಪರಿಶೀಲಿಸಿ, ಸವಾಲು– ಪಾಟಿ ಸವಾಲು ಮಾಡಿ ವಿಚಾರಣೆ ನಡೆಸುವ ಕಾರಣ, ಅಲ್ಲಿ ನಡೆಯುವ ವಿಚಾರಣೆ ಮಹತ್ವದ ಪಾತ್ರ ವಹಿಸುತ್ತದೆ. ಏಕೆಂದರೆ ಸೆಷನ್ಸ್‌ ಕೋರ್ಟ್‌ನ ದಾಖಲೆಗಳನ್ನೇ ಆಧಾರವಾಗಿಇಟ್ಟುಕೊಂಡು ಹೈಕೋರ್ಟ್‌ ಹಾಗೂ ನಂತರ ಸುಪ್ರೀಂ ಕೋರ್ಟ್‌ಗಳು ತೀರ್ಪು ನೀಡುತ್ತವೆಯೇ ವಿನಾ ಮೇಲಿನ ಕೋರ್ಟ್‌ಗಳಲ್ಲಿ ಆರೋಪಿಗಳನ್ನು ಕರೆಸಿ ವಿಚಾರಣೆ ನಡೆಸುವುದು ತೀರಾ ಕಮ್ಮಿ. ಅಪರೂಪದ ಪ್ರಕರಣಗಳಲ್ಲಿ ಮಾತ್ರ ಅಲ್ಲಿ ಆರೋಪಿಗಳನ್ನು ಕಟಕಟೆಯಲ್ಲಿ ನಿಲ್ಲಿಸಲಾಗುವುದು.

ಈ ಪ್ರಕರಣದಲ್ಲಿ ಸೆಷನ್ಸ್‌ ಕೋರ್ಟ್‌ ನೀಡಿದ್ದ ದಾಖಲೆಗಳೆಲ್ಲಾ ಆರೋಪಿಗಳ ವಿರುದ್ಧವಾಗಿಯೇ ಇದ್ದುದರಿಂದ ಅವರು ನಿರಪರಾಧಿಗಳು ಎಂದು ಹೈಕೋರ್ಟ್‌ಗೆ ಮನವರಿಕೆ ಮಾಡಿಕೊಡಲು ಇನ್ನಷ್ಟು ಅಧ್ಯಯನ ಮಾಡಬೇಕಾಯಿತು. ಹೈಕೋರ್ಟ್‌ನಲ್ಲಿ 4–5 ವರ್ಷ ವಿಚಾರಣೆ ನಡೆಯಿತು.
ಪೊಲೀಸರು ಹಾಗೂ ಕನಕಾಳ ತಂದೆ–ಚಿಕ್ಕಪ್ಪ ಅವರು ಮಾಡಿದ್ದ ‘ಅನಾಚಾರ’ಗಳ ಬಗ್ಗೆ ಎಳೆಎಳೆಯಾಗಿ ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟೆ.

ಅವುಗಳಲ್ಲಿದ್ದ ಪ್ರಮುಖ ಅಂಶಗಳೆಂದರೆ:

ತನ್ನ ಕಾಲಿಗೆ ಹಗ್ಗ ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ ಎಸಗಲಾಗಿತ್ತು ಎಂದು ಕನಕಾ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಹೇಳಿದ್ದಳು. ತಾನು ಅಲ್ಲೇ ಇದ್ದ ಚೂಪಾದ ಕಲ್ಲಿನಿಂದ ಹಗ್ಗವನ್ನು ಉಜ್ಜಿ  ಉಜ್ಜಿ ತುಂಡುಮಾಡಿ ಅಲ್ಲಿಂದ ಪರಾರಿಯಾದೆ ಎಂದು ತಿಳಿಸಿದ್ದಳು. ಇದು ನಿಜವೇ ಆಗಿದ್ದಲ್ಲಿ ಘಟನೆ ನಡೆದಿದೆ ಎನ್ನಲಾದ ಸ್ಥಳದಲ್ಲಿ ದೊರೆತ ಹಗ್ಗ, ಬಟ್ಟೆ ಹಾಗೂ ಕಲ್ಲುಗಳೇ ಇಡೀ ಘಟನೆಯ ಪ್ರಮುಖ ಸಾಕ್ಷಿ ಆಗಬೇಕಿತ್ತು. ಆದರೆ ಪೊಲೀಸರು ಇದಾವುದನ್ನೂ ತಮ್ಮ ವಶಕ್ಕೆ ತೆಗೆದುಕೊಂಡೇ ಇರಲಿಲ್ಲ! ಅಲ್ಲಿ ಘಟನೆ ನಡೆದಿದ್ದರೆ ತಾನೇ ವಶಪಡಿಸಿಕೊಳ್ಳಲು? ಇದರ ಅರ್ಥ ಅಲ್ಲಿಗೆ ಕನಕಾ ಹೇಳಿದ್ದು ಸುಳ್ಳು ಎಂದು ಸಾಬೀತಾಯಿತು.

ಕನಕಾಳನ್ನು ಇಬ್ಬರು ವೈದ್ಯರು ಪರೀಕ್ಷೆಗೆ ಒಳಪಡಿಸಿದ್ದರು. ಆಕೆಯ ವಯಸ್ಸನ್ನು ಒಬ್ಬ ವೈದ್ಯರು ಪರೀಕ್ಷೆ ಮಾಡಿದ್ದರೆ, ಇನ್ನೊಬ್ಬರು ಅವಳ ಮೇಲೆ ಅತ್ಯಾಚಾರ ಆಗಿದೆಯೋ ಇಲ್ಲವೋ ಎಂದು ಪರೀಕ್ಷಿಸಿದ್ದರು. ವಯಸ್ಸನ್ನು ಪರೀಕ್ಷೆ ಮಾಡಿದ ವೈದ್ಯರು ತಮ್ಮ ಪರೀಕ್ಷೆಯ ಸಂದರ್ಭದಲ್ಲಿ ‘ಕನಕಾಳ ದೇಹದ ಯಾವ ಭಾಗದಲ್ಲಿಯೂ ಗಾಯ ಆಗಿಲ್ಲ, ಆಕೆಯ ಮೇಲೆ ಬಲವಂತದ ದೈಹಿಕ ಸಂಪರ್ಕ ನಡೆಯಲಿಲ್ಲ’ ಎಂದು ದಾಖಲೆಯಲ್ಲಿ ನಮೂದಿಸಿದ್ದರು. ಆದರೆ ಅತ್ಯಾಚಾರದ ಕುರಿತು ಪರೀಕ್ಷಿಸಿದ್ದ ವೈದ್ಯರು ಆಕೆಯ ಗುಪ್ತಾಂಗದ ಮೇಲೆ, ಎದೆಯ ಮೇಲೆಲ್ಲಾ ಗಾಯಗಳಾಗಿದ್ದು ಅಲ್ಲಲ್ಲಿ ರಕ್ತ ಒಸರುತ್ತಿತ್ತು ಎಂದು ವರದಿ ನೀಡಿದ್ದರು. ಒಟ್ಟಿನಲ್ಲಿ ಇಬ್ಬರಲ್ಲಿ ಒಬ್ಬರು ವೈದ್ಯರು ಸುಳ್ಳು ಹೇಳಿದ್ದು ಸಾಬೀತಾಗಿತ್ತು. ಆದರೆ ಯಾರು ಸುಳ್ಳು ಹೇಳಿದ್ದಾರೆ ಎಂದು ಗೊತ್ತಾಗಿದ್ದು ಇಬ್ಬರನ್ನೂ ಪಾಟಿ ಸವಾಲಿಗೆ ಒಳಪಡಿಸಿದಾಗ. ವಯಸ್ಸಿನ ಪರೀಕ್ಷೆ ಮಾಡಿದ ವೈದ್ಯರು, ತಾವು ನೀಡಿದ್ದ ವರದಿಯಂತೆಯೇ ಕೋರ್ಟ್‌ನಲ್ಲಿ ನುಡಿದಿದ್ದರೆ, ಅತ್ಯಾಚಾರ ನಡೆದಿದೆ ಎಂಬಂತೆ ವರದಿ ನೀಡಿದ್ದ ವೈದ್ಯರು ಪಾಟಿ ಸವಾಲಿನಲ್ಲಿ ತಾವು ನೀಡಿದ್ದ ವರದಿಗೆ ಭಿನ್ನವಾಗಿ ಹೇಳಿಕೆ ನೀಡಿದ್ದರು! ಅಲ್ಲಿಗೆ ಇದೂ ಸುಳ್ಳು ಎಂದು ಸಾಬೀತಾಗಿದೆ ಎಂದು ಕೋರ್ಟ್‌ಗೆ ತಿಳಿಸಿದೆ.

ಕನಕಾಳ ಬಗ್ಗೆ ಒಂದು ವಿಚಾರ ಇಲ್ಲಿ ಉಲ್ಲೇಖಾರ್ಹ. ಆಕೆ ವಯಸ್ಸಿನಲ್ಲಿ ಚಿಕ್ಕವಳಾಗಿದ್ದರೂ ದೈಹಿಕ ಮತ್ತು ಮಾನಸಿಕವಾಗಿ ಪ್ರಬುದ್ಧಳಾಗಿ ಬೆಳೆದಾಕೆ. ಆಕೆಯನ್ನು ವಿಚಾರಣೆಗೆ ಒಳಪಡಿಸಿದ್ದಾಗ,  ತನ್ನ ಚಿಕ್ಕಪ್ಪ ಬಹುಜನ ಸಮಾಜವಾದಿ ಪಕ್ಷದಲ್ಲಿ ಬಹು ಪ್ರಭಾವಿ ವ್ಯಕ್ತಿ, ಪೊಲೀಸರ ಮೇಲೆ ಪ್ರಭಾವ ಬೀರುವಷ್ಟು ‘ದೊಡ್ಡ ವ್ಯಕ್ತಿ’ ಆತ ಎಂದು ಒಪ್ಪಿಕೊಂಡಿದ್ದಳು.  ‘ನನ್ನ ಚಿಕ್ಕಪ್ಪನ ಅಧೀನದಲ್ಲಿ ಅನೇಕ ವಕೀಲರು ಇದ್ದಾರೆ. ಈ ಕೇಸು ದಾಖಲಾಗುತ್ತಿದ್ದಂತೆಯೇ, ಅವರ ಪೈಕಿ ಒಬ್ಬರು ನನ್ನನ್ನು ಸರ್ಕಾರಿ ವಕೀಲರ (ಪಬ್ಲಿಕ್‌ ಪ್ರಾಸಿಕ್ಯೂಟರ್‌) ಕಚೇರಿಗೆ ಕರೆದುಕೊಂಡು ಹೋದರು. ಅವರ ಟೇಬಲ್‌ ಮೇಲಿದ್ದ ಫೈಲ್‌ ಒಂದನ್ನು ವಕೀಲರು ನನ್ನ ಕೈಯಲ್ಲಿಟ್ಟು ಕೋರ್ಟ್‌ನಲ್ಲಿ ಹೇಗೆ ಮಾತನಾಡಬೇಕು  ಎಂದು ಅದರಲ್ಲಿ ಬರೆಯಲಾಗಿದ್ದು ಅದನ್ನು ಓದಿಕೋ ಎಂದಿದ್ದರು. ಅದರಂತೆಯೇ ನಾನು ಹೇಳಿಕೆ ನೀಡುತ್ತಿದ್ದೇನೆ’ ಎಂಬ ಸತ್ಯವನ್ನು ಹೇಳಿಬಿಟ್ಟಿದ್ದಳು. ಆ ಬಗ್ಗೆಯೂ ನಾನು ನ್ಯಾಯಮೂರ್ತಿಗಳ ಗಮನಕ್ಕೆ ತಂದೆ. ಇದರ ಜೊತೆಗೆ, ಸೆಷನ್ಸ್‌ ಕೋರ್ಟ್‌ನಲ್ಲಿ ಸಾಕ್ಷಿಗಳ ರೂಪದಲ್ಲಿ ಬಂದಿದ್ದ ಕನಕಾಳ ಚಿಕ್ಕಮ್ಮ ಹಾಗೂ ಸಂಬಂಧಿಕರು ಕೂಡ ತಮಗೆ ಆ ವಕೀಲರೇ ಏನು ಹೇಳಬೇಕು ಎಂದು ಹೇಳಿಕೊಟ್ಟಿದ್ದು, ಅದರಂತೆಯೇ ತಾವು ನುಡಿಯುತ್ತಿದ್ದೇವೆ ಎಂಬುದಾಗಿ ಒಪ್ಪಿಕೊಂಡಿದ್ದರು. ಬೆಳಿಗ್ಗೆ ನಡೆದಿದೆ ಎನ್ನಲಾದ ಘಟನೆಯ ಬಗ್ಗೆ ರಾತ್ರಿ ಹೋಗಿ  ದೂರು ದಾಖಲಿಸಿದ್ದು ಕೂಡ ಸಂದೇಹಕ್ಕೆ ಎಡೆ ಮಾಡಿಕೊಡುತ್ತದೆ ಎಂದೂ ತಿಳಿಸಿದೆ. ನಮ್ಮ ಈ ಎಲ್ಲ ವಾದಗಳನ್ನು ನ್ಯಾಯಮೂರ್ತಿಗಳು ಸೂಕ್ಷ್ಮವಾಗಿ ಅವಲೋಕಿಸಿದರು.

ಇವೆಲ್ಲಕ್ಕಿಂತ ಮಿಗಿಲಾದ ಸತ್ಯವೊಂದು ಬಹಿರಂಗಗೊಂಡಿತ್ತು. ಏನೆಂದರೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಮೇಲೆ ಈ ರೀತಿ ದೌರ್ಜನ್ಯ ಆದ ಪಕ್ಷದಲ್ಲಿ ಅವರಿಗೆ ಸರ್ಕಾರದಿಂದ ಹಣದ ಪರಿಹಾರ ಹಾಗೂ  ಜಮೀನು ಸಿಗಬೇಕು ಎಂಬ ನಿಯಮವಿದೆ. ಈ ನಿಯಮವೂ ಇಂಥದ್ದೊಂದು ಸುಳ್ಳು ಕೇಸಿಗೆ ಮೂಲವಾಗಿತ್ತು ಎನ್ನುವುದು. ಈ ವಿಷಯ  ಸೆಷನ್ಸ್‌ ಕೋರ್ಟ್‌ನಲ್ಲಿ ವಿಚಾರಣೆ ವೇಳೆ ನನಗೆ ತಿಳಿದುಬಂದಿತ್ತು. ಅದಕ್ಕೆ ಪುಷ್ಟಿ ನೀಡಲು ಎಂಬಂತೆ, ಸಾಕ್ಷಿಗಳನ್ನೆಲ್ಲಾ ಪಾಟಿ ಸವಾಲಿಗೆ ಒಳಪಡಿಸಿದ್ದಾಗ ಈಗಾಗಲೇ ಕನಕಾಳಿಗೆ 25 ಸಾವಿರ ರೂಪಾಯಿ ಪರಿಹಾರ ಸಿಕ್ಕಿದ್ದು, ಅವರದ್ದೇ ಊರಿನ ಸಮೀಪ ಎರಡು ಎಕರೆ ಜಮೀನು ಪಡೆದುಕೊಳ್ಳಲು ಚಿಕ್ಕಪ್ಪ ಹುನ್ನಾರ ನಡೆಸುತ್ತಿದ್ದುದು  ಸ್ಪಷ್ಟಗೊಂಡಿತ್ತು.

ಇವುಗಳ ಹೊರತಾಗಿಯೂ, ಸೆಷನ್ಸ್‌ ಕೋರ್ಟ್‌ ನಮ್ಮ ವಾದವನ್ನು ಮಾನ್ಯ ಮಾಡಿರಲಿಲ್ಲ. ಆದರೆ ಈ ಎಲ್ಲಾ ವಿಷಯಗಳನ್ನು ಆಲಿಸಿದ ಹೈಕೋರ್ಟ್‌ ನ್ಯಾಯಮೂರ್ತಿಗಳು ನಿಜವಾಗಿ ನಡೆದದ್ದು ಏನು ಎಂದು ಅರ್ಥ ಮಾಡಿಕೊಂಡರು. ಆದ್ದರಿಂದ ಆರೋಪಿಗಳು ನಿರಪರಾಧಿಗಳು ಎಂದು ಅಭಿಪ್ರಾಯಪಟ್ಟರು. ಸೆಷನ್ಸ್‌ ಕೋರ್ಟ್‌ ನೀಡಿದ್ದ ಶಿಕ್ಷೆಯನ್ನು ರದ್ದು ಮಾಡಿದರು.

ಕೊನೆಗೂ ನಿರಪರಾಧಿಗಳಿಗೆ ಜಯ ಸಿಕ್ಕಿತು. ಆದರೆ ಮಾಡದ ತಪ್ಪಿಗಾಗಿ ಹತ್ತಾರು ವರ್ಷ ಅವರು ಕೋರ್ಟ್‌ಗೆ ಅಲೆದಾಡಿದ್ದು ಮಾತ್ರ ದುರಂತವೇ ಸರಿ.
ಘಟನೆ ನಡೆದಿದೆ ಎನ್ನಲಾದ ದಿನ ಅತ್ಯಾಚಾರ ನಡೆದಿರಲಿಲ್ಲ ಎನ್ನುವುದು ಎಷ್ಟು ಸತ್ಯವೋ, ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಹಾಗೂ ಪರಿಹಾರದ ಆಸೆಗೆ ಇಂಥದ್ದೊಂದು ಸುಳ್ಳು ಕೇಸು ದಾಖಲು ಮಾಡಲಾಗಿತ್ತು ಎನ್ನುವುದೂ ನಿಜವೆ. ಆದರೆ ಘಟನೆಯೇ ನಡೆದಿಲ್ಲ ಎಂದ ಮೇಲೆ, ಆಕೆಯ ವಯಸ್ಸನ್ನು ಪತ್ತೆ ಮಾಡಲು ವೈದ್ಯಕೀಯ ಪರೀಕ್ಷೆ ನಡೆಸಿದ್ದ ವೈದ್ಯರು ‘ಕನಕಾಳ ಮೇಲೆ ಬಲವಂತದ ದೈಹಿಕ ಸಂಪರ್ಕ ನಡೆಯಲಿಲ್ಲ’  ಎಂದು ವರದಿ ನೀಡಿದ್ದು ಏಕೆ ಎಂಬ ಪ್ರಶ್ನೆ ಬರುತ್ತದೆ. ‘ಬಲವಂತದ ದೈಹಿಕ ಸಂಪರ್ಕ’ ನಡೆದಿಲ್ಲ ಎಂದರೆ ಅಲ್ಲಿ ದೈಹಿಕ ಸಂಪರ್ಕ ನಡೆದದ್ದು ಹೌದು, ಆದರೆ ಅದು ಬಲವಂತದ್ದು ಅಲ್ಲ ಅಷ್ಟೇ ಎಂದಾಯಿತು ಅಲ್ಲವೇ? ಇದು ಹೇಗೆ...? ಬೆಂಕಿಯಿಲ್ಲದೇ ಹೊಗೆಯಾಡದು ಎನ್ನುತ್ತಾರಲ್ಲ, ಇಲ್ಲೂ ಆಗಿದ್ದು ಅದೇ. ಈ ಸತ್ಯ ಕೋರ್ಟ್‌ ಪ್ರಕರಣವೆಲ್ಲಾ ಮುಗಿದ ಮೇಲೆ ನನಗೆ ತಿಳಿದು ಬಂತು. ಅದೇನೆಂದರೆ 13 ವರ್ಷದ ಕನಕಾ ತುಂಬಾ ಹುಡುಗರ ಜೊತೆ ಸಲುಗೆಯಿಂದ ಇದ್ದಳು. ಹಾಗೆಯೇ ಸೋಮನಾಥನ ಜೊತೆಯೂ ಅವಳ ಒಡನಾಟ ಹೆಚ್ಚಿತ್ತು. ಅವರಿಬ್ಬರ ನಡುವೆ ದೈಹಿಕ ಸಂಪರ್ಕವೂ ಆಗಾಗ್ಗೆ ನಡೆಯುತ್ತಿತ್ತು. ಇದು ಆಕೆಯ ಮನೆಯವರಿಗೂ ತಿಳಿದಿತ್ತು. ಆದರೆ ಅದನ್ನೇ ಬಂಡವಾಳವಾಗಿಸಿಕೊಂಡು ಅದಕ್ಕೆ ಅತ್ಯಾಚಾರದ ಲೇಪ ಕೊಟ್ಟು ಆತನನ್ನು ಸಿಲುಕಿಸುವ ಪ್ರಯತ್ನ ನಡೆದಿತ್ತು. ಸೆಷನ್ಸ್‌ ಕೋರ್ಟ್‌ನಲ್ಲಿ ಅವರು ಯಶಸ್ಸನ್ನೂ ಸಾಧಿಸಿದ್ದರು!

ಎಲ್ಲರ ಹೆಸರು ಬದಲಾಯಿಸಲಾಗಿದೆ

(ಲೇಖಕ ಹೈಕೋರ್ಟ್‌ ವಕೀಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.