ADVERTISEMENT

ಕರುಗಳಲ್ಲಿ ಗಡಿಗೆ ಹೊಟ್ಟೆ ಸಮಸ್ಯೆಗೆ ಪರಿಹಾರ

ಡಾ.ಎನ್.ಬಿ.ಶ್ರೀಧರ
Published 27 ಮಾರ್ಚ್ 2017, 19:30 IST
Last Updated 27 ಮಾರ್ಚ್ 2017, 19:30 IST
ಕರುಗಳಲ್ಲಿ ಗಡಿಗೆ ಹೊಟ್ಟೆ ಸಮಸ್ಯೆಗೆ ಪರಿಹಾರ
ಕರುಗಳಲ್ಲಿ ಗಡಿಗೆ ಹೊಟ್ಟೆ ಸಮಸ್ಯೆಗೆ ಪರಿಹಾರ   

ಮನುಷ್ಯರಂತೆ ಕರುಗಳಿಗೂ ಅದರ ತಾಯಿಯ ಹಾಲೇ ಸರ್ವಶ್ರೇಷ್ಠ. ಹುಟ್ಟಿದ ದಿನದಿಂದಲೂ ಕನಿಷ್ಠ 3–4 ತಿಂಗಳಾದರೂ ಕರುಗಳಿಗೆ ಅದರ ಶರೀರದ ತೂಕದ ಶೇ 10ರಷ್ಟು ತಾಯಿಯ ಹಾಲನ್ನು ನೀಡಬೇಕು. ಒಂದು ಮಿಶ್ರ ತಳಿಯ ಕರು ಹುಟ್ಟುವಾಗ ಸುಮಾರು 40ಕೆ.ಜಿ ತೂಕ ಇರುತ್ತದೆ.

ಇಂಥ ಕರುವಿಗೆ ಕನಿಷ್ಠ ನಾಲ್ಕು ಲೀಟರ್‌ ಹಾಲನ್ನು ನೀಡಬೇಕು. ಪ್ರತಿ ದಿನ ಒಂದು ಕರು 100–500 ಗ್ರಾಂನಷ್ಟು ಹೆಚ್ಚುವರಿ ತೂಕ ಹೊಂದುತ್ತದೆ. ಇದಕ್ಕೆ ತಕ್ಕಂತೆ ಹಾಲಿನ ಪ್ರಮಾಣವನ್ನು ಸಹ ಹೆಚ್ಚಿಸುವುದು ಬಹಳ ಮುಖ್ಯ.

ಆದರೆ ಈಗ ಲಾಭದ ಆಸೆಗಾಗಿ ಕರುವಿಗೆ ತಾಯಿ ಹಾಲಿನಿಂದ ವಂಚನೆ ಮಾಡುವುದು ಸಾಮಾನ್ಯವಾಗಿದೆ. ಇನ್ನು ಕೆಲವರು ಇಷ್ಟೆಲ್ಲಾ ಹಾಲನ್ನು ಕರುವಿಗೆ ನೀಡಿದರೆ ಕರುವಿಗೆ ಅಜೀರ್ಣವಾಗಿ ಬೇಧಿಯುಂಟಾಗುತ್ತದೆ ಎಂದು ಹೆದರುತ್ತಾರೆ. ಆದರೆ ಕರು ದಷ್ಟಪುಷ್ಟವಾಗಿ, ಆರೋಗ್ಯವಂತವಾಗಿ ಬೆಳವಣಿಗೆ ಹೊಂದಬೇಕು ಎಂದುಕೊಳ್ಳುವವರು ಅದಕ್ಕೆ ನೀಡುವ ಹಾಲಿನ ಪ್ರಮಾಣದ ಮೇಲೂ ಗಮನ ಕೊಡುವುದು ಅತಿ ಅವಶ್ಯಕ.

ಹೆಚ್ಚಿನ ಕರುಗಳಿಗೆ ಈಗ ಜೋಲು ಹೊಟ್ಟೆ ಅಥವಾ ಗಡಿಗೆ ಹೊಟ್ಟೆ ಬರುವುದು ಮಾಮೂಲಾಗಿದೆ. ಅದಕ್ಕೆ ಮುಖ್ಯ ಕಾರಣ ಅದರ ಬೆಳವಣಿಗೆಯ ಹಂತದಲ್ಲಿ ಅಗತ್ಯ ಇರುವಷ್ಟು ಹಾಲು ಮತ್ತು ಪೌಷ್ಟಿಕ ಆಹಾರ ನೀಡದೇ ಇರುವುದು. ಮತ್ತೊಂದು ಕಾರಣವೆಂದರೆ, ಎಳೆ ಕರುಗಳಿಗೂ ದೊಡ್ಡ ಹಸುಗಳಿಗೆ ನೀಡುವ ಸಾಮಾನ್ಯ ಆಹಾರ ನೀಡುವುದು.

ಈ ಆಹಾರವನ್ನು ಕರುಗಳು ತುಂಬಾ ಇಷ್ಟಪಟ್ಟು ತಿನ್ನುತ್ತವೆ ನಿಜ. ಆದರೆ ಇದರಲ್ಲಿ ಕಡಿಮೆ ಪೌಷ್ಟಿಕಾಂಶ ಇರುತ್ತದೆ. ಇದನ್ನು ಗಮನಿಸಿದ ರೈತರು ಇದೇ ಆಹಾರ ನೀಡುತ್ತಾರೆ. ಅದು ಕರುವಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.

ಅದೇ ರೀತಿ, ಕರು ಕೂಡ ಕೊಟ್ಟಿಗೆಯಲ್ಲಿ ಇರುವ ಹುಲ್ಲನ್ನು ತಿನ್ನಲು ಪ್ರಾರಂಭಿಸುತ್ತದೆ. ಅದು ಹುಲ್ಲು ತಿನ್ನುತ್ತದೆ ಎಂಬ ಕಾರಣಕ್ಕೆ ಅದರ ಮಾಲೀಕರೂ ಎಲ್ಲಾ ರಾಸುಗಳಿಗೆ ನೀಡುವ ಹುಲ್ಲನ್ನು ಕರುಗಳಿಗೂ ನೀಡುತ್ತಾರೆ.

ಈ ಆಹಾರವನ್ನು ಪಚನ ಮಾಡಲು ಅನುವಾಗುವಂತೆ ಕರುವಿನ ಹೊಟ್ಟೆ, ಕರುಳು ಮತ್ತು ಜೀರ್ಣಾಂಗದ ವಿವಿಧ ಭಾಗಗಳು ಜಾಸ್ತಿ ಬೆಳವಣಿಗೆ ಹೊಂದಿರುವುದು ನಿಜವೇ. ಆದರೆ ಆ ವಯಸ್ಸಿನಲ್ಲಿ ಅದಕ್ಕೆ ಹಾಲಿನಿಂದ ಲಭ್ಯವಾಗುವ ಕ್ಯಾಲ್ಸಿಯಂ ಮತ್ತು ರಂಜಕ ಸೂಕ್ತ ಪ್ರಮಾಣದಲ್ಲಿ ಲಭ್ಯವಾಗುವುದಿಲ್ಲ. ಇದರಿಂದ ಅಸ್ಥಿವ್ಯೂಹದ ಸರಿಯಾದ ಬೆಳವಣಿಗೆಯಾಗುವುದಿಲ್ಲ.

ADVERTISEMENT

ಎಲುಬುಗಳು ಅದರಲ್ಲೂ ಹಿಂಭಾಗದ ಎಲುಬುಗಳು ಉತ್ತಮ ಬೆಳವಣಿಗೆ ಹೊಂದುವುದಿಲ್ಲ. ಇದರಿಂದಾಗಿ ಕರುವನ್ನು ಹಿಂಭಾಗದಿಂದ ಗಮನಿಸಿದಾಗ ಜೋಲು ಹೊಟ್ಟೆ ಅಥವಾ ಗಡಿಗೆ ಹೊಟ್ಟೆ ಎದ್ದು ಕಾಣುತ್ತದೆ. ಇದನ್ನು ಹಳ್ಳಿಯ ಭಾಷೆಯಲ್ಲಿ ‘ಹೊಟ್ಟೆ ಡುಮ್ಮಣ್ಣ; ಕೈಕಾಲು ಸಣ್ಣಣ್ಣ’ ಎಂದು ಕರೆಯುತ್ತಾರೆ.

ಇಲ್ಲಿ ತಿಳಿಸಿರುವಂತೆ ಆಹಾರ ಮತ್ತು ಹಾಲನ್ನು ನೀಡಿದಲ್ಲಿ ಕರುಗಳು ಉತ್ತಮ ಬೆಳವಣಿಗೆಯನ್ನು ಹೊಂದಿ ಒಂದು ವರ್ಷದ ಅವಧಿಯಲ್ಲಿ ಸುಮಾರು 180 ಕೆ.ಜಿ ತೂಕ ಹೊಂದಿ ಒಂದೂವರೆ ವರ್ಷದಲ್ಲಿ 250 ಕೆ.ಜಿ. ತೂಕ ತಲುಪುತ್ತದೆ. ಹೀಗೆ ದಷ್ಟಪುಷ್ಟವಾಗಿ ಬೆಳೆದು ನಿಗದಿತ ಅವಧಿಯಲ್ಲಿ ಬೆದೆಗೆ ಬಂದು ವರ್ಷಕ್ಕೊಂದು ಕರುವನ್ನು ನೀಡುತ್ತವೆ.

ಸರಿಯಾಗಿ ಬೆಳವಣಿಗೆ ಹೊಂದದ ಕರುಗಳು ಒರಟಾದ ಮತ್ತು ಒಣಕಲು ಚರ್ಮವನ್ನು ಹೊಂದಿದ್ದು ಉದ್ದನೇ ಕೂದಲನ್ನು ಹೊಂದಿರುತ್ತವೆ. ಕಣ್ಣುಗಳು ನಿಸ್ತೇಜವಾಗಿದ್ದು, ರಕ್ತಹೀನತೆಯನ್ನು ಹೊಂದಿರುತ್ತವೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇಂತಹ ಕರುಗಳು ನಿಗದಿತ ಪ್ರಮಾಣದಲ್ಲಿ ಬೆಳವಣಿಗೆ ಹೊಂದಿ ಸೂಕ್ತ ಸಮಯದಲ್ಲಿ ಬೆದೆಗೆ ಬರುವುದಿಲ್ಲ.

ಬೆದೆಗೆ ಬಂದರೂ ಗರ್ಭಕೋಶ ಸೂಕ್ತ ರೀತಿಯಲ್ಲಿ ಬೆಳವಣಿಗೆಯಾಗದೇ ಇರುವುದರಿಂದ ಫಲ ಕಟ್ಟುವುದಿಲ್ಲ. ಇಂತಹ ಕರುಗಳಿಗೆ ಜಂತು ನಾಶಕ ಹಾಕುವುದರಿಂದ ಏನೂ ಪ್ರಯೋಜನವಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ:08182-2651005.
(ಲೇಖಕರು, ಶಿವಮೊಗ್ಗದ ಜಾನುವಾರುಗಳ ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರದ ಪ್ರಧಾನ ಸಂಶೋಧಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.