ADVERTISEMENT

ವೊಡಾಫೋನ್‌, ಐಡಿಯಾ ವಿಲೀನ ಆರೋಗ್ಯಕರ ಬೆಳವಣಿಗೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2017, 19:30 IST
Last Updated 28 ಮಾರ್ಚ್ 2017, 19:30 IST
ವೊಡಾಫೋನ್‌, ಐಡಿಯಾ ವಿಲೀನ ಆರೋಗ್ಯಕರ ಬೆಳವಣಿಗೆ
ವೊಡಾಫೋನ್‌, ಐಡಿಯಾ ವಿಲೀನ ಆರೋಗ್ಯಕರ ಬೆಳವಣಿಗೆ   

ಬ್ರಿಟನ್ನಿನ ದೂರಸಂಪರ್ಕ ಸಂಸ್ಥೆ ವೊಡಾಫೋನ್‌ ಮತ್ತು ಆದಿತ್ಯ ಬಿರ್ಲಾ ಸಮೂಹದ ನಿಯಂತ್ರಣದಲ್ಲಿರುವ ಮೊಬೈಲ್‌ ಸೇವಾ ಸಂಸ್ಥೆ ಐಡಿಯಾ ಸೆಲ್ಯುಲರ್‌ ವಿಲೀನ ಪ್ರಕ್ರಿಯೆ ಅತ್ಯಂತ ಮಹತ್ವದ್ದು. ದೇಶಿ  ದೂರಸಂಪರ್ಕ ಕ್ಷೇತ್ರದ ಆರೋಗ್ಯಕರ ಬೆಳವಣಿಗೆಗೆ ಇದರಿಂದ ಅನುಕೂಲವಾಗಲಿದೆ. ದೂರಸಂಪರ್ಕ ಕ್ಷೇತ್ರದ ಮೇಲೆ ಪ್ರಭುತ್ವ ಸಾಧಿಸುವ ನಿಟ್ಟಿನಲ್ಲಿ ಈ ಎರಡು ದಿಗ್ಗಜ ಕಂಪೆನಿಗಳ ವಿಲೀನ ಪ್ರಕ್ರಿಯೆ, ಟೆಲಿಕಾಂ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.  ಮುಕೇಶ್‌ ಅಂಬಾನಿ ಒಡೆತನದ ಭಾರಿ ಮಹತ್ವಾಕಾಂಕ್ಷೆಯ ರಿಲಯನ್ಸ್‌ ಜಿಯೊ ಮತ್ತು ಸದ್ಯಕ್ಕೆ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಇರುವ ಭಾರ್ತಿ ಏರ್‌ಟೆಲ್‌ ಮಧ್ಯೆ ಈಗಾಗಲೇ ದರ ಸಮರ ನಡೆಯುತ್ತಿದೆ. ಗ್ರಾಹಕರನ್ನು ಸೆಳೆದುಕೊಳ್ಳುವುದಕ್ಕಾಗಿ  ಆಕ್ರಮಣಕಾರಿ ಮಾರಾಟ ಧೋರಣೆಯನ್ನು ಈ ಮೊಬೈಲ್ ಸೇವಾ ಸಂಸ್ಥೆಗಳು  ಅನುಸರಿಸುತ್ತಿವೆ.

ಮೊಬೈಲ್‌ ಮಾರುಕಟ್ಟೆಯಲ್ಲಿ ಇಂತಹ  ತೀವ್ರ ಸ್ಪರ್ಧಾತ್ಮಕತೆ ಇರುವ ಸದ್ಯದ ಕಾಲಘಟ್ಟದಲ್ಲಿ ನಡೆದಿರುವ  ಈ  ಅತಿ ದೊಡ್ಡ ವಿಲೀನ, ಎರಡೂ ಸಂಸ್ಥೆಗಳಿಗೆ ಪ್ರಯೋಜನಕಾರಿಯಾಗಲಿದೆ. ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ  ಅತಿದೊಡ್ಡ ವಿಲೀನ ಪ್ರಕ್ರಿಯೆ ಇದಾಗಿದೆ. ಇದರಿಂದಾಗಿ ಹೊಸ ದೈತ್ಯ ಜಂಟಿ ಸಂಸ್ಥೆಯ ಮಾರುಕಟ್ಟೆ ಪಾಲು ಶೇ 41ಕ್ಕೆ ಏರಲಿದೆ. ಸದ್ಯಕ್ಕೆ ಮುಂಚೂಣಿಯಲ್ಲಿ ಇರುವ ಭಾರ್ತಿ ಏರ್‌ಟೆಲ್‌ ದ್ವಿತೀಯ ಸ್ಥಾನಕ್ಕೆ (ಶೇ 35.6) ಇಳಿಯಲಿದೆ.

ರಿಲಯನ್ಸ್‌ ಜಿಯೊ ಒಡ್ಡಿರುವ ಉಚಿತ ಕರೆ, ಅಗ್ಗದ ಡೇಟಾ ಒದಗಿಸುವ ಸವಾಲನ್ನು ಸಮರ್ಥವಾಗಿ ಎದುರಿಸಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಈ ಮೊಬೈಲ್‌ ಸೇವಾ ಸಂಸ್ಥೆಗಳು ಪರಸ್ಪರ ಕೈಜೋಡಿಸಲು ಮುಂದಾಗಿವೆ ಎಂಬುದು ಸ್ಪಷ್ಟ. 113 ಕೋಟಿ ಮೊಬೈಲ್‌ ಚಂದಾದಾರರು ಇರುವ ಮಾರುಕಟ್ಟೆಯಲ್ಲಿ ‘ಸಮ ಬಲ’ ಸಂಸ್ಥೆಗಳ ವಿಲೀನವು ಎರಡೂ ಸಂಸ್ಥೆಗಳಿಗೆ ಬಂಡವಾಳ ಹೂಡಿಕೆ ಮತ್ತು ಕಾರ್ಯಾಚರಣೆ ವೆಚ್ಚದಲ್ಲಿ ಗಮನಾರ್ಹ   ಪ್ರಮಾಣದ ಉಳಿತಾಯ ಮಾಡಲು, ಸಾಲದ ಬೆಟ್ಟ ಕರಗಿಸಲು ನೆರವಾಗಲಿದೆ. ಹೆಚ್ಚುತ್ತಿರುವ ಇ–ಕಾಮರ್ಸ್‌, ಡಿಜಿಟಲ್‌ ಪಾವತಿಯಂತಹ ಆರ್ಥಿಕ ಚಟುವಟಿಕೆಗಳಿಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು  ಅಭಿವೃದ್ಧಿಪಡಿಸಿ ವೇಗದ ಸೇವೆ ಒದಗಿಸುವ ಹೊಸ ಸವಾಲುಗಳನ್ನು ಎದುರಿಸಲೂ ಇದರಿಂದ ಸಾಧ್ಯವಾಗಲಿದೆ.

ADVERTISEMENT

ಈ ವಿಲೀನದ ಫಲವಾಗಿ ನಾಲ್ಕು ಅತಿದೊಡ್ಡ ಸಂಸ್ಥೆಗಳು ಅಸ್ತಿತ್ವಕ್ಕೆ ಬರಲಿವೆ. ವೊಡಾಫೋನ್‌ –ಐಡಿಯಾ, ಏರ್‌ಟೆಲ್‌, ಜಿಯೊ ಮತ್ತು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌. ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಕಮ್ಯುನಿಕೇಷನ್ಸ್, ಏರ್‌ಸೆಲ್‌ ಮತ್ತು ಎಂಟಿಎಸ್‌ ಜತೆಗೆ ಒಪ್ಪಂದಕ್ಕೆ ಬರಲು ಮುಂದಾಗಿದೆ. ಈ ವಿದ್ಯಮಾನದ ಫಲವಾಗಿ ಬೆಲೆ ನಿಗದಿ ಮಾಡುವ ಅಧಿಕಾರ ಬೆರಳೆಣಿಕೆಯಷ್ಟು ದೈತ್ಯ ಸಂಸ್ಥೆಗಳ ನಿಯಂತ್ರಣದಲ್ಲಿ ಇರುವುದೇ? ಇದರಿಂದ ಗ್ರಾಹಕರ ಶೋಷಣೆ ನಡೆಯಲಿದೆಯೇ ಎನ್ನುವ ಅನುಮಾನಗಳೂ ಇಲ್ಲಿ ಉದ್ಭವಿಸುತ್ತವೆ.  ವಿಲೀನದಿಂದಾಗಿ ಗ್ರಾಹಕರಿಗೆ ನಷ್ಟಕ್ಕಿಂತ ಹೆಚ್ಚು ಲಾಭವೇ ಆಗಲಿದೆ.

ಮೊಬೈಲ್‌ ಗೋಪುರಗಳಂತಹ ಮೂಲ ಸೌಕರ್ಯ ಕೊರತೆಯ ಕಾರಣಕ್ಕೆ ದೇಶದಾದ್ಯಂತ ವ್ಯಾಪಕವಾಗಿರುವ ಮೊಬೈಲ್‌ ಕರೆ ಕಡಿತಗೊಳ್ಳುವ ಸಮಸ್ಯೆಗೂ ವಿಲೀನ ಪ್ರಕ್ರಿಯೆ ಪರಿಹಾರ ಒದಗಿಸಲಿದೆ. ಮೊಬೈಲ್‌ ಸಂಖ್ಯೆ ಉಳಿಸಿಕೊಂಡೇ, ಸೇವಾ ಸಂಸ್ಥೆ ಬದಲಿಸಲು ಅವಕಾಶ ಇರುವುದರಿಂದ (ಮೊಬೈಲ್‌ ನಂಬರ್‌ ಪೋರ್ಟೆಬಿಲಿಟಿ), ಗ್ರಾಹಕರು ಗುಣಮಟ್ಟದ ಹಾಗೂ ಅಗ್ಗದ ದರದಲ್ಲಿ ಕರೆ ಮತ್ತು ಡೇಟಾ ಒದಗಿಸುವ ಸೇವಾ ಸಂಸ್ಥೆ ಹುಡುಕಿಕೊಂಡು ಹೋಗಲು ಸ್ವತಂತ್ರರಾಗಿದ್ದಾರೆ. ಇದರಿಂದ ಸೇವಾ ಸಂಸ್ಥೆಗಳು ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಎಲ್ಲ ಬಗೆಯಿಂದಲೂ ಗುಣಮಟ್ಟದ ಸೇವೆ ಒದಗಿಸಲು ಪೈಪೋಟಿ ನಡೆಸಬೇಕಾಗುತ್ತದೆ. ಜೀವನದ ಎಲ್ಲ ಹಂತಗಳಲ್ಲಿ ಬಳಕೆಗೆ ಬಂದಿರುವ ಡಿಜಿಟಲ್‌ ವ್ಯವಸ್ಥೆಯ ಫಲವಾಗಿ ಗ್ರಾಹಕರ ಡೇಟಾ ಹಸಿವೂ ದ್ವಿಗುಣಗೊಂಡಿದೆ. ಸಾಲದ ಹೊರೆ, ದುಬಾರಿ  ತರಂಗಾಂತರ ಮತ್ತು ಮೂಲ ಸೌಕರ್ಯ ವೆಚ್ಚ ಹೆಚ್ಚಳವು ಮೊಬೈಲ್‌ ಉದ್ಯಮದ ಸುಸ್ಥಿರ ಬೆಳವಣಿಗೆಗೆ ಅಡ್ಡಿಯಾಗುವ ಅಪಾಯವನ್ನು ವಿಲೀನ ದೂರಮಾಡಲಿದೆ. ದೇಶಿ ದೂರಸಂಪರ್ಕ ವಲಯದ ಬೆಳವಣಿಗೆಯ ವೇಗ ಇನ್ನಷ್ಟು ಹೆಚ್ಚಲಿದೆ. ದೂರಸಂಪರ್ಕ ರಂಗದ ಹಣಕಾಸು ಆರೋಗ್ಯ ಸುಧಾರಿಸಿ, ಗ್ರಾಹಕರಿಗೆ ಕಡಿಮೆ ದರದಲ್ಲಿ ಮೌಲ್ಯವರ್ಧಿತ ಸೇವೆಗಳು ದೊರೆಯುವಂತಾದರೆ ಇಂತಹ ವಿಲೀನ ಪ್ರಕ್ರಿಯೆ ಹೆಚ್ಚು ಅರ್ಥಪೂರ್ಣವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.