ADVERTISEMENT

ಐದು ವರ್ಷಗಳಿಂದ ಜಲ ಸ್ವಾವಲಂಬನೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 19:30 IST
Last Updated 20 ಏಪ್ರಿಲ್ 2017, 19:30 IST
ಪ್ರತ್ಯೇಕ ಸಂಪ್‌ಗಳು, ನೀರು ಶುದ್ಧೀಕರಿಸುವ ‘ಫಿಲ್ಟರ್‌’
ಪ್ರತ್ಯೇಕ ಸಂಪ್‌ಗಳು, ನೀರು ಶುದ್ಧೀಕರಿಸುವ ‘ಫಿಲ್ಟರ್‌’   

-ರೇವಣ್ಣ ಎಂ

*

ಮೈಸೂರು: ‘ಮಳೆ ನೀರನ್ನು ಸಂಗ್ರಹ ಮಾಡಬೇಕು. ಆ ಮೂಲಕ ನೀರಿನ ವಿಚಾರದಲ್ಲೂ ಸ್ವಾವಲಂಬಿ ಆಗಬೇಕು ಎಂಬ ಆಸೆ ಇತ್ತು. ಹೊಸ ಮನೆ ಕಟ್ಟುವಾಗಲೇ ನೀರು ಸಂಗ್ರಹದ ಯೋಜನೆ ಹಾಕಿಕೊಳ್ಳೋಣ ಎಂದು ನಿಶ್ಚಯಿಸಿ ಅದನ್ನು ಮಾಡಿ ಮುಗಿಸಿದೆ. ಪತ್ನಿ ಮತ್ತು ನಾನು ವಾಸವಿರುವ ಈ ಮನೆಯಲ್ಲಿ ಐದು ವರ್ಷಗಳಿಂದ ಕುಡಿಯಲು ಮತ್ತು ಅಡುಗೆಗೆ ಮಳೆ ನೀರು ಬಿಟ್ಟು ಬೇರೆ ನೀರು ಬಳಸಿಲ್ಲ.’

ADVERTISEMENT

–ಹೀಗೆ, ಮಳೆ ನೀರನ್ನು ಸಂಗ್ರಹ ಮಾಡಿ ಸ್ಥಳೀಯರಿಗೆ, ಹೊಸ ಮನೆ ಕಟ್ಟುವವರಿಗೆ ಮಳೆ ನೀರು ಹಿಡಿದಿಟ್ಟು ಬಳಕೆ ಮಾಡಿಕೊಳ್ಳುವಂತೆ ಜಲ ಜಾಗೃತಿ ಮೂಡಿಸಿರುವ ಮೆಕ್ಯಾನಿಕಲ್‌ ಎಂಜಿನಿಯರ್‌ ಎಂ.ಆರ್‌.ಗಿರೀಶ್‌ ಮೈಸೂರಿನ ಭೋಗಾದಿಯ ಬಾಪೂಜಿ ಬಡಾವಣೆಯ ನಿವಾಸಿ.

ಇಳಿಜಾರಾಗಿ ನಿರ್ಮಿಸಿರುವ ಮನೆಯ ಟೆರೇಸ್‌ ಮೇಲೆ ಬಿದ್ದ ಮಳೆ ನೀರು ಮೂರು ಕಿಂಡಿಗಳಿಂದ ಕೊಳವೆ ಮೂಲಕ ಹರಿದು, ಮನೆಯ ಕೆಳಭಾಗದಲ್ಲಿ ನಿರ್ಮಿಸಿರುವ ಸಂಪ್‌ ಸೇರುತ್ತದೆ. 30X40 ಅಡಿ ವಿಸ್ತೀರ್ಣದ ಅವರ ಮನೆಯ ಕೆಳಭಾಗದಲ್ಲಿ ಎರಡು ಸಂಪ್‌ಗಳಿವೆ. ಒಂದರಲ್ಲಿ ಮಳೆ ನೀರು, ಮತ್ತೊಂದರಲ್ಲಿ ‘ಮುಡಾ’ ಪೂರೈಸುವ ನೀರು ಶೇಖರವಾಗುತ್ತದೆ. ಮಳೆ ನೀರು ಸಂಗ್ರಹವಾಗಲು 9 ಅಡಿ ಉದ್ದ, 5 ಅಡಿ ಅಗಲ, 6 ಅಡಿ ಆಳದ ಸಂಪ್‌ ಹಾಗೂ ‘ಮುಡಾ’ದ ನೀರು ಸಂಗ್ರಹವಾಗಲು 9 ಅಡಿ ಉದ್ದ, 3.5 ಅಡಿ ಅಗಲ, 6 ಅಡಿ ಆಳದ ಸಂಪ್‌ ನಿರ್ಮಿಸಿದ್ದಾರೆ.

‘ಮುಡಾ’ದವರು ಪೂರೈಸುವ ನೀರನ್ನು ಬಟ್ಟೆ ತೊಳೆಯಲು, ಸ್ನಾನ, ಶೌಚಾಲಯಕ್ಕೆ ಬಳಸುತ್ತೇವೆ. ಇಷ್ಟು ದೊಡ್ಡ ಸಂಪ್‌ನ ನೀರು ಮನೆಯ 4 ಸದಸ್ಯರಿಗೆ ಸಾಕಾಗುತ್ತದೆ’ ಎಂದು ಹೇಳುತ್ತಾರೆ.

ಮಳೆ ನೀರು ಸಂಗ್ರಹದ ಟ್ಯಾಂಕ್‌ ತುಂಬಿದ ಬಳಿಕ ಪಕ್ಕದಲ್ಲೇ ಇರುವ ಮತ್ತೊಂದು ಸಂಪ್‌ಗೆ ನೀರು ಹರಿದು ಹೋಗುವ ವ್ಯವಸ್ಥೆ ಇದೆ. ‘ಮುಡಾ’ ಸರಬರಾಜು ಮಾಡುವ ನೀರಿನ ಅಗತ್ಯ ಮಳೆಗಾಲದಲ್ಲಿ  ಇರುವುದಿಲ್ಲ. ಮನೆ ನಿರ್ಮಿಸುವಾಗಲೇ ಯೋಜನೆ ಹಾಕಿಕೊಂಡರೆ ಹೆಚ್ಚು ಖರ್ಚು ಆಗುವುದಿಲ್ಲ. ಮಳೆ ನೀರಿಗೆ ಮತ್ತು ಸ್ಥಳೀಯ ಸಂಸ್ಥೆಗಳು ಪೂರೈಸುವ ನೀರಿಗೆ ಪ್ರತ್ಯೇಕ ಸಂಪ್‌ ಮಾಡಿಕೊಂಡರೆ ಉತ್ತಮ ಎನ್ನುವ ಸಲಹೆ ಅವರದು.

‘ತುಂಬ ಸಮಯದ ಬಳಿಕ ಬರುವ ಎರಡು ಮಳೆಯ ನೀರನ್ನು ಸಂಪ್‌ಗೆ ಬಿಡದೆ ಹೊರಗೆ ಹರಿಸುತ್ತೇವೆ. ಟೆರೇಸ್‌ ಮೇಲಿನ ನೀರಿನ ಜತೆ ಕಸ, ಕಡ್ಡಿ ಹರಿದು ಬಾರದಂತೆ ಕಿಂಡಿಗಳಿಗೆ ಜಾಲರಿ ಅಳವಡಿಸಿದ್ದೇವೆ. ಆ ನೀರು ಮತ್ತಷ್ಟು ಶುದ್ಧವಾಗಿ ಸಂಪ್‌ನಲ್ಲಿ ಶೇಖರವಾಗಲು ‘ಫಿಲ್ಟರ್‌’ ಮೂಲಕ ನೀರು ಹರಿಸುವ ವ್ಯವಸ್ಥೆಯೂ ಇದೆ. ಗಾರೆಯ ನೆಲವಾಗಿರುವುದರಿಂದ ಪಾಚಿ ಬೆಳೆಯುತ್ತದೆ.

ಟೆರೇಸ್‌ ಮೇಲೆ ಟೈಲ್ಸ್‌ ಅಳವಡಿಸಿದರೆ ಪಾಚಿ ಬೆಳೆಯುವುದನ್ನು ತಡೆಗಟ್ಟಬಹುದು. ಮೊದಲ ಮಳೆಯ ನೀರು ವ್ಯರ್ಥವಾಗುವುದನ್ನೂ ತಪ್ಪಿಸಲು ಸಾಧ್ಯವಿದೆ ಎಂಬುದು ನನ್ನ ಐದು ವರ್ಷದ ಅನುಭವದಲ್ಲಿ ತಿಳಿದುಕೊಂಡಿದ್ದೇನೆ. ಹೊಸ ಮನೆ ನಿರ್ಮಿಸುವವರಿಗೆ ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಿ ಎಂದು ನಾನೇ ಸಲಹೆ ನೀಡುತ್ತೇನೆ ಎಂದು ಗಿರೀಶ್‌ ವಿವರಿಸಿದರು.  ಸಂಪರ್ಕಕ್ಕೆ ಮೊ 7019439090.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.