ADVERTISEMENT

ಅರ್ಕಾವತಿಯಿಂದ ಕಾವೇರಿವರೆಗೆ ಮಹಾಪೂರ

​ಪ್ರಜಾವಾಣಿ ವಾರ್ತೆ
Published 15 ಜೂನ್ 2017, 10:58 IST
Last Updated 15 ಜೂನ್ 2017, 10:58 IST
ಜನಸ್ಪಂದನ ಕಾರ್ಯಕ್ರಮದಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡಿದರು. ಮುಖ್ಯ ಎಂಜಿನಿಯರ್‌ ಎಂ.ಎಲ್‌.ಪರಮೇಶ್ವರ, ಜಂಟಿ ಆಯುಕ್ತ ನಾಗರಾಜು, ಪಾಲಿಕೆ ಸದಸ್ಯರಾದ ಕುಸುಮಾ, ಮಮತಾ, ಎಂ.ಚೇತನ್‌, ಪಿ.ವಿ.ಮಂಜುನಾಥ್‌, ವಿ.ವಿ. ಪಾರ್ತಿಬಾ ರಾಜನ್‌, ಜಯಲಕ್ಷ್ಮಮ್ಮ ಪಿಳ್ಳಪ್ಪ, ಕಾರ್ಯನಿರ್ವಾಹಕ ಎಂಜಿನಿಯರ್‌ ಮೋಹನ್‌ ದಾಸ್‌ ಇದ್ದಾರೆ. ಪ್ರಜಾವಾಣಿ ಚಿತ್ರಗಳು
ಜನಸ್ಪಂದನ ಕಾರ್ಯಕ್ರಮದಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡಿದರು. ಮುಖ್ಯ ಎಂಜಿನಿಯರ್‌ ಎಂ.ಎಲ್‌.ಪರಮೇಶ್ವರ, ಜಂಟಿ ಆಯುಕ್ತ ನಾಗರಾಜು, ಪಾಲಿಕೆ ಸದಸ್ಯರಾದ ಕುಸುಮಾ, ಮಮತಾ, ಎಂ.ಚೇತನ್‌, ಪಿ.ವಿ.ಮಂಜುನಾಥ್‌, ವಿ.ವಿ. ಪಾರ್ತಿಬಾ ರಾಜನ್‌, ಜಯಲಕ್ಷ್ಮಮ್ಮ ಪಿಳ್ಳಪ್ಪ, ಕಾರ್ಯನಿರ್ವಾಹಕ ಎಂಜಿನಿಯರ್‌ ಮೋಹನ್‌ ದಾಸ್‌ ಇದ್ದಾರೆ. ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ಅರ್ಕಾವತಿ ಬಡಾವಣೆಯಲ್ಲಿ ಮೂರು ವರ್ಷಗಳ ಹಿಂದೆ ನಿರ್ಮಾಣವಾದ ಮನೆಗಳಿಗೆ ಇಲ್ಲಿಯವರೆಗೂ ವಿದ್ಯುತ್ ಸಂಪರ್ಕ ಕೊಟ್ಟಿಲ್ಲ. ಕಾವೇರಿ ನೀರು ಪೂರೈಕೆಗೆ ಪೈಪ್‌ಲೈನ್‌ ಅಳವಡಿಸಿ ನಾಲ್ಕೈದು ವರ್ಷ ಕಳೆದರೂ ನೀರು ಬರುತ್ತಿಲ್ಲ. ಪೈಪ್‌ಗಳು ತುಕ್ಕು ಹಿಡಿಯುತ್ತಿವೆ.

ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳ ಕುಂದು ಕೊರತೆಗಳಿಗೆ ಪರಿಹಾರ ಕಂಡುಕೊಳ್ಳಲು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ಆಶ್ರಯದಲ್ಲಿ ಸಹಕಾರನಗರದ 20ನೇ ಅಡ್ಡರಸ್ತೆಯಲ್ಲಿರುವ ಬಯಲು ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ‘ಜನಸ್ಪಂದನ–ಸಿಟಿಜನ್ಸ್‌ ಫಾರ್‌ ಚೇಂಜ್‌’ ಕಾರ್ಯಕ್ರಮದಲ್ಲಿ ನಾಗರಿಕರು ಪ್ರಸ್ತಾಪಿಸಿದ ಪ್ರಮುಖ ಸಮಸ್ಯೆಗಳಿವು.

ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದ ಸ್ಥಳೀಯ ಶಾಸಕರಾದ ಸಚಿವ ಕೃಷ್ಣ ಬೈರೇಗೌಡ ಹಾಗೂ ಕ್ಷೇತ್ರದ ಆರು ವಾರ್ಡ್‌ಗಳ ಬಿಬಿಎಂಪಿ ಸದಸ್ಯರು  ಈ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಬಗೆಹರಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

‘ಅರ್ಕಾವತಿ ಬಡಾವಣೆಯಲ್ಲಿ 2014ರಲ್ಲಿ ಮನೆ ನಿರ್ಮಿಸಿದ್ದೆವು. ವಿದ್ಯುತ್ ಸಂಪರ್ಕ ಕಲ್ಪಿಸದ ಕಾರಣ ಕತ್ತಲಲ್ಲಿ ವಾಸಿಸುತ್ತಿದ್ದೇವೆ. ನಾವು ಇನ್ನೆಷ್ಟು ಸಮಯ ಈ ರೀತಿ ಜೀವನ ನಡೆಸಬೇಕು’ ಎಂದು ಅರ್ಕಾವತಿ ಬಡಾವಣೆಯ ನಿವಾಸಿ ಶ್ರೀರಾಮ್‌ ಕಟುವಾಗಿ ಪ್ರಶ್ನಿಸಿದರು. ಇದಕ್ಕೆ ಮತ್ತಿಬ್ಬರು ನಿವಾಸಿಗಳು ಧ್ವನಿಗೂಡಿಸಿದರು.

‘₹9 ಲಕ್ಷ ಶುಲ್ಕ ಕಟ್ಟಿದರೆ ವಿದ್ಯುತ್‌ ಸಂಪರ್ಕ ಕಲ್ಪಿಸುವುದಾಗಿ ಬೆಸ್ಕಾಂ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಅಷ್ಟು ದುಡ್ಡು ಕೊಡಲೂ ಬಿಡಿಎ ಹೆಣಗಾಡುತ್ತಿದೆ. ಈ ಸಮಸ್ಯೆಯನ್ನು ಶಾಸಕರ ಗಮನಕ್ಕೆ ಹತ್ತಾರು ಸಲ ತಂದರೂ ಪ್ರಯೋಜನ ಆಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅರ್ಕಾವತಿ ಬಡಾವಣೆಯಲ್ಲಿ ನೂರೆಂಟು ಸಮಸ್ಯೆಗಳು ಇವೆ. ಇವುಗಳನ್ನು ಪರಿಹರಿಸಲು ಬಿಡಿಎ ಪ್ರಯತ್ನಿಸುತ್ತಿದೆ. ಬಡಾವಣೆಯ ಸಮಸ್ಯೆ ಬಗ್ಗೆ ಬಿಡಿಎ ಆಯುಕ್ತರ ಜತೆಗೆ ಸಮಾಲೋಚನೆ ನಡೆಸುತ್ತೇನೆ’ ಎಂದು ಕೃಷ್ಣ ಬೈರೇಗೌಡ ಭರವಸೆ ನೀಡಿದರು. ‘ಒಂದು ವೇಳೆ ನಿಮ್ಮದು ಕಂದಾಯ ಬಡಾವಣೆಯಾಗಿದ್ದರೆ ಸಮಸ್ಯೆಯನ್ನು ನಾವೇ ಪರಿಹರಿಸುತ್ತೇವೆ’ ಎಂದೂ ಭರವಸೆ ನೀಡಿದರು.

ಕಾವೇರಿ ನೀರು ಮರೀಚಿಕೆ: ‘ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದ ಪ್ರದೇಶಗಳಿಗೆ ನೀರು ಪೂರೈಸಲು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ವಿರೋಧ ಪಕ್ಷದಲ್ಲಿದ್ದಾಗ ನೀವು ಆರೋಪ ಮಾಡಿದ್ದೀರಿ. ಪೈಪ್‌ಗಳು ತುಕ್ಕು ಹಿಡಿಯುವ ಮುನ್ನ ನೀರು ಕೊಡಿ ಎಂಬ ನಿಮ್ಮ ಹೇಳಿಕೆಯನ್ನು ನಾವೆಲ್ಲ ಮರೆತಿಲ್ಲ. ನಿಮ್ಮ ಪಕ್ಷ ಆಡಳಿತಕ್ಕೆ ಬಂದ ಮೇಲೂ ಪರಿಸ್ಥಿತಿ ಸುಧಾರಣೆ ಆಗಿಲ್ಲ. ನಮಗೆ ಕಾವೇರಿ ನೀರು ಸಿಗುತ್ತಿಲ್ಲ’ ಎಂದು ಜಕ್ಕೂರು ವಾರ್ಡ್‌ನ ಎಸ್‌. ನಾಗರಾಜ್‌ ದೂರಿದರು.

(ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾಗರಿಕರು)

ಅಮರಜ್ಯೋತಿ ಬಡಾವಣೆಯ ನಿವಾಸಿ ಶ್ರೀನಿವಾಸ ರಾವ್‌, ‘ನಮ್ಮ ಬಡಾವಣೆಗೆ 2007ರ ವರೆಗೆ ಗ್ರಾಮ ಪಂಚಾಯ್ತಿ ವತಿಯಿಂದ ನೀರು ಪೂರೈಕೆ ಆಗುತ್ತಿತ್ತು. ನಮ್ಮ ಪ್ರದೇಶ ಬಿಬಿಎಂಪಿಗೆ ಸೇರಿದ ಬಳಿಕ ಸಮಸ್ಯೆ ಸೃಷ್ಟಿಯಾಗಿದೆ. ನೀರಿಗಾಗಿ ಪ್ರತಿ ತಿಂಗಳು ₹4 ಸಾವಿರ ಖರ್ಚು ಮಾಡುತ್ತಿದ್ದೇವೆ. ಕಾವೇರಿ ನೀರಿಗಾಗಿ ಇನ್ನೂ ಮೂರು ವರ್ಷ ಕಾಯಲು ಸಾಧ್ಯವಿಲ್ಲ. ಪರ್ಯಾಯ ವ್ಯವಸ್ಥೆ ಮಾಡಿಕೊಡಿ’ ಎಂದು ಆಗ್ರಹಿಸಿದರು. ‘ನಮಗೂ ಕಾವೇರಿ ನೀರು ಒದಗಿಸಿ’ ಎಂದು ಐದಾರು ನಿವಾಸಿಗಳು ಒತ್ತಾಯಿಸಿದರು. ಅಕ್ರಮ ನೀರಿನ ಸಂಪರ್ಕ ಪಡೆದಿರುವ ಕುಟುಂಬಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಿಟಿಜನ್‌ ಆ್ಯಕ್ಷನ್‌ ಫೋರಂನ ಪದಾಧಿಕಾರಿಗಳು ಆಗ್ರಹಿಸಿದರು.

ಕೃಷ್ಣ ಬೈರೇಗೌಡ ಪ್ರತಿಕ್ರಿಯಿಸಿ, ‘ಕಾವೇರಿ ನೀರಿನ ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಂಡಿದೆ. ನಮ್ಮ ಕಡೆಯಿಂದ ಯಾವುದೇ ಲೋಪ ಆಗಿಲ್ಲ. ಶೇ 30ರಿಂದ 40ರಷ್ಟು ಕುಟುಂಬಗಳು ಇನ್ನೂ ಮೀಟರ್‌ ಹಾಕಿಸಿಕೊಂಡಿಲ್ಲ. ಇದರಿಂದ ಮೀಟರ್‌ ಹಾಕಿಸಿಕೊಂಡವರಿಗೆ ಅನ್ಯಾಯವಾಗುತ್ತಿದೆ. ಜನರು ಮೀಟರ್‌ ಹಾಕಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು. ಎರಡು ವಾರ್ಡ್‌ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಕಾವೇರಿ ನೀರಿನ ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಂಡಿದೆ ಎಂದರು.

‘110 ಹಳ್ಳಿಗಳ ಜನರಿಗೆ ಕಾವೇರಿ ನೀರು ಒದಗಿಸುವ ಕಾಮಗಾರಿಗೆ ಮುಖ್ಯಮಂತ್ರಿ ಅವರು ಚಾಲನೆ ನೀಡಿದ್ದಾರೆ. ನಮ್ಮ ವಾರ್ಡ್‌ನಲ್ಲೂ ಈ ಕಾಮಗಾರಿಗೆ 15–20 ದಿನಗಳಲ್ಲಿ ಚಾಲನೆ ನೀಡುತ್ತೇವೆ’ ಎಂದು ಅವರು ಮಾಹಿತಿ ನೀಡಿದರು.

ಜಲಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಜಯಶಂಕರ್ ಮಾತನಾಡಿ, ‘ನೀರಿನ ಸಂಪರ್ಕ ಪಡೆಯುವಂತೆ ನಾಗರಿಕರಿಗೆ ಪದೇ ಪದೇ ಮನವಿ ಮಾಡಿದ್ದೇವೆ. ಹಲವರಿಗೆ ನೋಟಿಸ್ ಸಹ ಕೊಟ್ಟಿದ್ದೇವೆ. ಇದಕ್ಕೂ ಅವರು ಪ್ರತಿಕ್ರಿಯಿಸಿಲ್ಲ. ಅಕ್ರಮ ಸಂಪರ್ಕ ಪಡೆದಿರುವ 44 ಕುಟುಂಬಗಳ ವಿರುದ್ಧ ಕೊಡಿಗೇಹಳ್ಳಿ ಠಾಣೆಗೆ ದೂರು ದಾಖಲಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

ಕೆಳಸೇತುವೆ ಕಾಮಗಾರಿ ಪೂರ್ಣ ಯಾವಾಗ: ಜನಸ್ಪಂದನ ಆರಂಭವಾಗುತ್ತಿದ್ದಂತೆ ವಿರೂಪಾಕ್ಷಪುರದ ಬಿ.ಎಸ್‌.ಎನ್‌. ಶರ್ಮ, ‘ಕೊಡಿಗೇಹಳ್ಳಿ ಕೆಳಸೇತುವೆ ಕಾಮಗಾರಿ ಅರ್ಧದಲ್ಲೇ ನಿಂತಿದೆ’ ಎಂದು ಗಮನ ಸೆಳೆದರು.

ಆಗ ಕೃಷ್ಣ ಬೈರೇಗೌಡ ಉತ್ತರಿಸಲು ಮುಂದಾದರು. ‘ಇದೇ ಪ್ರಶ್ನೆಯನ್ನು ನಾವೂ ಕೇಳಬೇಕು ಎಂದಿದ್ದೆವು’ ಎಂದು 20ಕ್ಕೂ ಅಧಿಕ ಮಂದಿ ಕೈ ಎತ್ತಿದರು.

ಸಚಿವ ಕೃಷ್ಣ ಬೈರೇಗೌಡ ಅವರು ಉತ್ತರಿಸಿ, ‘ಕಾಮಗಾರಿ ವಿಳಂಬವಾಗಿರುವುದು ನಿಜ. ಕೇವಲ ಕೆಳಸೇತುವೆಯ ಕೆಲಸವಾಗಿದ್ದರೆ ಈ ವೇಳೆಗಾಗಲೇ ಮುಗಿಸುತ್ತಿದ್ದೆವು. ಆದರೆ, ಚತುಷ್ಪಥ ರಸ್ತೆ ಮಾಡುತ್ತಿರುವುದರಿಂದ ಅಗತ್ಯ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಬೇಕಿತ್ತು’ ಎಂದರು.

**

ಸಚಿವ– ಗ್ರಾಮಸ್ಥರ ನಡುವೆ ಜಟಾಪಟಿ
ಬ್ಯಾಟರಾಯನಪುರ ಗ್ರಾಮದ ಅಭಿವೃದ್ಧಿಗೆ ಸಂಬಂಧಿಸಿ ಗ್ರಾಮಸ್ಥರು ಹಾಗೂ ಸಚಿವರ ನಡುವೆ ಜಟಾಪಟಿ ನಡೆಯಿತು.

ಬ್ಯಾಟರಾಯನಪುರದ ಗ್ರಾಮಸ್ಥ ಕಾರ್ತಿಕ್‌ ವಿಷಯ ಪ್ರಸ್ತಾಪಿಸಿ, ‘ನಮ್ಮ ಗ್ರಾಮಕ್ಕೆ ಯಾವುದೇ ಮೂಲಸೌಕರ್ಯ ಕಲ್ಪಿಸಿಲ್ಲ. ಮೂರು ದಿನಕ್ಕೊಮ್ಮೆ ನೀರು ಸರಬರಾಜು ಆಗುತ್ತಿದೆ. ಮನೆ ಕಟ್ಟಿಕೊಟ್ಟಿಲ್ಲ. ಪಕ್ಕದ ಕ್ಷೇತ್ರದ ಶಾಸಕರು ನೂರಾರು ಮನೆ ಕಟ್ಟಿಕೊಟ್ಟಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅವರ ಜತೆಗಿದ್ದ ಗ್ರಾಮಸ್ಥರು ‘ಹೌದು ಹೌದು’ ಎಂದರು.

ಈ ವೇಳೆ ಪಾಲಿಕೆಯ ಸ್ಥಳೀಯ ಸದಸ್ಯ ಪಿ.ವಿ. ಮಂಜುನಾಥ್‌ ಅವರು ಗ್ರಾಮಸ್ಥರನ್ನು ಸಮಾಧಾನಪಡಿಸಲು ಮುಂದಾದರು. ಅಭಿವೃದ್ಧಿಯೇ ಆಗಿಲ್ಲ ಎಂದು ಗ್ರಾಮಸ್ಥರು ವಾದಿಸಿದರು. ಆಗ ಮಧ್ಯಪ್ರವೇಶಿಸಿದ ಕೃಷ್ಣ ಬೈರೇಗೌಡ, ‘ಇಲ್ಲಿ ರಾಜಕೀಯ ತರಬೇಡಿ. ಅದಕ್ಕೆ ಬೇರೆ ವೇದಿಕೆ ಇದೆ. ಅಲ್ಲಿ ನಿಮ್ಮ ರೀತಿಯೇ ಧ್ವನಿ ಏರಿಸಿ ಮಾತನಾಡುತ್ತೇವೆ’ ಎಂದರು. ‘ನೂರಾರು ಮನೆಗಳನ್ನು ಕಟ್ಟಿಕೊಟ್ಟ ಕಾರಣಕ್ಕೆ ಪಕ್ಕದ ಕ್ಷೇತ್ರದ ಶಾಸಕರು ನಿತ್ಯ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದಾರೆ. ಅಂತಹ ಸಮಸ್ಯೆ ನನಗೆ ಬೇಡ’ ಎಂದು ತಿರುಗೇಟು ನೀಡಿದರು.

**

‘ಬೆದರಿಕೆ ಹಾಕುತ್ತಾರೆ’
‘ಜಕ್ಕೂರಿನಲ್ಲಿ ಇರುವ ಬಿಬಿಎಂಪಿ ಭವನಕ್ಕೆ ಅಂಬೇಡ್ಕರ್‌ ಭವನ ಎಂದು ಹೆಸರಿಡಲಾಗಿದೆ. ರಂಗಮಂದಿರದಲ್ಲಿ ಒಕ್ಕಲಿಗರ ಸಂಘ ಹಾಗೂ ಅಂಚೆ ಕಚೇರಿಯನ್ನು ಅನಧಿಕೃತವಾಗಿ ಸ್ಥಾಪಿಸಲಾಗಿದೆ. ಇವರು ಯಾವುದೇ ಬಾಡಿಗೆ ನೀಡುತ್ತಿಲ್ಲ. ಬಡಾವಣೆಯಲ್ಲಿ ಬೀದಿ ದೀಪಗಳನ್ನು ಹಾಕಿಲ್ಲ. ಶಬರಿನಗರ 3ನೇ ಕ್ರಾಸ್‌ನಲ್ಲಿರುವ ನಾನು 2009ರಿಂದ ಕಂದಾಯ ತೆರಿಗೆ ಕಟ್ಟುತ್ತಿದ್ದೇವೆ. ಆದರೆ, ಈ ಮಾಹಿತಿಯನ್ನು ಕಂಪ್ಯೂಟರ್‌ನಲ್ಲಿ ಅಳವಡಿಸಿಲ್ಲ’ ಎಂದು ವಿ.ಕೆ. ನಾಗೇಶ್‌ ದೂರಿದರು.

ಇದಕ್ಕೆ ಉತ್ತರಿಸಿದ ಸಹಾಯಕ ಕಂದಾಯ ಅಧಿಕಾರಿ ಬಿ.ವಿಠಲ್‌, ‘ತೆರಿಗೆಯನ್ನು ಡಿ.ಡಿ., ಚೆಕ್‌ ಮೂಲಕ ಸಂಗ್ರಹಿಸುವ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗೆ ವಹಿಸಿದ್ದೆವು. ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕಂಪ್ಯೂಟರ್‌ಗೆ ಅಳವಡಿಸುತ್ತೇವೆ. ರಂಗಮಂದಿರದಲ್ಲಿರುವ ಒಕ್ಕಲಿಗರ ಸಂಘ, ಅಂಚೆ ಕಚೇರಿಯ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದರು.

ಇದಕ್ಕೆ ಸಮಾಧಾನಗೊಳ್ಳದ ನಾಗೇಶ್‌, ‘ಈ ಸಂಬಂಧ ಬಹಳಷ್ಟು ಬಾರಿ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ. ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ಮೂರು ತಿಂಗಳು ಕಳೆದರೂ ಮಾಹಿತಿ ನೀಡಿಲ್ಲ. ಕೇಳಿದರೆ ಗೂಂಡಾಗಿರಿ ಮಾಡುವುದಲ್ಲದೆ, ಜೀವಬೆದರಿಕೆ ಹಾಕುತ್ತಾರೆ’ ಎಂದು ದೂರಿದರು.

‘ಆದರೆ, ಆಸ್ತಿ ಮಾಲೀಕರು ಟಿಡಿಆರ್‌ ಪ್ರಮಾಣ ಹೆಚ್ಚಿಸಬೇಕು ಎಂದು ಪಟ್ಟು ಹಿಡಿದಿದ್ದರು. ಬಳಿಕ ಟಿಡಿಆರ್‌ ಹೆಚ್ಚಳ ಆಗಿತ್ತು. ಈಗ, ಟಿಡಿಆರ್‌ ಬೇಡ, ಪರಿಹಾರ ಬೇಕೆನ್ನುತ್ತಿದ್ದಾರೆ. ಹೀಗಾಗಿ ಚದರ ಅಡಿ ಜಾಗಕ್ಕೆ ₹8,300 ಪರಿಹಾರ ನೀಡಲು ನಿರ್ಧರಿಸಿದ್ದೇವೆ. ಇದಕ್ಕಾಗಿ ₹50–60 ಕೋಟಿ ಆಗಲಿದೆ. 28ರ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಇದಕ್ಕೆ ಅನುಮತಿ ಸಿಕ್ಕ ಬಳಿಕ ಕಾಮಗಾರಿ ಆರಂಭವಾಗಲಿದೆ’ ಎಂದು ಭರವಸೆ ನೀಡಿದರು.

‘ರಸ್ತೆ ಭಾಗದ ಕಾಮಗಾರಿ ಈಗಾಗಲೇ ಶುರುವಾಗಿದೆ. ಕೆಲವರು ಇದಕ್ಕೂ ಅಡ್ಡಿಪಡಿಸಿದ್ದಾರೆ. ಈ ಸಂಬಂಧ ಜಂಟಿ ಆಯುಕ್ತರು ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಆರೇಳು ತಿಂಗಳಲ್ಲಿ ಕಾಮಗಾರಿ ಮುಗಿಸುತ್ತೇವೆ’ ಎಂದರು.

‘ಎನ್‌ಟಿಐ ಬಡಾವಣೆ ಸಮೀಪದ ಕೆಳಸೇತುವೆ ಕಾಮಗಾರಿ ಶೇ 90ರಷ್ಟು ಪೂರ್ಣಗೊಂಡಿದ್ದು, ತಿಂಗಳೊಳಗೆ ಉದ್ಘಾಟನೆ ಮಾಡುತ್ತೇವೆ. ಸಂಚಾರ ದಟ್ಟಣೆ ಕಡಿಮೆಯಾಗಲಿದೆ’ ಎಂದರು.

‘ಸಹಕಾರನಗರ, ತಿಂಡ್ಲು, ವಿದ್ಯಾರಣ್ಯಪುರ ಭಾಗಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಎನ್‌ಐಟಿ ಬಡಾವಣೆಯಿಂದ ರಾಷ್ಟ್ರೀಯ ಹೆದ್ದಾರಿಗೆ ರಸ್ತೆ ನಿರ್ಮಿಸಲು ಯೋಜಿಸಲಾಗಿದೆ. ಜಿಕೆವಿಕೆ ಗೇಟ್‌ ಸಮೀಪದಲ್ಲಿ ಹೆದ್ದಾರಿಗೆ ಸಂಪರ್ಕ ಕಲ್ಪಿಸಲಾಗುತ್ತೆ. ಇದಕ್ಕೆ ಎಲ್‌ ಆ್ಯಂಡ್‌ ಟಿ ಸಂಸ್ಥೆಯ ಸ್ವಲ್ಪ ಜಾಗ ಸ್ವಾಧೀನಪಡಿಸಿಕೊಳ್ಳಬೇಕಿದೆ. ಈ ಸಂಬಂಧ ಮಾತುಕತೆ ನಡೆಸಿದ್ದು, ಜಾಗ ನೀಡಲು ಕಂಪೆನಿ ಒಪ್ಪಿದೆ’ ಎಂದು ವಿವರಿಸಿದರು.

**

ಪಟಾಫಟ್‌ ಪ್ರಶ್ನೆ– ಪಟಪಟನೆ ಉತ್ತರ

* ವೆಂಕಟೇಶಸ್ವಾಮಿ ರೆಡ್ಡಿ: ಬ್ಯಾಟರಾಯನಪುರ ವಾರ್ಡ್‌ನ ವಿವೇಕಾನಂದ ನಗರದಲ್ಲಿ ಚರಂಡಿ, ರಸ್ತೆ ವ್ಯವಸ್ಥೆ ಸರಿಯಿಲ್ಲ.

ಕೃಷ್ಣ ಬೈರೇಗೌಡ: ರಸ್ತೆ, ಚರಂಡಿ ಕಾಮಗಾರಿಗೆ ನೀಡಿದ್ದ ಟೆಂಡರ್‌ ವಜಾಗೊಂಡಿದೆ. ಮರು ಟೆಂಡರ್‌ ನೀಡಲಾಗಿದ್ದು, 10 ದಿನಗಳಲ್ಲಿ ರಸ್ತೆ ಕಾಮಗಾರಿ ಆರಂಭವಾಗಲಿದೆ.

* ರಾಮಶೇಷ, ವಿರೂಪಾಕ್ಷಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ: ತಿಂಡ್ಲು– ವಿರೂಪಾಕ್ಷಪುರ ರಸ್ತೆಗೆ ಜಲ್ಲಿ ಹಾಕಿ ತುಂಬಾ ದಿನಗಳು ಆಗಿವೆ. ಆದರೆ, ಡಾಂಬರು ಹಾಕಿಲ್ಲ. ಬಿಎಂಟಿಸಿ ಬಸ್‌ಗಳು ಬಾರದೇ ಇರುವುದರಿಂದ ನಾಗರಿಕರು ತುಂಬಾ ಸಮಸ್ಯೆ ಎದುರಿಸುತ್ತಿದ್ದಾರೆ. ಬಡಾವಣೆಯಲ್ಲಿ ಗ್ರಂಥಾಲಯ, ತೆರೆದ ಜಿಮ್‌, ನಂದಿನಿ ಬೂತ್‌, ಬೆಂಗಳೂರು ಒನ್‌ ಕೇಂದ್ರ ಸ್ಥಾಪಿಸಬೇಕು.

ಕೃಷ್ಣ ಬೈರೇಗೌಡ: ತಿಂಡ್ಲು– ವಿರೂಪಾಕ್ಷಪುರ ರಸ್ತೆಗೆ ಒಂದು ವಾರದಲ್ಲಿ ಡಾಂಬರು ಹಾಕಲಾಗುತ್ತದೆ. ತೆರೆದ ಜಿಮ್‌ ಸ್ಥಾಪಿಸಲು ನಾನು ಸಿದ್ಧ ಇದ್ದೇನೆ. ಆದರೆ, ಅದಕ್ಕೆ ಬೇಕಾದ ಜಾಗ ಎಲ್ಲಿದೆ ಅಂತ ನೀವೇ ಹೇಳಬೇಕು. ಬಡಾವಣೆಯಲ್ಲಿರುವ ಕೆರೆಯ ಆವರಣದಲ್ಲಿ ತೆರೆದ ಜಿಮ್‌ ಸ್ಥಾಪಿಸಲು ಕ್ರಮ ಕೈಗೊಳ್ಳುತ್ತೇನೆ.

* ಶೇಖರ್‌: ಬೆಸ್ಕಾಂ ಬಡಾವಣೆಯಲ್ಲಿ ಐದು ಉದ್ಯಾನಗಳಿವೆ. ಆದರೆ, ಸರಿಯಾಗಿ ನೀರು ಹಾಕದೆ ಗಿಡಗಳು ಒಣಗುತ್ತಿವೆ.

ರಶ್ಮಿ, ಬಿಬಿಎಂಪಿಯ ತೋಟಗಾರಿಕೆ ವಿಭಾಗದ ಎಂಜಿನಿಯರ್‌: ಎಲ್ಲ ಉದ್ಯಾನಗಳಿಗೆ ಟ್ಯಾಂಕರ್‌ ಮೂಲಕ ನೀರು ಹಾಕಿಸುತ್ತೇನೆ.

ನಾರಾಯಣಮೂರ್ತಿ: ‘ಸಿಕೆಎಲ್‌ ಬಡಾವಣೆಯಲ್ಲಿ ನಾನು ವಾಸ ಮಾಡುತ್ತಿದ್ದೇನೆ. ಈ ಹಿಂದೆ ₹9,000 ಆಸ್ತಿ ತೆರಿಗೆ ಕಟ್ಟುತ್ತಿದ್ದೆ. ಈ ವರ್ಷ ₹18,000 ಆಸ್ತಿ ತೆರಿಗೆ ವಿಧಿಸಲಾಗಿದೆ. ರಸೀದಿಯಲ್ಲಿ ಸಿಕೆಎಲ್‌ ಬಡಾವಣೆ ಬದಲಿಗೆ ಆರ್‌ಎಂಎಸ್‌ ಬಡಾವಣೆ ಅಂತ ನಮೂದಿಸಲಾಗಿದೆ.

ಬಿ.ವಿಠಲ್‌: ಆಸ್ತಿ ತೆರಿಗೆಯ ತಂತ್ರಾಂಶದಲ್ಲಿ ಇದ್ದ ಸಮಸ್ಯೆಯನ್ನು ಬಗೆಹರಿಸಲಾಗಿದೆ. 15 ದಿನಗಳಿಂದ ಸುಮಾರು 500 ಅರ್ಜಿಗಳನ್ನು ವಿಲೇವಾರಿ ಮಾಡಿದ್ದೇವೆ. ಹೆಚ್ಚು ತೆರಿಗೆ ಪಾವತಿಸಿದ್ದರೆ, ಅದನ್ನು  ಮುಂದಿನ ವರ್ಷದ ಆಸ್ತಿ ತೆರಿಗೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ.

* ಸುಧಾ ಶೇಖರ್‌: ಸಹಕಾರನಗರದ 22ನೇ ಅಡ್ಡರಸ್ತೆಯಲ್ಲಿ ಕಸ ಬಿದ್ದಿರುತ್ತದೆ. ಅದನ್ನು ಪೌರಕಾರ್ಮಿಕರು ಸ್ವಚ್ಛಗೊಳಿಸುತ್ತಿಲ್ಲ. ನಿಯಮಿತವಾಗಿ ಮನೆಗಳಿಂದ ಕಸ ಸಂಗ್ರಹಿಸುತ್ತಿಲ್ಲ.

ರಂಗನಾಥ್‌, ಎಇಇ, ಕೊಡಿಗೇಹಳ್ಳಿ ಉಪವಲಯ: ರಸ್ತೆಗಳನ್ನು ಸ್ವಚ್ಛಗೊಳಿಸಲು ಸೂಚಿಸುತ್ತೇನೆ.

ಕೃಷ್ಣ ಬೈರೇಗೌಡ: ಸಹಕಾರ ನಗರದಲ್ಲಿ ಸ್ವಚ್ಛತೆ ಇಲ್ಲ ಎಂದರೆ ನಂಬುವ ಮಾತಲ್ಲ. ಪೌರಕಾರ್ಮಿಕರು ಬಡಾವಣೆಯ ಎಲ್ಲ ರಸ್ತೆಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ.

* ಲೀನಾ: ಮುನಿಸಾಮಪ್ಪ ಬಡಾವಣೆಯ 5ನೇ ಅಡ್ಡರಸ್ತೆಗೆ ಡಾಂಬರು ಹಾಕಿಲ್ಲ. ನಮ್ಮ ಮನೆ ಬಳಿ ಕಟ್ಟಡವೊಂದರಲ್ಲಿ ಬಾಡಿಗೆಗೆ ಇರುವ ಹುಡುಗರು ಕಸವನ್ನು ರಸ್ತೆಗೆ ಸುರಿಯುತ್ತಾರೆ. ಕ್ರಮ ಕೈಗೊಳ್ಳಿ.

ಕುವೆಂಪುನಗರ ವಾರ್ಡ್‌ ಸದಸ್ಯ ಪಾರ್ತಿಬಾ ರಾಜನ್‌: ರಸ್ತೆಗೆ ಡಾಂಬರು ಹಾಕುವ ಕಾರ್ಯ ಪ್ರಗತಿಯಲ್ಲಿದೆ. ಕಸ ಹಾಕುತ್ತಿದ್ದ ಹುಡುಗರು ಬಾಡಿಗೆಗೆ ಇರುವ ಕಟ್ಟಡದ ಮಾಲೀಕರಿಗೆ ನೋಟಿಸ್‌ ನೀಡಲಾಗಿದೆ.

* ಸುನೀಲ್‌, ಸಿಟಿಜನ್‌ ಆಕ್ಷನ್‌ ಫೋರಂ: ದೊಡ್ಡಬೊಮ್ಮಸಂದ್ರದ ರಸ್ತೆಗಳಿಗೆ ಪಾದಚಾರಿ ಮಾರ್ಗ ಇಲ್ಲ. ವಿದ್ಯಾರಣ್ಯಪುರದಲ್ಲಿ ರಸ್ತೆಗಳಿಗೆ ನಾಮಫಲಕ ಹಾಕಿಲ್ಲ.

ಜಯಲಕ್ಷ್ಮಮ್ಮ ಪಿಳ್ಳಪ್ಪ, ಪಾಲಿಕೆ ಸದಸ್ಯೆ: ದೊಡ್ಡಬೊಮ್ಮಸಂದ್ರದಲ್ಲಿ ಪಾದಚಾರಿ ಮಾರ್ಗಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳುತ್ತೇನೆ.

ಎಚ್‌. ಕುಸುಮಾ, ಪಾಲಿಕೆ ಸದಸ್ಯೆ: ವಿದ್ಯಾರಣ್ಯಪುರದಲ್ಲಿ ರಸ್ತೆಗಳಿಗೆ ನಾಮಫಲಕ ಅಳವಡಿಸಲು ಟೆಂಡರ್‌ ಕರೆಯಲಾಗಿದೆ. ಶೀಘ್ರದಲ್ಲೇ ಫಲಕ ಅಳವಡಿಸಲಾಗುತ್ತದೆ.

* ಶಿವಕುಮಾರ್‌, ಉತ್ತನಹಳ್ಳಿ: ದೊಡ್ಡಜಾಲ ಕೆರೆಯ ಕೋಡಿ ಹೋಗುವ ಜಾಗದಲ್ಲಿ ಸ್ಮಶಾನ ನಿರ್ಮಿಸಲಾಗಿದೆ. ಅಲ್ಲಿ ಒಂದು ಸಮಾಧಿ ಇದ್ದದ್ದು ಈಗ 10 ಸಮಾಧಿಗಳಿವೆ.

ಕೃಷ್ಣ ಬೈರೇಗೌಡ: ಕೆರೆ ಬಳಿ ಇರುವ ಸ್ಮಶಾನ ಶಾಶ್ವತವಲ್ಲ. ಕೆರೆಯ ನೀರು ಕೋಡಿ ಹೋದರೆ ಸಮಾಧಿಗಳು ಕೊಚ್ಚಿಕೊಂಡು ಹೋಗುತ್ತವೆ. ಆದರೂ, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಅಲ್ಲಿನ ಕಂದಾಯ ಅಧಿಕಾರಿಗೆ ಸೂಚಿಸುತ್ತೇನೆ.

* ಶ್ರೀಕಾಂತ್‌, ಕಾಫಿ ಬೋರ್ಡ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ: ಬಡಾವಣೆಯಲ್ಲಿರುವ ರಸ್ತೆಗಳಿಗೆ ಡಾಂಬರು ಹಾಕಿಲ್ಲ. ಸ್ಕೈವಾಕ್‌ ನಿರ್ಮಿಸಿದ್ದರೂ ಅದಕ್ಕೆ ಲಿಫ್ಟ್‌, ಎಲಿವೇಟರ್‌ ಅಳವಡಿಸಿಲ್ಲ.

ಕೃಷ್ಣ ಬೈರೇಗೌಡ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ಮಿಸುವ ಸ್ಕೈವಾಕ್‌ಗಳಲ್ಲಿ ಲಿಫ್ಟ್‌, ಎಲಿವೇಟರ್‌ ಅಳವಡಿಸುವುದಿಲ್ಲ. ಆದರೆ, ಎಂಬೆಸಿ ಕಂಪೆನಿಯು ಲಿಫ್ಟ್‌, ಎಲಿವೇಟರ್‌ ಅಳವಡಿಸಲು ಮುಂದೆ ಬಂದಿದೆ. ಈ ಬಗ್ಗೆ ಪ್ರಾಧಿಕಾರದ ಅಧಿಕಾರಿಗಳ ಜತೆ ಮಾತುಕತೆ ನಡೆಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.