ADVERTISEMENT

ರೈತನ ಬದುಕು ಬದಲಿಸಿದ ಕೃಷಿ ಹೊಂಡ

ಜೋಮನ್ ವರ್ಗಿಸ್
Published 24 ಏಪ್ರಿಲ್ 2017, 5:21 IST
Last Updated 24 ಏಪ್ರಿಲ್ 2017, 5:21 IST
ರೋಣ ತಾಲ್ಲೂಕಿನ ಬೆಳವಣಿಕಿ ಗ್ರಾಮದ ಪ್ರಗತಿ ಪರ ರೈತ ಶರಣಪ್ಪ ಹದ್ಲಿ ಅವರ ಜಮೀನಿನಲ್ಲಿ ನಿರ್ಮಿಸಿರುವ ಕೃಷಿ ಹೊಂಡದಲ್ಲಿ ಬಿರು ಬೇಸಿಗೆಯಲ್ಲೂ ಭರ್ಜರಿ ನೀರಿದೆ
ರೋಣ ತಾಲ್ಲೂಕಿನ ಬೆಳವಣಿಕಿ ಗ್ರಾಮದ ಪ್ರಗತಿ ಪರ ರೈತ ಶರಣಪ್ಪ ಹದ್ಲಿ ಅವರ ಜಮೀನಿನಲ್ಲಿ ನಿರ್ಮಿಸಿರುವ ಕೃಷಿ ಹೊಂಡದಲ್ಲಿ ಬಿರು ಬೇಸಿಗೆಯಲ್ಲೂ ಭರ್ಜರಿ ನೀರಿದೆ   

ಗದಗ: ಜಿಲ್ಲೆ ಸತತ ನಾಲ್ಕು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿದೆ. ಕುಡಿಯುವ ನೀರಿಗೆ ತೀವ್ರ ಹಾಹಾಕಾರದ ಪರಿಸ್ಥಿತಿ. ಹೀಗಿರುವಾಗ ಕೃಷಿಗೆ ನೀರು ಹೊಂದಿಸಿಕೊಳ್ಳುವುದೇ ರೈತರಿಗೆ ದೊಡ್ಡ ಸವಾಲು. ಆದರೆ, ರೋಣ ತಾಲ್ಲೂಕಿನ ಬೆಳವಣಿಕಿ ಗ್ರಾಮದ ಪ್ರಗತಿ ಪರ ರೈತ ಶರಣಪ್ಪ ಹದ್ಲಿ ಅವರ ಜಮೀನಿನಲ್ಲಿ ಒಂದಿಷ್ಟೂ ನೀರಿನ ಕೊರತೆ ಇಲ್ಲ.

ನೀರು ಉಳಿತಾಯದ ಉಪಾಯಗಳನ್ನು ಕಂಡುಕೊಂಡಿರುವ ಅವರು ಬರಗಾಲದಲ್ಲೂ ನೆಮ್ಮದಿಯಿಂದಿದ್ದಾರೆ. 56 ಎಕರೆ ಭೂಮಿ ಹೊಂದಿರುವ ಶರಣಪ್ಪ, ಒಣಬೇಸಾಯ ಆಧಾರಿತ ಜಿಲ್ಲೆಯ ರೈತರಿಗೆ ಮಾದರಿ ಎನಿಸಿದ್ದಾರೆ.ಅದು ದಶಕದ ಹಿಂದಿನ ಮಾತು. ಶರಣಪ್ಪ ಹದ್ಲಿ ಕೂಡ ಜಿಲ್ಲೆಯ ಇತರೆ ರೈತರಂತೆ ಪ್ರತಿ ವರ್ಷ ಕೃಷಿಯಲ್ಲಿ ನಷ್ಟ ಅನುಭವಿಸುತ್ತಿದ್ದರು. ಕೊಳವೆಬಾವಿಗಳು ಒಂದೊಂದೇ ಬತ್ತಲು ಆರಂಭಿಸಿದ್ದವು. ಮೆಣಸಿನಕಾಯಿ, ಈರುಳ್ಳಿ, ಕಡಲೆ ಏನೇ ಬೆಳೆದರೂ ವರ್ಷಕ್ಕೆ ₹ 10 ಲಕ್ಷದಿಂದ ₹ 15 ಲಕ್ಷದವರೆಗೆ ನಷ್ಟ ಅನುಭವಿಸುತ್ತಿದ್ದರು.

ಆಗಲೇ ಅವರು ನೀರನ್ನು ಉಳಿಸಿ ಗಳಿಸುವ ಪ್ರಯತ್ನದೆಡೆಗೆ ಮುಖ ಮಾಡಿದ್ದು.ಗಜೇಂದ್ರಗಡದ ಬಳಿಯೂ ಅವರಿಗೆ ಸ್ವಲ್ಪ ಜಮೀನಿದ್ದು, ಅಲ್ಲಿ ಬತ್ತಿರುವ ಕೊಳವೆಬಾವಿಯೊಂದು ಇತ್ತು. ಒಮ್ಮೆ ಮಳೆಗಾಲದಲ್ಲಿ ಅದರ ಸುತ್ತ ಸ್ವಲ್ಪ ತಗ್ಗು ತೋಡಿ ಮಳೆ ನೀರು ಹರಿದು ಗುಂಡಿಯಲ್ಲಿ ಇಂಗುವಂತೆ ಮಾಡಿದರು. ಇದು ಫಲ ನೀಡಿತು. ಪುನಶ್ಚೇತನಗೊಂಡ ಕೊಳವೆಬಾವಿಯಲ್ಲಿ ಬೇಸಿಗೆಯಲ್ಲಿ ನೀರು ಉಕ್ಕಿತು. ಇದರಿಂದ ಪ್ರೇರಣೆಗೊಂಡ ಅವರು, ಮಳೆ ನೀರನ್ನೇಕೆ ಇಂಗಿಸಬಾರದು? ಎಂದು ಯೋಚಿಸಿದರು. ಪತ್ರಿಕೆಗಳಲ್ಲಿ ಬಂದ ಜಲ ಸಂರಕ್ಷಣೆ ಕುರಿತ ಲೇಖನಗಳನ್ನು ಓದಿ ತಿಳಿದುಕೊಂಡರು. ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಕೃಷಿ ಹೊಂಡ ನಿರ್ಮಿಸುವ ಕುರಿತು ಮಾಹಿತಿ ಪಡೆದುಕೊಂಡರು.
ಎಂಟು ವರ್ಷಗಳ ಹಿಂದೆ ಬೆಳವಣಿಕಿಯ ತಮ್ಮ ಜಮೀನಿನಲ್ಲಿ 20 ಅಡಿ ಆಳ ಮತ್ತು 100 ಅಡಿ ಅಗಲದ ಕೃಷಿಹೊಂಡ ನಿರ್ಮಿಸಿದರು.

ADVERTISEMENT

‘ಆಗಿನ್ನೂ ಈ ಭಾಗದಲ್ಲಿ ಕೃಷಿ ಹೊಂಡದ ಕಲ್ಪನೆ ಅಷ್ಟೊಂದು ಜನಪ್ರಿಯವಾಗಿರಲಿಲ್ಲ. ಜಮೀನಿನಲ್ಲಿ ದೊಡ್ಡ ಹೊಂಡ ತೆಗೆದು ಇಷ್ಟೊಂದು ಸ್ಥಳವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಮಳೆ ನೀರು ಸಂಗ್ರಹಿಸುತ್ತಾರಂತೆ. ಇವರಿಗೇನು ತಲೆ ಸರಿ ಇದೆಯಾ? ಎಂದು ಜನ ಮಾತನಾಡಿಕೊಂಡರು. ನನ್ನ ಪಾಡಿಗೆ ನಾನು ಕೃಷಿ ಹೊಂಡ ತೆಗೆದು ಮುಗಿಲು ನೋಡುತ್ತಾ ಕುಳಿತೆ. ಆ ವರ್ಷ ಒಳ್ಳೆಯ ಮಳೆ ಬಂತು. ಕೃಷಿ ಹೊಂಡ ತುಂಬಿತು. ಮುಂದಿನ ವರ್ಷದ ಬೇಸಿಗೆಯಲ್ಲಿ ಜನರು ಮತ್ತೆ ಕೃಷಿಗೆ ನೀರಿಲ್ಲದೆ ಪರದಾಡಿದರು. ನನ್ನ ಜಮೀನಿನಲ್ಲಿ ನೀರಿಗೆ ಯಾವುದೇ ಕೊರತೆಯಾಗಲಿಲ್ಲ.

ಆ ವರ್ಷ ದಶಕದಲ್ಲೇ ಅತ್ಯುತ್ತಮ ಇಳುವರಿ ಲಭಿಸಿತು. ಬಂದ ಲಾಭದಲ್ಲಿ ಮತ್ತೆ ಜಮೀನಿನಲ್ಲಿ ಕೃಷಿ ಹೊಂಡ ತೆಗೆಸಿದೆ. ಹೀಗೆ ವರ್ಷಕ್ಕೆ ಒಂದರಂತೆ ಕೃಷಿ ಹೊಂಡ ನಿರ್ಮಿಸಿದ ಫಲವಾಗಿ ಈಗ ನಮ್ಮ ಜಮೀನಿನಲ್ಲಿ 8 ಕೃಷಿ ಹೊಂಡಗಳಿವೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡರೆ ಬೇಸಿಗೆಯಲ್ಲಿ ಒಂದು ಕೃಷಿ ಹೊಂಡದಿಂದ ಸರಾಸರಿ 20 ಎಕರೆಗೆ ನೀರುಣಿಸಬಹುದು. ಈಗ ಸತತ ಬರಗಾಲ ಇದ್ದರೂ, ಒಟ್ಟು 56 ಎಕರೆಭೂಮಿಗೆ ಸಮೃದ್ಧವಾಗಿ ನೀರು ಕೊಡುತ್ತಿದ್ದೇನೆ. ಈ ವರ್ಷ ಮಳೆಯಾಗದಿದ್ದರೂ ಮುಂದಿನ ಬೇಸಿಗೆಯಲ್ಲೂ  ನಮ್ಮ ಜಮೀನಿನಲ್ಲಿ ನೀರಿನ ಕೊರತೆ ಎದುರಾಗುವುದಿಲ್ಲ. ಕೃಷಿ ಹೊಂಡ ನನ್ನ ಬದುಕನ್ನೇ ಬದಲಿಸಿದೆ. ಕೃಷಿಯಲ್ಲಿ ಕಳೆದುಕೊಂಡಿದ್ದ ನಂಬಿಕೆ ಮತ್ತು ವಿಶ್ವಾಸ ಮರಳಿ ಬಂದಿದೆ. ವರ್ಷಕ್ಕೆ ಸರಾಸರಿ ₹30ರಿಂದ ₹40 ಲಕ್ಷ ಲಾಭ ಪಡೆಯುತ್ತಿದ್ದೇನೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಶರಣಪ್ಪ.

‘ಚೌಕುಮಡಿ’ ಪದ್ಧತಿ: ಕೃಷಿ ಹೊಂಡ ಯಶಸ್ವಿಯಾದ ಬೆನ್ನಲ್ಲೇ ಅವರು ತಮ್ಮ ಜಮೀನಿನಲ್ಲಿ ನೀರು ಉಳಿತಾಯದ ಇನ್ನೊಂದು ಮಾರ್ಗ ಕಂಡುಕೊಂಡಿದ್ದಾರೆ. ಅದೇ ಚೌಕುಮಡಿ ಪದ್ಧತಿ. ಈ ವಿಧಾನದಲ್ಲಿ ಆಗಸದಿಂದ ಬಿದ್ದ ಪ್ರತಿ ಮಳೆಹನಿಯೂ ಭೂಮಿಯಲ್ಲಿ ಇಂಗುತ್ತದೆ. ಒಂದೇ ಒಂದು ಹನಿ ನೀರು ಕೂಡ ವ್ಯರ್ಥವಾಗಿ ಹರಿದುಹೋಗುವುದಿಲ್ಲ. ಹರಿದು ಹೋಗುವ ನೀರು ಕೃಷಿ ಹೊಂಡವನ್ನು ಸೇರಿ, ಭವಿಷ್ಯದ ಜಲ ನಿಕ್ಷೇಪವಾಗುತ್ತದೆ ಎನ್ನುತ್ತಾರೆ ಅವರು.

ಚೌಕುಮಡಿ ಪದ್ಧತಿ ಮೂಲಕ ಈರುಳ್ಳಿ, ಮೆಣಸಿನಕಾಯಿ, ಕಡಲೆ ಬೆಳೆಯುತ್ತಾರೆ. ಒಣಬೇಸಾಯದಲ್ಲಿ ವಿನೂತನ ತಂತ್ರಜ್ಞಾನ ಅಳವಡಿಸಿಕೊಂಡಿರುವ ಅವರಿಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಶ್ರೇಷ್ಠ ಕೃಷಿಕ ಪ್ರಶಸ್ತಿಯೂ ಲಭಿಸಿದೆ. ಭಾರತೀಯ ಕೃಷಿ ಸಂಶೋಧನೆ ಮಂಡಳಿ (ಐಸಿಎಆರ್‌) ಕೂಡ ಶರಣಪ್ಪ ಹದ್ಲಿ ಅವರ ಜಲಸಂರಕ್ಷಣೆ ಮತ್ತು ಒಣ ಬೇಸಾಯಕೃಷಿ ಪದ್ಧತಿಗೆ 2015ರಲ್ಲಿ ಅತ್ಯುತ್ತಮ ಒಣಬೇಸಾಯ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದೆ. ‘ನಾನು ಕೃಷಿ ಹೊಂಡ ನಿರ್ಮಿಸಿಕೊಂಡ ನಂತರ, ನಮ್ಮ ಗ್ರಾಮದಲ್ಲಿ ಏನಿಲ್ಲವೆಂದರೂ 750ಕ್ಕೂ ಹೆಚ್ಚು ಕೃಷಿ ಹೊಂಡಗಳು ನಿರ್ಮಾಣವಾಗಿವೆ. ರೈತರು ಜಲ ಸಾಕ್ಷರರಾಗುತ್ತಿದ್ದಾರೆ. ಈ ವರ್ಷ ಒಂದು ಮಳೆ ಸಿಕ್ಕರೂ ಸಾಕು ಎಲ್ಲ ಕೃಷಿ ಹೊಂಡಗಳು ತುಂಬುತ್ತವೆ’ ಎನ್ನುತ್ತಾರೆ ಶರಣಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.