ADVERTISEMENT

ಕಣ್ಮನ ತುಂಬಲು ಕಡಲು; ಬದುಕಿಗೆ ಪೂರ್ತಿ ಮಳೆನೀರು

ಶ್ರೀ ಪಡ್ರೆ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST
ಗೋಕರ್ಣದಲ್ಲಿರುವ ತ್ರಿತಾರಾ ರೆಸಾರ್ಟ್‌್
ಗೋಕರ್ಣದಲ್ಲಿರುವ ತ್ರಿತಾರಾ ರೆಸಾರ್ಟ್‌್   

ಪಕ್ಕದಲ್ಲೇ ಮನಸ್ಸಿಗೆ ಮುದ ಕೊಡುವ ಅತಿ ವಿಶಾಲ ಸಮುದ್ರದ ನೀಲಿ ಜಲರಾಶಿ. ಈಚೆ ತಿರುಗಿದರೆ, ಮೇಲ್ಭಾಗ­ದಲ್ಲಿ ಮುರಕಲ್ಲಿನ ಗುಡ್ಡ, ಅದರ ಮೇಲೆ ಹಸಿರಿನ ಚಾದರ. ನೋಡಿ ನೋಡಿ ದಣಿದಾಗ ಒಂದು ಲೋಟ ನೀರು ಕುಡಿಯತೊಡಗಿದರೋ – ಆ ಕ್ಷಣ ಈ ಮಜಾಕ್ಕೆ ಪೂರ್ಣವಿರಾಮ. ಏಕೆ ಗೊತ್ತೇ? ನೀರೆಲ್ಲಾ ಉಪ್ಪುಪ್ಪು.

ಅಲ್ಲ,  ಕಡಲ ಬದಿಯ ನೀರು ಉಪ್ಪಲ್ಲದೆ ಬೇರೇನು ರುಚಿ ಇದ್ದೀತು?
ಆದರೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಸ್ವಸ್ವರದಲ್ಲಿ ನಿಮಗೀ ರಸಭಂಗ ಆಗಾಗುವುದೇ ಇಲ್ಲ. ಇಲ್ಲಿ ನಿಮಗೆ ಕುಡಿಯಲು ರುಚಿಕಟ್ಟಾದ ಸಿಹಿನೀರೇ ಸದಾ ಸಿಗುತ್ತದೆ.  ಸಮಸ್ಯೆಯನ್ನು ಮೊದಲೇ ಕಂಡುಕೊಂಡ ಕೇರಳ ಮೂಲದ ಸಿಜಿಎಚ್ ಅರ್ತ್ ಹೋಟೆಲ್ ಸಮೂಹ ಇಲ್ಲಿ ಅನನ್ಯ ರೀತಿಯಲ್ಲಿ ಮಳೆ ಹಿಡಿದಿಡುತ್ತಿದೆ.

ಈ ತ್ರಿತಾರಾ ರೆಸಾರ್ಟಿನ ಸುಂದರ ಪರಿಸರ ಹೊಕ್ಕ ಗಿರಾಕಿಗೆ ‘ಸ್ವಾಗತ ಪೇಯ’ವಾಗಿ ಸಿಗುವುದು ಮುರುಗಲು ಶರಬತ್ತು. ಅದರಿಂದ ಹಿಡಿದು ಸ್ನಾನಕ್ಕೂ ನಿತ್ಯಕರ್ಮಗಳಿಗೂ ಇಲ್ಲಿ ಬಾನಿನ ನೀರೇ ಆಧಾರ!

ADVERTISEMENT

ಮಳೆಗಾಲವಿರಲಿ, ಬಿರು ಬೇಸಿಗೆ­ಯಾಗಲಿ, ಬದುಕಿನ ಯಾವ ಅಗತ್ಯಗಳಿಗೂ ಅಂತರ್ಜಲ ಬಳಸುವುದೇ ಇಲ್ಲ.ಬಳಸುವಂತೆಯೂ ಇಲ್ಲ.
ಮಳೆ ಕೂಡಿಡಲೆಂದೇ ಇಲ್ಲಿ ಮೂರು ಸುಸಜ್ಜಿತ ಪ್ಲಾಸ್ಟಿಕ್ ಬನಿಯನ್ನಿನ ಬೃಹತ್ ಕೊಳಗಳಿವೆ. ಎಲ್ಲಾ ಕೊಳಗಳೂ ತುಂಬಿದಾಗ ಇವರು ಹತ್ತಿರಹತ್ತಿರ ಎರಡೂಕಾಲು ಕೋಟಿಯ ಒಡೆಯರು. ಲೀಟರು ನೀರಿನ ಲೆಕ್ಕದಲ್ಲಿ.

ರೆಸಾರ್ಟಿನಲ್ಲಿ ಒಟ್ಟು ಇಪ್ಪತ್ತನಾಲ್ಕು ರೂಮುಗಳಿವೆ. ಹದಿಮೂರು ಸಿಬಂದಿ ಕೋಣೆಗಳು. ನೂರಾ ಇಪ್ಪತ್ತು ಸಿಬ್ಬಂದಿಯೇ ಇದ್ದಾರೆ. ದಿನವೊಂದಕ್ಕೆ ಸರಾಸರಿ 150ರಿಂದ 175 ಮಂದಿ ವಾಸ ಮಾಡುತ್ತಾರೆ ಎಂದುಕೊಳ್ಳಬಹುದು. ಈಜುಕೊಳವೂ ಸೇರಿದಂತೆ ಇಲ್ಲಿನ ಎಲ್ಲಾ ವ್ಯವಸ್ಥೆಗಳಿಗೆ ದಿನವೊಂದಕ್ಕೆ ಹತ್ತಿರಹತ್ತಿರ ಕಾಲು ಲಕ್ಷ ಲೀಟರ್ ಬೇಕು.

ರೆಸಾರ್ಟ್ ಆರಂಭಿಸುವುದಕ್ಕೆ ವರ್ಷ ಮೊದಲೇ, 2005ರಲ್ಲಿ ಇವರು ಮೊತ್ತಮೊದಲು ಮಾಡಿದ್ದು ಮಳೆ ಶೇಖರಣಾ ವ್ಯವಸ್ಥೆ. ಎರಡು ಕೊಳ ನಿರ್ಮಾಣ.  ದೊಡ್ಡ ಕೊಳದ ಸಾಮರ್ಥ್ಯ ಕೋಟಿಗೆ ಹದಿನೈದೇ ಲಕ್ಷ ಕಡಿಮೆ.  ಚಿಕ್ಕದು 78 ಲಕ್ಷ ಲೀಟರಿನದು.

ರೆಸಾರ್ಟಿನ ಒಟ್ಟು ಜಮೀನು 26 ಎಕ್ರೆ. ಇಳಿಜಾರು ಭೂಮಿ. ಇದರಲ್ಲಿ ಐದು ಎಕ್ರೆಯ ನೀರೆಲ್ಲಾ  ಕೊಳಗಳಲ್ಲಿ ಸಂಗ್ರಹ­ವಾಗುತ್ತದೆ.  ಈ ಥರದ ಶೇಖರಣೆಗೆ ಇಳಿಪೈಪುಗಳಲ್ಲಿ ಹರಿದಿಳಿಯುವ ಚಾವಣಿ ನೀರನ್ನಷ್ಟೇ ಬಳಸುವುದು ಮಾಮೂಲಿ ಕ್ರಮ.

ಸ್ವಸ್ವರದ ವಿಶೇಷ ಗಮನಿಸಿ. ಸೂರಿನ ನೀರು ಮಾತ್ರವಲ್ಲ ಭೂಮಿಯ ಮೇಲೆ ಬಿದ್ದೋಡುವ ಮಳೆನೀರನ್ನೂ ಇವರು ಬಂಧಿಸಿಬಿಡುತ್ತಾರೆ. ಇದಕ್ಕಾಗಿ ಮಳೆ ಹಿಡಿಯುವ ಪ್ರದೇಶ – ಕ್ಯಾಚ್ ಮೆಂಟಿನಲ್ಲಿ – ಭೂಗತ ಕೊಳವೆಜಾಲ ಮಾಡಿಕೊಂಡಿದ್ದಾರೆ.

ಮಳೆ ಹಿಡಿಯುವ ಪ್ರದೇಶದ ಮೇಲೆ ನಡೆದಾಡಿದರೆ ಫಕ್ಕನೆ ನಿಮಗೆ ಈ ಮಳೆಬಂಧನ ನಡೆಯುತ್ತಿರುವುದರ ಸೂಚನೆಯೇ ಸಿಗದು. ಸಾರ್ವಜನಿಕ ರಸ್ತೆಗಳ ಬದಿಯಲ್ಲಿ ಮಾಡುವಂತಹ ಕಾಂಕ್ರೀಟ್ ಮಳೆನೀರ ಚರಂಡಿ ಇಲ್ಲಿ ಬಳಸಿಲ್ಲ. ಬದಲಿಗೆ ಸ್ಥಳೀಯ ಮುರಕಲ್ಲು ತುಂಬಿದ ಕಣಿಗಳನ್ನೇ (ಟ್ರೆಂಚು) ಬಳಸಿದ್ದಾರೆ. ಮೇಲ್ಮೈಯಲ್ಲಿ ಹರಿದುಬರುವ ಮಳೆನೀರಿನಲ್ಲಿರಬಹುದಾದ ಕಸ, ಕಣಗಳೆಲ್ಲವನ್ನೂ ಶೋಧಿಸಿ ಕೊಳಕ್ಕೆ ಕಳಿಸುತ್ತಾರೆ.

ಸೂಕ್ಷ್ಮವಾಗಿ ನೋಡಿದರೆ ಮಳೆನೀರು ಸುರಿದು ಒಗ್ಗೂಡುವ ಜಾಗಗಳಲ್ಲೆಲ್ಲಾ ಕಣಿಗಳಿವೆ. ಇವುಗಳ ಮೇಲ್ಪದರದಲ್ಲಿ ಚಿಕ್ಕಚಿಕ್ಕ ಕಲ್ಲುಗಳಿರುತ್ತವೆ. ಇನ್ನೂ ಕೆಳಗೆದ ಸ್ವಲ್ಪ ದೊಡ್ಡ ಕಲ್ಲುಗಳ ಸ್ತರವಿದೆ. ಅದರ ಅಡಿಯಲ್ಲಿ ಮೈಮೇಲಿಡೀ ಸೂಕ್ಷ್ಮರಂಧ್ರ ಹೊಂದಿರುವ ವಿಶೇಷ ಪೈಪು ಇರುತ್ತದೆ.

ಈ ಪೈಪುಗಳ ತೂತುಗಳ ಮೂಲಕ ನೀರು ಒಳಸೇರುತ್ತದೆ. ಕೆಳಭಾಗಕ್ಕೆ ಹರಿಹರಿದು ಹೋಗಿ ಕೊಳ ಸೇರುತ್ತದೆ. ಈ ಜಮೀನು ಅತಿ ಗಟ್ಟಿ ಜಂಬಿಟ್ಟಿಗೆ (ಮುರ ಮಣ್ಣು, ಲ್ಯಾಟರೈಟ್) ಯದು. ಹಾಗಾಗಿ ಬಹಳಷ್ಟು ಮಣ್ಣಿನ ಕಣ, ಕೆಸರು ಸೇರಿಕೊಳ್ಳುವುದಿಲ್ಲ. ಆದರೂ ಚಿಕ್ಕಪುಟ್ಟ ಕಸ-ಕಣಗಳಿರಬಹುದು.  ಪೈಪಿನ ಹೊರಭಾಗಕ್ಕೆ ಹೊದೆಸಿದ ಪಾಲಿಪ್ರೊಪಲೀನ್ ಹೆಣೆದ ಬಟ್ಟೆ ಇವನ್ನೆಲ್ಲಾ ಸೋಸಿ ಬರೇ ನೀರನ್ನು ಒಳಸೇರಿಸುತ್ತದೆ. ಈ ಅನನ್ಯ ಮಳೆಕೊಳ ರಚನೆಗೆ ತಾಂತ್ರಿಕ ಸಲಹೆ ಕೇರಳದ ಕೊಚ್ಚಿಯ ಇನ್‌್ಸ್ಪಿರೇಶನ್ ಎಂಬ ಎಂಜಿನಿಯರಿಂಗ್ ಸಂಸ್ಥೆಯದು.

ಶೇಖರಿಸಿದ ನೀರನ್ನು ಕ್ಲೋರಿನ್‌ನಿಂದ ಶುದ್ಧೀಕರಿಸಿ, ಸೋಸಿ ನಂತರ ಬಳಸಿಕೊಳ್ಳುತ್ತಾರೆ. ‘ನೀರು ನಮಗೆ ಅತ್ಯಮೂಲ್ಯ ಸಂಪನ್ಮೂಲ. ಹಾಗಾಗಿ ಬರುವ ಗ್ರಾಹಕರಿಗೆ ಈ ಬಗ್ಗೆ ತಿಳಿಸುವ ಒಂದು ಮಾಹಿತಿ ಕಾರ್ಡ್ ಕೊಡುತ್ತೇವೆ. ಹೆಚ್ಚಿನವರೂ ನಮ್ಮ ಮಳೆಕೊಳ ಕಂಡು ‘ಇದೇನಿದು’ ಎಂದು ಪ್ರಶ್ನಿಸುತ್ತಾರೆ. ಒಟ್ಟಿನಲ್ಲಿ ಇಲ್ಲಿನ ಅಂತೇ­ವಾಸಿಗಳಾಗುವವರಿಗೆಲ್ಲಾ ನಾವಿಲ್ಲಿ ಆಗಸದ ನೀರನ್ನು ಕಷ್ಟಪಟ್ಟು ಕೂಡಿಟ್ಟು ಬಳಸುತ್ತೇವೆ ಎನ್ನುವ ಸಂದೇಶ ಸಿಗುತ್ತದೆ’ ಎನ್ನುತ್ತಾರೆ ರೆಸಾರ್ಟಿನ ಎಂಜಿನಿಯರಿಂಗ್ ಮುಖ್ಯಸ್ಥ ಜೋಸೆಫ್ ಥಾಮಸ್.

ಈವರೆಗೆ ಇವರಿಗೆ ನೀರಿನ ಸಮಸ್ಯೆಯೇ ಉದ್ಭವಿಸಿಲ್ಲ. ಕಳೆದ ವರ್ಷ ಮಾತ್ರ ಇದಕ್ಕೆ ಅಪವಾದ. ಇಲ್ಲಿನ ಸರಾಸರಿ ಮಳೆ 2,500 ಮಿ.ಮೀ. ಅದಕ್ಕೂ ಹಿಂದಿನ ವರ್ಷ ಬಂದಿದ್ದು ಕೇವಲ 1,600 ಮಿ.ಮೀ.  ಅಂತೆ. ಹೀಗಾಗಿ ಕೊನೆಯ ಒಂದು ತಿಂಗಳು ಕೊರತೆ ಆಯಿತು. ಹೊರಗಿನಿಂದ ನೀರು ಖರೀದಿಸಬೇಕಾಯಿತು. ತನಗೆ ಅಗತ್ಯವಿರುವ ಪೂರ್ತಿ ನೀರನ್ನೂ ಮಳೆಯಿಂದಲೇ ಪೂರೈಸಿ­ಕೊಳ್ಳುವ ಸ್ವಸ್ವರದ ಯತ್ನ ಮೆಚ್ಚಬೇಕಾದದ್ದು. ಇದಕ್ಕಾಗಿ ಗಣನೀಯ ಆರಂಭಿಕ ವೆಚ್ಚ ಆಗಿರಬಹುದು.

ಆದರೆ, ಬೇರೆಲ್ಲೂ ಸಿಗದ ‘ನೀರನೆಮ್ಮದಿ’ ಈ ಏರುವೆಚ್ಚವನ್ನು ತುಂಬಿಕೊಟ್ಟಿದೆ.ನೀರ ಕೊರತೆ ಇರುವ ಕಡೆ    ನೀರಿಗಾಗಿ ಪೂರ್ತಿ ಬೋರ್ ವೆಲ್ ಅವಲಂಬಿಸಿಕೊಂಡಿರುವ ಅದೇ ಕಾರಣಕ್ಕಾಗಿ ಆತಂಕ ತುಂಬಿಕೊಂಡಿರುವ ಸಂಸ್ಥೆಗಳು ನಮ್ಮಲ್ಲಿ ಕಡಿಮೆ ಅಲ್ಲ. ಇದೇ ಥರದ ಗಟ್ಟಿ ಜಂಬಿಟ್ಟಿಗೆ ಮಣ್ಣಿನಲ್ಲಿ ಮಂಗಳೂರು, ಮಣಿಪಾಲ, ಭಟ್ಕಳ, ಮೊದಲಾದೆಡೆ ಇಂಥವು ಹಲವಿವೆ. ಅಲ್ಲೂ ಸ್ವಸ್ವರದ ಮಾದರಿ ಅನುಸರಿಸಿ ನೀರಿನ ಬಗ್ಗೆ ಆಂಶಿಕ ಅಥವಾ ಪೂರ್ಣ ಸ್ವಾವಲಂಬನೆ ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.