ADVERTISEMENT

ಕೃಷಿಕರ ಬದುಕು ಭದ್ರಗೊಳಿಸಿದ ‘ಒಡ್ಡು’

ಸಂಧ್ಯಾ ಹೆಗಡೆ
Published 25 ಏಪ್ರಿಲ್ 2017, 5:07 IST
Last Updated 25 ಏಪ್ರಿಲ್ 2017, 5:07 IST
ಶಿರಸಿ ತಾಲ್ಲೂಕಿನ ವಾನಳ್ಳಿಯಲ್ಲಿ ಹೊಳೆಗೆ ಸಣ್ಣ ಬಾಂದಾರ ನಿರ್ಮಿಸಿ ನೀರು ಶೇಖರಣೆ ಮಾಡಿರುವುದು
ಶಿರಸಿ ತಾಲ್ಲೂಕಿನ ವಾನಳ್ಳಿಯಲ್ಲಿ ಹೊಳೆಗೆ ಸಣ್ಣ ಬಾಂದಾರ ನಿರ್ಮಿಸಿ ನೀರು ಶೇಖರಣೆ ಮಾಡಿರುವುದು   

ಶಿರಸಿ: ತೋಟದ ಅಂಚಿನಲ್ಲಿ ಹರಿಯುವ ಹೊಳೆಗೆ ಅಲ್ಲಲ್ಲಿ ತಡೆಯೊಡ್ಡಿರುವ ಪುಟ್ಟ ಒಡ್ಡುಗಳು ಬರದ ಸೋಂಕಿಲ್ಲದೇ ಗ್ರಾಮಸ್ಥರಿಗೆ ನೀರ ನೆಮ್ಮದಿ ಒದಗಿಸಿವೆ. ತಾಲ್ಲೂಕಿನ ವಾನಳ್ಳಿಯ ಈ ಪಾರಂಪರಿಕ ವ್ಯವಸ್ಥೆ ಜಲ ಸಂರಕ್ಷಣೆಯ ಪಾಠಶಾಲೆಯಂತಿದೆ. ನೂರಾರು ಮನೆಗಳಿರುವ ಈ ಹಳ್ಳಿಗೆ ಬಂದರೆ, ಬರದ ಬವಣೆ ಮರೆಯಾಗಿ ದಶಕದ ಹಿಂದಿನ ಸೊಂಪಾದ ಮಲೆನಾಡಿನ ಚಿತ್ರಣ ಅನಾವರಣಗೊಳ್ಳುತ್ತದೆ. ಏಪ್ರಿಲ್‌ನಲ್ಲೂ ಹಸಿರು ಹಾಸಿದಂತೆ ಕಾಣುವ ಬಯಲು, ಬೆಟ್ಟ, ತೋಟಗಳು, ಗುಂಡಿಯ ನೀರಿನಲ್ಲಿ ಪ್ರತಿಫಲಿಸುವ ಮರಗಳು ಊರಿನ ಜಲ ಸಮೃದ್ಧಿಯನ್ನು ಸಾರುತ್ತವೆ. ಜೀವನ ನಿರ್ವಹಣೆ ಹಾಗೂ ಕೃಷಿ ಉದ್ದೇಶಕ್ಕಾಗಿ ಹಳ್ಳಕ್ಕೆ ನಿರ್ಮಿಸಿರುವ ಒಡ್ಡುಗಳು ಈ ಯಶೋಗಾಥೆಗೆ ಕಾರಣವಾಗಿವೆ.

ಬಿಳೆಪಾಲ ಗ್ರಾಮದಲ್ಲಿ ಹುಟ್ಟುವ ಶೇಡಿಹೊಳೆಯು ವಾನಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸುಮಾರು 5 ಕಿ.ಮೀ ಹರಿದು ಪಟ್ಟಣದ ಹೊಳೆಯನ್ನು ಸೇರುತ್ತದೆ. ಈ ಶೇಡಿಹೊಳೆಗೆ ಬಿಳೆಪಾಲ, ಜುಮ್ಮನಕಾನು, ಮೆಣಸಿಮನೆ, ಯಡಳ್ಳಿ, ಕಗ್ಗುಂಡಿ ಬಳಿ ಸುಮಾರು ಒಂದು ಕಿ.ಮೀ.ಗೆ ಒಂದು ಸಣ್ಣ ಬಾಂದಾರವಿದೆ. ಹಿಂದೆ ಊರವರೇ ಇಲ್ಲಿ ನಿರ್ಮಿಸುತ್ತಿದ್ದ ಕಲ್ಲಿನ ಒಡ್ಡು ಇತ್ತೀಚಿನ ವರ್ಷಗಳಲ್ಲಿ ಕಾಂಕ್ರೀಟ್ ಬಾಂದಾರವಾಗಿ ಪರಿವರ್ತನೆಗೊಂಡಿದೆ. ಇಲ್ಲಿ ಸಂಗ್ರಹವಾಗುವ ನೀರು ರೈತರ ಕೃಷಿ ಜಮೀನಿಗೆ ಬಳಕೆಯಾಗುವ ಜೊತೆಗೆ ಬಾವಿಯಲ್ಲಿನ ಅಂತರ್ಜಲ ಹೆಚ್ಚಳಕ್ಕೂ ಕಾರಣವಾಗಿದೆ ಎಂಬುದು ಇಲ್ಲಿನ ಕೃಷಿಕರ ಅನುಭವ.

‘ಹಳ್ಳಕ್ಕೆ ಸಣ್ಣ ಒಡ್ಡು ಕಟ್ಟಿ ನೀರು ನಿಲ್ಲಿಸುವ ವ್ಯವಸ್ಥೆ ಸಾಂಪ್ರದಾಯಿಕವಾಗಿ ಬೆಳೆದು ಬಂದಿದೆ. ಕಾಂಕ್ರೀಟ್ ಬಾಂದಾರ ನಿರ್ಮಿಸಿದ ಮೇಲೆ ಪ್ರತಿ ವರ್ಷ ಒಡ್ಡು ಕಟ್ಟುವ ಕೆಲಸ ಕಮ್ಮಿಯಾಗಿದೆ. ಜೋರು ಮಳೆಗೆ ಬಾಂದಾರದ ಕಂಬಗಳು ಮುರಿದು ಬಿದ್ದರೆ ಮಳೆಗಾಲದ ನಂತರ ಮರದ ದಿಮ್ಮಿ, ಕಲ್ಲುಗಳನ್ನು ಬಳಸಿ ದುರಸ್ತಿಗೊಳಿಸಿಕೊಂಡು ಬೇಸಿಗೆಗೆ ನೀರನ್ನು ಹಿಡಿದಿಟ್ಟುಕೊಳ್ಳುತ್ತೇವೆ’ ಎನ್ನುತ್ತಾರೆ ಸ್ಥಳೀಯ ಗಣಪತಿ ಹೆಗಡೆ.

ADVERTISEMENT

‘ಬಾಂದಾರದಲ್ಲಿ ಸಂಗ್ರಹವಾಗುವ ನೀರಿಗೆ ಪಂಪ್‌ಸೆಟ್ ಅಳವಡಿಸಿಕೊಂಡು ರೈತರು ಕೃಷಿ ಮಾಡುತ್ತಾರೆ.  ಹೊಳೆಯಿಂದ ತೋಟಪಟ್ಟಿಗಳಿಗೆ ಹಾಯಿಸಿದ ನೀರು ಪುನಃ ಹೊಳೆಗೇ ಹೋಗಿ ಸೇರುತ್ತದೆ. ಈ ಪದ್ಧತಿಯಿಂದ ನೀರಿನ ಮಿತವ್ಯಯದ ಜೊತೆಗೆ ಮರುಪೂರಣವೂ ಆದಂತಾಗುತ್ತದೆ’ ಎಂದು ಅವರು ವಿವರಿಸುತ್ತಾರೆ.

‘ಕೊರ್ಕೊಡ, ಬಿಳೆಪಾಲ, ಜುಮ್ಮನಕಾನು, ಮೆಣಸಿಮನೆ, ಕೊಪ್ಪ, ಕಲಗದ್ದೆ, ಕಗ್ಗುಂಡಿ ಭಾಗಗಳ ಬಹುತೇಕ ಕೃಷಿಕರ ಜಮೀನಿಗೆ ಹೊಳೆಯ ನೀರು ವರದಾನವಾಗಿದೆ. ಇದೇ ನೀರನ್ನು ಕುಡಿಯಲು, ನಿತ್ಯದ ಅಗತ್ಯಗಳಿಗೆ ಬಳಸುತ್ತೇವೆ. ಅಡಿಕೆ, ತೆಂಗು, ಕಾಳುಮೆಣಸು, ಬಾಳೆ ಬೆಳೆಯಲು ಬಾಂದಾರದ ಜಲ ಸಹಕಾರಿಯಾಗಿದೆ’ ಎಂದು ಸುಬ್ರಾಯ ಹೆಗಡೆ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.