ADVERTISEMENT

ಶುದ್ಧ ನೀರಿದ್ದರೂ ನಗರೇಶ್ವರ ಬಾವಿ ನಿರುಪಯುಕ್ತ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2017, 6:39 IST
Last Updated 26 ಏಪ್ರಿಲ್ 2017, 6:39 IST
ಗುರುಮಠಕಲ್ ಪಟ್ಟಣದ ನಗರೇಶ್ವರ ಬಾವಿಯಲ್ಲಿ ಪಾಚಿಗಟ್ಟಿದ ನೀರು(ಎಡಚಿತ್ರ). ಬಾವಿ ಸ್ವಚ್ಛತೆ ಮಾಡುತ್ತಿರುವ ದೃಶ್ಯ
ಗುರುಮಠಕಲ್ ಪಟ್ಟಣದ ನಗರೇಶ್ವರ ಬಾವಿಯಲ್ಲಿ ಪಾಚಿಗಟ್ಟಿದ ನೀರು(ಎಡಚಿತ್ರ). ಬಾವಿ ಸ್ವಚ್ಛತೆ ಮಾಡುತ್ತಿರುವ ದೃಶ್ಯ   

ಗುರುಮಠಕಲ್: ಪಟ್ಟಣದ ಪ್ರಮುಖ ಜಲಮೂಲಗಳೆಲ್ಲಾ ಬತ್ತುತ್ತಿವೆ. ಕೆರೆ–ಹಳ್ಳದಲ್ಲಿ ನೀರಿಲ್ಲದೇ ನಾಲ್ಕೈದು ವರ್ಷಗಳಿಂದ ನೀರಿನ ಪೂರೈಕೆಗಾಗಿ ಬಹುತೇಕ ಭೀಮಾ ಯೋಜನೆಯನ್ನು ಅವಲಂಬಿಸಿದೆ.ಪಟ್ಟಣದ ನೀರಿನ ದಾಹ ತೀರಿಸಲು ಸರ್ಕಾರ 45 ಕಿಲೊಮೀಟರ್‌ ದೂರದಿಂದ ಪಟ್ಟಣಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ, ಪಟ್ಟಣದ ಪ್ರಮುಖ ರಸ್ತೆಯಲ್ಲಿಯೇ ಇರುವ ಐತಿಹಾಸಿಕ ಮತ್ತು ಪರಿಶುದ್ಧ ನೀರು ಹೊಂದಿದ ನಗರೇಶ್ವರ ಬಾವಿಗೆ ಮಾತ್ರ ನಿರ್ವಹಣೆಯ ಭಾಗ್ಯ ಸಿಕ್ಕಿಲ್ಲ.

500 ವರ್ಷಗಳಷ್ಟು ಹಳೆಯದಾದ ನಗರೇಶ್ವರ ಬಾವಿ ತೀವ್ರ ಬರಗಾಲ­ದಲ್ಲಿಯೂ ಬತ್ತದೆ ಜನರಿಗೆ ನೀರುಣಿಸಿದ ಅಗ್ಗಳಿಕೆ ಹೊಂದಿದೆ. ಆದರೆ, ಸ್ಥಳೀಯ ಆಡಳಿತ ಹಾಗೂ ಪ್ರತಿನಿಧಿಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಬಾವಿ ಪರಿಶುದ್ಧ ನೀರು ಹೊಂದಿದ್ದರೂ ಜನರಿಗೆ ಸಿಗದೆ ನಿರುಪಯುಕ್ತವಾಗಿದೆ.ಕಳೆದ ಬೇಸಿಗೆಯಲ್ಲಿ ನೀರಿನ ಸಮಸ್ಯೆಗೆ ಕಂಗೆಟ್ಟ ಜನರು ತಾವೇ ಬಾವಿಯ ಜೀರ್ಣೋದ್ಧಾರ ಮಾಡುವ ಸಂಕಲ್ಪ ಮಾಡಿದ್ದರು. ಅದರ ಪರಿಣಾಮ ಸೆಪ್ಟೆಂಬರ್ ತಿಂಗಳಲ್ಲಿ 18 ದಿನಗಳ ಕಾಲ ಸಮರೋಪಾದಿಯಲ್ಲಿ ಹೂಳೆತ್ತಿ ಸ್ವಚ್ಛಗೊಳಿದ್ದರು. ಬಾವಿ ಸ್ವಚ್ಛಗೊಳಿಸಲು ₹4.5 ಲಕ್ಷ ಹಣವನ್ನು ಖರ್ಚು ಮಾಡಲಾಯಿತು.

ಬಾವಿಯನ್ನು ಸ್ವಚ್ಛಗೊಳಿಸಿದ ನಂತರವಾದರೂ ಸ್ಥಳೀಯ ಆಡಳಿತ ಬಾವಿಯ ನಿರ್ವಹಣೆಯನ್ನು ಮಾಡಿ ಪಟ್ಟಣದ ಜನರಿಗೆ ನೀರುಣಿಸುತ್ತದೆ ಎನ್ನುವ ಆಸೆ ನಾಗರಿಕರದಾಗಿತ್ತು. ಆದರೆ, ಈ ಬೇಸಿಗೆಯಲ್ಲಿ ಬಾವಿಯತ್ತ ಪುರಸಭೆ ಮುಖ ಮಾಡದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ‘ಬಾವಿಯನ್ನು ಸ್ವಚ್ಛ ಮಾಡಿದ ನಂತರ ಜನರಿಗೆ ಉಪಯೋಗವಾಗುತ್ತದೆ ಎಂದು ತಿಳಿದಿದ್ದೆವು. ಆದರೆ, ನಿರ್ಹಹಣೆ ಆಗದೇ ಇರುವುದು ಬೇಸರ ತರಿಸಿದೆ.

ADVERTISEMENT

ಯಾದಗಿರಿಯಿಂದ ಇಲ್ಲಿಗೆ ನೀರು ತರಲು ಖರ್ಚು ಮಾಡುವ ಹಣದಲ್ಲಿ ಸ್ವಲ್ಪ ಮಟ್ಟಿಗೆ ಬಾವಿಯ ನಿರ್ವಹಣೆಗೆ ಖರ್ಚು ಮಾಡಿದರೆ ಪಟ್ಟಣದಲ್ಲಿ ಉಂಟಾಗಿರುವ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದು’ ಎಂದು ನಾಗರಾಜ, ಮಹೇಶ, ವಿಜಯ್ ಹೇಳುತ್ತಾರೆ.ಬಾವಿಗೆ ನೀರು ಶುದ್ಧೀಕರಣ ಘಟಕ ಅಳವಡಿಸಿದರೆ ಅಥವಾ ಬಾವಿಯಿಂದ ನೀರೆತ್ತಲು ಮೋಟರ್ ಅಳವಡಿಸಿ ಪೂರೈಕೆ ಮಾಡಿದರೆ ಪಟ್ಟಣದ ಜನರಿಗೆ ನೀರು ಕೊಟ್ಟಂತಾಗುತ್ತದೆ. ಅಂತಹ ಯಾವೊಂದೂ ಪ್ರಯತ್ನಗಳೂ ನಡೆಯುತ್ತಿಲ್ಲ. ಹಾಗಾಗಿ, ಬಾವಿಯ ಜೀರ್ಣೋದ್ಧಾರವಾದರೂ ಜನರ ಉಪಯೋಗಕ್ಕೆ ಸಿಗದಂತಾಗಿದೆ ಎನ್ನುವುದು ಸ್ಥಳೀಯರ ಬೇಸರ.

‘ಬಾವಿಯಲ್ಲಿನ ಜಲ ಮೂಲವನ್ನು ಬಳಕೆ ಮಾಡಿಕೊಳ್ಳುವ ಕುರಿತು ಈಗಾಗಲೇ ಜಲತಜ್ಞರನ್ನು ಸಂಪರ್ಕಿಸಿ ದ್ದೇವೆ. ನೀರು ಶುದ್ಧೀಕರಣ ಘಟಕ ಸ್ಥಾಪನೆಗಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ಪುರಸಭೆಯ ಮುಖ್ಯಾಧಿಕಾರಿ ರವೀಂದ್ರ ವೈ.ಲಂಬು ಹೇಳುತ್ತಾರೆ.ಹೋದ ಬೇಸಿಗೆಯಲ್ಲಿಯೂ ಅಂದಿನ ಪುರಸಭೆಯ ಅಧಿಕಾರಿಗಳೂ ಇದೇ ರೀತಿಯ ಭರವಸೆ ನೀಡಿದ್ದರು. ಆದರೆ, ಭರವಸೆ ಇದುವರೆಗೂ ಈಡೇರಿಲ್ಲ. ನೀರಿನ ಸಮಸ್ಯೆಯೂ ಹಾಗೆಯೇ ಉಳಿದುಕೊಂಡಿದೆ ಎನ್ನುತ್ತಾರೆ ಪಟ್ಟಣ ನಿವಾಸಿಗಳು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.