ADVERTISEMENT

ಅಂತರ್ಜಲ ಹೆಚ್ಚಿಸಲು ರೈತರಿಂದ ದಿಟ್ಟ ಹೆಜ್ಜೆ

ಒತ್ತುವರಿ ಪ್ರದೇಶ ತೆರವು, ಹೂಳೆತ್ತುವ ಕಾರ್ಯಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2017, 19:30 IST
Last Updated 27 ಏಪ್ರಿಲ್ 2017, 19:30 IST
ಕೆರೆಗೆ ಕಾಯಕಲ್ಪ ನೀಡುತ್ತಿರುವ ಹಿರೇಬಾಸೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು
ಕೆರೆಗೆ ಕಾಯಕಲ್ಪ ನೀಡುತ್ತಿರುವ ಹಿರೇಬಾಸೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು   

ಸಾಸ್ವೆಹಳ್ಳಿ (ಹೊನ್ನಾಳಿ ತಾ.): ಸಮೀಪದ ಹೀರೇಬಾಸೂರಿನ ಕೆರೆಗೆ ಕಾಯಕಲ್ಪ ನೀಡಲು ರೈತರು ಮುಂದಾಗಿದ್ದಾರೆ. ಕೆರೆ ಅಳತೆ ಮಾಡಿಸಿ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಬೀರಗೊಂಡನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೀರೆಬಾಸೂರು ಗ್ರಾಮದ ಆಂಜನೇಯ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ನೆರವಿನಿಂದ 15–20 ರೈತರು ಹತ್ತು ದಿನಗಳಿಂದ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ.

6–7 ಹಿಟಾಚಿ ಬಳಸಿ ಪ್ರತಿದಿನ 2,000ಕ್ಕೂ ಹೆಚ್ಚು ಟ್ರ್ಯಾಕ್ಟರ್‌ ಲೋಡ್‌ ಹೂಳು ತೆಗೆಯಲಾಗುತ್ತಿದೆ. ಹೊಟ್ಯಾಪುರ, ರಾಂಪುರ, ಬೀರಗೊಂಡಹಳ್ಳಿ, ಸದಾಶಿವಪುರ, ಬುಳ್ಳಾಪುರ ಗ್ರಾಮಗಳ ಜಮೀನುಗಳಿಗೆ ಇದನ್ನು ಸಾಗಿಸಲಾಗುತ್ತಿದೆ.

ADVERTISEMENT

‘ಹಿರೇಬಾಸೂರು ಹಾಗೂ ಸುತ್ತಮುತ್ತಲ ಹೊಟ್ಯಾಪುರ, ರಾಂಪುರ, ಚಿಕ್ಕಬಾಸೂರು ಗ್ರಾಮಗಳಲ್ಲಿ ಹಿಂದೆ 80–90 ಅಡಿಗೆ ನೀರು ಸಿಗುತ್ತಿತ್ತು. ಈ ಕೆರೆ ಒಣಗಿಹೋದ ನಂತರ 300 ಅಡಿಗಿಂತ ಹೆಚ್ಚು ಆಳ ಕೊರೆದರೂ ಕೊಳವೆಬಾವಿಯಲ್ಲಿ ನೀರು ಸಿಗುತ್ತಿಲ್ಲ. ಅಂತರ್ಜಲ ವೃದ್ಧಿಯಾಗಬೇಕಾದರೆ ನಮ್ಮ ಕೆರೆಯಲ್ಲಿ ನೀರು ಸಂಗ್ರಹವಾಗುವಂತೆ ಮಾಡಬೇಕು ಎಂದು ನಿರ್ಧರಿಸಿದೆವು’ ಎನ್ನುತ್ತಾರೆ ರೈತ ಗಿರೀಶ್.

‘ಈ ಮಣ್ಣು ಜಮೀನುಗಳ ಫಲವತ್ತತೆ ಹೆಚ್ಚಿಸುತ್ತದೆ. ದಿನಕ್ಕೆ ₹ 2 ಲಕ್ಷಕ್ಕಿಂತ ಅಧಿಕ ವೆಚ್ಚವಾಗುತ್ತಿದ್ದು, ಗ್ರಾಮಸ್ಥರು ಹಾಗೂ ರೈತರು ಜತೆಗೂಡಿ ಹಣ ಭರಿಸುತ್ತಿದ್ದಾರೆ’ ಎಂದು ಗ್ರಾಮದ ನಿವಾಸಿ ಗಣೇಶ್ ತಿಳಿಸಿದರು.

‘ಗ್ರಾಮದ ಸರ್ವೆ ನಂ.53ರಲ್ಲಿನ 6.4 ಎಕರೆ ವಿಸ್ತೀರ್ಣದ ಈ ಕೆರೆಯನ್ನು ಬಹುತೇಕ ಒತ್ತುವರಿ ಮಾಡಲಾಗಿತ್ತು. ನಾವು ತಾಲ್ಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರಿಂದ ಕಂದಾಯ ಇಲಾಖೆಯವರು ಎರಡು ವಾರಗಳ ಹಿಂದೆ ಬಂದು ಅಳತೆ ಮಾಡಿ ಒತ್ತುವರಿ ಪ್ರದೇಶವನ್ನು ತೆರವುಗೊಳಿಸಿ, ಹದ್ದುಬಸ್ತು ಮಾಡಿ ಟ್ರಂಚ್ ಹೊಡೆಸಿದರು. ಇದರಿಂದ ಕೆರೆಯ ಮೂಲ ಪ್ರದೇಶದ ಅಳತೆ ಸಿಕ್ಕಿದೆ. ಕೆರೆಯ ಹೂಳೆತ್ತಿ ಅಂತರ್ಜಲ ಹೆಚ್ಚಿಸಲು ನಾವೇ ನಿರ್ಧರಿಸಿದೆವು’ ಎಂದು ಆಂಜನೇಯ ಜೀರ್ಣೋದ್ಧಾರ ಸಮಿತಿಯ ಮುಖಂಡ ಎಚ್.ಕೆ. ಹಾಲಪ್ಪ ಮಾಹಿತಿ ನೀಡಿದರು.

‘ಈ ಬಾರಿ ಬೇಸಿಗೆ ಬೆಳೆ ನಾಟಿಯೂ ಆಗಿಲ್ಲ. ಅರೆ ಬೆಳೆಗೆ ಭದ್ರಾ ನಾಲೆಯಲ್ಲಿ ಹರಿಸಿದ ನೀರು ಕೂಡ ಈ ಭಾಗದ ರೈತರ ಜಮೀನುಗಳಿಗೆ ತಲುಪಿಲ್ಲ. ಕೆರೆಯ ಹೂಳು ತೆಗೆಸಿದ ಮೇಲೆ ನೀರು ಸಂಗ್ರಹವಾದರೆ ಸುತ್ತಮುತ್ತಲಿನ ರೈತರ ಬತ್ತಿದ ಕೊಳವೆಬಾವಿಗಳ ಅಂತರ್ಜಲ ಸಮೃದ್ಧವಾಗುತ್ತದೆ. ಹೂಳೆತ್ತಿದ ನಂತರ ಶಾಸಕರ ಬಳಿ ಹೋಗುತ್ತೇವೆ. ಕೆರೆಯ ಏರಿ ಎತ್ತರಿಸಿ, ರಸ್ತೆ ದುರಸ್ತಿ, ತಡೆಗೋಡೆ ನಿರ್ಮಾಣ ಹಾಗೂ ಕಾಲುವೆ ಮಾಡಿಸಿಕೊಡಬೇಕೆಂದು ಮನವಿ ಮಾಡುತ್ತೇವೆ. ಕೆರೆಯಲ್ಲಿ ನೀರು ಸಂಗ್ರಹವಾದರೆ ಎರಡು ಮೂರು ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಯಾಗಲಿದೆ’ ಎನ್ನುತ್ತಾರೆ ಅವರು.
‘ಇದು ಒಂದು ಕೆರೆಯ ಸ್ಥಿತಿಯಲ್ಲ. ತಾಲ್ಲೂಕಿನ ನೂರಾರು ಕೆರೆಗಳ ಸ್ಥಿತಿ ಹೀಗೇ ಇದೆ. ಕಳೆದ ಎರಡು ವರ್ಷಗಳಿಂದ ಮಳೆ ಇಲ್ಲದೇ ತೊಂದರೆಯಾಗಿದೆ’ ಎಂದು ಹೇಳುತ್ತಾರೆ ಸ್ಥಳೀಯರಾದ ಚಂದ್ರಪ್ಪ.

‘ಮಣ್ಣಿನ ಅಭಾವದಿಂದ ಈ ಭಾಗದ ರೈತರು ಹಲವು ವರ್ಷದಿಂದಲೂ ಹೊಲ ಗದ್ದೆಗಳಿಗೆ ಮಣ್ಣು ಗೊಬ್ಬರ ಹೊಡೆಸಿರಲಿಲ್ಲ. ಕೆರೆಯ ಮಣ್ಣು ಉಚಿತವಾಗಿ ಸಿಗುತ್ತಿರುವುದರಿಂದ ಗ್ರಾಮದ ರೈತರೆಲ್ಲರಿಗೆ ಉಪಯೋಗವಾಗಿದೆ’ ಎಂದು ರಂಗನಾಥ ಮತ್ತು ಗೋಪಾಲ್ ಹೇಳಿದರು.
- ಗಿರೀಶ್ ಎಂ. ನಾಡಿಗ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.