ADVERTISEMENT

ಜಲ ಕ್ಷಾಮಕ್ಕೆ ಮರುಪೂರಣ ಪರಿಹಾರ

ಸಂತೇಬೆನ್ನೂರು: ಅಡಿಕೆ ತೋಟಕ್ಕೆ ನೀರು ಹಾಯಿಸಲು ತೊಟ್ಟಿಗಳೇ ಆಸರೆ

​ಪ್ರಜಾವಾಣಿ ವಾರ್ತೆ
Published 1 ಮೇ 2017, 5:17 IST
Last Updated 1 ಮೇ 2017, 5:17 IST
ಜಲತಜ್ಞ ದೇವರಾಜ ರೆಡ್ಡಿ ಮಾರ್ಗದರ್ಶನದಲ್ಲಿ ಕೊಳವೆಬಾವಿಗೆ ಮರುಪೂರಣ ಮಾಡಿರುವುದು.
ಜಲತಜ್ಞ ದೇವರಾಜ ರೆಡ್ಡಿ ಮಾರ್ಗದರ್ಶನದಲ್ಲಿ ಕೊಳವೆಬಾವಿಗೆ ಮರುಪೂರಣ ಮಾಡಿರುವುದು.   

ಸಂತೇಬೆನ್ನೂರು:  ಹಿಂದೆ ಕೊಳವೆ ಬಾವಿಯಿಂದ ದೂರಕ್ಕೆ ಚಿಮ್ಮುತ್ತಿದ್ದ ನೀರಿನ ಪ್ರಮಾಣ ಈಗ ಸೊರಗಿದೆ. ಬೆರಳಿನ ಗಾತ್ರದಲ್ಲಿ ಬರುವ ನೀರನ್ನೇ ಅಡಿಕೆ ತೋಟಕ್ಕೆ ಹಾಯಿಸುವುದು ಸವಾಲಾ ಗಿದೆ. ತೊಟ್ಟಿಗಳಲ್ಲಿ ನೀರು ಸಂಗ್ರಹಿಸಿ, ಡ್ರಿಪ್‌ ಲೈನ್‌ಗೆ ಬಿಡಲಾಗು ತ್ತಿದೆ. ತೋಟ ಉಳಿಸಿಕೊಳ್ಳಲು ಹಗಲು–ರಾತ್ರಿ ಹರಸಾಹಸ ಪಡಬೇಕಾಗಿದೆ.

ಕೊಳವೆಬಾವಿ ಬರಿದಾಗಿವೆ. ತೋಟ ಉಳಿಸಿಕೊಳ್ಳಲು ಟ್ಯಾಂಕರ್‌ ಮೂಲಕ ನೀರು ತರುತ್ತಿದ್ದೇವೆ. ತೊಟ್ಟಿಗಳಲ್ಲಿ ಸಂಗ್ರಹಿಸಿ ತೋಟಕ್ಕೆ ನೀರು ಬಿಡುವುದೇ ನಿತ್ಯದ ಕಾಯಕವಾಗಿದೆ ಎಂದು ತಾಲ್ಲೂಕಿನ ಅಡಿಕೆ ಬೆಳೆಗಾರರಾದ ವಿಜಯಣ್ಣ ಹಾಗೂ ಕೇಶವಮೂರ್ತಿ ಅಳಲು ತೋಡಿಕೊಂಡರು.

ತಾಲ್ಲೂಕಿನ 20 ಸಾವಿರ ಹೆಕ್ಟೇರ್‌ನಲ್ಲಿ ಅಡಿಕೆ ಬೆಳೆದ ರೈತರ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ತಾಲ್ಲೂಕಿನಲ್ಲಿ ರೈತರು ತೋಟ ಉಳಿಸಿ
ಕೊಳ್ಳಲು ಕೋಟ್ಯಂತರ ರೂಪಾಯಿ ವ್ಯಯಿಸಿದ್ದಾರೆ.

ಸಮೀಪದಲ್ಲಿರುವ ಜಲ ಮೂಲದಿಂದ ಟ್ಯಾಂಕರ್‌ನಲ್ಲಿ ನೀರು ತರಲಾಗುತ್ತಿದೆ. ಶೇ 90ರಷ್ಟು ರೈತರು ತೋಟಗಳಲ್ಲಿ ತೊಟ್ಟಿಗಳನ್ನು ನಿರ್ಮಿಸಿಕೊಂಡಿದ್ದಾರೆ.
ಟ್ರ್ಯಾಕ್ಟರ್‌ ಟ್ಯಾಂಕರ್‌ ನೀರಿಗೆ ₹ 800, ಸಾಮಾನ್ಯ ಲಾರಿ ಟ್ಯಾಂಕರ್‌ಗೆ ನೀರಿಗೆ ₹ 2,000 ಹಾಗೂ 10 ಚಕ್ರಗಳ ಲಾರಿ ಟ್ಯಾಂಕರ್‌ ನೀರಿಗೆ ₹ 3,000 ಬಾಡಿಗೆ ಪಡೆಯಲಾಗುತ್ತಿದೆ. ದಿನಕ್ಕೆ ₹ 10 ಸಾವಿರ ಖರ್ಚಾಗುತ್ತಿದೆ ಎನ್ನುತ್ತಾರೆ ಕೆಜಿಡಿ ಪ್ರಸನ್ನ.

‘ತೊಟ್ಟಿಗಳಲ್ಲಿ ನೀರು ಸಂಗ್ರಹಿಸಿ ಕೊಳ್ಳುತ್ತೇವೆ. ಬಳಿಕ ಹನಿ ನೀರಾವರಿ ವ್ಯವಸ್ಥೆ ಮೂಲಕ ತೋಟಕ್ಕೆ ನೀರುಣಿಸುತ್ತಿದ್ದೇವೆ. ಇದರಿಂದಾಗಿ ಅಡಿಕೆ ಮರಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಒಳ್ಳೆಯ ಮಳೆಯಾಗುವ ವರೆಗೂ ಇದೇ ಸ್ಥಿತಿ ಮುಂದುವರಿಯ ಲಿದೆ’ ಎನ್ನುತ್ತಾರೆ ರೈತ ರಾಜಪ್ಪ.

ಹನಿ ನೀರನ್ನೂ ಇಂಗಿಸಿ:‘ಬೇಸಿಗೆಯಲ್ಲಿ ಹನಿ ನೀರಿಗೂ ಪರದಾಡು ವಂತಾಗುತ್ತಿದೆ. ಹೀಗಾಗಿ ನಿಮ್ಮ ಜಮೀನಿನಲ್ಲಿ ಬಿದ್ದ ಪ್ರತಿ ಮಳೆಯ ಪ್ರತಿ ಹನಿಯನ್ನೂ ಇಂಗಿಸಿ. ಮಳೆ ನೀರು ಹೊರ ಹೋಗದಂತೆ ಬದುಗಳನ್ನು ನಿರ್ಮಿಸಿಕೊಳ್ಳಿ. ಮೇಲ್ಜಲವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಯತ್ನಿಸಿ’ ಎಂದು ಚಿತ್ರದುರ್ಗದ ಜಲತಜ್ಞ ಎನ್‌.ಜೆ. ದೇವರಾಜ ರೆಡ್ಡಿ ಸಲಹೆ ನೀಡುತ್ತಾರೆ.

ತೊಟ್ಟಿ ನಿರ್ಮಿಸಿ: ‘ಜಮೀನಿನಲ್ಲಿ ಬಿದ್ದ ಮಳೆ ನೀರು ಸಂಗ್ರಹಿಸಬೇಕು. ಅದಕ್ಕಾಗಿ 40ರಿಂದ 100 ಗಿಡಗಳನ್ನು ಕಡಿದರೂ ಸರಿ. ಸಂಗ್ರಹಿಸಿದ ನೀರು ಮರುಪೂರಣಕ್ಕೆ ಅನುಕೂಲವಾಗಲಿದೆ. ಆಪತ್ಕಾಲದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವುದಕ್ಕಿಂತ ಅಲ್ಪ ಹಣದಲ್ಲಿ ನೀರು ಸಂಗ್ರಹಿಸುವುದೇ ಒಳಿತು’ ಎಂದು ಹೇಳಿದ್ದಾರೆ.

ಮರುಪೂರಣ:‘ಸರ್ಕಾರದ ವಿವಿಧ ಯೋಜನೆಗಳನ್ನು ಸದುಪಯೋಗಪಡಿಸಿ ಕೊಳ್ಳಬೇಕು. ನೀರಿಲ್ಲದ ಕೊಳವೆಬಾವಿ ಗಳಿಗೆ ಮರುಪೂರಣ ವ್ಯವಸ್ಥೆ ಅಳವಡಿಸಿಕೊಳ್ಳುವ ಮೂಲಕ ಜಲ ಕ್ಷಾಮಕ್ಕೆ ಪರಿಹಾರ ಕಂಡುಕೊಳ್ಳಬೇಕು. ಕೃಷಿ ಹೊಂಡ ನಿರ್ಮಿಸಲು ಮುಂದಾಗಬೇಕು. ಮೇಲ್ಜಲವನ್ನೇ ಸರಿಯಾಗಿ ಬಳಸಿಕೊಳ್ಳಬೇಕು.

ಇದುವರೆಗೆ 20 ಸಾವಿರ ಕೊಳವೆಬಾವಿಗಳಿಗೆ ಮರುಪೂರಣ ಮಾಡಿ ಮರುಜೀವ ಕೊಡಲಾಗಿದೆ’ ಎಂದು ದೇವರಾಜ ರೆಡ್ಡಿ (ಮೊಬೈಲ್‌: 9448125498) ಮಾಹಿತಿ ನೀಡಿದರು.
– ಕೆ.ಎಸ್‌.ವೀರೇಶ್ ಪ್ರಸಾದ್

*
ಬರುವ ಮಳೆಗಾಲದಲ್ಲಿ ರೈತರು ಪ್ರತಿ ಹನಿ ನೀರನ್ನು ಸಂಗ್ರಹಿಸಲು ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು.
– ಎನ್‌.ಜೆ.ದೇವರಾಜ ರೆಡ್ಡಿ,
ಜಲ ತಜ್ಞ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.