ADVERTISEMENT

‘ಮಿರ್ಚಿಯ ಕೃಪೆ’ಯಿಂದ ಕೊಂಡುಕೊಂಡ ವ್ಯಾನ್!

ಬರ, ಎಂದೆಂದಿಗೂ ದೂರ - 1

​ಪ್ರಜಾವಾಣಿ ವಾರ್ತೆ
Published 2 ಮೇ 2017, 19:30 IST
Last Updated 2 ಮೇ 2017, 19:30 IST
‘ಮಿರ್ಚಿಯ ಕೃಪೆ’ಯಿಂದ ಕೊಂಡುಕೊಂಡ ವ್ಯಾನ್!
‘ಮಿರ್ಚಿಯ ಕೃಪೆ’ಯಿಂದ ಕೊಂಡುಕೊಂಡ ವ್ಯಾನ್!   
l ಶ್ರೀ ಪಡ್ರೆ
ಮಹಾರಾಷ್ಟ್ರದಲ್ಲಿ ಪಾನಿ ಫೌಂಡೇಷನ್ ಪ್ರೇರಣೆಯಿಂದ ನೆಲಜಲ ಸಂರಕ್ಷಣೆಯ ಸ್ಪರ್ಧೆ ನಡೆಯುತ್ತಿದೆ. ದೇಶದಲ್ಲೇ ಮೊದಲ ಬಾರಿ ಅರ್ಧ ಲಕ್ಷ ಮಂದಿ ತಂತಮ್ಮ ಗ್ರಾಮದ ಅಭಿವೃದ್ಧಿಗಾಗಿ ಶ್ರಮದಾನ ಮಾಡುತ್ತಿದ್ದಾರೆ.
 
ಏಪ್ರಿಲ್ 8ರಿಂದ ಮೇ 22ರ ವರೆಗೆ ಒಟ್ಟು 45 ದಿನ  ಶ್ರಮದಾನ. ‘ಹಳ್ಳಿಗರಿಗೆ ನಾವು ಚಿಕ್ಕಾಸೂ ಕೊಡುವುದಿಲ್ಲ. ಬದಲಿಗೆ ಜ್ಞಾನ ಒದಗಿಸುತ್ತೇವೆ. ಪ್ರತಿ ಗ್ರಾಮದ ಐದು ಮಂದಿಯನ್ನು ಜಲಾನಯನ ಅಭಿವೃದ್ಧಿಯಲ್ಲಿ ತರಬೇತುಗೊಳಿಸುತ್ತೇವೆ.
 
ಪಾನಿ ಫೌಂಡೇಶನಿನ ಆಪ್ ತಂತಮ್ಮ ಮೊಬೈಲುಗಳಲ್ಲಿ ಇಳಿಸಿಕೊಂಡು ನಾವು ಸಿದ್ಧಗೊಳಿಸಿದ ನೂರಕ್ಕೂ ಹೆಚ್ಚು ವಿಡಿಯೊ ನೋಡಿಯೂ ಕಲಿಯಬಹುದು. ನಮ್ಮ ಜ್ಞಾನದ ಪಾಲುಗಾರರಾದ ‘ವೋಟ್ರ್’ (WOTR , Watershed Organisation Trust) ತಾಲೂಕಿಗೊಬ್ಬ ಮಾರ್ಗದರ್ಶಿಯನ್ನು ಕೊಟ್ಟಿದೆ’-ಎಂದು ಪಾನಿ ಫೌಂಡೇಷನ್ ಟ್ರಸ್ಟಿಗಳಲ್ಲೊಬ್ಬರಾದ ಸತಾರಾದ ‘ಪಾಣ್ಯಾಚೆ ಡಾಕ್ಟರ್’ ಅವಿನಾಶ್ ಪೋಲ್ ತಿಳಿಸಿದ್ದರು.
 
ಜನರನ್ನು ನೀರ ಕೆಲಸಕ್ಕೆ ಪ್ರೇರೇಪಿಸಲು ಪಾನಿ ಫೌಂಡೇಷನ್ ರೂಪಿಸಿದ ಒಂದು ಸೂತ್ರ ಈ ಸ್ಪರ್ಧೆ. ಗೆದ್ದ ಗ್ರಾಮಕ್ಕೆ ಸ್ವಾತಂತ್ರ್ಯೋತ್ಸವದ ದಿನ ಬಹುಮಾನ ವಿತರಿಸುತ್ತಾರೆ. ಪ್ರಥಮ ಬಹುಮಾನ ₹ 50 ಲಕ್ಷ .
 
ದ್ವಿತೀಯ ಮತ್ತು ತೃತೀಯ ಅನುಕ್ರಮವಾಗಿ ₹ 30 ಮತ್ತು 20 ಲಕ್ಷ. ಜಲಕಾಯಕಕ್ಕಾಗಿ ಜನ ತಾವೇ ಕೇಳಿಕೊಂಡು ಬರುವಂತೆ ಮಾಡುವ ಉಪಾಯ ಈ ಸಂಸ್ಥೆಯದು. ಚಲಚಿತ್ರ ನಟ ಆಮಿರ್ ಖಾನ್ ಮತ್ತವರ ಪತ್ನಿ ಕಿರಣ್ ರಾವ್ ಸ್ಥಾಪಿಸಿದ ಈ ಟ್ರಸ್ಟಿಗೆ ಟಾಟಾ ಟ್ರಸ್ಟ್, ರಿಲಯನ್ಸ್ ಫೌಂಡೇಷನ್ ಮುಂತಾದ ದೇಶದ ಪ್ರಮುಖ ಉದ್ದಿಮೆದಾರರ ಆರ್ಥಿಕ ಬೆಂಬಲವಿದೆ.
 
 
ಕಳೆದ ವರ್ಷ ಈ ಸ್ಪರ್ಧೆ ಮೂರು ತಾಲೂಕುಗಳ 116 ಗ್ರಾಮಗಳ ನಡುವೆ ನಡೆದಿತ್ತು. ವೇಲು ಗ್ರಾಮ ಪ್ರಥಮ ಬಹುಮಾನ ಪಡೆದಿತ್ತು. ಕಳೆದ ಬಾರಿಯ 116 ಹಳ್ಳಿಗಳಲ್ಲಿ 1368 ಕೋಟಿ ಲೀಟರ್ ಮಳೆನೀರು ಹಿಡಿಯುವ ರಚನೆಗಳ ಸೃಷ್ಟಿಯಾಗಿದೆ.
 
ಅಂದರೆ 13,68,000 ಟ್ಯಾಂಕರ್ ತುಂಬುವಷ್ಟು ನೀರು. ಇಷ್ಟು ನೀರಿನ ಮೌಲ್ಯ ₹ 272 ಕೋಟಿ. ಇಷ್ಟು ನೀರನ್ನು ಈ ಹಳ್ಳಿಗಳು ಪ್ರತಿವರ್ಷ ಉಳಿಸಿ ತಂತಮ್ಮ ಬದುಕು, ಕೃಷಿ ಸುಧಾರಿಸಿಕೊಳ್ಳಲಿವೆ. ಶೇ 80 ಹಳ್ಳಿಗಳು ಟ್ಯಾಂಕರಿಗೆ ವಿದಾಯ ಹೇಳಿವೆ.
 
ಈ ಬಾರಿಯ ಸ್ಪರ್ಧೆ, ‘ಸತ್ಯಮೇವ ಜಯತೆ ವಾಟರ್ ಕಪ್ – 2ರಲ್ಲಿ 13 ಜಿಲ್ಲೆ, 30 ತಾಲೂಕುಗಳ 1314 ಗ್ರಾಮಗಳಲ್ಲಿ ನಡೆಯುತ್ತಿದೆ.  ಕಳೆದ ವರ್ಷ ಭೇಟಿ ಕೊಟ್ಟು ಪರಿಚಯವಿರುವ ಸತಾರಾ ಜಿಲ್ಲೆಯನ್ನೇ ನಾನು ಭೇಟಿಗಾಗಿ ಆಯ್ದಿದ್ದೆ. ಜಿಲ್ಲಾ ಸಮನ್ವಯಕಾರ ಬಾಳಾಸಾಹೇಬ್ ಶಿಂಧೆ ನನ್ನ ಬಳಿ ಬಂದು ತನ್ನ ಟ್ಯಾಕ್ಸಿ ಮಾಲಕರನ್ನು ಪರಿಚಯಿಸಿದರು.
 
‘ಮಿರ್ಚಿ ಕೆ ಕೃಪಾ ಸೆ ಖರೀದಿಸಿದ ವ್ಯಾನ್ ಸಾರ್ ಇದು’ ಎಂದು ಉದ್ಗರಿಸಿದರು. ನನಗೆ ಗೊತ್ತಾಗಲಿಲ್ಲ. ಬಾಳಾಸಾಹೇಬ್ ವಿವರಿಸಿದರು: ‘ಇವರು ಗಣೇಶ್ ಶಿಂಧೆ. ನನ್ನದೇ ಊರು ಝಕನ್ ಗಾಂವಿನವರು. ನಾವು ನೀರಿನ ಕೆಲಸ ಮಾಡಿ ನೀರು ಹೆಚ್ಚಿಸಿಕೊಂಡಿದ್ದೇವೆ. ಕಳೆದ ವರ್ಷದ ಹಸಿಮೆಣಸಿನ ಲಾಭವೇ ಗಣೇಶರಿಗೆ ವ್ಯಾನ್ ಕೊಳ್ಳುವ ಧೈರ್ಯ ಕೊಟ್ಟದ್ದು’ ಎಂದರು.
 
ಡಾ. ಅವಿನಾಶ್ ಮಾರ್ಗದರ್ಶನದಲ್ಲಿ ಝಕನ್ ಗಾಂವಿನಲ್ಲಿ  ನಾಲ್ಕೈದು ವರ್ಷಗಳಿಂದ ಜಲಾನಯನ ಅಭಿವೃದ್ಧಿ ನಡೆಯುತ್ತಿದೆ. ಮೊತ್ತಮೊದಲು ಮಾಡಿದ ಕೆಲಸ ಊರಿನ ಹಳ್ಳದ ಹೂಳೆತ್ತಿ ಅಲ್ಲಲ್ಲಿ ಕಲ್ಲಿನ ಕಟ್ಟ ಕಟ್ಟಿದ್ದು. ಸರಕಾರ ಬಾಂದಾರ ಕಟ್ಟುವ ಖರ್ಚಿನ ಸಣ್ಣ ಪಾಲಿನಲ್ಲಿ ಇವರ ಜನ ಸಹಭಾಗಿತ್ವದ ಕಟ್ಟ ಆಗುತ್ತದೆ. ಇದೀಗ ‘ಝಕನ್ ಗಾಂವ್ ಮಾದರಿ’ ಎಂದೇ ಪ್ರಸಿದ್ಧವಾಗಿದೆ. 
 
‘ಐದಾರು ವರ್ಷದಿಂದ ಊರಿನಲ್ಲಿ ನೀರಿನ ಕೆಲಸ ಮಾಡುತ್ತಾ ಬಂದಿದ್ದೇವೆ. ಗುಡ್ಡದಲ್ಲೂ ಸಮತಳ ಕಣಿ ತೋಡಿದ್ದೇವೆ. ಹಿಂದೆ ಎರಡು ಗಂಟೆ ನೀರು ಕೊಡುತ್ತಿದ್ದ ನನ್ನ ಬಾವಿಯಲ್ಲೀಗ ಏಳೆಂಟು ಗಂಟೆ ನೀರು ಸಿಗುತ್ತಿದೆ’ ಎನ್ನುತ್ತಾರೆ ಗಣೇಶ್.
 
ಕಳೆದ ಸಾಲಿನಲ್ಲಿ ಇವರು ಬೆಳೆಸಿದ್ದು ಒಂದೆಕರೆ ಹಸಿಮೆಣಸು. ಪ್ಲಾಸ್ಟಿಕ್ ಮುಚ್ಚಿಗೆ, ಹನಿ ನೀರಾವರಿ. ನಾಲ್ಕು ಟನ್ ಬೆಳೆ ಬಂತು, ಅಚ್ಚರಿಯ  ಬೆಲೆಯೂ ಸಿಕ್ಕಿತು. ಎರಡೂವರೆ ಲಕ್ಷ ರೂಪಾಯಿ ಉಳಿಯಿತು. ವರ್ಷಗಳ ಹಿಂದೆ ಬಾಡಿಗೆ ಕಾರು ಓಡಿಸಿ ಮನದೊಳಗೇ ಇದ್ದ ಕನಸು ಬಲಿಯಿತು. ಅಪ್ಪ ಮತ್ತು ಬ್ಯಾಂಕಿನಿಂದ ಸಾಲ ಪಡೆದು ಬೊಲೆರೋ ಕೊಂಡೇಬಿಟ್ಟರು. ಮೂರು ತಿಂಗಳಿಂದ ಈ ವ್ಯಾನ್ ಪಾನಿ ಫೌಂಡೇಶನಿಗಾಗಿ ಓಡುತ್ತಿದೆ. ಬ್ಯಾಕ್ ಕಂತು ಕಟ್ಟಿದ್ದಾರೆ.
 
ವ್ಯಾನ್ ಓಡಿಸುತ್ತಿದ್ದರೆ ಕೃಷಿ ಹೇಗೆ ನಡೆಯಬೇಕು? ಹನಿ ನೀರಾವರಿ ಆದ ಕಾರಣ ಗಣೇಶ್ ರಾತ್ರಿ ಪಂಪ್ ಚಲಾಯಿಸುತ್ತಾರೆ. ಈ ವರ್ಷ ತಲಾ ಎರಡು ಎಕರೆಯಲ್ಲಿ ಕಬ್ಬು ಮತ್ತು ಶುಂಠಿ ಬೆಳೆದಿದ್ದಾರೆ. ಕೊಯ್ಲು ಆದಾಗ ಕನಿಷ್ಠ  ₹ ಮೂರು ನಾಲ್ಕು ಲಕ್ಷ ಉಳಿತಾಯದ ನಿರೀಕ್ಷೆಯಿದೆ.
 
ತನ್ನ ಯಶೋಗಾಥೆಯನ್ನು ಗಣೇಶ್ ಶಿಂಧೆ ಆರೆಂಟು ಸಭೆಗಳಲ್ಲಿ ವಿವರಿಸಿದ್ದಾರೆ. ‘ಎರಡು ವರ್ಷಗಳಲ್ಲಿ ವಾಹನದ ಸಾಲ ತೀರಿಸಿಬಿಡುತ್ತೇನೆ’ ಎನ್ನುವ ವಿಶ್ವಾಸವಿದೆ. ಇವರ ಗ್ರಾಮ ಝಕನ್ ಗಾಂವ್ ಕೂಡಾ ಈ ಬಾರಿ ಸ್ಪರ್ಧಿಸುತ್ತಿದೆ. 
ಗಣೇಶ್  – 07057369594/ 07588637077೦೭೫೮೮೬ ೩೭೦೭೭ ( ರಾತ್ರಿ8–9)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.