ADVERTISEMENT

ನೀರ ನೆಮ್ಮದಿಗೆ ಸ್ಪರ್ಧೆಯೊಳಗೊಂದು ಸ್ಪರ್ಧೆ!

​ಪ್ರಜಾವಾಣಿ ವಾರ್ತೆ
Published 4 ಮೇ 2017, 19:30 IST
Last Updated 4 ಮೇ 2017, 19:30 IST
ನೀರ ನೆಮ್ಮದಿಗೆ ಸ್ಪರ್ಧೆಯೊಳಗೊಂದು ಸ್ಪರ್ಧೆ!
ನೀರ ನೆಮ್ಮದಿಗೆ ಸ್ಪರ್ಧೆಯೊಳಗೊಂದು ಸ್ಪರ್ಧೆ!   
ಶ್ರೀ ಪಡ್ರೆ
ಸತಾರಾ ಜಿಲ್ಲೆಯ ಬಿದಾಲ್ ಗ್ರಾಮ ತುಂಬಾ ದೊಡ್ಡದು. 1228 ಕುಟುಂಬ, 6000 ಜನಸಂಖ್ಯೆ. ವಿಸ್ತೀರ್ಣ, ಜನರ ಎಣಿಕೆಗಳಲ್ಲಿ ಮಾತ್ರವಲ್ಲ, ಈ ಊರವರ ಮನಸ್ಸೂ ದೊಡ್ಡದು!
 
ಪ್ರತಿದಿನ ಮುಂಜಾವ ಶ್ರಮದಾನ ಮಾಡಲು ಊರಿನ ಅರ್ಧಕ್ಕರ್ಧ ಜನ ಓಡೋಡಿ ಬರುತ್ತಾರೆ! ‘ಈ ಬಾರಿ ಪ್ರಥಮ ಬಹುಮಾನ ನಾವೇ ಗೆಲ್ಲುತ್ತೇವೆ’ ಎನ್ನುತ್ತಾರೆ ಇವರು.  ಉಳಿದೆಲ್ಲೆಡೆ ಜನರನ್ನು ಒಗ್ಗೂಡಿಸಲು ಒಂದಷ್ಟು ಕಾಲ ಬೇಕಾಗಿದೆ. ಮುಖ್ಯವಾದ ಅಡ್ಡಿ ರಾಜಕಾರಣ. ಪಕ್ಷಗಳು. ಹೆಸರಿನ ಪ್ರಶ್ನೆ. 
ಈ  ಊರಿನಲ್ಲಿ ಇವ್ಯಾವುದೂ ಅಡ್ಡಿಯಾಗಲಿಲ್ಲ.  ಮೊದಲ  ದಿನದಿಂದಲೇ ಇವರು ಮುಂದು. ಇದು ಹೇಗೆ ಅಂತೀರಾ?
 
ದಶಕಗಳ ಹಿಂದೆ ಪಂಚಾಯತ್ ಚುನಾವಣೆಯಲ್ಲಿ ಇಲ್ಲಿ ಮಾರಾಮಾರಿ ಆಗಿ ಸಾಕಷ್ಟು ನೋವು, ಕಹಿ ಹುಟ್ಟಿಕೊಂಡಿತ್ತಂತೆ. ಇದನ್ನು  ಗಮನಿಸಿದ ಊರ ಹಿರಿಯರು ಊರ ದೇವಸ್ಥಾನದಲ್ಲಿ ಸಭೆ ಸೇರಿದರು.
 
‘ಈ ದುರಂತದ ಪುನರಾವರ್ತನೆ ಆಗಬಾರದು. ಊರಿನಲ್ಲಿ ಪಂಚಾಯತ್ ಚುನಾವಣೆಯೇ ಬೇಡ – ಒಮ್ಮತದ ಪ್ರತಿನಿಧಿ ಆರಿಸೋಣ’ ಎಂಬ ಹೊಸ ಸಂಪ್ರದಾಯ ತಂದರು. 1967ರ ಈ ಚಾರಿತ್ರಿಕ ನಿರ್ಧಾರಕ್ಕೆ ಈಗ ಐವತ್ತು ವರ್ಷ! ಅವಿರೋಧ ಆಯ್ಕೆಯ ಸತ್ಸಂಪ್ರದಾಯ ಇಂದಿಗೂ ಮುಂದುವರಿದಿದೆ.
 
ಊರಿನ ಅಭ್ಯುದಯಕ್ಕಾಗಿ ಎಲ್ಲಾ ಸ್ಪರ್ಧೆಯ ಗ್ರಾಮಗಳೂ ಚೆನ್ನಾಗಿ ಒಗ್ಗೂಡುತ್ತಿವೆ. ಆಯಾಯಾ ಹಳ್ಳಿಗಳಿಂದ ಉದ್ಯೋಗ ನಿಮಿತ್ತ ಹೊರ ನಗರದಲ್ಲಿರುವವರು, ಅಲ್ಲೇ ವಾಸಿಸುವವರೂ ಬಂದು ಶ್ರಮದಾನ ಮಾಡುವುದು, ದೇಣಿಗೆ ಕೊಡುವುದು ನಡೆದೇ ಇದೆ.
 
ಇಂಥ ಬಿದಾಲ್ ಮೂಲದ ಹೆಸರು ಬಹಿರಂಗಪಡಿಸಲಿಚ್ಛಿಸಿದ ಒಬ್ಬರು ಅಧಿಕಾರಿ ಹೇಳುತ್ತಾರೆ, ‘ನಮ್ಮಲ್ಲಿ ಜನ ಬಲ, ಹಣ ಬಲ ಇತ್ತು. ಆದರೆ ಕೊರತೆ ಏನು ಎಂದು ನೋಡಿದರೆ ಅಧ್ಯಯನ ಮತ್ತು ಪ್ರೇರಣೆಯ ಅಭಾವ”.
 
 
ಪಾನಿ ಫೌಂಡೇಶನ್ ಮೌಲ್ಯಮಾಪನಕ್ಕೆ ಬಳಸುವ ಅಂಕಪಟ್ಟಿಯನ್ನು ಮೊದಲೇ ಪ್ರಕಟಿಸಿದೆ. ಗ್ರಾಮದ ಪ್ರತಿ ವ್ಯಕ್ತಿಗೆ 6 ಘನ ಮೀಟರಿನಂತೆ, ಅಂದರೆ, 6000 ಲೀಟರ್ ತಡೆಯುವಷ್ಟು ಸಮತಳ ಕಣಿ, ಆಳ ಸಮತಳ ಕಣಿ, ಬಂದಾರ ಮೊದಲಾದ ರಚನೆ ಮಾಡಿರಬೇಕು. ತಲಾ ಒಂದು ಗಿಡ  ನೆಡಲು ಹೊಂಡ ತೋಡಿಡಬೇಕು. ಶ್ರಮದಾನಕ್ಕೆ 20 ಅಂಕ, ನೀರುಳಿಸುವ ತಂತ್ರಕ್ಕೆ 5 ಅಂಕ, ಯಂತ್ರಗಳ ಮೂಲಕ ಮಾಡಿದ ರಚನೆಗಳಿಗೆ 20 – ಇತ್ಯಾದಿ.
 
ಇನ್ನುಳಿದ ಅಂಕಗಳಲ್ಲಿ – ಸೋಕ್ ಪಿಟ್ ಗಳಿಗೆ 5, ಗಿಡ ನೆಡುವ ಗುಂಡಿಗೆ 5, ಸೂಚಿಸಿದ  ಪ್ರಮಾಣದ ರಚನೆ, ಮೇಲ್ಭಾಗದ ಭೂಮಿಯ ಆರೈಕೆಗೆ 10, ರಚನೆಗಳ ಗುಣಮಟ್ಟಕ್ಕೆ 10, ತತ್ ಸ್ಥಳ ಮಣ್ಣು ಸಂರಕ್ಷಣೆಗೆ 10, ನೀರಿನ ಮುಂಗಡಪತ್ರಕ್ಕೆ 5, ತೆರೆದ ಬಾವಿ ಮತ್ತು ಕೊಳವೆಬಾವಿ ಮರುಪೂರಣಕ್ಕೆ 5, ಹಳೆಯ ರಚನೆಗಳ ದುರಸ್ತಿ ಮತ್ತು ಅನುಶೋಧನೆಗೆ 5 – ಒಟ್ಟು ಅಂಕ ನೂರು.
 
ಯಾವುದೇ ವಿಭಾಗದಲ್ಲಿ  ಕಡಿಮೆ ಅಂಕ ಬರಬಾರದು ಎನ್ನುವುದು ಬಿದಾಲಿನ ಛಲ. ನಿರ್ಮಿಸಲಿರುವ ರಚನೆಗಳ ಗುಣಮಟ್ಟಕ್ಕೂ ಅಂಕವಿದೆ. ಹೀಗಾಗಿ ಈ ಗ್ರಾಮ ಕಳೆದ ವರ್ಷದ ಸ್ಪರ್ಧೆಯಲ್ಲಿ ಎಲ್ಲಾ ರಚನೆಗಳನ್ನೂ ಅತಿ ಅಚ್ಚುಕಟ್ಟಾಗಿ ಮಾಡಿರುವ ಸತಾರಾ ರೋಡ್ ಎಂಬ ಗ್ರಾಮಕ್ಕೆ 80 ಮಂದಿಯ ಅಧ್ಯಯನ ತಂಡ ಕಳಿಸಿ ಸಜ್ಜುಗೊಳಿಸಿದೆ. 
 
ಪ್ರತಿ ಮಾರ್ಕಿನ ವಿಚಾರದಲ್ಲೂ ಗಮನ ಹರಿಸಲು ಇಲ್ಲಿ ಸಮಿತಿಗಳಿವೆ. ಉದಾಹರಣೆಗೆ ನೀರುಳಿಸುವ ತಂತ್ರಗಳಿಗೆ 5 ಮಾರ್ಕು ಇದೆಯಲ್ಲಾ. ಈ ಬಗೆಗಿನ ಸಮಿತಿ ಇಡೀ ಗ್ರಾಮದಲ್ಲಿ ಸಮೀಕ್ಷೆ ನಡೆಸಬೇಕು. ಎಷ್ಟುಮಂದಿ ಹನಿ ನೀರಾವರಿ ಅಳವಡಿಸಿದ್ದಾರೆ, ಮುಚ್ಚಿಗೆ ಮಾಡಿದ್ದಾರೆ – ಇವುಗಳ ಫೋಟೋ ಸಮೇತ ದಾಖಲಾತಿ ಮಾಡಬೇಕು. ಇನ್ನಷ್ಟು ಜನರನ್ನು ಪ್ರೇರೇಪಿಸಿ ಈ ಕೆಲಸಕ್ಕೆ ಸಜ್ಜುಗೊಳಿಸಬೇಕು.
 
ಇಷ್ಟಾದರೂ ಸಾಲದು ಅನಿಸಿತು ಬಿದಾಲಿನ ಉತ್ಸಾಹಿಗಳಿಗೆ.  ಒಂದಷ್ಟು ಮಂದಿ ತಲೆ ಹುಣ್ಣಾಗಿಸಿ ಕೊನೆಗೂ ಹೂಡಿದ ಇನ್ನೊಂದು ಉಪಾಯ ಏನು ಗೊತ್ತೇ? ಪಾನಿ ಫೌಂಡೇಶನ್ ರಾಜ್ಯದಲ್ಲಿ ಅನುಸರಿಸಿದ ಅದೇ ದಾರಿ. ತಾನೂ ತನ್ನ ಗ್ರಾಮದಲ್ಲಿ ಸ್ಪರ್ಧೆ ಏರ್ಪಡಿಸುವುದು.
 
ಈ ಗ್ರಾಮಕ್ಕೆ ಈಗ ತನ್ನದೇ ಆದ ಪಬ್ಲಿಕ್ ಅಡ್ರೆಸ್ ಸಿಸ್ಟಂ ಇದೆ. ಒಂದು ಹಳೆ ಮಾರುತಿ ಕಾರು, ಅದಕ್ಕೆ ಕಟ್ಟಿದ ಮೈಕು. ಈ ಘೋಷಣಾ ವಾಹನ ಮತ್ತು ವಾಟ್ಸಪ್ ಮೂಲಕ ಊರೊಳಗಿನ ಸ್ಪರ್ಧೆಯ ವಿವರ ಈಗ ಜಾಹೀರು.  ₹50,000, ₹30,000 ಮತ್ತು ₹20,000 ಬಹುಮಾನಗಳೂ ಇವೆ.
 
ಸ್ಪರ್ಧೆಯೊಳಗಿನ ಸ್ಪರ್ಧೆಯ ಸುದ್ದಿ ಹೊರಬಿದ್ದು ವಾರದ ನಂತರ ಮತ್ತೊಂದು ಘೋಷಣೆ ಹೊರಬಿದ್ದಿದೆ. ‘ಉತ್ತಮ ಕೆಲಸ ಮಾಡಿದ ಬಸ್ತಿ’ ಗೆ  ಗ್ರಾಮದ ಇನ್ನೊಂದು ಬಸ್ತಿಯೇ ₹11,000 ರೂಪಾಯಿಯ ಬಹುಮಾನ ಕೊಡಲಿದೆ. ಇನ್ನೊಂದು ಗ್ರಾಮವೂ ಇದೇ ತರಹದ ಸ್ಪರ್ಧೆ ಘೋಷಿಸಿದೆಯಂತೆ. ಅಲ್ಲಿ ಪ್ರಥಮ ಬಹುಮಾನ ಫ್ರಿಜ್ಜು. ಎರಡನೆಯದು ಮಂಚ. ಮೂರನೆಯದು ಫ್ಯಾನು.
 
ಬಿದಾಲನ್ನು ಸ್ಪರ್ಧೆಯಲ್ಲಿ ಗೆಲ್ಲಿಸಹೊರಟ ಅಧಿಕಾರಿಗೀಗ ಮನಸ್ಸು ಊರಲ್ಲಿ, ದೇಹ ಮುಂಬಯಿಯಲ್ಲಿ. ‘ಕಳೆದ ಹಲವು ದಶಕದಲ್ಲಿ ನಾನು ಊರಿಗೆ ಬರುತ್ತಿದ್ದೆ, ಹೋಗುತ್ತಿದ್ದೆ, ಅಷ್ಟೆ. ಈಗ ಊರವರು ತಪಸ್ಸಿನಂತೆ ಕೆಲಸ ಮಾಡುವಾಗ ನಾನು ಹೇಗೆ ಮುಂಬಯಿಯಲ್ಲಿ ನಿದ್ರಿಸಲಿ? ವಾರಾಂತ್ಯದಲ್ಲೆಲ್ಲಾ ಇಲ್ಲೇ ಉಳಿದು ಭಾಗವಹಿಸುತ್ತೇನೆ. ನನ್ನೂರವರ ಒಗ್ಗಟ್ಟು ಅಯಸ್ಕಾಂತದಂತೆ ಸೆಳೆದಿದೆ” ಎನ್ನುತ್ತಾರೆ. 
 
‘45 ದಿನಗಳ ಗುರಿಯನ್ನು ಹದಿನೈದರಲ್ಲೇ ಮುಗಿಸಿದ್ದೇವೆ. ಮೂರು ವರ್ಷ ಬೇಕಾದ ಒಟ್ಟು ಕೆಲಸ ಇದೇ ವರ್ಷದಲ್ಲಿ ಮಾಡುತ್ತೇವೆ” ಎನ್ನುತ್ತಿದ್ದಾರೆ. ಬೀಳ್ಕೊಡುವ ಮುನ್ನ ಬಿದಾಲಿನ ಹುರುಪಿನ ತರುಣರು “ನಾವು ಗೆದ್ದ ಮೇಲೆ ಮುಂದಿನ ವರ್ಷ ನೋಡಬನ್ನಿ” ಎಂದು ಆಹ್ವಾನಿಸಿದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.