ADVERTISEMENT

ಹೀರುಕೊಳವೆಯ ಆಟ, ನೀರಿನ ಪಾಠ

ಬರ, ಎಂದೆಂದಿಗೂ ದೂರ -4

ಶ್ರೀ ಪಡ್ರೆ
Published 5 ಮೇ 2017, 19:30 IST
Last Updated 5 ಮೇ 2017, 19:30 IST
ಹೀರುಕೊಳವೆಯ ಆಟ, ನೀರಿನ ಪಾಠ
ಹೀರುಕೊಳವೆಯ ಆಟ, ನೀರಿನ ಪಾಠ   

ಮೂರು ಗುಂಪುಗಳು ಮೇಜಿನ ಅನತಿ ದೂರದಲ್ಲಿ ನಿಂತಿವೆ. ಕೆಲವರ ಕೈಯಲ್ಲಿ, ಇನ್ನು ಕೆಲವರ ಕಿಸೆಯಲ್ಲಿ ಹೀರುಕೊಳವೆ – ಸ್ಟ್ರಾ ಇದೆ. ಕೈಯಲ್ಲೊಂದು ನೀರಿನ ಖಾಲಿ ಬಾಟ್ಲಿ. ಆಟಕ್ಕೆ ಸಜ್ಜಾದ ಎಲ್ಲರೂ ಮುಂದೇನು ಎಂಬ ಕುತೂಹಲದಿಂದ ಮೌನಿಗಳು.

ಅಷ್ಟೂ ಮಂದಿಯ ದೃಷ್ಟಿ ಎದುರಿನ ಮೇಜು ಮತ್ತದರ ಮೇಲಿನ ಪ್ಲಾಸ್ಟಿಕ್ ಬೋಗುಣಿಯತ್ತ. ‘ನೀವು ಹಳೆ ತಲೆಮಾರಿನವರು, ಅಜ್ಜಂದಿರು ಎಂದುಕೊಳ್ಳಿ’ ಎನ್ನುತ್ತಾ ಸಂಪನ್ಮೂಲ ವ್ಯಕ್ತಿ ಒಂದು ತಂಡದ ಮೂರು – ನಾಕು ಜನರನ್ನು ಮೇಜಿನ ಬಳಿ ಬರುವಂತೆ ಸನ್ನೆ ಮಾಡುತ್ತಾರೆ.

ಮೂರು ತಂಡಗಳಿವೆ. ಮೂರೂ ತಂಡಗಳಿಗೆ ನಿಗದಿತ ಸಮ ಸಮಯ ಕೊಡುತ್ತಾರೆ. ಆಗ ಬಗ್ಗಿ ಸ್ಟ್ರಾ ಬಳಸಿ ಬೋಗುಣಿಯಿಂದ ನೀರು ಹೀರಬೇಕು. ಹೀರಿದ ನೀರನ್ನು ಬಾಟ್ಲಿಗೆ ತುಂಬಬೇಕು. ಇಷ್ಟೇನೇ? ಇದೇನು ಆಟವಪ್ಪಾ?

ADVERTISEMENT

‘ಅಜ್ಜಂದಿರು’ ಕೆಲಸ ಸುರು ಮಾಡಿದರು. ಬೋಗುಣಿಯ ನೀರು ಹೀರಿ ಹೀರಿ ತುಂಬತೊಡಗಿದರು. ವಿಸಿಲ್ ಆಗುವುದರೊಳಗೆ ಬಾಟ್ಲಿಯಲ್ಲಿ ತುಂಬ ನೀರು ಸಂಗ್ರಹವಾಯಿತು. ಮುಂದಿನ ಸರದಿ ಈಗಿನ ಪೀಳಿಗೆಯವರದು.

ಸಂಪನ್ಮೂಲ ವ್ಯಕ್ತಿ ಮತ್ತೆ ಬೇಸಿನಿಗೆ ನೀರು ತುಂಬುತ್ತಾರೆ. ಈ ಬಾರಿ ಹಿಂದಿಗಿಂತ ಕಮ್ಮಿ. ಈಗಿನ ಪೀಳಿಗೆಯವರೂ ತಂತಮ್ಮ ಬಾಟ್ಲಿಯಲ್ಲಿ ನೀರು ತುಂಬುತ್ತಾ ಹೋಗುತ್ತಾರೆ. ಆದರೆ ‘ಅಜ್ಜ’ ಪೀಳಿಗೆಯವರಿಗೆ ಸಿಕ್ಕಷ್ಟು ನೀರು ಇವರಿಗೆ ಸಿಕ್ಕಿರುವುದಿಲ್ಲ.

ಕೊನೆಯ ಪಾಳಿ ‘ಮೊಮ್ಮಕ್ಕಳ’ದು. ಈಗ ಬೋಗುಣಿಯಲ್ಲಿ ಅತಿ ಸ್ವಲ್ಪ ನೀರು. ಆಟ ಸುರುವಾದಾಗಲೇ ಪೈಪೋಟಿ. ಇನ್ನೊಬ್ಬರಿಂದ ತಾನು ಹೆಚ್ಚು ನೀರು ಎತ್ತಬೇಕೆಂಬ ತರಾತುರಿ. ನೀರಿನ ಬದಲು ಗಾಳಿ ಹೀರುವ ಸ್ಥಿತಿ ತಲುಪುತ್ತದೆ. ಮೊಮ್ಮಕ್ಕಳಿಗೆ ದಕ್ಕುವ ನೀರು ಅತ್ಯಲ್ಪ, ಜಗಳ ಹೆಚ್ಚು.

ಇದು ಜಲಾನಯನ ಅಭಿವೃದ್ಧಿಯ ತರಬೇತಿಯಲ್ಲೊಂದು ಬಹು ಜಾಣ ಆಟ. ಸ್ಪರ್ಧೆಗೆ ಸೇರಿದ ಗ್ರಾಮಗಳ ಪ್ರತಿನಿಧಿಗಳ ತರಬೇತಿಯಲ್ಲಿ ಇದೊಂದು ಪುಟ್ಟ ಭಾಗ. ನಮ್ಮ ಜಲಮಟ್ಟ ಹೇಗೆ ಕುಸಿಯುತ್ತಿದೆ, ಇದಕ್ಕೇನು ಕಾರಣ ಎನ್ನುವುದನ್ನು ಸಾಮಾನ್ಯರಿಗೂ ಮನಮುಟ್ಟುವಂತೆ ತಿಳಿಹೇಳುವ ಮನೋಜ್ಞ ಆಟ.

‘ಈ ಆಟ ಆಡುತ್ತಿದ್ದಂತೆಯೇ ನಮಗೆಲ್ಲರಿಗೂ ನಮ್ಮಲ್ಲಿನ ಜಲಪಾತಳಿಯ ಸ್ಥಿತಿಗತಿ ಬಹು ಸುಲಭದಲ್ಲಿ ಅರ್ಥವಾಗಿಬಿಟ್ಟಿತು’ ಎಂದು ಕುಮ್ಠೆ ಗ್ರಾಮದ ತರಬೇತಾರ್ಥಿ ಶುಭಾಂಗಿ ಫಡತರೆ ನೆನೆಯುತ್ತಾರೆ.

‘ನೀರಿನ ಪಾತಳಿ–ವಾಟರ್ ಟೇಬಲ್’ – ಎನ್ನುವುದು ನಮಗೆ ಕಣ್ಣಿಗೆ ಕಾಣುವಂಥದ್ದಲ್ಲ. ಅದನ್ನು ಸ್ಥೂಲ ಮಟ್ಟಿಗೆ ಊಹಿಸಬಹುದಷ್ಟೆ. ಇಂದಿನ ಕಂಪ್ಯೂಟರ್ – ಡಿಜಿಟಲ್ ಯುಗದಲ್ಲಿ ಇದನ್ನು ಗ್ರಾಫಿಕ್ಸ್ ಮೂಲಕ ಸುಲಭದಲ್ಲಿ ತಿಳಿಸಿಕೊಡಬಹುದು. ಕಣ್ಣಿಗೆ ಕಟ್ಟುವಂತೆ ತಿಳಿಸಿದರಷ್ಟೇ ಇಂಥ ‘ಅಪ್ರತ್ಯಕ್ಷ’ ವಿಚಾರಗಳು ಸ್ಪಷ್ಟವಾಗುತ್ತವೆ.

ಜಲಾನಯನ ಅಭಿವೃದ್ಧಿಯ ತಂತ್ರಜ್ಞಾನ ‘ರಾಕೆಟ್ ಸೈನ್ಸ್’ ಏನೂ ಅಲ್ಲ ಎಂದು ನಮಗೆಲ್ಲರಿಗೂ ಗೊತ್ತು. ಆದರೆ ನೆಲಜಲದ ಕಾಯಕ ಕೈಗೆತ್ತಿಕೊಳ್ಳುವ ಹಳ್ಳಿಯ ಶಿಕ್ಷಿತರು ಮಾತ್ರವಲ್ಲ, ಅಶಿಕ್ಷಿತರಿಗೂ ಕೆಲವು ಸಂಕೀರ್ಣ ವಿಚಾರ ತಿಳಿಸಿಕೊಡುವುದು ಅಷ್ಟು ಸುಲಭವಲ್ಲ. ಅದೊಂದು ಸವಾಲು.

ಈ ಸವಾಲನ್ನು ಅರ್ಥಮಾಡಿಕೊಂಡು ಸ್ಪರ್ಧೆಯ ಹಿನ್ನೆಲೆಯ ಸಂಸ್ಥೆಗಳು ತಿಳಿವಳಿಕೆ ಹಂಚಿಕೆಯ ಕೆಲಸವನ್ನು ತುಂಬಾ ಅಚ್ಚುಕಟ್ಟಾಗಿ ಮಾಡಿದ್ದಾರೆ. ಜಮೀನಿನಲ್ಲಿ ಮಾಡುವ ಎಲ್ಲಾ ರಚನೆಗಳ ಬಗ್ಗೆಯೂ ಶಿಕ್ಷಣಾತ್ಮಕ ರೀತಿಯ ವಿಡಿಯೋಗಳಿವೆ. ತಂತಮ್ಮ ಮೊಬೈಲುಗಳಲ್ಲಿ ಪಾನಿ ಫೌಂಡೇಶನಿನ ಆ್ಯಪ್ ಅನ್ನು ಇಳಿಸಿಕೊಂಡವರು ಈ ವಿಡಿಯೋಗಳನ್ನು ನೋಡಿ ಕಲಿಯಬಹುದು.

ಸಮತಳ ಗುರುತಿಸಿ ಮಾರ್ಕ್ ಮಾಡುವುದು ಹೇಗೆ, ಹೈಡ್ರೋಮಾರ್ಕರ್ ಬಳಸಿ ಒಂದು ಪ್ರದೇಶದ ಏರು ಎಷ್ಟಿದೆ ಎಂದು ಅಳೆಯುವುದು ಹೇಗೆ ಎಂಬುದರ ಬಗ್ಗೆ ಮರಾಠಿ ಭಾಷೆಯಲ್ಲೇ ವಿಡಿಯೋ ತಯಾರಿಸಿದ್ದಾರೆ.

ಇನ್ನೂ ಸಂಶಯ ಬಂದರೆ ‘ವೋಟ್ರ್’ ಸಂಸ್ಥೆಯ ಪಾಣಿಲೋಟ್ (ಜಲಾನಯನ) ಸೇವಕರೊಡನೆ ಸಮಾಲೋಚಿಸಬಹುದು. ಶಿಕ್ಷಣ ಮತ್ತು ರಚನೆಗಳ ಗುಣಮಟ್ಟಕ್ಕೆ ಒತ್ತು ಕೊಟ್ಟಿರುವುದು ‘ಸತ್ಯಮೇವ ಜಯತೆ ವಾಟರ್ ಕಪ್ಪಿನ’ ಅನನ್ಯ ಅಂಶಗಳಲ್ಲಿ ಒಂದು. ಸ್ಪರ್ಧೆಯ ಅವಧಿಯಲ್ಲೇ ಗ್ರಾಮದ ನೆಲಜಲ ಸಂರಕ್ಷಣೆಯ ಕೆಲಸ ಎಲ್ಲವೂ ಮುಗಿಯದು.

ಮಳೆಗಾಲದ ಬೆನ್ನಲ್ಲೇ ಸ್ಪರ್ಧೆ ಬರುತ್ತದೆ. ಮಳೆಗಾಲದ ನಂತರ, ನೆನಪು ಮಾಸುವುದರೊಳಗೆ ಊರಿಡೀ ಸೇರಿ ಮಾಡಿದ ಕೆಲಸದ ಪ್ರತಿಫಲ ಸಿಗತೊಡಗುತ್ತದೆ. ಊರವರಿಗೆ ಜಲಾನಯನ ಅಭಿವೃದ್ಧಿಯ ರುಚಿ ಸಿಗುತ್ತದೆ. ಆಗ ಹೇಗೆ ಮುಂದುವರಿಯುವುದೆಂಬ ತಿಳಿವಳಿಕೆಯೂ ಅವರಲ್ಲಿದ್ದರೆ ಅವರು ಸ್ವಯಂಸ್ಫೂರ್ತಿಯಿಂದಲೇ ಮುನ್ನಡೆಯುತ್ತಾರೆ ಎನ್ನುವುದು ಆಯೋಜಕರ ಚಿಂತನೆ.

ನೇರ ಗ್ರಾಮಸಭೆಗಳು ಅಲ್ಲಲ್ಲಿ ನಡೆದಿವೆ. ಇದಲ್ಲದೆ ಆಯೋಜಕರು ಡಾ. ಅವಿನಾಶ್ ಪೋಲ್ ಮತ್ತು ಜಲಸ್ನೇಹಿ ನಟ, ಚಿಂತಕರನ್ನೂ ಈ ಕೆಲಸಕ್ಕೆ ಸೆಳೆದಿದ್ದಾರೆ. ಉಪಗ್ರಹ ಕೃಪೆಯಿಂದ ಇವರು ಮತ್ತು ಹಳ್ಳಿಗರ ಜತೆ ಸಂಪರ್ಕ ಏರ್ಪಡಿಸಿ ಆನ್ ಲೈನ್ ಗ್ರಾಮಸಭೆಗಳನ್ನೂ ನಡೆಸಿದ್ದಾರೆ.

‘ಜಲಾನಯನ ಅಭಿವೃದ್ಧಿ ಆಂದೋಲನವಾಗಿಬಿಟ್ಟಿದೆ. ನಾಕು ವರ್ಷದ ಹಿಂದೆ ಶ್ರಮದಾನಕ್ಕೆ ಹತ್ತು ಜನ ಜೋಡಿಸಲು ಪಟ್ಟ ಪಾಡು ಮರೆತಿಲ್ಲ’ ಎಂದು ಸತಾರಾದ ಮೂಲ ಚಳವಳಿ ಅಜಿಂಕ್ಯತಾರಾ ಕೋಟೆಯ ಶ್ರಮದಾನ ತಂಡದ ಮೆಹೆಡಿಕ್ ಬೊಟ್ಟು ಮಾಡುತ್ತಾರೆ. ಹಾಗಿರುವಲ್ಲಿ ಈಗ ದಿನನಿತ್ಯ ಸಾವಿರಾರು ಜನ ಶ್ರಮದಾನಕ್ಕೆ ಮುಂಬರುತ್ತಿದ್ದಾರೆ ಎಂದರೆ ಅಭಿನಂದಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.