ADVERTISEMENT

ಬರ ವಿರುದ್ಧ ಯುದ್ಧಕ್ಕಿಳಿದ ನೇವಿ ಕ್ಯಾಪ್ಟನ್!

​ಪ್ರಜಾವಾಣಿ ವಾರ್ತೆ
Published 6 ಮೇ 2017, 19:30 IST
Last Updated 6 ಮೇ 2017, 19:30 IST
ಬರ ವಿರುದ್ಧ ಯುದ್ಧಕ್ಕಿಳಿದ ನೇವಿ ಕ್ಯಾಪ್ಟನ್!
ಬರ ವಿರುದ್ಧ ಯುದ್ಧಕ್ಕಿಳಿದ ನೇವಿ ಕ್ಯಾಪ್ಟನ್!   
ಶ್ರೀ ಪಡ್ರೆ
ಅವರು ನಲುವತ್ತೊಂಭತ್ತರ ಉತ್ಸಾಹಿ. ನೇವಿ ಕ್ಯಾಪ್ಟನ್. ಮಾಸಿಕ ವೇತನ ಒಟ್ಟು ₹ 9 ಲಕ್ಷಕ್ಕೂ ಹೆಚ್ಚು. ಹುಟ್ಟೂರ ಸೆಳೆತದಿಂದ ಆಗಾಗ ಊರಿಗೆ ಬಂದು ಶರ್ಟು ಬಿಚ್ಚಿ ದಿನವಿಡೀ ದುಡಿಯುವ ವಿಶೇಷ ವ್ಯಕ್ತಿ. ಅವರ ಹೆಸರು ಅಂಕುಶ್ ಅಣ್ಣಾ ಮಾಂಡವಿ.
 
ಮರ್ಚೆಂಟ್ ನೇವಿಯಲ್ಲಿರುವ ಅವರ ಬದುಕೇ ನೀರಿನ ನಡುವೆ. ಆದರೆ ವಿಪರ್ಯಾಸ ನೋಡಿ. ಊರು ಕುಮ್ಠೆಯಲ್ಲಿ ನೀರಿಗೆ ಇನ್ನಿಲ್ಲದ ಬವಣೆ. ಅದರ ವಿರುದ್ಧ ಗ್ರಾಮಸ್ಥರು ಸಾರಿರುವ ಯುದ್ಧಕ್ಕೆ ಈಗ ಇವರದ್ದೂ ಶ್ರಮದಾನ.
 
‘ಏಯ್, ನನ್ನ ವಿಚಾರ ಬಿಡ್ರಿ, ನೀವು ನಮ್ಮ ಆಯಿ, 80 ವರ್ಷದ ಸಾವಿತ್ರಿಬಾಯಿ ಬಂದು ಊರವರ ಜತೆ ದುಡಿಯೋದು ನೋಡಬೇಕು’ ಎನ್ನುತ್ತಾರೆ ಅಂಕುಶ್. ಈ ಅಮ್ಮ ಒಂದು ದಿನವೂ ತಪ್ಪಿಸದೆ ಶ್ರಮದಾನಕ್ಕೆ ಹಾಜರ್.
 
ಈಗ ಗ್ರಾಮದಲ್ಲಿ ನೀರು ಇಂಗಿಸುವ ಸ್ಪರ್ಧೆ ಆರಂಭವಾದದ್ದೇ ಸೈ, ಅಂಕುಶ್ ಚುರುಕಾಗಿದ್ದಾರೆ. ‘ನನಗೆ ಇಷ್ಟೊಂದು ಕೊಟ್ಟ ಊರಿಗೆ ನಾನು ಸ್ವಲ್ಪವಾದರೂ ಮರಳಿಸುವ ಅವಕಾಶ’ ಎನ್ನುತ್ತಾ ಪಾಲ್ಗೊಳ್ಳುತ್ತಿದ್ದಾರೆ. ಪತ್ನಿ ಮೀನಾಕ್ಷಿ, ಹತ್ತನೆಯ ಇಯತ್ತೆಯಲ್ಲಿ ಕಲಿಯುತ್ತಿರುವ ಮಗ ಅಶ್ವಿತ್ ಕೂಡಾ ಖುಷಿ
ಯಿಂದ ಬೆವರಿಳಿಸಿ ಕರಸೇವೆ ಮಾಡುತ್ತಾರೆ.
 
ಸುಡುಬಿಸಿಲಲ್ಲಿ ಸತಾರಾ ಜಿಲ್ಲೆಯ ಈ ಒಣ ಗುಡ್ಡಗಳನ್ನೊಮ್ಮೆ ನೋಡಬೇಕು. ಕೆಲಸದ ನಡುವೆ ಸ್ವಲ್ಪ ತಂಪಾಗಿರೋಣ ಎಂದರೆ ಎಲ್ಲೂ ಮರದ ನೆರಳೇ ಸಿಗದು. ಎಲ್ಲ ಹಳ್ಳಿಗಳ ಜನ ಇದಕ್ಕಾಗಿಯೇ ಶ್ರಮದಾನ ಮುಂಜಾನೆಯೇ ಆರಂಭಿಸುತ್ತಾರೆ. ಆರು, ತಪ್ಪಿದರೆ ಏಳು ಗಂಟೆಗೆ. ಮೂರು ತಾಸು ಶ್ರಮದಾನ. ನಂತರ ನಾಷ್ಟಾ. ನಾಷ್ಟಾವೂ ಅಷ್ಟೆ. ಒಂದೊಂದು ದಿನ ಒಂದೊಂದು ಮನೆಯಿಂದ. ಶ್ರಮದಾನದ ಸೈಟಿಗೆ ಹೋಗಿಬರಲು ನೆರೆಕರೆಯವರ ಟ್ರಾಕ್ಟರ್.

ಯಾರದೋ ಬೈಕಿನ ಹಿಂದಿನ ಸೀಟು. ಒಟ್ಟಿನಲ್ಲಿ ಹಬ್ಬದ ವಾತಾವರಣ. ದಶಕಗಳ ನೀರ ಬವಣೆ ಈ ಒಂದೇ ಸಾಲಿನಲ್ಲಿ, ಇವರುಗಳು ನಿರ್ಮಾಣ ಮಾಡುವ ಸೀಸೀಟಿ, ಮಾತಿ ಬಾಂದ್, ಲೂಸ್ ಬೋಲ್ಡರ್ ಸ್ಟ್ರಕ್ಚರ್ (ಎಲ್ ಎಸ್ ಬಿ , ಬಿಡಿ ಕಲ್ಲಿನ ತಡೆಗಟ್ಟ) ಗಳಿಂದಾಗಿ ಸದಾ ಇಲ್ಲದಾಗುವ ವಿಶ್ವಾಸ. ಅಷ್ಟು ನಂಬಿಕೆ ಹೇಗೆ ಬಂತು ಎಂದು ಕೇಳಿದರೆ, ‘ವೇಲು ಗ್ರಾಮ ನಮಗೆ ತುಂಬ ಹತ್ತಿರ. ನಾವೇ ಹೋಗಿ ನೋಡಿಕೊಂಡು ಬಂದೆವಲ್ಲಾ’ ಎಂಬ ಜವಾಬು.
 
ಅಂಕುಶ್ ‘ಕೈಲಾದಷ್ಟು ಮಾಡುತ್ತೇನೆ’ ಎಂಬ ಹಗುರ ಕೆಲಸದವರಲ್ಲ. ಊರಿಗೆ ಬಂದಾಗ ಬೆಳಗಿನಿಂದ ಬೈಗಿನ ವರೆಗೆ ಕೆಲಸ ಇವರಿಗೆ ರೂಢಿಯಿದೆ. ಊರಿನ ಬರ ವಿರುದ್ಧ ಯುದ್ಧದಲ್ಲಿ ಈ ನೇವಿ ಕ್ಯಾಪ್ಟನ್ ಹಿಂದೆ ಬೀಳುವುದಿಲ್ಲ. 
 
‘ಅಭ್ಯಾಸ ಇಲ್ಲದವರಿಗೆ ಒಣಗುಡ್ಡದ ಸೀಸೀಟಿ ಅಗೆಯುವ ಕೆಲಸ ಶ್ರಮದಾಯಕ. ನನಗೆ ಮೂರು ಗಂಟೆಯ ನಂತರವೂ ಆಯಾಸ ಅನಿಸೋದಿಲ್ಲ. ಬದಲಿಗೆ ಹೆಮ್ಮೆ ಎನಿಸುತ್ತದೆ, ಅದೇನೋ ಒಂದು ಬಗೆಯ ರೋಮಾಂಚನ’ ಎಂದು ಅಂಕುಶ್ ಮೆಲುನುಡಿಯುತ್ತಾರೆ.
 
“ಈ ಜಲಾನಯನ ಯೋಜನೆಯಲ್ಲಿ ಪ್ರತ್ಯೇಕತೆ ಇದೆ. ತುಂಬ ವೈಜ್ಞಾನಿಕವಾಗಿ ಮಾಡುತ್ತಿದ್ದಾರೆ. ಊರವರನ್ನು ಅದ್ಭುತವಾಗಿ ಪ್ರೇರೇಪಿಸುತ್ತಿದ್ದಾರೆ. ಹತ್ತಾರು ಸೂಕ್ಷ್ಮಗಳನ್ನು ಮನದಲ್ಲಿಟ್ಟು ಪ್ಲಾನಿಂಗ್ ಮಾಡಿದ್ದಾರೆ.

ಯೋಜನೆಯ ಹಿಂದೆ ರಾಜ್ಯದ ಬರವನ್ನು ಎಂದೆಂದಿಗೂ ನೀಗಿಸುವ, ಮುಂದಿನ ಪೀಳಿಗೆಗೆ ಕುಡಿಯುವ ನೀರು, ಕೃಷಿಗೆ ತೊಂದರೆ ಆಗದಂತೆ ಮಾಡುವ ದೂರದೃಷ್ಟಿಯಿದೆ”, ಅಂಕುಶ್ ಮಾಂಡವಿ ವಿಶ್ಲೇಷಿಸುತ್ತಾರೆ.
 
ಕುಮ್ಠೆಯೂ ನೀರ ನೆಮ್ಮದಿಯ ತಾಣ ಆಗುವ ಬಗ್ಗೆ ಕ್ಯಾಪ್ಟನ್ ಅವರಿಗೆ ಪೂರ್ಣ ವಿಶ್ವಾಸವಿದೆ. ‘ಅದು ಯಾಕೆ, ಮನೆಯ ಹತ್ತಿರದಲ್ಲೇ ಮಾಡಿದ ಒಂದು ಸೋಕ್ ಪಿಟ್ ನೋಡಿ, ನಮ್ಮಲ್ಲಿ ಏನು ಬದಲಾವಣೆ ಮಾಡಿದೆ ಗೊತ್ತೇ? ಮನೆಬಳಕೆಯ ಪಾತ್ರೆ ತೊಳೆದ, ಬಟ್ಟೆ ತೊಳೆದ ನೀರೆಲ್ಲವೂ ಈಗ ಆ ಮಾರ್ಗವಾಗಿ ಇಂಗುತ್ತದೆ. ತಿಂಗಳುಗಳ ಹಿಂದಿನ ಈ ಕೆಲಸದಿಂದ ಖಾಲಿಯಾದ ನಮ್ಮ ಬೋರ್ ವೆಲ್ ಈಗ ಕಡು ಬೇಸಿಗೆಯಲ್ಲೂ ಮರುಜೀವ ಪಡೆದಿದೆ” ಎನ್ನುತ್ತಾರೆ.
 
ಕುಮ್ಠೆ ಗ್ರಾಮದಲ್ಲೂ ಜಲಾನಯನ ಅಭಿವೃದ್ಧಿಯ ಪ್ರಾಥಮಿಕ ತರಬೇತಿ ಪಡೆದ ಐವರ ತಂಡ ಇದೆ. ಇವರ ಒಡನಾಟದಿಂದ ಅಂಕುಶ್ ತಾನೂ ಈ ತಿಳಿವಳಿಕೆಯನ್ನು ಸಾಕಷ್ಟು ಮೈಗೂಡಿಸಿಕೊಂಡಿದ್ದಾರೆ. ಬೆಳಗ್ಗೆ ಶ್ರಮದಾನವಾದರೆ ಸಂಜೆ ಪ್ಲಾನಿಂಗ್, ಮರುದಿನಕ್ಕೆ ತಯಾರಿ. 
 
ಮರುದಿನ ಕೆಲಸ ಮಾಡುವ ಜಾಗದಲ್ಲಿ ಕಂಟೂರ್ ಲೈನ್ ಮಾರ್ಕಿಂಗ್, ಮರುದಿನದ ಪ್ಲಾನನ್ನು ಪಾನಿ ಫೌಂಡೇಶನ್ ಕಚೇರಿಗೆ ಮಿಂಚಂಚಿಸುವುದು – ಶ್ರಮದಾನ ಸುಸೂತ್ರವಾಗಿ ಆಗಲು ಬೇಕಾದ ಪೂರ್ವತಯಾರಿ – ಇವುಗಳಲ್ಲೂ ಈ ಕ್ಯಾಪ್ಟನ್ ಕ್ಯಾಪ್ಟನ್ ಆಗಿಯೇ ಭಾಗವಹಿಸುತ್ತಾರೆ. 
 
‘ನಮ್ಮಲ್ಲಿ ಎಲ್ಲಿ ನೋಡಿದರೂ ಬೋಳುಗುಡ್ಡಗಳೇ ಕಾಣುತ್ತಿವೆ. ಮುಂದಿನ ವರ್ಷದಿಂದ ಗಿಡ ನೆಡುವ ಕೆಲಸ ತೀವ್ರವಾಗಬೇಕು. ಊರಿಗೆ, ಮಣ್ಣಿಗೆ ತಂಪು ತರಲು ಮಾತ್ರವಲ್ಲ ಮಳೆಯನ್ನು ಆಕರ್ಷಿಸಲು ಸಸ್ಯಾವರಣ ಹೆಚ್ಚಿಸಬೇಕು’ ಎನ್ನುವುದು ಇವರ ಆಗ್ರಹ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.