ADVERTISEMENT

ಅಹವಾಲು ಹೇಳಿಕೊಂಡರು, ಸಲಹೆಯನ್ನೂ ನೀಡಿದರು

ಆಡಳಿತ ವ್ಯವಸ್ಥೆ– ಸಾರ್ವಜನಿಕರ ನಡುವೆ ಸೇತುವೆಯಾದ ಜನಸ್ಪಂದನ

​ಪ್ರಜಾವಾಣಿ ವಾರ್ತೆ
Published 15 ಜೂನ್ 2017, 10:54 IST
Last Updated 15 ಜೂನ್ 2017, 10:54 IST
ಕಾರ್ಯಕ್ರಮದಲ್ಲಿ ಎಸ್‌.ಟಿ.ಸೋಮಶೇಖರ್‌ ಮಾತನಾಡಿದರು. ಬಿಡಿಎ ಕಾರ್ಯಪಾಲಕ ಎಂಜಿನಿಯರ್‌ ಶಿವಾನಂದ್‌,  ಬಿಬಿಎಂಪಿ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಮುದ್ದರಾಜು, ಜಂಟಿ ಆಯುಕ್ತ ತಿಪ್ಪೇಸ್ವಾಮಿ, ಡಿವೈಎಸ್‌ಪಿ ಲಕ್ಷ್ಮೀಗಣೇಶ್‌,   ಪಾಲಿಕೆ ಸದಸ್ಯರಾದ ರಾಜಣ್ಣ, ಎಸ್‌.ವಾಸುದೇವ ಹಾಗೂ ಆರ್ಯ ಶ್ರೀನಿವಾಸ್‌ ಇದ್ದರು
ಕಾರ್ಯಕ್ರಮದಲ್ಲಿ ಎಸ್‌.ಟಿ.ಸೋಮಶೇಖರ್‌ ಮಾತನಾಡಿದರು. ಬಿಡಿಎ ಕಾರ್ಯಪಾಲಕ ಎಂಜಿನಿಯರ್‌ ಶಿವಾನಂದ್‌, ಬಿಬಿಎಂಪಿ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಮುದ್ದರಾಜು, ಜಂಟಿ ಆಯುಕ್ತ ತಿಪ್ಪೇಸ್ವಾಮಿ, ಡಿವೈಎಸ್‌ಪಿ ಲಕ್ಷ್ಮೀಗಣೇಶ್‌, ಪಾಲಿಕೆ ಸದಸ್ಯರಾದ ರಾಜಣ್ಣ, ಎಸ್‌.ವಾಸುದೇವ ಹಾಗೂ ಆರ್ಯ ಶ್ರೀನಿವಾಸ್‌ ಇದ್ದರು   

ಬೆಂಗಳೂರು: ಕೆರೆಗಳ  ಸಂರಕ್ಷಣೆಗೆ ಕ್ರಮ ಕೈಗೊಳ್ಳಿ, ಹೊಸ ಉದ್ಯಾನಗಳ ನಿರ್ಮಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದನ್ನು ನಿಯಂತ್ರಿಸಿ, ಬಿಎಂಟಿಸಿ ಬಸ್‌ ಸೌಕರ್ಯದ ಕೊರತೆ ನೀಗಿಸಿ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ...

ಯಶವಂತಪುರ ವಿಧಾನಸಭಾ ಕ್ಷೇತ್ರದ ಪ್ರಮುಖ ಸಮಸ್ಯೆಗಳಿಗೆ  ಪರಿಹಾರ ಕಂಡುಕೊಳ್ಳಲು   ‘ಪ್ರಜಾವಾಣಿ’  ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ‘ಜನಸ್ಪಂದನ-ಸಿಟಿಜನ್ಸ್ ಫಾರ್ ಚೇಂಜ್‘ ಕಾರ್ಯಕ್ರಮ ದಲ್ಲಿ ಜನರು ಪ್ರಸ್ತಾಪಿಸಿದ ಪ್ರಮುಖ ಬೇಡಿಕೆಗಳಿವು. 

ಈ ಕ್ಷೇತ್ರದ ದೊಡ್ಡಬಿದಿರಕಲ್ಲು (40), ಹೇರೊಹಳ್ಳಿ (72), ಉಲ್ಲಾಳ (130), ಕೆಂಗೇರಿ, (159) ಹಾಗೂ ಹೆಮ್ಮಿಗೆಪುರ (198)  ವಾರ್ಡ್‌ಗಳ  ಜನರ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಪರಿಹರಿಸುವುದಾಗಿ ಶಾಸಕ ಎಸ್‌.ಟಿ.ಸೊಮಶೇಖರ್‌, ಪಾಲಿಕೆ ಸದಸ್ಯರು, ಅಧಿಕಾರಿಗಳು ಭರವಸೆ ನೀಡಿದರು.   ಕೆಲವು ವಿಚಾರಗಳಿಗೆ ಸಂಬಂಧಿಸಿ ನಾಗರಿಕರ ಗೊಂದಲಗಳನ್ನು ನಿವಾರಿಸುವ ಪ್ರಯತ್ನ  ಮಾಡಿದರು.

ADVERTISEMENT

ಹೊಸತಾಗಿ ಬಿಬಿಎಂಪಿ ವ್ಯಾಪ್ತಿಗೆ ಸೇರಿದ ಈ ಗ್ರಾಮಗಳಲ್ಲಿ ಬಿ –ಖಾತಾವನ್ನು ಎ– ಖಾತಾ  ಆಗಿ ಪರಿವರ್ತಿಸಿಕೊಳ್ಳುವ ಸಮಸ್ಯೆ ಬಗ್ಗೆಯೂ ಕೆಲವರು ಗಮನಕ್ಕೆ ತಂದರು. ಈ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದು ಅಧಿಕಾರಿಗಳು ಉತ್ತರಿಸಿದರು.

ಕೆರೆ ಉಳಿಸಿ: ಸಂಸ್ಕರಣೆಗೊಳ್ಳದೆ ತ್ಯಾಜ್ಯ ನೀರು ಸೇರಿ ಹೇರೊಹಳ್ಳಿ ಕೆರೆ ಕಲುಷಿತಗೊಳ್ಳುತ್ತಿರುವ ವಿಚಾರದ ಬಗ್ಗೆ ಅನೇಕರು ಅಸಮಾಧಾನ ತೋಡಿಕೊಂಡರು. 

‘ಕೆರೆಗೆ ಮಹದೇಶ್ವರ ನಗರ ಕೊಳೇಗೇರಿಯ ಕಲುಷಿತ  ನೀರು ಸೇರುವ ಬಗ್ಗೆ ಬಲವಾದ ಸಂದೇಹವಿದೆ’ ಎಂದು ತುಂಗಾ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಮಕೃಷ್ಣ ಭಟ್‌ ದೂರಿದರು.

ಮೀಸಲು ಪ್ರದೇಶ– ಅನಿಶ್ಚಿತತೆ  ದೂರಮಾಡಿ: ‘ಕೆರೆ ಹಾಗೂ ರಾಜ ಕಾಲುವೆಗಳ ಮೀಸಲು ಪ್ರದೇಶಗಳ  ವ್ಯಾಪ್ತಿಯ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಬಿಡಿಎ ಅಧಿಕಾರಿಗಳು ಒಂದೊಂದು ರೀತಿ ಉತ್ತರ ಹೇಳುತ್ತಿದ್ದಾರೆ. ಹಸಿರು ನ್ಯಾಯಮಂಡಳಿ ತೀರ್ಪು ಬರುವ ಮುನ್ನವೇ ಮನೆ ಕಟ್ಟಿಕೊಂಡವರ  ಗತಿ ಏನು ಈ ಬಗ್ಗೆ ಸ್ಪಷ್ಟಪಡಿಸಬೇಕು.  ಬಿಡಿಎ ಬಡಾವಣೆಯಲ್ಲಿ ಮನೆ ಕಟ್ಟಿಕೊಂಡವರೂ ಸ್ಥಳಾಂತರ ಆಗಬೇಕೇ’ ಎಂದು  ಅವರು ಪ್ರಶ್ನಿಸಿದರು.

‘ಈ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಕೋರಿ ಬಿಬಿಎಂಪಿ ಆಯುಕ್ತರು ಹಸಿರು ನ್ಯಾಯಮಂಡಳಿಯನ್ನು  ಕೋರಿದ್ದಾರೆ. ಅವರಿಂದ ಪ್ರತಿಕ್ರಿಯೆ ಬರುವವರೆಗೆ ಏನೂ ಹೇಳಲು ಸಾಧ್ಯವಿಲ್ಲ’ ಎಂದು  ಹೇರೊಹಳ್ಳಿ ವಾರ್ಡ್‌ನ ಪಾಲಿಕೆ ಸದಸ್ಯ ರಾಜಣ್ಣ ಹೇಳಿದರು.

ಬಸ್‌ ಸೌಕರ್ಯ ಹೆಚ್ಚಿಸಿ: ಹೇರೊಹಳ್ಳಿ ವಾರ್ಡ್‌ ಆಸುಪಾಸಿನ ಹಳ್ಳಿಗಳಿಗೆ ಬಿಎಂಟಿಸಿ ಬಸ್‌ ಸೌಕರ್ಯ ಕಡಿಮೆ ಇರುವ  ಬಗ್ಗೆಯೂ ಅನೇಕರು ಪ್ರಸ್ತಾಪಿಸಿದರು. ಮೆಜೆಸ್ಟಿಕ್‌, ಶಿವಾಜಿನಗರ, ಕೆ.ಆರ್‌.ಮಾರುಕಟ್ಟೆಗೆ ನೇರ ಬಸ್‌ ಸಂಪರ್ಕ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. ‘ಭಾರತ್‌ನಗರಕ್ಕೆ ಬಸ್‌ ಬೆಳಿಗ್ಗೆ 10.15ಕ್ಕೆ ಬಸ್‌ ಬರುತ್ತದೆ. ನಂತರ 2 ಗಂಟೆವರೆಗೂ ಬಸ್‌ ಇರುವುದಿಲ್ಲ’ ಎಂದು ವಿಶ್ವಮೂರ್ತಿ ಸಮಸ್ಯೆಯ ತೀವ್ರತೆ ಬಿಚ್ಚಿಟ್ಟರು.

‘ಈ ಸಮಸ್ಯೆ ಬಗ್ಗೆ ಈಗಾಗಲೇ ವಿಧಾನಸಭೆಯಲ್ಲಿ ಪ್ರಶ್ನೆ ಕೇಳಿದ್ದೇನೆ. ಇಲ್ಲಿನ ಹಳ್ಳಿಗಳಿಗೆ ಬಸ್‌ ವ್ಯವಸ್ಥೆ ಕಲ್ಪಿಸಿದರೆ ನಷ್ಟ ಉಂಟಾಗುತ್ತದೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಾರೆ.  ಇನ್ನೊಮ್ಮೆ ಸಾರಿಗೆ ಸಚಿವರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ’ ಎಂದು ಶಾಸಕರು ಭರವಸೆ ನೀಡಿದರು.

ರೌಡಿಗಳ ಹಾವಳಿಯ ಬಗ್ಗೆಯೂ ಕೆಲವರು ಗಮನ ಸೆಳೆದರು. ಗಸ್ತಿಗೆ  ಪ್ರತಿ  ದಿನವೂ ಒಂದೇ ಸಮಯವನ್ನು ನಿಗದಿ ಪಡಿಸಬಾರದು. ಪೊಲೀಸರು ದಿಢೀರ್‌ ಆಗಿ ಸ್ಥಳಕ್ಕೆ ಭೇಟಿ ನೀಡಿದರೆ ಈ ಹಾವಳಿ ನಿಯಂತ್ರಿಸಬಹುದು ಎಂದು ಸ್ಥಳೀಯರು ಸಲಹೆ ನೀಡಿದರು. 

ಮಹಿಳೆಯ ಜೋರು ಧ್ವನಿಗೆ ಕಕ್ಕಾಬಿಕ್ಕಿ:  ‘ಅಂಜನಾನಗರದಲ್ಲಿ ನೀರಿನ ತೊಂದರೆ ತುಂಬಾ ಇದೆ. ಐದನೇ ಅಡ್ಡ ರಸ್ತೆಯಲ್ಲಿರುವ ಮನೆ ನೀರು ಬರುವುದೇ ಇಲ್ಲ. ನಮಗಿಂತ ಎತ್ತರದಲ್ಲಿರುವ ಮನೆಗಳಿಗೆ ನೀರು ಪೂರೈಕೆ ಸಮರ್ಪಕವಾಗಿ ಆಗುತ್ತಿದೆ ಇದು ಹೇಗೆ’ ಎಂದು  ಮೀನಾಕ್ಷಿ  ಏರು ಧ್ವನಿಯಲ್ಲಿ ಪ್ರಶ್ನಿಸಿದರು.

‘ಮಹಿಳೆಯೊಬ್ಬರು ಜಗಳವಾಡಿದ್ದಾರೆ ಎಂಬ ಕಾರಣಕ್ಕೆ ಈ ರಸ್ತೆಯ ಎಲ್ಲ ಮನೆಗಳಿಗೆ ನೀರು ಪೂರೈಸುತ್ತಿಲ್ಲ.   ನೀರು ಪೂರೈಸುವ ಹೊಣೆ ಹೊತ್ತ ರಾಮಣ್ಣ  ಅವರು ಇಲ್ಲೇ ಇದ್ದಾರೆ. ಅವರನ್ನೇ ಕೇಳಿನೋಡಿ’ ಎಂದರು.

‘ಬೋರ್‌ವೆಲ್‌ನಲ್ಲಿ ನೀರು ಬರದಿದ್ದರೆ ನಾನೇನು ಮಾಡಲಿ’ ಎಂದು ರಾಮಣ್ಣ ಕೈಚೆಲ್ಲಿದರು. ಬಳಿಕ ಮಧ್ಯಪ್ರವೇಶ ಮಾಡಿದ ಪಾಲಿಕೆ ಸದಸ್ಯ ರಾಜಣ್ಣ, ‘2 ದಿನದೊಳಗೆ ನಾನೇ ಸಮಸ್ಯೆ ಬಗೆಹರಿಸುತ್ತೇನೆ’ ಎಂದರು.

‘ನಾಯಿಗಳು ನಮ್ಮಂಗೆ ಜೀವನ ಮಾಡ್ಕೊಳ್ಳಿ ...’

‘ಹತ್ತು ವರ್ಷಗಳ ಹಿಂದೆ ಬಡವಣೆಯಲ್ಲಿ ಕೇವಲ ಹತ್ತಿಪ್ಪತ್ತು ನಾಯಿಗಳಿದ್ದವು. ಈಗ ಅವುಗಳ ಸಂಖ್ಯೆ 500 ದಾಟಿದೆ. ಇಲ್ಲಿ ಜನರಿಗಿಂತ ನಾಯಿಗಳೇ ಹೆಚ್ಚು ಇರುವಂತೆ ಕಾಣಿಸುತ್ತಿದೆ. ಅವುಗಳ  ಕಾಟದಿಂದ ಮುಕ್ತಿ ನೀಡಿ’ ಎಂದು ಉಲ್ಲಾಳ ವಾರ್ಡ್‌ನ ಉಪಕಾರ್‌ ಬಡಾವಣೆ ನಿವಾಸಿ ಮುನಿ ನರಸಿಂಹಯ್ಯ ಅಳಲು ತೋಡಿಕೊಂಡರು.

‘ನಾಯಿಗಳೂ ನಮ್ಮಂಗೆ ಜೀವನ ಮಾಡ್ಕೊಳ್ಳಿ ಬಿಡಿ. ನಮ್ಮದೇ ಸಮಸ್ಯೆ ಸಾಕಷ್ಟಿರುವಾಗ ಸುಮ್ನೆ ಅವುಗಳ ತಂಟೆಗೆ ಏಕೆ ಹೋಗ್ತೀರಿ’ ಎಂದು ಸೋಮಶೇಖರ್‌ ಚಟಾಕಿ ಹಾರಿಸಿದರು.

‘ನಿಮ್ಮ ಬಡಾವಣೆಯ ಅನೇಕ ಸಮಸ್ಯೆ ಗಳನ್ನು ಬಗೆಹರಿಸಿದ್ದೇನೆ ನಾಯಿಗಳ ಕಾಟದಿಂದಲೂ ಮುಕ್ತಿ ಕೊಡಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸುತ್ತೇನೆ’ ಎಂದರು.

ಪಾಲಿಕೆ ಸದಸ್ಯರಿಬ್ಬರು ಗೈರು
ಕೆಂಗೇರಿ ವಾರ್ಡ್‌ನ ವಿ.ವಿ.ಸತ್ಯನಾರಾಯಣ ಹಾಗೂ ಉಲ್ಲಾಳ ವಾರ್ಡ್‌ನ ಪಾಲಿಕೆ ಸದಸ್ಯೆ ಶಾರದಾ ಅವರು ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಅವರ ವಾರ್ಡ್‌ಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಶಾಸಕರೇ ಉತ್ತರಿಸಿದರು.

ಶಾಸಕರು ನೀಡಿದ ಪ್ರಮುಖ ಭರವಸೆಗಳು

*ಕ್ಷೇತ್ರದ ವ್ಯಾಪ್ತಿಯಲ್ಲಿರುವ 5 ಕಸ ಸಂಸ್ಕರಣಾ ಘಟಕಗಳ ಪೈಕಿ ಎರಡನ್ನು ವಿದ್ಯುತ್‌ ಉತ್ಪಾದಿಸುವ ಘಟಕಗಳನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಲಾಗಿದೆ.  ಇನ್ನುಳಿದ ಮೂರು ಘಟಕಗಳನ್ನು ಪರಿವರ್ತಿಸಲು ಕ್ರಮ. ಇದರಿಂದ ದುರ್ವಾಸನೆ ಸಮಸ್ಯೆಯಿಂದ ಮುಕ್ತಿ ಸಿಗಲಿದೆ.
*ಕ್ಷೇತ್ರವನ್ನು ರೌಡಿಸಂ ಹಾಗೂ ಗಾಂಜಾ ಮಾರಾಟ ಮುಕ್ತ ಮಾದರಿ ವಿಧಾನಸಭಾ ಕ್ಷೇತ್ರವನ್ನಾಗಿ  ರೂಪಿಸುತ್ತೇನೆ.
*ದೊಡ್ಡಬಿದಿರಕಲ್ಲು, ಹೆರೋಹಳ್ಳಿ, ಉಲ್ಲಾಳ ಹಾಗೂ ಹೆಮ್ಮಿಗೆಪುರ ವಾರ್ಡ್‌ಗಳಿಗೆ ಸೆಪ್ಟೆಂಬರ್‌ ಬಳಿಕ  ಒಳಚರಂಡಿ (ಯುಜಿಡಿ) ವ್ಯವಸ್ಥೆ ಕಲ್ಪಿಸಲಾಗುವುದು.
*ಆಶ್ರಯ ನಿವೇಶನದ ಅಡಿಯಲ್ಲಿ 1,400 ಜನರಿಗೆ ನಿವೇಶನ ನೀಡಲಾಗುವುದು.
*ಕ್ಷೇತ್ರದಲ್ಲಿ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವ 6,000 ಬಡವರಿಗೆ  ಅಕ್ರಮ–ಸಕ್ರಮ ಯೋಜನೆ ಅಡಿ  ಹಕ್ಕುಪತ್ರ ನೀಡುತ್ತೇವೆ.
*1400 ಬಡವರಿಗೆ ಆಶ್ರಯ ನಿವೇಶನ ಹಂಚಿಕೆ

ನಾಗರಿಕರೇ ಸೂಚಿಸಿದ ಪರಿಹಾರಗಳು

ಬೆಂಗಳೂರು: ಅಹವಾಲುಗಳಿಗೆ ಭರವಸೆದಾಯಕ ಉತ್ತರಪಡೆಯುವುದಕ್ಕಷ್ಟೇ ಈ ಕಾರ್ಯಕ್ರಮ ಸೀಮಿತವಾಗಲಿಲ್ಲ.  ವ್ಯವಸ್ಥೆಯ ಸುಧಾರಣೆಗೆ ನಾಗರಿಕರೇ ಕೆಲವು ಪರಿಹಾರೋಪಾಯಗಳನ್ನೂ ಸೂಚಿಸಿದರು. 

ನೀರು ಮರುಬಳಕೆ ಮಾಡಿ: ‘ಶುದ್ಧಕುಡಿಯುವ ನೀರಿನ ಘಟಕದಲ್ಲಿ  ಸಾಕಷ್ಟು ನೀರು ವ್ಯರ್ಥವಾಗುತ್ತದೆ. ಅದನ್ನು ಕೊಳವೆಬಾವಿಗಳ ಮರುಪೂರಣಕ್ಕೆ ಅಥವಾ ಉದ್ಯಾನಗಳಿಗೆ ಬಳಸಬೇಕು’ ಎಂದು ಬಾಲಾಜಿ ಬಡಾವಣೆಯ ನೇಮಿರಾಜ್‌  ಒತ್ತಾಯಿಸಿದರು.

ಕಾರ್ಖಾನೆ ತ್ಯಾಜ್ಯ ಸಂಗ್ರಹಕ್ಕೂ ಪ್ರತ್ಯೇಕ ಕೇಂದ್ರವಿರಲಿ: ಕಾರ್ಖಾನೆಗಳ ತ್ಯಾಜ್ಯವನ್ನು ಕೆಲವರು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಇದರಿಂದ  ಅಪಾಯ ಕಟ್ಟಿಟ್ಟ ಬುತ್ತಿ.  ಒಣ ತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕ ಕೇಂದ್ರಗಳನ್ನು ಆರಂಭಿಸಿರುವಂತೆಯೇ ಕಾರ್ಖಾನೆ ತ್ಯಾಜ್ಯಗಳ ಸಂಗ್ರಹಕ್ಕೂ ಕೇಂದ್ರ ಆರಂಭಿಸಬೇಕು. ಏಕೆಂದರೆ ಒಂದು ಕಾರ್ಖಾನೆಯ ತ್ಯಾಜ್ಯ ಇನ್ನೊಂದು  ಕಾರ್ಖಾನೆಗೆ ಕಚ್ಛಾವಸ್ತುವಾಗಬಹುದು.  ಶೇ 95ರಷ್ಟು ತ್ಯಾಜ್ಯವನ್ನು ಮರುಬಳಕೆ ಮಾಡಬಹುದು’ ಎಂದು ಗೌಡಯ್ಯ ಅವರು ಸಲಹೆ ನೀಡಿದರು.

ಬಹುಮಾನ:  ‘ಸಾರ್ವಜನಿಕ ಸ್ಥಳದಲ್ಲಿ ಕಸ  ಹಾಕುವವರಿಗೆ ₹ 10,000 ದಂಡ ವಿಧಿಸಬೇಕು. ಕಸ ಎಸೆಯುವವರ ಫೋಟೊ ಕ್ಲಿಕ್ಕಿಸಿ ಬಿಬಿಎಂಪಿಗೆ ಮಾಹಿತಿ ನೀಡುವವರಿಗೆ ₹ 5,000 ಬಹುಮಾನ ನೀಡಿ’ ಎಂದು  ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.