ADVERTISEMENT

ಕಾಳಿ ಬೈನ್ ನದಿ ಮತ್ತೆ ಪವಿತ್ರವಾದ ಕತೆ!

ಶ್ರೀ ಪಡ್ರೆ
Published 28 ಮೇ 2017, 19:30 IST
Last Updated 28 ಮೇ 2017, 19:30 IST
ಶುಭ್ರವಾಗಿ ಹರಿಯುತ್ತಿರುವ ಕಾಳಿ ಬೈನ್‌ ನದಿ
ಶುಭ್ರವಾಗಿ ಹರಿಯುತ್ತಿರುವ ಕಾಳಿ ಬೈನ್‌ ನದಿ   

ದೇಶವೇ ಪುಣ್ಯನದಿಯೆಂದು ಜಪಿಸುವ ಗಂಗೆ, ಯಮುನೆಯರ ಇಂದಿನ ಸ್ಥಿತಿ ನೆನೆದುಕೊಳ್ಳಿ.  ಈ ನದಿಗಳ ಶುದ್ಧೀಕರಣ ಯೋಜನೆ ಕೆಲಸಕ್ಕಿಂತಲೂ ಸದ್ದು  ಮಾಡಿದ್ದೇ ಹೆಚ್ಚು. ಕೋಟಿಗಟ್ಟಲೆ ಹಣ ಸುರಿದೂ ಫಲಿತಾಂಶ ಕಾಣಿಸುತ್ತಿಲ್ಲ. ಎಷ್ಟು ಸುಧಾರಣೆ ಆಗಬಹುದು, ಎಂದಿಗೆ – ಎನ್ನುವುದು ಉತ್ತರ ಸಿಗದ  ಪ್ರಶ್ನೆಗಳು.
ನಿರಾಸೆಯ ಚಿತ್ರದ ನಡುವೆ ಕಾಳಿ ಬೈನ್ ನದಿಯ ಕತೆ ಕೇಳಿ. ಎರಡೇ ದಶಕಗಳಲ್ಲಿ ಮತ್ತೆ ಪಾವನಳಾಗಿ ಹರಿಯತೊಡಗಿದ ಪಂಜಾಬಿನ ಪುಣ್ಯನದಿಯಿದು. ದೇಶಕ್ಕೇ ಏಕೆ, ವಿಶ್ವಕ್ಕೇ ಜನಶಕ್ತಿಯ ಇನ್ನೊಂದು ಅದ್ಭುತ ಮಾದರಿ. ಮೂರು ಜಿಲ್ಲೆಗಳ ಜೀವನಾಡಿ, ನೂರ ಅರುವತ್ತು ಕಿಲೋಮೀಟರ್ ಉದ್ದ. ರಾಜ್ಯಕ್ಕೆ ಆ ಹೆಸರು ತಂದ ಪಂಚನದಿಯಲ್ಲೊಂದಾದ ಬಿಯಾಸಿನ ಉಪನದಿ.

ಸಿಖ್ ಜನಾಂಗಕ್ಕೆ ಈ ನದಿಯ ಬಗ್ಗೆ ಭಾವನಾತ್ಮಕ ನಂಟಿದೆ. ಗುರು ನಾನಕರಿಗೆ ಜ್ಞಾನೋದಯ ಆದದ್ದು ಈ ನದಿಯಿಂದ ಎಂದು ನಂಬಿಕೆ. ಬರಬರುತ್ತಾ ಊರಿನ ತ್ಯಾಜ್ಯವನ್ನೆಲ್ಲಾ ತುಂಬಿಕೊಂಡು ಕಳೆ ಗಿಡಗಳಿಂದ ಉಸಿರುಗಟ್ಟಿತು. ನದಿಯ ಹರಿವು ಕಟ್ಟಿತ್ತು. ನೀರು ಕಪ್ಪಾಗಿ ನಾರುತ್ತಿತ್ತು. ಹತ್ತಿರವೆಲ್ಲೂ ಮೂಗು ಬಿಟ್ಟು ಓಡಾಡದಂತೆ, ಎಲ್ಲೂ ಕಾಲಿಡಲೂ ಆಗದಂತಹ ಸ್ಥಿತಿಯಲ್ಲಿತ್ತು.

(ಸ್ವಚ್ಚತಾ ಕಾರ್ಯದಲ್ಲಿ ಸಂತ್ ಬಲ್ ಬೀಲ್ ಸಿಂಗ್)

ADVERTISEMENT

ಇದನ್ನು ಕಂಡು ಸಂತ್ ಬಲ್ ಬೀಲ್ ಸಿಂಗ್ ಸೀಚೆವಾಲರ ಮನ ಕಲಕಿತು. ಈ ನದಿಯ ಪುನರುಜ್ಜೀವನಕ್ಕೆ ಅವರು ಪಣ ತೊಟ್ಟರು. ಬೆಂಬಲಿಗರನ್ನು ಕರೆಕರೆದು ತಾನೂ ವಾಸನೆಯ ಕೂಪಕ್ಕೆ ಇಳಿದೇಬಿಟ್ಟರು. ಮೊತ್ತಮೊದಲ ಕೆಲಸ ವಾಟರ್ ಹಯಾಸಿಂಥ್ (ಅಂತರಗಂಗೆ, ಪಿಶಾಚಿ ತಾವರೆ) ಗಿಡಗಳನ್ನು ಕೀಳುವುದು.
ಹಳ್ಳಿಹಳ್ಳಿಗಳ ಸಾವಿರಾರು ಮಂದಿ ಸೀಚೆವಾಲರ ಜತೆ ಹೆಗಲಿಗೆ ಹೆಗಲು ಕೊಟ್ಟು ದುಡಿದರು. ಇದು ಹದಿನೇಳು ವರ್ಷಗಳ ಹಿಂದಿನ ಕತೆ. ಆರಂಭಿಕ ಕೆಲಸವೇ ಮೂರೂವರೆ ವರ್ಷ ತೆಗೆದುಕೊಂಡಿತು.

ನದಿ ಪಾತ್ರದ ಹೂಳೆತ್ತಿ ಅದರ ವಿಲೇವಾರಿ ಮುಂದಿನ ಹಂತ. ಹೂಳಿನ ಪದರ ಅಂತರ್ಜಲ ಮರುಪೂರಣಕ್ಕೆ ಅಡ್ಡಿಯಾಗಿತ್ತು. ಮಾನವ ಮತ್ತು ಯಂತ್ರ – ಎರಡೂ ಹಗಲಿರುಳೂ ಈ ಕೆಲಸ ಮಾಡಿದುವು. ಎತ್ತಿದ ಹೂಳನ್ನು ರೈತರ ಹೊಲ ಸುಧಾರಣೆಗೆ, ರಸ್ತೆ ನಿರ್ಮಾಣಕ್ಕೆ, ನರ್ಸರಿಯಲ್ಲಿ ಸಸಿ ಬೆಳೆಸಲು ಬಳಸಿದರು. ಬರಬರುತ್ತಾ ಕಾಳಿ ಬೈನ್ ಮತ್ತೆ ಹರಿಯತೊಡಗಿದಳು– ಸ್ಫಟಿಕವರ್ಣೆಯಾಗಿ.

ಬಹುದೂರದಿಂದ ಕಲ್ಲು ತಂದು ನದಿಯ ಇಕ್ಕೆಲದಲ್ಲಿ ಕಟ್ಟಿದರು. ಇಟ್ಟಿಗೆ ಬಳಸಿ ರಸ್ತೆ ನಿರ್ಮಿಸಿದರು. ಹತ್ತಿರದಲ್ಲೇ ಗಿಡ ನೆಟ್ಟು ಉದ್ಯಾನ ಎಬ್ಬಿಸಿದರು. ಮುಂದೆ ಎಲ್ಲವೂ ಸರಿಹೋಗುತ್ತದೆ ಎಂದುಕೊಂಡರು. ಊಹೂಂ. ಮತ್ತೆ ಶುರುವಾಯಿತು ಸಮಸ್ಯೆ. ಮತ್ತೆಮತ್ತೆ ತ್ಯಾಜ್ಯ ನೀರು ನದಿಗೇ ಬರುತ್ತಲಿತ್ತು. ಇದನ್ನು ನಿಲ್ಲಿಸಲು ಸರಕಾರಕ್ಕೆ ಸತತ ಮನವಿ. ಫಲ ಕಮ್ಮಿ.

(ನದಿಯನ್ನು ಸ್ವಚ್ಛಗೊಳಿಸುತ್ತಿರುವುದು)

ನದಿಗೆ ಮುಕೇರಿಯನ್ ಹೈಡೆಲ್ ಪ್ರಾಜೆಕ್ಟಿನಿಂದ ಸತತ ನೀರು ಬಿಡುತ್ತಾರೆ. ನದಿ ನಿರ್ಮಲವಾಗಿ ಹರಿಯುತ್ತಿರುತ್ತದೆ.  ಕೆಲವು ಸರಕಾರಿ ತ್ಯಾಜ್ಯ ನಿರ್ವಹಣಾ ಘಟಕಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ವರ್ಷದಲ್ಲಿ ಮೂರು-ನಾಕು ಬಾರಿ ಪ್ರಾಜೆಕ್ಟಿನಲ್ಲಿ ನಿರ್ವಹಣೆಯ ಕೆಲಸವಿದ್ದಾಗ ನೀರು ಬಿಡುವುದಿಲ್ಲ. ಆಗ ನದಿ ಸೊರಗುತ್ತದೆ. ದುರ್ಗಂಧ ತಲೆಯೆತ್ತುತ್ತದೆ, ಮೀನುಗಳು ಸಾಯತೊಡಗುತ್ತವೆ. “ಮೀನುಗಳು ಲವಲವಿಕೆಯಿಂದ ಇದ್ದರಷ್ಟೇ ನೀರು ಚೆನ್ನಾಗಿದೆ ಎನ್ನುವುದು ಗ್ಯಾರಂಟಿ” ಎನ್ನುತ್ತಾರೆ ಸಂತ ಸೀಚೆವಾಲ್. 

ಈಗ ಕಾಳಿ ಬೈನ್ ನದಿಯನ್ನು ನೋಡುವುದೇ ಒಂದು ಆನಂದ. ಇಷ್ಟು ಉದ್ದದ ಶುದ್ಧ ನದಿ ಬೇರೆ ಬಹಳ ಇರಲಾರದು. ನೀರಿನಲ್ಲಿ ಕರಗಿದ ಲವಣಗಳ ಪ್ರಮಾಣ ಸಾವಿರ ಟಿಡಿಯೆಸ್ಸಿಗೆ ಏರಿರುವುದು ಈಗ 50 ಟಿಡಿಎಸ್ಸಿಗೆ ಬಂದಿದೆ. ಗಣ್ಯ ಅತಿಥಿಗಳಿಗೆ ಸೀಚೆವಾಲ್ ಈ ನೀರನ್ನು ಕುಡಿದು ತೋರಿಸುತ್ತಾರೆ. ಪುಣ್ಯದಿನಗಳಂದು ಊರವರು ಇಲ್ಲಿ ಮೀಯುತ್ತಾರೆ, ನೀರನ್ನು ತೀರ್ಥ ಎಂದು ಕುಡಿಯುತ್ತಾರೆ, ಮನೆಗೂ ಒಯ್ಯುತ್ತಾರೆ.

‘ನೀರಿನ ವಿಚಾರದಲ್ಲಿ ಮತ, ದೇಶ ಧರ್ಮ ಎಂಬ ಪ್ರತ್ಯೇಕತೆಯೇ ಸಲ್ಲದು’, ಸಿಖ್ಖರ ಪವಿತ್ರ ಪುಸ್ತಕ ಗುರು ಗ್ರಂಥ್ ಸಾಹಿಬ್ ಅನ್ನು ಉದ್ಧರಿಸುತ್ತಾ ಬಲ್ ಬೀರ್ ಸಿಂಗ್ ಆಗಾಗ ಹೇಳುತ್ತಲಿರುವ ಮಾತು: ‘ಗಾಳಿಯೇ ನಮ್ಮ ಗುರು, ನೀರು ತಂದೆ, ಈ ಭೂಮಿಯೇ ನಮ್ಮ ತಾಯಿ’.

ಕ್ಯಾಲೆಂಡರಿನಲ್ಲಿ ದಿನ ಬದಲಿಸಿದ ಸ್ವಲ್ಪವೇ ನಂತರ, ಮುಂಜಾವಿನ ಎರಡು ಗಂಟೆಗೇ ಸಂತ ಸೀಚೆವಾಲ್ ಏಳುತ್ತಾರೆ. ಕೆಲಸದಲ್ಲಿ ತೊಡಗುತ್ತಾರೆ. ಪ್ರಸಿದ್ಧಿಯನ್ನು ಬದಿಗಿಟ್ಟು ಬೆವರಿಳಿಸಿ ದುಡಿಯಲೂ ಬಲ್ಲರು.

ತಮ್ಮ ‘ಏಕ್ ಓಂಕಾರ್ ಟ್ರಸ್ಟ್’ ಮೂಲಕ ಸಮುದಾಯವನ್ನು ಪ್ರೇರೇಪಿಸಿ  ಕಾಲೇಜು, ಶಾಲೆ, ಸಾವಿರಾರು ಕಿಲೋಮೀಟರ್ ರಸ್ತೆ, ಹತ್ತಾರು ಹಳ್ಳಿಗಳಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಇತ್ಯಾದಿ ಕೆಲಸಗಳನ್ನೂ ಮಾಡುತ್ತಲೇ ಇದ್ದಾರೆ.

ಕಾಳಿ ಬೈನ್ ಮತ್ತೆ ಜೀವನದಿಯಾದ ಕಾರಣ ಹೋಶಿಯಾರ್ ಪುರ ಜಿಲ್ಲೆಯ ಸುಮಾರು 10,000 ಎಕರೆ ಜಮೀನಿನಲ್ಲೀಗ ಕೃಷಿ ನಡೆಯುತ್ತಿದೆ. ಇದು ಹಿಂದೆ ಜಲಾವೃತವಾಗಿತ್ತು. ಕಪರ್ತಲಾ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಏರಿದೆ.

ಸಂತ ಸೀಚೆವಾಲರ ಅಸಾಧಾರಣ ಸಾಧನೆಯ ಪರಿಮಳ ಜಗತ್ತಿಡೀ ಹಬ್ಬಿದೆ. ಕೆನಡಾ ಮತ್ತು ಆಸ್ಟ್ರೇಲಿಯಾ ದೇಶಗಳು ಇವರನ್ನು ಅಲ್ಲಿಗೇ ಕರೆಸಿ ಸನ್ಮಾನಿಸಿವೆ. ಆದರೆ ನೋಡಿ, ಅದೆಷ್ಟೋ ಪೀಳಿಗೆಗಳಿಗೇ ಸ್ಫೂರ್ತಿಯಾಗಬಲ್ಲ ಈ ಮಹಾಸಾಧನೆ ಪಂಜಾಬಿನಿಂದ ಹೊರಗಿನ ರಾಜ್ಯಗಳಲ್ಲಿ ಇನ್ನೂ ಅಪರಿಚಿತವೆ!

ಏಕ್ ಓಂಕಾರ್ ಟ್ರಸ್ಟ್ – ಗುರ್ವಿಂದರ್ ಸಿಂಗ್ : 9463163000 (ಹಿಂದಿ ಮಾತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.