ADVERTISEMENT

ಇವರು ಜಲ ಹಿಡಿದು ಗೆದ್ದ ಜಿತೇಂದ್ರ

ಅಂತರ್ಜಲ ಪಾತಾಳಕ್ಕಿಳಿದರೂ ಜಮೀನಿನಲ್ಲಿ ಸಮೃದ್ಧ ನೀರು: 16 ಎಕರೆಯಲ್ಲಿ ಸಮೃದ್ಧ ಪೈರು

ಶರತ್‌ ಹೆಗ್ಟೆ
Published 31 ಮೇ 2017, 7:38 IST
Last Updated 31 ಮೇ 2017, 7:38 IST
ಇವರು ಜಲ ಹಿಡಿದು ಗೆದ್ದ ಜಿತೇಂದ್ರ
ಇವರು ಜಲ ಹಿಡಿದು ಗೆದ್ದ ಜಿತೇಂದ್ರ   

ಕೊಪ್ಪಳ: ಯಲಬುರ್ಗಾ ತಾಲ್ಲೂಕು ವೀರಾಪುರ ಕ್ರಾಸ್‌ ಸಮೀಪದ ಜಿತೇಂದ್ರ ಜಲ್ಲೆ ಅವರ ಜಮೀನಿನ ಕೊಳವೆಬಾವಿ­ಯಲ್ಲಿ ಬರಗಾಲದ ನಡುವೆಯೂ ಧಾರಾಳ ನೀರು ಇದೆ. ಇದು 16 ಎಕರೆ ಜಮೀನಿಗೆ ನಿರಂತರ ನೀರುಣಿಸುತ್ತಿದೆ. ಪಪ್ಪಾಯಿ, ಹತ್ತಿ, ಕಲ್ಲಂಗಡಿ, ಅಲ್ಪ ಪ್ರಮಾಣದಲ್ಲಿ ತೆಂಗು, ದಾಳಿಂಬೆ ಬೆಳೆಗಳು ನಳನಳಿಸುತ್ತಿವೆ.

ಹೇಗೆ ಸಾಧ್ಯ?: ಜಿತೇಂದ್ರ ಹೇಳುವ ಪ್ರಕಾರ, ‘ನಾಲ್ಕು ವರ್ಷದ ಹಿಂದೆ ಕೊರೆ­ಸಿದ ಕೊಳವೆಬಾವಿಯಲ್ಲಿ ಸುಮಾರು ಎರಡೂವರೆ ಇಂಚು ನೀರು ಸಿಕ್ಕಿತ್ತು. ಎರಡು ವರ್ಷ ಮಳೆಯೇ ಆಗದಿದ್ದರೂ ಕೊಳವೆಬಾವಿಯಲ್ಲಿ ಈಗಲೂ ಅಷ್ಟೆ ಪ್ರಮಾಣದ, ಫ್ಲೋರೈಡ್‌ಮುಕ್ತ ನೀರು ಇದೆ’ ಎಂದು ಖುಷಿ ವ್ಯಕ್ತಪಡಿಸಿದರು.

ಜಿತೇಂದ್ರ ಅವರ ಪ್ರಯೋಗ ಹೀಗಿದೆ: ಜಲತಜ್ಞ ದೇವರಾಜ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಜಮೀನಿನ ಮೂಲೆ­ಯಲ್ಲಿ ಕೊಳವೆಬಾವಿ ಕೊರೆದರು. ಆರಂಭದಲ್ಲಿ ಉತ್ತಮ­ವಾಗಿ ನೀರು ಸಿಕ್ಕಿತು. ಕ್ರಮೇಣ ತಾಂತ್ರಿಕ ಕಾರಣಗಳಿಂದ ವಿಫಲವಾಯಿತು. ಆಸುಪಾಸಿನ ಪ್ರದೇಶಕ್ಕೆ ಹೋಲಿಸಿದರೆ ವೀರೇಶ ಅವರ ಜಮೀನು ಸ್ವಲ್ಪ ತಗ್ಗು ಪ್ರದೇಶದಲ್ಲಿದೆ. ಗಡಿಭಾಗದಲ್ಲಿದ್ದ ಒಂದು ಪಾಳು ದಿಬ್ಬವನ್ನು ಅಗೆದರು. 

ಸುಮಾರು 50X40 ಅಡಿ ಅಳತೆಯ ದೊಡ್ಡ ಹೊಂಡ ನಿರ್ಮಿಸಿ ಅದಕ್ಕೆ ಸುತ್ತಮುತ್ತಲಿನ ನೀರು ಹರಿಯುವಂತೆ ಮಾಡಿದರು. ಒಂದೇ ಸಾಧಾರಣ ಮಳೆಗೆ ಹೊಂಡ ತುಂಬಿ ನೀರು ಜಮೀನಿಗೂ ಹರಿಯಿತು. ಇತ್ತೀಚೆಗೆ ಸುರಿದ ಸಾಧಾರಣ ಮಳೆಗೆ ಗುಂಡಿ ಮತ್ತಷ್ಟು ತುಂಬಿದೆ. ಪಾಳುಬಿದ್ದ ಕೊಳವೆಬಾವಿ ಜಾಗದಲ್ಲಿ ಕಲ್ಲುಕಟ್ಟಿ ಕೋಡಿ ನೀರು ಹರಿದುಹೋಗುವಂತೆ ಮಾಡಿದ್ದಾರೆ. ಈ ಸರಳ ಪ್ರಯೋಗ ಅವರಿಗೆ ಫಲ ನೀಡಿದೆ.

ADVERTISEMENT

ನೀರು ಹಾಳು ಮಾಡಬೇಡಿ: ‘ನೀರಿನ ಅಪವ್ಯಯ ಮಾಡಬಾರದು. ಇಡೀ ಜಮೀನಿಗೆ ಹನಿ ನೀರಾವರಿ ಅಳವಡಿಸಿದ್ದೇನೆ. ಹೀಗಾಗಿ ಪ್ರತಿ ಸಸಿಗೆ ಎಷ್ಟು ಬೇಕೋ ಅಷ್ಟೇ ನೀರು ಕೊಡಬಹುದು. ಎಲ್ಲಿಯೂ ಭೂಮಿ ಸವಳಾ­ಗುವುದಿಲ್ಲ. ಈ ರೀತಿ ನಿರ್ವಹಿಸಿ­ದರೆ ಎಂಥ ಬರವ­ನ್ನೂ ನಿಭಾ ಯಿ­ಸ­ಬಹುದು’ ಎನ್ನುತ್ತಾರೆ ಜಿತೇಂದ್ರ.

ಜಿತೇಂದ್ರ ಅವರು ಬಿ.ಕಾಂ ಪದವೀಧರ. ಹಣಕಾಸು ಸಂಸ್ಥೆಯೊಂ­ದ­ರಲ್ಲಿ 8 ವರ್ಷಗಳ ಕಾಲ ದುಡಿದು ಕೊನೆಗೆ ಅದನ್ನು ತೊರೆದು ಕೃಷಿಯತ್ತ ವಾಲಿದವರು. ಅವರ ನೀರಿನ ಮೇಲಿನ ಕಾಳಜಿ, ಪ್ರಯೋಗದಿಂದ ಈ ಕ್ಷೇತ್ರದಲ್ಲಿ ಯಶಸ್ಸಿನತ್ತ ನಡೆಯುತ್ತಿದ್ದಾರೆ. ನೀರು ಇಲ್ಲ ಎಂಬ ಕಾರಣಕ್ಕೆ ನೆರೆಹೊರೆ­ಯವರ ಭೂಮಿ ಪಾಳುಬಿದ್ದಿದೆ. ಜಿತೇಂದ್ರ ಮತ್ತು ಅವರ ಜಮೀನಿಗೆ ಹೊಂದಿಕೊಂಡಂತಿರುವ ಭೂಮಿಯಲ್ಲಿ ಹಸಿರು ನಳನಳಿಸುತ್ತಿದೆ.

****
ಕೊಳವೆಬಾವಿಗಳೇಕೆ ವಿಫಲವಾಗುತ್ತವೆ?
‘ನಮ್ಮಲ್ಲಿ ಭೂವಿಜ್ಞಾನಿಗಳು ಕಡಿಮೆ ಸಂಖ್ಯೆಯಲ್ಲಿದ್ದಾರೆ. ತೆಂಗಿನಕಾಯಿ ಹಿಡಿದು ನೀರು ನೋಡುವವರು, ದೇವರ ಮೇಲಿನ ನಂಬಿಕೆ ಮೇಲೆ ಬಾವಿ ತೋಡುವವರು... ಹೀಗೆ ಅವೈಜ್ಞಾನಿಕ ಮಾರ್ಗ ಅನುಸರಿಸುವವರೇ ಹೆಚ್ಚು ಇದ್ದಾರೆ. ಹೀಗಾಗಿ ಪ್ರತಿ ಜಮೀನಿನಲ್ಲಿ ಹತ್ತಾರು ಕೊಳವೆ ಬಾವಿಗಳನ್ನು ಕಾಣಬಹುದು.

ನೀರು ಸಿಗುತ್ತದೋ ಬಿಡುತ್ತದೋ ಗೊತ್ತಿಲ್ಲ. ವೈಜ್ಞಾನಿಕ ಮಾರ್ಗ ಅನುಸರಿಸಿದರೆ ಕೊಳವೆ ಬಾವಿ ವಿಫಲವಾಗುವುದು ಕಡಿಮೆ. ಒಂದು ವೇಳೆ ಬಾವಿ ವಿಫಲವಾ ದರೂ ಅದಕ್ಕೆ ಜಲಮರುಪೂರಣ ದಂಥ ಸರಳ ಪ್ರಯೋಗ ಕೈಗೊಂಡು ಅಂತರ್ಜಲ ವೃದ್ಧಿಸಿಕೊ ಳ್ಳಬಹುದು’ ಎನ್ನುತ್ತಾರೆ ಜಿತೇಂದ್ರ.
ಮಾಹಿತಿಗೆ ಮೊಬೈಲ್‌: 94483 66324
****
ಕೃಷಿಯು ದುಡಿಯುವವರು ಮತ್ತು ಪ್ರಕೃತಿಯ ಮೇಲೆ ಅವಲಂಬಿತವಾಗಿದೆ. ಪ್ರಕೃತಿಯ ಪ್ರತಿಕೂಲ ಪರಿಸ್ಥಿತಿಗಳನ್ನು ನಿಭಾಯಿಸಲು ಸಿದ್ಧರಿರಬೇಕು.
ಜಿತೇಂದ್ರ ಜಲ್ಲೆ, ರೈತ ವೀರಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.