ADVERTISEMENT

ಮುಚ್ಚಿಹೋಗಿದ್ದ ಬಾವಿಗೆ ಸಿಕ್ಕಿತು ‘ಮರುಜೀವ’

ಕೇಳ್ಕರಬಾಗ್‌ದಲ್ಲಿ ‘ಪ್ಯಾಸ್‌’ ಪ್ರತಿಷ್ಠಾನದಿಂದ ಪುನಶ್ಚೇತನ ಕಾರ್ಯ, 2 ತಿಂಗಳಿನಿಂದ ನಡೆದ ಹೂಳು ತೆರವು ಕೆಲಸ

ಎಂ.ಮಹೇಶ
Published 11 ಜೂನ್ 2017, 19:30 IST
Last Updated 11 ಜೂನ್ 2017, 19:30 IST
ಮುಚ್ಚಿಹೋಗಿದ್ದ ಬಾವಿಗೆ ಸಿಕ್ಕಿತು ‘ಮರುಜೀವ’
ಮುಚ್ಚಿಹೋಗಿದ್ದ ಬಾವಿಗೆ ಸಿಕ್ಕಿತು ‘ಮರುಜೀವ’   

ಬೆಳಗಾವಿ: ಇಲ್ಲಿನ ಕೇಳ್ಕರಬಾಗ್‌ದಲ್ಲಿರುವ ಪುರಾತನ ಬಾವಿಯ ಪುನಶ್ಚೇತನ ಕಾರ್ಯ ಅಂತಿಮ ಹಂತದಲ್ಲಿದ್ದು, ನೀರಿನ ಸೆಲೆಗಳು ಕಂಡುಬಂದಿವೆ.

‘ನೀರ ನೆಮ್ಮದಿಯ ನಾಳೆ’ಗಾಗಿ ಎನ್ನುವ ಆಶಯದೊಂದಿಗೆ ಶ್ರಮಿಸುತ್ತಿರುವ ‘ಪ್ಯಾಸ್‌’ ಪ್ರತಿಷ್ಠಾನದಿಂದ ಬಾವಿಗೆ ಮರುಜೀವ ಕಾಣುತ್ತಿದೆ. ಅಕ್ಷರಶಃ ತ್ಯಾಜ್ಯದಿಂದ ಮುಚ್ಚಿ ಹೋಗಿದ್ದ ಈ ಜಲಮೂಲದ ಗತವೈಭವವನ್ನು ಮರಳಿ ತರುವ ಕಾರ್ಯ ಭರದಿಂದ ಸಾಗಿದೆ.

ಏಪ್ರಿಲ್‌ ಮೊದಲ ವಾರದಿಂದಲೇ ಆರಂಭವಾಗಿರುವ ಹೂಳು ತೆರವು ಕೆಲಸದಲ್ಲಿ ನಿತ್ಯವೂ 8ರಿಂದ 10 ಮಂದಿ ತೊಡಗಿದ್ದಾರೆ. ಇದಕ್ಕೆ ತಗಲುವ ವೆಚ್ಚವನ್ನು ಎಂಜಿನಿಯರ್‌ಗಳು, ವೈದ್ಯರು, ಉದ್ಯಮಿಗಳು ಹಾಗೂ ಸಮಾಜಸೇವಕರು ಕಟ್ಟಿರುವ ‘ಪ್ಯಾಸ್’ ಪ್ರತಿಷ್ಠಾನ ಭರಿಸುತ್ತಿದೆ.  ಈ ಮೊದಲು ಕೆರೆಗಳ ಹೂಳೆತ್ತುವ ಕಾರ್ಯದಲ್ಲಿ ತೊಡಗಿದ್ದ ಪ್ರತಿಷ್ಠಾನ, ಇದೀಗ ತನ್ನ ಚಟುವಟಿಕೆಯನ್ನು ಬಾವಿಗಳಿಗೂ ವಿಸ್ತರಿಸಿದೆ. ಅದರ ಭಾಗವಾಗಿ ಮೊದಲು ಕೇಳ್ಕರಬಾಗ್‌ದಲ್ಲಿರುವ ಬಾವಿ ಸ್ವಚ್ಛಗೊಳ್ಳುತ್ತಿದ್ದು, ಸ್ಥಳೀಯರ ಸಂತಸಕ್ಕೆ ಕಾರಣವಾಗಿದೆ.

ADVERTISEMENT

ಹಲವೆಡೆಗೆ ನೀರು: ಈ ಬಾವಿ ದಶಕಗಳ ಹಿಂದೆ, ಕೇಳ್ಕರಬಾಗ್‌ ಅಲ್ಲದೇ ಬೋಗಾರ್‌ವೇಸ್, ಕಿರ್ಲೋಸ್ಕರ್‌ ರಸ್ತೆ, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ ನಿವಾಸಿಗಳಿಗೆ ಆಸರೆಯಾಗಿತ್ತು. ಮನೆಗಳಿಗೆ ನೀರಿನ ಸಂಪರ್ಕ ದೊರೆತ ನಂತರ ಬಾವಿಯ ನೀರಿನ ಅವಲಂಬನೆ ಕಡಿಮೆಯಾಗಿ, ವರ್ಷಗಳು ಕಳೆದಂತೆ ಹೂಳಿನಿಂದ ತುಂಬಿಕೊಂಡಿತು.

ಕಲ್ಲಿನಿಂದ ಸುಂದರವಾಗಿ ಕಟ್ಟಲಾದ ಬಾವಿ 10 ಅಡಿ ಅಗಲವಿದೆ. ಅಲ್ಲಿ ನೀರಿನ ಸೆಲೆಗಳಿವೆ ಎನ್ನುವುದನ್ನು ತಿಳಿದು ಅದರ ಸದ್ಬಳಕೆಯಾಗಲಿ ಎನ್ನುವ ಉದ್ದೇಶದಿಂದ ಹೂಳೆತ್ತುವ ಕೆಲಸ ನಡೆದಿದೆ. ಆದರೆ, ಬಾವಿಯನ್ನು ಅಗೆದಷ್ಟೂ ಪ್ಲಾಸ್ಟಿಕ್‌ ತ್ಯಾಜ್ಯವೇ ಹೆಚ್ಚಾಗಿ ಸಿಗುತ್ತಿದೆ.

ಪ್ರಸ್ತುತ 55 ಅಡಿಗಳಷ್ಟು ಆಳದದವರೆಗೆ ಹೂಳು, ತ್ಯಾಜ್ಯ ತೆರವುಗೊಳಿಸಲಾಗಿದೆ. 20 ಅಡಿವರೆಗೆ ಅಗೆಯುವಷ್ಟರಲ್ಲಿಯೇ ನೀರು ಚಿಮ್ಮುತ್ತಿತ್ತು. ಸ್ವಚ್ಛಗೊಳಿಸಿದ ನಂತರ ಈ ಬಾವಿಯಿಂದ ನಿತ್ಯ 10ಸಾವಿರಕ್ಕೂ ಹೆಚ್ಚಿನ ಜನರಿಗೆ ನೀರು ಪೂರೈಸಲು ಸಾಧ್ಯವಾಗುತ್ತದೆ ಎಂದು ಅಂದಾಜಿಸಲಾಗಿದೆ.

‘ಸ್ವಚ್ಛಗೊಳಿಸುವ ಆಸಕ್ತಿ ವ್ಯಕ್ತಪಡಿಸಿದ ನಮಗೆ ಪಾಲಿಕೆಯು ಬಾವಿಯನ್ನು ಹಸ್ತಾಂತರಿಸಿದೆ. ತೆಗೆದಷ್ಟೂ ತ್ಯಾಜ್ಯ ಹೊರಬರುತ್ತಲೇ ಇದೆ. ನೀರು ಉಕ್ಕುತ್ತಿರುವುದರಿಂದ ತ್ಯಾಜ್ಯದೊಂದಿಗೆ ಕೊಳಚೆ ನೀರನ್ನೂ ಹೊರಹಾಕುತ್ತಿದ್ದೇವೆ. ಇದಕ್ಕಾಗಿ ಪಂಪ್‌ ಬಳಸಲಾಗುತ್ತಿದೆ’ ಎಂದು ಪ್ರತಿಷ್ಠಾನದ ನಿರ್ದೇಶಕ ಕಿರಣ ನಿಪ್ಪಾಣಿಕರ  ‘ಪ್ರಜಾವಾಣಿ’ಗೆ ತಿಳಿಸಿದರು.

ಕಲಘಟಿಗ್ಯಾರ ಬಾವಿ: ಕೇಳ್ಕರಬಾಗ್‌ದ ಶ್ರೀಮಂತರಾಗಿದ್ದ ಶಂಕರ ಶೆಟ್ಟೆಪ್ಪ ಕಲಘಟಗಿ 1942ರಲ್ಲಿ ಸ್ಥಳೀಯರ ಅನುಕೂಲಕ್ಕಾಗಿ ಈ ಬಾವಿಯನ್ನು ತೋಡಿಸಿ, ಕಲ್ಲಿನಿಂದ ಕಟ್ಟಿಸಿದ್ದರು. 1972ರವರೆಗೂ ಇಲ್ಲಿಂದ ನೀರು ಪಡೆಯಲಾಗುತ್ತಿತ್ತು. ನಂತರ ಅದನ್ನು ಅಂದಿನ ನಗರಸಭೆಗೆ ಹಸ್ತಾಂತರಿಸಲಾಗಿತ್ತು. ಈಗಲೂ ಅದಕ್ಕೆ ‘ಕಲಘಟಿಗ್ಯಾರ ಬಾವಿ’ ಎಂದೇ ಕರೆಯಲಾಗುತ್ತದೆ.

ಬಾವಿಗೆ ಚೈತನ್ಯ ನೀಡಲು ‘ಪ್ಯಾಸ್‌’ ಪ್ರತಿಷ್ಠಾನದ ಡಾ.ಮಾಧವ ಪ್ರಭು, ಅಭಿಮನ್ಯು ಡಾಗಾ, ರೋಹನ್‌ ಕುಲಕರ್ಣಿ, ಕಿರಣ ನಿಪ್ಪಾಣಿಕರ, ಪ್ರೀತಿ ದೊಡವಾಡ ಕೈಜೋಡಿಸಿದ್ದಾರೆ. ಜಿಲ್ಲೆಯ ವಿವಿಧೆಡೆ ನಾಲ್ಕು ಕೆರೆಗಳ ಹೂಳೆತ್ತಿ ಸ್ಥಳೀಯರಿಗೆ ಅನುಕೂಲ ಮಾಡಿಕೊಟ್ಟಿರುವ ಇವರು, ಬರಗಾಲದಲ್ಲಿ ಗ್ರಾಮೀಣ ಜನರಿಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸುವ ಕಾರ್ಯವನ್ನೂ ಮಾಡುತ್ತಿದ್ದಾರೆ.

****
ಕೇಳ್ಕರಬಾಗ್‌ ಬಾವಿಯಲ್ಲಿ 55 ಅಡಿಗಳಷ್ಟು ಹೂಳು ತೆಗೆಯಲಾಗಿದೆ. ಅಲ್ಲಿ ಬಹಳಷ್ಟು ನೀರಿನ ಸೆಲೆಗಳಿವೆ. ಕೆಲಸ ಪೂರ್ಣಗೊಂಡರೆ  ಅನುಕೂಲವಾಗುತ್ತದೆ
ಕಿರಣ ನಿಪ್ಪಾಣಿಕರ, ನಿರ್ದೇಶಕ, ‘ಪ್ಯಾಸ್‌’ ಪ್ರತಿಷ್ಠಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.