ADVERTISEMENT

ಜಯಮಂಗಲಿ, ಕುಮುಧ್ವತಿ ನದಿಗೆ ಡೈಕ್

​ಪ್ರಜಾವಾಣಿ ವಾರ್ತೆ
Published 17 ಜೂನ್ 2017, 5:07 IST
Last Updated 17 ಜೂನ್ 2017, 5:07 IST
ಕೊಡಿಗೇನಹಳ್ಳಿ ಹೋಬಳಿ ವೀರಾಪುರ ಹಾಗೂ ಇಮ್ಮಡಗೊಂಡನಹಳ್ಳಿ ನಡುವೆ ನಿರ್ಮಿಸಿರುವ ಚೆಕ್ ಡ್ಯಾಂ
ಕೊಡಿಗೇನಹಳ್ಳಿ ಹೋಬಳಿ ವೀರಾಪುರ ಹಾಗೂ ಇಮ್ಮಡಗೊಂಡನಹಳ್ಳಿ ನಡುವೆ ನಿರ್ಮಿಸಿರುವ ಚೆಕ್ ಡ್ಯಾಂ   

ಕೊಡಿಗೇನಹಳ್ಳಿ: ಹೋಬಳಿಯ ಜಯಮಂಗಲಿ ಹಾಗೂ ಕುಮಧ್ವತಿ ನದಿ ಹರಿವಿನ ಪ್ರದೇಶದಲ್ಲಿ  ಅಂತರ್ಜಲ ಹೆಚ್ಚಿಸುವ ಸಲುವಾಗಿ ಚೆಕ್ ಡ್ಯಾಂ ಮತ್ತು ಡೈಕ್‌ಗಳನ್ನು ನಿರ್ಮಿಸಲಾಗಿದ್ದು, ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.

ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿ ಹೋಬಳಿ ಅತ್ಯಂತ ಹಿಂದುಳಿದ ಹಾಗೂ ಬಯಲು ಸೀಮೆ ಪ್ರದೇಶವಾಗಿದೆ.  ಯಾವುದೇ ಶಾಶ್ವತ ನೀರಾವರಿ ಯೋಜನೆಯ ಅನುಕೂಲವಿಲ್ಲ. ಎರಡು  ನದಿಗಳು ಹರಿದರೂ ಆ ನೀರಿನ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಮಳೆಗಾಲದಲ್ಲಿ ನದಿಗಳು ಹರಿದರೂ ಅದರಿಂದ ಹೆಚ್ಚಿನ ಪ್ರಯೋಜ ಆಗುತ್ತಿರಲಿಲ್ಲ.

ಇದರಿಂದ ಹೊರಬರಲು ನದಿ ಹರಿವಿನ ಪ್ರದೇಶದಲ್ಲಿ ಹಲವು ಚೆಕ್‌ ಡ್ಯಾಂಗಳು ಹಾಗೂ ಡೈಕ್‌ಗಳನ್ನು ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಕೆಲವು ಕಡೆಗಳಲ್ಲಿ ಚೆಕ್‌ಡ್ಯಾಂ ಕೆಲಸ ಪೂರ್ಣಗೊಂಡಿದೆ.

ADVERTISEMENT

‘ಈ ಎರಡು ನದಿಗಳ  ನೀರೆಲ್ಲ ನೇರವಾಗಿ ಆಂಧ್ರ ಕಡೆಗೆ ಹೋಗುತ್ತಿತ್ತು. ಈಗ ನೀರು ಇಲ್ಲೆ ಶೇಖರಣೆಯಾಗುವುದರಿಂದ  ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಅನುಕೂಲವಾಗುವುದರಲ್ಲಿ ಯಾವುದೆ ಅನುಮಾನವಿಲ್ಲ’ ಎಂದು ರೈತರು ಹೇಳುತ್ತಿದ್ದಾರೆ. 

ಮತ್ತೊಂದು ವಿಶೇಷವಾದ ಸಂಗತಿ ಎಂದರೆ ಕೊಡಿಗೇನಹಳ್ಳಿ, ಪುರವರ, ಹೋಬಳಿಗಳ ಜಯಮಂಗಲಿ ನದಿ ಪಾತ್ರದ ಹಳ್ಳಿಗಳ ಜನರ ಒಗ್ಗಟ್ಟು ಮತ್ತು ರಕ್ಷಣೆಯಿಂದ ಈ ಭಾಗದಲ್ಲಿ ಈಗಲೂ ಅಪಾರವಾದ ಮರಳಿನ ರಾಶಿ ಉಳಿದಿದೆ. ಈಗ ಇದರ ಜೊತೆಗೆ ಚೆಕ್ ಡ್ಯಾಂಗಳನ್ನು  ನಿರ್ಮಿಸಿರುವುದರಿಂದ ಮಳೆ ಬಂದು ಒಂದೆರಡು ಸಲ ನದಿ ಹರಿದರೂ ಸಾಕು ಅಂತರ್ಜಲ ವೃದ್ಧಿಯಾಗಲಿದೆ.

‘ಚೆಕ್‌ ಡ್ಯಾಂಗಳ ಬಳಿ ನಿರ್ಮಿಸಿರುವ ಕಾಲುವೆಗಳ ಮೂಲಕ ನದಿ ನೀರು ಕೆರೆ ಸೇರುವುದರಿಂದ ಕೆರೆಗಳು ತುಂಬಲಿವೆ. ಈ ಸಲದ ಮಳೆಗಾಗಿ ಕಾತರದಿಂದ ಕಾದಿದ್ದೇವೆ’ ಎನ್ನುತ್ತಾರೆ  ವೀರಾಪುರದ ಹನುಮಂತರಾಯಪ್ಪ.

₹ 50 ಲಕ್ಷ ವೆಚ್ಚ
ಜಯಮಂಗಲಿ ನದಿ ಹರಿಯುವ ರೆಡ್ಡಿಹಳ್ಳಿ , ವೀರಾಪುರ, ಎಂ.ಬಿ ಪಾಳ್ಯ ಹಾಗೂ ಕುಮಧ್ವತಿ ನದಿ ಹರಿಯುವ ಶ್ರಾವಂಡನಹಳ್ಳಿ , ಗುಂಡಗಲ್ಲು ಗ್ರಾಮಗಳಲ್ಲಿ ತಲಾ
₹ 50 ಲಕ್ಷ ವೆಚ್ಚದಲ್ಲಿ ಡೈಕ್‌ಗಳನ್ನು ನಿರ್ಮಾಣ ಮಾಡಲಾಗಿದೆ.

ಡೈಕ್  ಅಂದರೆ...
ನದಿ ಹರಿಯುವ ಅಗಲದಷ್ಟು ಉದ್ದಕ್ಕೆ 30 ಅಡಿ ಆಳದ ಗುಂಡಿ ತೆಗೆದು  ಅದರಲ್ಲಿ ಜೇಡಿ ಮಣ್ಣು ತುಂಬಿ ಮುಚ್ಚಲಾಗುತ್ತದೆ. ನೀರು ಜೇಡಿಮಣ್ಣಿನಲ್ಲಿ ಶೇಖರಣೆಯಾಗುತ್ತದೆ. ಇದರಿಂದ ಅಂತರ್ಜಲ ಹೆಚ್ಚಾಗಲಿದೆ.

ಎರಡು ವರ್ಷಗಳ ಹಿಂದೆ  ರೆಡ್ಡಿಹಳ್ಳಿಯಲ್ಲಿ  ಈ ಪ್ರಯೋಗ ಮಾಡಲಾಗಿತ್ತು. ಇದರಿಂದಾಗಿ ಈ ಗ್ರಾಮದ ಸುತ್ತಮುತ್ತಲ ಕೊಳವೆಬಾವಿಗಳಲ್ಲಿ ಅಂತರ್ಜಲ ಹೆಚ್ಚಿದೆ. ಈ ಸಲದ ಭೀಕರ ಬರಗಾಲದಲ್ಲೂ ಈ ಗ್ರಾಮದ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿಯಲಿಲ್ಲ. ಕೊಳವೆಬಾವಿಗಳು ಒಣಗಲಿಲ್ಲ. ರೈತರು ನೆಮ್ಮದಿಯಿಂದ ಇದ್ದಾರೆ.

ಅಂಕಿ–ಅಂಶ
₹1.5 ಕೋಟಿ ಕಾಳೇನಹಳ್ಳಿ ಮತ್ತು ವೀರಾಪುರ ಚೆಕ್‌ಡ್ಯಾಂ ನಿರ್ಮಾಣ ವೆಚ್ಚ

₹1ಕೋಟಿ ತೆರಿಯೂರು ಚೆಕ್‌ ಡ್ಯಾಂಗೆ ವೆಚ್ಚ

₹5.5 ಕೋಟಿ ಕೊಡಿಗೇನಹಳ್ಳಿ ಬಳಿ ಚೆಕ್‌ ಡ್ಯಾಂಗೆ ಮಂಜೂರಾಗಿರುವ ಹಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.